Leader of the Opposition: ಕರ್ನಾಟಕದಲ್ಲಿ ವಿಪಕ್ಷ ನಾಯಕನಿಗೆ ಯಾವ ಗೌರವವೂ ಉಳಿದಿಲ್ಲ: ಸಿದ್ದರಾಮಯ್ಯ
*ಜಿಲ್ಲೆಗಳಿಗೆ ಹೋದರೆ ಡೀಸಿ, ಎಸ್ಪಿ ಕೂಡ ಬರಲ್ಲ
*ಸಭೆ ಬಿಡಿ, ಕನಿಷ್ಠ ಭೇಟಿಯೂ ಆಗುವುದಿಲ್ಲ
*ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಅಳಲು
*ಹಿಂದುತ್ವ ಎಂದರೆ ಏಕೆ ಭಯ? ಕಾಲೆಳೆದ ಅಶೋಕ್
ವಿಧಾನಸಭೆ(ಡಿ. 15): ವಿಧಾನಸಭೆ ವಿರೋಧಪಕ್ಷದ ನಾಯಕ (Leader of the Opposition) ಎಂದರೆ ‘ಶ್ಯಾಡೋ ಸಿಎಂ’ (ಮುಖ್ಯಮಂತ್ರಿ ತದ್ರೂಪಿ) ಎಂಬುದು ಸಂವಿಧಾನದಲ್ಲಿ ಮಾತ್ರ ಇದೆ. ಆದರೆ, ವಾಸ್ತವವಾಗಿ ಯಾವ ಗೌರವಗಳೂ ಉಳಿದಿಲ್ಲ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಬೇಸರಿಸಿದರು. ನೆರೆ ಕುರಿತ ಚರ್ಚೆ ವೇಳೆ ‘ನಿಮ್ಮ ಬಗ್ಗೆ ನಮಗೆ ಅಪಾರ ಅಭಿಮಾನವಿದೆ. ನೀವು ಶ್ಯಾಡೋ ಸಿಎಂ’ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಇದಕ್ಕೆ ಸಿದ್ದರಾಮಯ್ಯ, ನೀವು ಅಧಿಕಾರಕ್ಕೆ ಬಂದ ಮೇಲೆ ವಿರೋಧಪಕ್ಷದ ನಾಯಕರಿಗೆ ಇದ್ದ ಅವಕಾಶಗಳನ್ನು ಕಿತ್ತುಕೊಂಡಿದ್ದೀರಿ. 2008ರಲ್ಲಿ ನಿಮ್ಮ ಸರ್ಕಾರ ಬಂದಾಗಲೂ ನಾನೇ ವಿರೋಧಪಕ್ಷದ ನಾಯಕನಾಗಿದ್ದೆ. ಬಳ್ಳಾರಿಗೆ ಅಕ್ರಮ ಗಣಿಗಾರಿಕೆ ದೂರು ಪರಿಶೀಲನೆಗೆ ಹೋದರೆ ಒಬ್ಬ ಕಾನ್‌ಸ್ಟೇಬಲ್ ಕೂಡ ಬಂದಿರಲಿಲ್ಲ ಎಂದು ಹೇಳಿದರು.
ಇನ್ನು ಅಧಿಕಾರಿಗಳ ಜತೆ ಸಭೆ ಮಾಡಬಾರದು ಎಂದು ಹೊಸದಾಗಿ ಆದೇಶ ಮಾಡಿದ್ದೀರಿ. ಹಿಂದೆ ವಿಪಕ್ಷ ನಾಯಕರು ಜಿಲ್ಲೆಗಳಿಗೆ ಹೋದರೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಇಒ ಬರುತ್ತಿದ್ದರು. ಇದೀಗ ಯಾರೂ ಬಂದು ಭೇಟಿಯಾಗುವುದಿಲ್ಲ. ಸಭೆ ಮಾಡುವುದಕ್ಕೆ ಅನುಮತಿ ಬೇಡ. ಕನಿಷ್ಠ ಭೇಟಿಯೂ ಆಗುವುದಿಲ್ಲ ಎಂದು ಅಳಲು ತೋಡಿಕೊಂಡರು.
ಸಿಎಂಗೇ ಗೌರವ ಇರಲಿಲ್ಲ
ಅಷ್ಟೆಏಕೆ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಬಳ್ಳಾರಿಗೆ ಹೋಗಿದ್ದರೆ ಅವರನ್ನು ನೋಡಲು ಜಿಲ್ಲಾಧಿಕಾರಿಗಳು ಬಂದಿರಲಿಲ್ಲ. ಆಗ ಜನಾರ್ದನರೆಡ್ಡಿ ಉಸ್ತುವಾರಿ ಸಚಿವರಾಗಿದ್ದರು. ಇದನ್ನು ಯಡಿಯೂರಪ್ಪ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಗುಟ್ಟಾಗಿ ಕೇಳಿದರೆ ಹೇಳುತ್ತಾರೆ. ಹೀಗಾಗಿಯೇ ಅದನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಕರೆದದ್ದು ಎಂದು ಸಿದ್ದರಾಮಯ್ಯ ಹೇಳಿದರು.
ಹಿಂದುತ್ವ ಎಂದರೆ ಏಕೆ ಭಯ?: ಸಿದ್ದುಗೆ ಕಾಲೆಳೆದ ಅಶೋಕ್
‘ಸಿದ್ದರಾಮಯ್ಯಗೆ ಹಿಂದುತ್ವ ಎಂದರೆ ಏಕೆ ಭಯ?’. ವಿಧಾನಸಭೆಯಲ್ಲಿನ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಸಚಿವ ಆರ್. ಅಶೋಕ್ ಕಾಲೆಳೆದಿದ್ದು ಹೀಗೆ. ಮಂಗಳವಾರ ವಿಧಾನಸಭೆಯ ಮಧ್ಯಾಹ್ನದ ಕಲಾಪದ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅತಿವೃಷ್ಟಿವಿಷಯವಾಗಿ ಚರ್ಚಿಸುತ್ತಾ ‘ನಿಮಗೆ ಅಧಿಕಾರ ನಡೆಸಲು ಆಗದಿದ್ದಲ್ಲಿ ಬಿಟ್ಟುಬಿಡಿ. ನಾವು ನಡೆಸುತ್ತೇವೆ’ ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.ಅಶೋಕ, ‘ಇಲ್ಲ ಸಾರ್, ಇನ್ನು 20 ವರ್ಷದ ನಂತರ ಅಧಿಕಾರ ಬಿಟ್ಟು ಕೊಡುತ್ತೇವೆ. ಅಲ್ಲಿವರೆಗೂ ನಾವೇ ಗೆಲ್ಲುವುದು. ಸಿದ್ದರಾಮಯ್ಯ ಅವರು ನಮಗೆ ಹಿಂದುತ್ವ ಬಿಟ್ಟು ಚುನಾವಣೆ ಎದುರಿಸಿ ಎಂದು ಹೇಳುತ್ತಿರುತ್ತಾರೆ. ನಿಮಗೆ ಹಿಂದುತ್ವ ಎಂದರೆ ಏಕೆ ಭಯ ಎಂಬುದು ತಿಳಿಯುತ್ತಿಲ್ಲ’ ಎಂದು ಟಾಂಗ್ ನೀಡಿದರು.ಅದಕ್ಕೆ ವಿರೋಧ ಪಕ್ಷದ ಸದಸ್ಯರು, ‘ವಿಷಯಾಂತರ ಮಾಡುವ ಪ್ರಯತ್ನ ನಡೆಯುತ್ತಿದೆ. ನಾವು ಹಿಂದುಗಳೇ. ನಮಗೆ ಹಿಂದುತ್ವದ ಪಾಠ ಹೇಳಬೇಡಿ’ ಎಂದು ಜೋರಾಗಿ ಕೂಗಲಾರಂಭಿಸಿದರು.
ಕೊನೆಗೆ ಸಿದ್ದರಾಮಯ್ಯ, ‘ನನಗೇನು ಹಿಂದುತ್ವದ ಭಯವೇನೂ ಇಲ್ಲ. ಕಾಲಚಕ್ರ ತಿರುಗಲೇ ಬೇಕು. ಈಗ ನೀವು ಆಡಳಿತ ನಡೆಸುತ್ತಿದ್ದೀರಿ. ಮುಂದೆ ಕೆಳಕ್ಕಿಳಿಯಲೇಬೇಕು. ನಾವು ಆಡಳಿತಕ್ಕೆ ಬರುತ್ತೇವೆ ಅಷ್ಟೇ ’ ಎಂದು ಉತ್ತರ ನೀಡಿದರು.
ಇದನ್ನೂ ಓದಿ:
1) Scrapping Legislative Council: ಗೆದ್ದವರೆಲ್ಲಾ ಹಣ ಖರ್ಚು ಮಾಡಿದ್ದಾರೆ, ಪರಿಷತ್ ರದ್ದು ಚರ್ಚೆ ಅಗತ್ಯ: ಈಶ್ವರಪ್ಪ
2) Accreditation of Schools: ಶಾಲಾ ಮಾನ್ಯತೆ ನಿಯಮ ಸರಳೀಕರಣ: ನಾಗೇಶ್ ಭರವಸೆ!
3) Siddaramaiah Vs Somanna: 'ಕಾಂಗ್ರೆಸ್ ಮಾಡಿದ ಪಾಪದ ಕೊಳೆಯನ್ನು ತೊಳೆಯುತ್ತಿದ್ದೇವೆ'