Belagavi Assembly Session: ಪೊಲೀಸ್‌ ಕ್ವಾರ್ಟರ್ಸ್‌ ಕೋಳಿ ಗೂಡಿನಂತಿವೆ: ಸ್ಪೀಕರ್‌ ಕಾಗೇರಿ ಕಿಡಿ

*ಪೊಲೀಸ್‌ ಕ್ವಾರ್ಟರ್ಸ್‌ ಕೋಳಿ ಗೂಡಿನಂತಿವೆ: ಸ್ಪೀಕರ್‌
*ಪೊಲೀಸ್‌ ಠಾಣೆ, ಕ್ವಾರ್ಟರ್ಸ್‌ ಅವ್ಯವಸ್ಥೆ: ಶಾಸಕರ ಆಕ್ರೋಶ
*ಆರಂಭದಲ್ಲೇ ಶಾಸಕರ ಗೈರಿಗೂ ಸ್ಪೀಕರ್‌ ಕಾಗೇರಿ ಕಿಡಿ
*‘ಇದು ಶೋಭೆ ತರದು’ ಎಂದು ಸಭಾಧ್ಯಕ್ಷ ಎಚ್ಚರಿಕೆ
 

Belagavi Assembly Session Police quarters have become  chicken nests said Speaker Hegde Kageri

ವಿಧಾನಸಭೆ(ಡಿ. 15): ರಾಜ್ಯದಲ್ಲಿನ ಹಳೆಯ ಪೊಲೀಸ್‌ ವಸತಿ ಮತ್ತು ಪೊಲೀಸ್‌ ಠಾಣೆಗಳ ಅವ್ಯವಸ್ಥೆ ಬಗ್ಗೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ಸಭಾಧ್ಯಕ್ಷರು ಸೇರಿದಂತೆ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಜರುಗಿತು. ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ ಸದಸ್ಯ ಶಿವಲಿಂಗೇಗೌಡ ಆವರು ಅರಸಿಕೆರೆ ವಿಧಾನಸಭಾ ಕ್ಷೇತ್ರದ ಗಂಡಸಿ ಗ್ರಾಮದಲ್ಲಿನ ಹಳೆ ಪೊಲೀಸ್‌ ಠಾಣೆ ಶಿಥಿಲಗೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ  ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರಿಸಿದ್ದಾರೆ. 

ಹಳೆಯ ಕಟ್ಟಡವನ್ನು ನೆಲಸಮಗೊಳಿಸಲು ಅನುಮತಿ ನೀಡಲಾಗಿದ್ದು, ನೆಲಸಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ವೇಳೆ ಶಿಥಿಲಗೊಂಡಿರುವ ಪೊಲೀಸ್‌ ಠಾಣೆಯ ಅವಶೇಷಗಳನ್ನು ತೆರವು ಮಾಡಬೇಕಾಗಿದೆ. ಹಲವು ಬಾರಿ ಈ ಸಂಬಂಧ ಆನ್‌ಲೈನ್‌ ಟೆಂಡರ್‌ ಕರೆದಿದ್ದರೂ ಗುತ್ತಿಗೆದಾರರು ಬಂದಿಲ್ಲ. ಹೀಗಾಗಿ ನೇರವಾಗಿ ಟೆಂಡರ್‌ ಕರೆದು ಅಂತಿಮಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪೊಲೀಸ್‌ ಕ್ವಾರ್ಟರ್ಸ್‌ ಕೋಳಿ ಗೂಡಿನಂತಿವೆ: ಸ್ಪೀಕರ್‌

ಈ ವೇಳೆ ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪೊಲೀಸ್‌ ವಸತಿ ಮತ್ತು ಪೊಲೀಸ್‌ ಠಾಣೆಗಳ ಅವ್ಯವಸ್ಥೆ ರಾಜ್ಯದ ಸಮಸ್ಯೆ. ಪೊಲೀಸ್‌ ವಸತಿಗಳ ನಿರ್ಮಾಣದ ಯೋಜನೆಗಳೇ ಸರಿ ಇಲ್ಲ. ಕೋಳಿಗಳಿಗೆ ಗೂಡು ಮಾಡಿದಂತೆ ನಿರ್ಮಿಸಲಾಗುತ್ತಿದೆ. ಅಲ್ಲದೇ, ನಿರ್ವಹಣೆಯೂ ಸರಿ ಇಲ್ಲ. ಹೀಗಿರುವಾಗ ಪೊಲೀಸರು ಕಾರ್ಯ ಕ್ಷಮತೆ ಯಾವ ರೀತಿಯಲ್ಲಿರಲಿದೆ ಎಂಬುದನ್ನು ಊಹಿಸಿಕೊಳ್ಳಬಹುದು ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜ್ಞಾನೇಂದ್ರ, ರಾಜ್ಯದಲ್ಲಿ 10 ಸಾವಿರ ಮನೆಗಳನ್ನು ಹಾಗೂ 100 ಪೊಲೀಸ್‌ ಠಾಣೆಗಳನ್ನು ನಿರ್ಮಿಸಲಾಗುತ್ತಿದೆ. ದುರಸ್ತಿ ಮಾಡುವ ವೆಚ್ಚವೇ ಹೊಸದಾಗಿ ನಿರ್ಮಿಸಲು ತಗಲಿದೆ ಎಂಬ ಸದಸ್ಯರ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್‌ ಸದಸ್ಯ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಸಿಎಸ್‌ಆರ್‌ ನಿಧಿಯಡಿ ವಾಹನಗಳನ್ನು ನೀಡಿದರೆ ಸರ್ಕಾರವು ಅದನ್ನು ತಿರಸ್ಕರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಗೃಹ ಸಚಿವರು ಅಶ್ವಾಸನೆ ನೀಡಿದರು.

ಆರಂಭದಲ್ಲೇ ಶಾಸಕರ ಗೈರಿಗೂ ಸ್ಪೀಕರ್‌ ಕಾಗೇರಿ ಕಿಡಿ

ಅಧಿವೇಶನದ (Belagavi Assembly Session) ಮೊದಲ ದಿನವೇ ಹೆಚ್ಚು ಶಾಸಕರು ಗೈರು ಹಾಜರಾಗಿದ್ದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri), ವರ್ಷದಲ್ಲಿ 30-40 ದಿನ ನಡೆಯುವ ಅಧಿವೇಶನಕ್ಕೂ ಗೈರಾಗುವುದು ಸಂಸದೀಯ ವ್ಯವಸ್ಥೆಗೆ ಶೋಭೆಯಲ್ಲ ಎಂದು ಹೇಳಿದರು.

ಅಲ್ಲದೆ, ಡಿ.24ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗಿಯಾಗಬೇಕು. ಅನಿವಾರ್ಯವಲ್ಲದ ಹೊರತು ಯಾರೂ ಗೈರಾಗಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು. ‘ಸೋಮವಾರದಿಂದ ಅಧಿವೇಶನ ಪ್ರಾರಂಭವಾಗಿದೆ. ವಿಧಾನಸಭೆ ಸದಸ್ಯರ ಹಾಜರಾತಿ ಬಗ್ಗೆ ಮಾಧ್ಯಮಗಳಲ್ಲೂ ವರದಿಯಾಗಿದೆ. ನಾನೂ ಹಾಜರಾತಿಯನ್ನು ಗಮನಿಸಿದ್ದೇನೆ. 224 ಮಂದಿ ಸದಸ್ಯರಲ್ಲಿ 119 ಮಂದಿ ಮಾತ್ರ ಹಾಜರಾತಿ ಸಹಿ ಹಾಕಿದ್ದು, ಇದು ನಿರೀಕ್ಷಿತ ಸಂಖ್ಯೆ ಅಲ್ಲ’ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ಡಿ.24ರವರೆಗೆ ಅಧಿವೇಶನ ನಡೆಯಲಿದ್ದು ನಾಳೆಯಿಂದ ಆದರೂ ಸದನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಆಗಮಿಸಬೇಕು. ತೀರಾ ಅನಿವಾರ್ಯವಲ್ಲದ ಹೊರತು ಯಾರೂ ಗೈರು ಹಾಜರಾಗುವಂತಿಲ್ಲ. ಇದನ್ನು ಆಗ್ರಹಪೂರ್ವಕವಾಗಿಯೇ ಹೇಳುತ್ತಿದ್ದೇನೆ ಎಂದರು.

ಇದನ್ನೂ ಓದಿ:

1) Seed Funding: ಸಾಮಾನ್ಯ ವರ್ಗದ ಯುವಕರಿಗೂ ಸ್ವಯಂ ಉದ್ಯೋಗಕ್ಕೆ ‘ಸೀಡ್‌ ಮನಿ’: ಮುರುಗೇಶ್‌ ನಿರಾಣಿ

2) Leader of the Opposition: ಕರ್ನಾಟಕದಲ್ಲಿ ವಿಪಕ್ಷ ನಾಯಕನಿಗೆ ಯಾವ ಗೌರವವೂ ಉಳಿದಿಲ್ಲ: ಸಿದ್ದರಾಮಯ್ಯ

3) Scrapping Legislative Council: ಗೆದ್ದವರೆಲ್ಲಾ ಹಣ ಖರ್ಚು ಮಾಡಿದ್ದಾರೆ, ಪರಿಷತ್‌ ರದ್ದು ಚರ್ಚೆ ಅಗತ್ಯ: ಈಶ್ವರಪ್ಪ

Latest Videos
Follow Us:
Download App:
  • android
  • ios