Scrapping Legislative Council: ಗೆದ್ದವರೆಲ್ಲಾ ಹಣ ಖರ್ಚು ಮಾಡಿದ್ದಾರೆ, ಪರಿಷತ್ ರದ್ದು ಚರ್ಚೆ ಅಗತ್ಯ: ಈಶ್ವರಪ್ಪ
*ಪರಿಷತ್ ರದ್ದು ಮಾಡುವ ಚರ್ಚೆ ಅಗತ್ಯ: ಈಶ್ವರಪ್ಪ
*ಮೇಲ್ಮನೆ ಇಂದು ‘ಚಿಂತಕರ’ ಬದಲು ‘ಶ್ರೀಮಂತರ ಚಾವಡಿ’
*ದುಡ್ಡಿನ ಮೇಲೆ ಪರಿಷತ್ ಚುನಾವಣೆ ನಡೆದಿದೆ
*1 ಮತಕ್ಕೆ 1 ಲಕ್ಷ, 2 ಲಕ್ಷ ಕೊಡಬೇಕಿದೆ: ಸಚಿವರ ಬೇಸರ
*ಲಘುವಾಗಿ ಮಾತನಾಡಿದ ಮಾಧುಸ್ವಾಮಿಗೆ ಮುಜುಗರ
ಸುವರ್ಣ ಸೌಧ ಬೆಳಗಾವಿ (ಡಿ. 15): ಚಿಂತಕರ ಚಾವಡಿಯಾಗಬೇಕಾದ ವಿಧಾನ ಪರಿಷತ್ (Legislative Council) ಶ್ರೀಮಂತರ ಚಾವಡಿಯಾಗಿದೆ. ಹೀಗಾಗಿ ವಿಧಾನ ಪರಿಷತ್ ರದ್ದು ಮಾಡುವ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ( K. S. Eshwarappa) ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾದರೆ, ಒಂದು ಮತಕ್ಕೆ ಒಂದು ಲಕ್ಷ ರು., ಎರಡು ಲಕ್ಷ ರು. ಕೊಡುವ ಸ್ಥಿತಿ ನಿರ್ಮಾಣವಾಗಿದೆ. ಇದು ಪ್ರಜಾಪ್ರಭುತ್ವದ (Democracy) ಕಗ್ಗೊಲೆಯಾಗಿದ್ದು, ಹಣ ನೀಡುವವರು ಮಾತ್ರ ಚುನಾವಣೆಗೆ ಸ್ಪರ್ಧಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಗೆದ್ದವರೆಲ್ಲಾ ಹಣ ಖರ್ಚು ಮಾಡಿಯೇ ಪರಿಷತ್‌ಗೆ ಬರುತ್ತಿದ್ದಾರೆ’ ಎಂದು ಹೇಳಿದರು.
‘ಈ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿ ಎನ್ನಲಾಗದು. ರೊಕ್ಕದ ವಿಷಯ ಚರ್ಚೆಯಾಗುತ್ತಿರುತ್ತದೆ. ಇದು ಒಳ್ಳೆಯದಲ್ಲ. ವಿಧಾನ ಪರಿಷತ್ ರದ್ದು ಮಾಡುವ ಬಗ್ಗೆ ಚರ್ಚೆಯಾಗಬೇಕು. ಈ ಬಗ್ಗೆ ನಾವು ತೀರ್ಮಾನ ಮಾಡಲು ಬರುವುದಿಲ್ಲ. ಚುನಾವಣಾ ಆಯೋಗ ಸತ್ತಿದೆಯೋ ಬದುಕಿದೆಯೋ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ವಿಧಾನ ಪರಿಷತ್ ರದ್ದು ಮಾಡುವ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ಚರ್ಚೆ ಮಾಡಿಕೊಳ್ಳುವ ಅಗತ್ಯವಿದೆ’ ಎಂದು ಈಶ್ವರಪ್ಪ ಹೇಳಿದರು.
ಈಶ್ವರಪ್ಪ ಹೇಳಿಕೆ ವೈಯಕ್ತಿಕ: ಸಂಸದೀಯ ಸಚಿವ ಸ್ಪಷ್ಟನೆ
ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ವಿಧಾಪರಿಷತ್ ರದ್ದತಿ ಬಗ್ಗೆ ಈಶ್ವರಪ್ಪ ನೀಡಿರುವ ಹೇಳಿಕೆ ವೈಯಕ್ತಿಕವಾದದ್ದು ಎಂದಷ್ಟೇ ಹೇಳಿದರು.ಈಗ ನಡೆದ ವಿಧಾನ ಪರಿಷತ್ ಚುನಾವಣೆಯಿಂದ ಪ್ರಜಾಪ್ರಭುತ್ವಕ್ಕೆ ಅಪಮಾನವಾಗಿದೆ. ಈ ಬಾರಿ ಸಂಘಟನೆ, ಪಕ್ಷ ಹಾಗೂ ಕಾರ್ಯಕರ್ತರ ಹೋರಾಟದ ಮೇಲೆ ಚುನಾವಣೆ ನಡೆದಿಲ್ಲ. ಬದಲಾಗಿ ದುಡ್ಡಿನ ಮೇಲೆ ನಡೆದಿದೆ. ಹೀಗಾಗಿ ವಿಧಾನ ಪರಿಷತ್ ಇರಬೇಕೋ ಬೇಡವೋ ಎನ್ನುವುದರ ಬಗ್ಗೆ ಚರ್ಚೆಯಾಗಬೇಕು ಎಂದರು.
ಲಘುವಾಗಿ ಮಾತನಾಡಿದ ಮಾಧುಸ್ವಾಮಿಗೆ ಮುಜುಗರ
‘ಸಣ್ಣ ನೀರಾವರಿ ಇಲಾಖೆಯ ಅನುದಾನ ಕೊರತೆ ಇದೆ’ ಎಂಬರ್ಥದ ಉತ್ತರ ನೀಡಿದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ (J C Madhuswamy) ಅವರು ಪ್ರತಿಪಕ್ಷಗಳ ಸದಸ್ಯರ ಪಾಟೀ ಸವಾಲಿನಿಂದಾಗಿ ಮುಜುಗರಕ್ಕೆ ಸಿಲುಗಿದ ಘಟನೆ ನಡೆಯಿತು. ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಸಿ.ಟಿ.ರವಿ ಪರವಾಗಿ ಬೆಳ್ಳಿ ಪ್ರಕಾಶ್, ‘ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಯಾವಾಗ ಲಭ್ಯವಾಗಲಿದೆ?’ ಎಂದು ಪ್ರಶ್ನೆ ಕೇಳಿದರು. ಉತ್ತರಿಸಿದ ಮಾಧುಸ್ವಾಮಿ, ‘ಅನುದಾನ ನೀಡುವವರಿಗೆ ಈ ಪ್ರಶ್ನೆ ಹಾಕಿ ಕೇಳಿಬಿಟ್ಟರೆ ನನಗೂ ಕ್ಷೇಮ’ ಎಂದು ಲಘುವಾಗಿ ಹೇಳಿದರು. ಇದಕ್ಕೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ರಿಸವ್‌ರ್ ಬ್ಯಾಂಕ್ ಆನ್ನು ಕೇಳಬೇಕು’ ಎಂದು ಲೇವಡಿ ಮಾಡಿದರು. ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಕೃಷ್ಣ ಬೈರೇಗೌಡ, ಸರ್ಕಾರದಲ್ಲಿ ದುಡ್ಡು ಇಲ್ಲ ಎಂದುಕೊಳ್ಳಬೇಕಾ ಅಥವಾ ದುಡ್ಡು ಇದೆ. ಆದರೆ, ಸಣ್ಣ ನೀರಾವರಿ ಇಲಾಖೆಗೆ ಇಲ್ಲ ಎಂದು ಅರ್ಥ ಮಾಡಿಕೊಳ್ಳಬೇಕಾ?’ ಎಂದರು. ಆಗ ಮುಜುಗರಕ್ಕೊಳಗಾದ ಸಚಿವರು, ‘ನನ್ನ ಇಲಾಖೆಗೆ ಅನ್ಯಾಯ ಆಗಿಲ್ಲ. ಅನುದಾನ ಇದೆ ಎಂದರು.
ಕಡೂರು ತಾಲೂಕು ಸಖರಾಯಪಟ್ಟಣ ಹೋಬಳಿ ಅಯ್ಯನಕೆರೆ ಕೋಡಿ ಬಿದ್ದ ನೀರನ್ನು ಲಿಫ್ಟ್ ಮಾಡಿ ಚಿಕ್ಕಮಗಳೂರು ಕ್ಷೇತ್ರದ ಬೆರೆಟಗೆರೆಗೆ ನೀರು ಹರಿಸುವ ಕಾಮಗಾರಿಯ ಪ್ರಸ್ತಾವನೆ ಇದೆ. ಸದರಿ ಕೆರೆಗಳನ್ನು ತುಂಬಿಸಲು ವಿಸ್ತೃತ ಯೋಜನಾ ವರದಿಯನ್ನು 9.96 ಕೋಟಿ ರು.ಗೆ ತಯಾರಿಸಲಾಗಿದೆ. ವಿವರವಾದ ಯೋಜನಾ ವರದಿಯನ್ನು ತಾಂತ್ರಿಕ ಮೌಲ್ಯ ನಿರ್ಣಯ ಸಮಿತಿಯ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದರು.