ಬೆಳಗಾವಿ, ಕಾರವಾರ ನಮ್ದು: ಬೆಂಕಿಗೆ ಮಹಾ ಡಿಸಿಎಂ ತುಪ್ಪ!
ಬೆಳಗಾವಿ, ಕಾರವಾರ ನಮ್ದು: ಬೆಂಕಿಗೆ ಮಹಾ ಡಿಸಿಎಂ ತುಪ್ಪ| ಇತ್ತ ರಾಜ್ಯ ಸರ್ಕಾರದಿಂದ ಮರಾಠ ಜನಾಂಗದ ಓಲೈಕೆ| ಅತ್ತ ಅಜಿತ್ ಪವಾರ್‌ರಿಂದ ಕನ್ನಡಿಗರ ಕೆಣಕುವ ಹೇಳಿಕೆ
ಮುಂಬೈ(ನ.18): ಇತ್ತ ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ಹೊತ್ತಿನಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯೂ ಆಗಿರುವ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಕನ್ನಡ-ಮರಾಠಿ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಮಾತುಗಳನ್ನಾಡಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿದ್ದು. ಅದನ್ನು ನನಸು ಮಾಡಬೇಕಿದೆ ಎಂದು ಕನ್ನಡಿಗರನ್ನು ಕೆರಳಿಸುವ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸರ್ಕಾರದಿಂದ ಮಹತ್ವದ ಆದೇಶ
ಶಿವಸೇನೆ ನಾಯಕ ದಿ. ಬಾಳಾಠಾಕ್ರೆ ಅವರ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅಜಿತ್ ಪವಾರ್, ‘ಮರಾಠಿ ಮಾತನಾಡುವವರು ಹೆಚ್ಚಾಗಿ ಇರುವ ಕರ್ನಾಟಕದ ಭಾಗವಾಗಿರುವ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ಸೇರಿದ ಅಖಂಡ ಮಹಾರಾಷ್ಟ್ರದ ಅಭಿವೃದ್ಧಿ ಬಾಳಾ ಠಾಕ್ರೆಯವರ ಕನಸಾಗಿತ್ತು. ನಾವು ಅದನ್ನು ನನಸು ಮಾಡೋಣ’ ಎಂದು ಮರಾಠಿಗರಿಗೆ ಕರೆ ನೀಡಿದ್ದಾರೆ.
'ನಮಗೆ ಗೊತ್ತಿದೆ, ಬಿಜೆಪಿ ಇನ್ನು 25 ವರ್ಷ ಕಾಲ ಅಧಿಕಾರಕ್ಕೆ ಬರಲ್ಲ'
ಮೊದಲಿನಿಂದಲೂ ಶಿವಸೇನೆ ನಾಯಕರು ಪದೇ ಪದೇ ಗಡಿ ವಿವಾದ ಕೆದಕುವ ಇತಿಹಾಸ ಹೊಂದಿದ್ದಾರೆ. ಆದರೆ ಇದೀಗ ಎನ್‌ಸಿಪಿ ಕೂಡಾ ಮಹಾರಾಷ್ಟ್ರ ಆಡಳಿತರೂಢ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಭಾಗವಾಗಿರುವ ಕಾರಣ, ಅವರಿಂದಲೂ ಠಾಕ್ರೆ ಪುಣ್ಯಸ್ಮರಣೆಯಂದು ಇಂಥ ಹೇಳಿಕೆ ಹೊರಬಿದ್ದಿದೆ.