ಬೆಳಗಾವಿ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸರಣಿ ಸಾವು ಮುಂದುವರಿದಿದ್ದು, ಮೃತರ ಸಂಖ್ಯೆ 31ಕ್ಕೆ ಏರಿದೆ. ರಾಷ್ಟ್ರೀಯ ಸಂಸ್ಥೆಯೊಂದು ಮೂರು ತಿಂಗಳ ಹಿಂದೆಯೇ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಸಂಬಂಧಿತ ಇಲಾಖೆಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿನ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರಿದಿದೆ. ಚಿಕಿತ್ಸೆ ಫಲಿಸದೇ ಮತ್ತೆರಡು ಕೃಷ್ಣ ಮೃಗಗಳು ಸೋಮವಾರ ಬೆಳಗ್ಗೆ ಮೃತಪಟ್ಟಿವೆ. ಇದರಿಂದಾಗಿ ಮೃತ ಕೃಷ್ಣಮೃಗಗಳ ಸಂಖ್ಯೆ ನಿತ್ಯ ಹೆಚ್ಚುತ್ತಲೇ ಇದ್ದು, ಈಗ 31ಕ್ಕೆ ಏರಿದಂತಾಗಿದೆ. ಬ್ಯಾಕ್ಟೀರಿಯಾ ಇನ್‌ಫೆಕ್ಸನ್‌ನಿಂದಲೇ ಕೃಷ್ಣಮೃಗಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ ಈ ಮರಣ ಮೃದಂಗಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ ರಾಷ್ಟ್ರೀಯ ಮಟ್ಟದ ಸಂಸ್ಥೆಯೇ ಮೂರು ತಿಂಗಳ ಹಿಂದೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಬಗ್ಗೆ ರಾಜ್ಯಕ್ಕೆ ಎಚ್ಚರಿಕೆ ನೀಡಿದ್ದರೂ, ಸಂಬಂಧಿತ ಇಲಾಖೆಗಳು ತೀವ್ರ ನಿರ್ಲಕ್ಷ್ಯ ತೋರಿದ್ದವು ಎಂಬ ತೀವ್ರ ಆರೋಪ ಕೇಳಿಬರುತ್ತಿದೆ.
ಮೊದಲೇ ಸಿಕ್ಕಿತ್ತು ಮುನ್ಸೂಚನೆ
ಬೆಂಗಳೂರು ಯಲಹಂಕದಲ್ಲಿರುವ ರಾಷ್ಟ್ರೀಯ ಪಶು ವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗಮಾಹಿತಿ ಸಂಸ್ಥೆ NIVED (National Institute of Veterinary Epidemiology and Disease Informatics) ಸಂಸ್ಥೆಯು ರಾಜ್ಯದ ಪಶುಸಂಗೋಪನೆ ಇಲಾಖೆಗೆ ಮೂರು ತಿಂಗಳ ಹಿಂದೆ ಪ್ರಮುಖ ಮುನ್ನೆಚ್ಚರಿಕೆ ಸಂದೇಶ ಕಳುಹಿಸಿತ್ತು.
ಈ ಎಚ್ಚರಿಕೆ ಸಂದೇಶದಲ್ಲಿ, ಹಿಮೋರೆಜಿಕ್ ಸೆಪ್ಟಿಸಿಮೀಯಾ (HS) ಎಂಬ ಭಯಾನಕ ಬ್ಯಾಕ್ಟೀರಿಯಾ ಆಧಾರಿತ ಸಾಂಕ್ರಾಮಿಕ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಎಚ್ಚರಿಕೆಯನ್ನು ಅರಣ್ಯ ಇಲಾಖೆಗೆ, ಮೃಗಾಲಯಗಳಿಗೆ ಹಾಗೂ ರೈತರಿಗೆ ಕೂಡ ಕಳುಹಿಸಲಾಗಿತ್ತು. NIVED ಕಳುಹಿಸಿದ ಸಂದೇಶವನ್ನು ಪಶುಸಂಗೋಪನೆ ಇಲಾಖೆ ,ಅರಣ್ಯ ಇಲಾಖೆ, ರಾಜ್ಯದ ಮೃಗಾಲಯಗಳು, ಹಾಗೂ ಹಸು–ಎಮ್ಮೆ ಸಾಕುವ ರೈತರಿಗೆ ರವಾನಿಸಿತ್ತು. ಅದರಲ್ಲೂ ವಿಶೇಷವಾಗಿ ಬೆಳಗಾವಿ ಹಾಗೂ ಸಮೀಪದ ಪ್ರದೇಶಗಳು HS ಕಾಯಿಲೆಗೆ ಸೂಕ್ಷ್ಮ ಪ್ರದೇಶಗಳು ಎಂದು ಸೂಚಿಸಲಾಗಿತ್ತು.
ಎರಡು ಇಲಾಖೆಗಳ ಮೇಲೆ ಪ್ರಶ್ನೆ
ಎಲ್ಲಾ ಇಲಾಖೆಗಳಿಗೂ ಎಚ್ಚರಿಕೆ ನೀಡಿದ್ದರೂ ಪಶುಸಂಗೋಪನೆ ಇಲಾಖೆ, ಅರಣ್ಯ ಇಲಾಖೆ, ಎರಡೂ ಪ್ರಾಥಮಿಕ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದೆ. ಸಮಯಕ್ಕೆ ಸರಿಯಾಗಿ ಲಸಿಕೆ, ನಿಗಾ ಹಾಗೂ ತಡೆಗಟ್ಟುವ ಕ್ರಮಗಳನ್ನು ಕೈಗೊಂಡಿದ್ದರೆ ಮೃಗಗಳ ಸಾವನ್ನು ತಪ್ಪಿಸಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿದೆ.
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ
ಇತ್ತೀಚೆಗೆ ಸತ್ತ ಕೃಷ್ಣ ಮೃಗಗಳ ಮೇಲೆ ನಡೆಸಿದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯೂ ಹಿಮೋರೆಜಿಕ್ ಸೆಪ್ಟಿಸಿಮೀಯಾ ಸೋಂಕಿನ ಲಕ್ಷಣಗಳು ಸ್ಪಷ್ಟವಾಗಿ ಕಂಡು ಬಂದಿವೆ ಎಂದು ಹೇಳುತ್ತಿದೆ. ಅದರೊಂದಿಗೆ ಕೃಷ್ಣ ಮೃಗಗಳ ಸರಣಿ ಸಾವಿಗೆ HS ಬ್ಯಾಕ್ಟೀರಿಯಾ ಕಾರಣ ಎಂಬ ಶಂಕೆ ಮತ್ತಷ್ಟು ಬಲ ಪಡೆದಿದೆ. ರಾಷ್ಟ್ರೀಯ ಮಟ್ಟದ ಸಂಸ್ಥೆಯಿಂದಲೇ ಎಚ್ಚರಿಕೆ ಬಂದಿದೆ ಎಂಬುದು ದಾಖಲೆ, ಆದರೆ ಎರಡು ಇಲಾಖೆಗಳು ಕ್ರಮ ಕೈಗೊಳ್ಳದಿರುವುದು ಜನರ ಕಣ್ಣಲ್ಲಿ ನಿರ್ಲಕ್ಷ್ಯದಿಂದಲೇ ಸಂಭವಿಸಿದ ದುರಂತ ಎಂದು ತೋರುತ್ತಿದೆ.
ಕೃಷ್ಣಮೃಗಗಳ ಸಾವು ನಿಗೂಢವಾಗಿದ್ದು, ಸಾಕಷ್ಟು ಅನುಮಾನ ಹುಟ್ಟಿಸಿವೆ. ಈ ಮೃಗಾಲಯದ ವೀಕ್ಷಣೆಗೆ ಬೆಳಗಾವಿ ಜಿಲ್ಲೆ ಸೇರಿದಂತೆ ವಿವಿಧ ಭಾಗ ಅಷ್ಟೇ ಅಲ್ಲದೇ, ನೆರೆಯ ಮಹಾರಾಷ್ಟ್ರ ಮತ್ತು ಗೋವಾದಿಂದಲು ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಾರೆ. ಕೃಷ್ಣ ಮೃಗಗಳ ಸರಣಿ ಸಾವಿಗೆ ಏನು ಕಾರಣ ಎಂಬುದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ಬ್ಯಾಕ್ಟಿರಿಯಾ ವೈರಸ್‌ನಿಂದಲೇ ಕೃಷ್ಣಮೃಗಗಳು ಸಾವನ್ನಪ್ಪಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 8 ಕೃಷ್ಣ ಮೃಗಗಳು ಸಾವನ್ನಪ್ಪಿರುವ ವೇಳೆಯೇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಎಚ್ಚೆತ್ತುಕೊಳ್ಳಬೇಕಿತ್ತು. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷತನ, ಬೇಜವಾಬ್ದಾರಿಯೇ ಕೃಷ್ಣಮೃಗಗಳ ಸರಣಿ ಸಾವಿಗೆ ಕಾರಣವಾಗಿದೆ ಎಂದು ವನ್ಯಜೀವಿ ಪ್ರೇಮಿಗಳು ಆರೋಪಿಸಿದ್ದಾರೆ. ಮೃಗಾಲಯದ ನಿರ್ವಹಣೆ ಹಾಗೂ ಕೃಷ್ಣಮೃಗಗಳ ಸಾವಿಗೆ ಕಾರಣಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟು 38 ಕೃಷ್ಣ ಮೃಗಗಳ ಪೈಕಿ ಈಗ 7 ಕೃಷ್ಣಮೃಗಗಳು ಮಾತ್ರ ಉಳಿದಿವೆ. ಅವುಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡಲಾಗುತ್ತಿದ್ದು, ಬೆಂಗಳೂರು ವೈದ್ಯರ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದೆ. ಅವುಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅಲ್ಲದೇ, ಕೃಷ್ಣಮೃಗಗಳು ಮೃತಪಟ್ಟ ಪ್ರದೇಶವನ್ನು ಮೃಗಾಲಯದ ಸಿಬ್ಬಂದಿ ನಿರ್ಬಂಧಿಸಿದ್ದಾರೆ. ಸೋಂಕು ಹರಡದಂತೆ ಮೃಗಾಲಯದ ಸಿಬ್ಬಂದಿ ಮುಂಜಾಗ್ರತಾ ಕ್ರಮಕೈಗೊಂಡಿದ್ದು, ಗ್ರೀನ್ ಮ್ಯಾಟ್ ಕಟ್ಟಿ ಸಾರ್ವಜನಿಕರು ಓಡಾಡದಂತೆ ನಿರ್ಬಂಧಿಸಲಾಗಿದೆ.
ಮುಂದೇನು?
ಈ ಘಟನೆಯ ಹಿನ್ನೆಲೆಯಲ್ಲಿ ಎರಡೂ ಇಲಾಖೆಗಳ ಕಾರ್ಯವಿಧಾನಕ್ಕೆ ತನಿಖೆ ಅಗತ್ಯ, ಕೃಷ್ಣ ಮೃಗಗಳ ವಾಸಸ್ಥಳಗಳಲ್ಲಿ ತೀವ್ರ ನಿಗಾ. HS ತಡೆಗಟ್ಟುವ ಲಸಿಕೆ. ರಾಷ್ಟ್ರೀಯ ಮಟ್ಟದ ತಜ್ಞರ ತಂಡದಿಂದ ಅಧ್ಯಯನ. ಇವುಗಳನ್ನು ತಕ್ಷಣ ಜಾರಿಗೆ ತರಬೇಕೆಂದು ಪ್ರಕೃತಿ ಪ್ರೇಮಿಗಳು ಹಾಗೂ ಪರಿಸರ ತಜ್ಞರು ಆಗ್ರಹಿಸುತ್ತಿದ್ದಾರೆ.
