ನಾಳೆಯಿಂದ ಬೆಳಗಾವಿ ಚಳಿಗಾಲದ ಅಧಿವೇಶನ: ಮುಗಿಬೀಳಲು ವಿಪಕ್ಷ, ತಿರುಗೇಟಿಗೆ ಸರ್ಕಾರ ಸಜ್ಜು!

ಆಡಳಿತ ಮತ್ತು ಪ್ರತಿಪಕ್ಷ ನಡುವೆ ಜಟಾಪಟಿ ನಿರೀಕ್ಷಿಸಲಾಗಿದೆ. ಕುಂದಾ ನಗರಿಯ ಸುವರ್ಣಸೌಧದಲ್ಲಿ 11ನೇ ಚಳಿಗಾಲದ ಅಧಿವೇಶನ ನಡೆಯಲಿದೆ. ರಾಜ್ಯ ಸರ್ಕಾರಕ್ಕೆ ಮುಡಾ ಪ್ರಕರಣದಲ್ಲಿ ಇ.ಡಿ ಹೊರಗೆಡವಿರುವ ತನಿಖಾ ವಿಚಾರಗಳನ್ನು ಮುಂದಿಟ್ಟುಕೊಂಡು ಮುಖಭಂಗ ಉಂಟು ಮಾಡಲು ಬಿಜೆಪಿ-ದಳ ಸಜ್ಜಾಗಿವೆ. 

Belagavi Winter Session Start from December 9th grg

ಬೆಂಗಳೂರು(ಡಿ.08): ಉಪ ಚುನಾವಣೆ ಭರ್ಜರಿ ಗೆಲುವು ಹಾಗೂ ಜನ ಕಲ್ಯಾಣೋತ್ಸವ ಯಶಸ್ಸಿನ ಹುಮ್ಮಸ್ಸಿನಲ್ಲಿ ರುವ ರಾಜ್ಯ ಸರ್ಕಾರಕ್ಕೆ ಸೋಮವಾರದಿಂದ 10 ದಿನಗಳ ಕಾಲ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದ ರೂಪದಲ್ಲಿ ಅಗ್ನಿ ಪರೀಕೆ ಎದುರಾಗಿದೆ. 

ವಕ್ಫ್‌, ಮುಡಾ, ಬಾಣಂತಿಯರ ಸಾವಿ ನಂತಹ ವಿವಾದಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ಪ್ರತಿಪಕ್ಷ ಗಳು ಸಜ್ಜಾಗಿದ್ದರೆ, ಕೊರೋನಾ ಹಗರಣ ಕುರಿತ ಕುನ್ಹಾ ವರದಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಮೇಲಿನ ಬಿಡಿಎ ಹಗರಣ ಆರೋಪ, ಲೈಂಗಿಕ ದೌರ್ಜನ್ಯ ಪ್ರಕರಣ, ಯತ್ನಾಳ್-ವಿಜಯೇಂದ್ರ ಕಚ್ಚಾಟ ಪ್ರಸ್ತಾಪಿಸಿ ಪ್ರತಿಪಕ್ಷಗಳನ್ನು ಕಟ್ಟಿ ಹಾಕಲು ಸರ್ಕಾರವೂ ಸಿದ್ಧತೆ ನಡೆಸಿದೆ. 

ಉತ್ತರ ಕರ್ನಾಟಕದ ಸಮಸ್ಯೆಗೆ ಧ್ವನಿಯಾಗುವುದೇ ಬೆಳಗಾವಿ ಅಧಿವೇಶನ?

ಹೀಗಾಗಿ ಆಡಳಿತ ಮತ್ತು ಪ್ರತಿಪಕ್ಷ ನಡುವೆ ಜಟಾಪಟಿ ನಿರೀಕ್ಷಿಸಲಾಗಿದೆ. ಕುಂದಾ ನಗರಿಯ ಸುವರ್ಣಸೌಧದಲ್ಲಿ 11ನೇ ಚಳಿಗಾಲದ ಅಧಿವೇಶನ ನಡೆಯಲಿದೆ. ರಾಜ್ಯ ಸರ್ಕಾರಕ್ಕೆ ಮುಡಾ ಪ್ರಕರಣದಲ್ಲಿ ಇ.ಡಿ ಹೊರಗೆಡವಿರುವ ತನಿಖಾ ವಿಚಾರಗಳನ್ನು ಮುಂದಿಟ್ಟುಕೊಂಡು ಮುಖಭಂಗ ಉಂಟು ಮಾಡಲು ಬಿಜೆಪಿ-ದಳ ಸಜ್ಜಾಗಿವೆ. 

ಇದರ ಜತೆಗೆ ವಲ್ಪ ಭೂ ವಿವಾದ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಮಾನ್ಯತೆಗಿದ್ದ ನಿಯಮ ಸಡಿಲ, ಗುತ್ತಿಗೆಯಲ್ಲೂ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಬೇಕೆಂಬ ಪ್ರಸ್ತಾವನೆ ಸೇರಿ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ತುಷ್ಟಿಕರಣ ನಡೆಸುತ್ತಿದೆ ಎಂದು ಬಿಂಬಿಸುವುದು, ಜತೆಗೆ ಬಾಣಂತಿಯರ ಸರಣಿ ಸಾವು ಉಂಟಾಗಿದ್ದರೂ ಯಾರೊಬ್ಬರೂ ಬಳ್ಳಾರಿಗೆ ಭೇಟಿ ನೀಡಿ ಪರಿಹಾರ ನೀಡದಿರುವುದು ಹಾಗೂ ತಪ್ಪಿತಸ್ಥ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳದ ಬಗ್ಗೆ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಲೂ ಎನ್‌ಡಿಎ ಕೂಟ ಸಿದ್ಧತೆ ನಡೆಸಿದೆ. 

ಅದೇ ರೀತಿ ಗ್ಯಾರಂಟಿಗಳ ಅನುಷ್ಠಾನದಲ್ಲಿನ ಲೋಪ, ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡದಿರುವುದು,  ಅಧಿಕಾರ ಹಂಚಿಕೆಯಂಥ ಅಸ್ತ್ರಗಳೊಂದಿಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿವೆ ಎಂದು ತಿಳಿದುಬಂದಿದೆ. 

ಪ್ರತಿಪಕ್ಷಗಳ ಮೇಲೆ ಪ್ರತಿದಾಳಿಗೆ ಕೈ ಸಜ್ಜು: 

ಮತ್ತೊಂದೆಡೆ ಅಧಿವೇಶನದಲ್ಲಿ ನ್ಯಾ.ಕುನ್ಹಾ ವರದಿ ಪ್ರಸ್ತಾಪಿಸುವ ಮೂಲಕ ಯಡಿಯೂರಪ್ಪ ಹಾಗೂ ಬಿ.ಶ್ರೀರಾಮುಲು ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮಾಡಿರುವ ಶಿಫಾರಸನ್ನು ಎತ್ತಿ ತೋರಿಸಿ ಪ್ರತಿದಾಳಿ ನಡೆಸಲು ಕಾಂಗ್ರೆಸ್ ಸಜ್ಜಾಗಿದೆ. ಜತೆಗೆ ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಮೇಲಿನ ಬಿಡಿಎ ಹಗರಣ ಆರೋಪ, ಯಡಿಯೂರಪ್ಪ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ, ಗಣಿ ಅಕ್ರಮ ಸೇರಿ ವಿವಿಧ ಹಗರಣ, ಕೇಂದ್ರದ ಅನುದಾನ ತಾರತಮ್ಯ, ಮುನಿರತ್ನ ಪ್ರಕರಣ, ಯತ್ನಾಳ್-ವಿಜಯೇಂದ್ರ ಕಚ್ಚಾಟ ಪ್ರಸ್ತಾಪಿಸಿ ಪ್ರತಿಪಕ್ಷಗಳನ್ನು ಕಟ್ಟಿ ಹಾಕಲು ಸರ್ಕಾರವೂ ಸರ್ವ ಸಿದ್ಧತೆ ನಡೆಸಿದೆ. 

ಪ್ರತಿಪಕ್ಷಗಳು ಪ್ರಸ್ತಾಪಿಸುವ ಯಾವ್ಯಾವ ವಿವಾದದ ಬಗ್ಗೆ ಯಾರೆಲ್ಲ ಸಚಿವರು ಉತ್ತರಿಸಬೇಕು. ಅವರಿಗೆ ಪೂರಕವಾಗಿ ಯಾರೆಲ್ಲ ಶಾಸಕರು ಸಾಥ್ ನೀಡಬೇಕು ಎಂಬ ಹೊಣೆಗಾರಿಕೆಯನ್ನೂ ನಿಗದಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಆಡಳಿತ-ಪ್ರತಿಪಕ್ಷಗಳ ಆರೋಪ- ಪ್ರತ್ಯಾರೋಪಗಳ ಮೂಲಕ ಚಳಿಗಾಲದ ಅಧಿವೇಶನವು ಬಿಸಿಯೇರುವ ಸಾಧ್ಯತೆಯಿದೆ. 

15 ವಿಧೇಯಕಗಳ ಮಂಡನೆ: 

ಮತ್ತೊಂದೆಡೆ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಕುಲಾಧಿಪತಿ ಸ್ಥಾನ ರಾಜ್ಯಪಾಲರಿಂದ ಕಿತ್ತು ಮುಖ್ಯಮಂತ್ರಿಗಳಿಗೆ ನೀಡುವ ವಿಧೇಯಕ ಮಂಡಿಸುತ್ತಿದ್ದು, ಇದು ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಬಿರುಕು ತೀವ್ರಗೊಳಿಸುವ ಸಾಧ್ಯತೆಯಿದೆ. ಇನ್ನು 11 ಸಾವಿರ ಕೋಟಿಗೂ ಹೆಚ್ಚು ಗಣಿ ಆದಾಯ ಸಂಗ್ರಹಿಸುವ ಮೂರು ಖನಿಜ ಮತ್ತು ಕಲ್ಲು ಗಣಿಗಾರಿಕೆ ತಿದ್ದುಪಡಿ ವಿಧೇಯಕಗಳು, ಅಲಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಉಳಿಸಲು ನಿರ್ದಿಷ್ಟ ಸಂಖ್ಯೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ದಾಖಲಾತಿ ಇರಬೇಕೆಂಬ ನಿಯಮಸಡಿಲಿಕೆ, ಠೇವಣಿದಾರರ ಹಿತರಕ್ಷಣೆ ತಿದ್ದುಪಡಿ ವಿಧೇಯಕ ಸೇರಿ 15 ವಿಧೇಯಕ ಹಾಗೂ ತಿದ್ದುಪಡಿ ವಿಧೇಯಕ ಮಂಡನೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಬೆಳಗಾವಿ ಅಧಿವೇಶನಕ್ಕೆ ಬಿಜೆಪಿ-ಜೆಡಿಎಸ್‌ ಪ್ಲಾನ್‌: ಸಿದ್ದು ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ರಣತಂತ್ರ!

ಉ-ಕ ಅಭಿವೃದ್ಧಿ ಬಗ್ಗೆ ಪ್ರತ್ಯೇಕ ಚರ್ಚೆ ಪ್ರತಿ ಬಾರಿಯ ಚಳಿಗಾಲದ ಅಧಿವೇಶನದ ಮಾದರಿಯಲ್ಲೇ ಉತ್ತರ ಕರ್ನಾಟಕ ಭಾಗದ ಬಗ್ಗೆ ಪ್ರತ್ಯೇಕ ಚರ್ಚೆಗೆ ಉಭಯ ಸದನಗಳಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ. ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ ಯೋಜನೆ ಸೇರಿ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳು, ಬೆಳಗಾವಿ ಸುವರ್ಣ ಸೌಧಕ್ಕೆ ಇಲಾಖೆಗಳು ಸ್ಥಳಾಂತರ ಗೊಳ್ಳದಿರುವುದು, ಅನುದಾನ ತಾರತಮ್ಮ ಸೇರಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ. ಇದೇ ವೇಳೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ನಿರೀಕ್ಷೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ವಿರುದ್ಧ ವಿಪಕ್ಷಗಳ ಅಸ್ತ್ರ 

• ಮುಡಾ ಕೇಸಲ್ಲಿ ಇ.ಡಿ ಹೊರಗೆಡವಿದ ಅಂಶಗಳ ಪ್ರಸ್ತಾಪ 
• ವಕ್ಫ್‌ ಮಂಡಳಿಯಿಂದ ರೈತರು, ದೇಗುಲಗಳಿಗೆ ನೋಟಿಸ್ 
• ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಮಾನ್ಯತೆ ನಿಯಮ ಸಡಿಲ 
• ಗುತ್ತಿಗೆಯಲ್ಲೂ ಅಲ್ಪಸಂಖ್ಯಾತರಿಗೆ ಮೀಸಲಿನ ಪ್ರಸ್ತಾವ 
• ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು 
• ಚುನಾವಣಾ ಗ್ಯಾರಂಟಿಗಳ ಅನುಷ್ಠಾನದಲ್ಲಿ ಲೋಪ 
• ಅಭಿವೃದ್ಧಿ ಯೋಜನೆಗಳ ಕುಂಠಿತ, ಅನುದಾನ ಸ್ಥಗಿತ 
• ಅಧಿಕಾರ ಹಂಚಿಕೆ ಕುರಿತು ಕಾಂಗ್ರೆಸ್ಸಿಗರ ಒಳಜಟಾಪಟಿ

ವಿಪಕ್ಷ ವಿರುದ್ಧ ಸರ್ಕಾರ ಪ್ರತ್ಯಸ್ತ್ರ

• ಕುನ್ನಾವರದೀಲಿ ಬಿಎಸ್‌ವೈ, ರಾಮುಲು ಹೆಸರು ಪ್ರಸ್ತಾಪ 
• ಬಿಎಸ್‌ವೈ, ಬಿವೈವಿ ವಿರುದ್ಧದ ಬಿಡಿಎ ಹಗರಣ ಆರೋಪ 
• ಬಿಜೆಪಿ ನಾಯಕರ ವಿರುದ್ಧ ಗಣಿ ಸೇರಿ ವಿವಿಧ ಹಗರಣ 
• ಮುನಿರತ್ನ ವಿರುದ್ದದ ಪ್ರಕರಣ, ಯತ್ನಾಳ್-ಬಿವೈವಿ ಕಚ್ಚಾಟ 
• ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ 
• ಯಾರ ಟೀಕೆಗೆ ಯಾರು ಉತ್ತರಿಸಬೇಕೆಂದು ರಣತಂತ್ರ 
• ತಿರುಗೇಟು ನೀಡಲು ಸಚಿವರಿಗೆ ನೆರವು ನೀಡಲು ತಂಡ ರಚನೆ

Latest Videos
Follow Us:
Download App:
  • android
  • ios