ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡುವ ಮನೆ ಮಾಲೀಕರಿಗೆ ಪೊಲೀಸ್ ಆಯುಕ್ತರ ಎಚ್ಚರಿಕೆ. ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಅಕ್ರಮವಾಗಿ ನೆಲೆಸಿದ್ದ ಇಬ್ಬರು ವಿದೇಶಿಗರನ್ನು ಬಂಧಿಸಲಾಗಿದೆ.
ಬೆಂಗಳೂರು (ಮಾ.5): ನಿಯಮ ಉಲ್ಲಂಘಿಸಿ ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡುವ ಮನೆ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಿಯರ ಕಾಯ್ದೆ ಪ್ರಕಾರ ವಿದೇಶಿ ಪ್ರಜೆಗಳಿಗೆ ತನ್ನ ಮನೆ ಬಾಡಿಗೆ ನೀಡಿದ 24 ತಾಸಿನೊಳಗೆ ವಿದೇಶಿಯರ ನೋಂದಣಿ ಇಲಾಖೆಯ ಆನ್‌ಲೈನ್ ಪೋರ್ಟಲ್‌ನಲ್ಲಿ ಫಾರಂ-ಸಿ ಅನ್ನು ಅಧಿಕಾರಿಗಳಿಗೆ ಸಲ್ಲಿಸಬೇಕಿದೆ ಎಂದರು.
ಇದನ್ನೂ ಓದಿ: ಬಾಳ ಸಂಗಾತಿ ಹುಡುಕುತ್ತಿದ್ದವನಿಗೆ ಮ್ಯಾಟ್ರಿಮೋನಿಯಲ್ಲಿ ಸಿಕ್ಕಿದ್ದು ಕಳ್ಳಿ! ಹೂಡಿಕೆ ನೆಪದಲ್ಲಿ ₹5 ಲಕ್ಷ ಉಂಡೇನಾಮ!
ಎಫ್‌ಆರ್‌ಓಓ ಅಧಿಕಾರಿಗಳು ಅನುಮೋದಿಸಿದ ಮನೆಯ ಮಾಲೀಕ/ನಿರ್ವಹಕಾರ ವಿದೇಶಿ ವ್ಯಕ್ತಿ ವಾಸ್ತವ್ಯಕ್ಕೆ ಬಂದ 24 ತಾಸಿನಲ್ಲೇ ನಮೂನೆ-ಸಿ ರ ಮುದ್ರಿತ ಪ್ರತಿಗಳನ್ನು ಹೊಂದಿರಬೇಕು ಎಂಬ ನಿಯಮವಿದೆ. ಆದರೆ ಈ ನಿಯಮವನ್ನು ಮನೆ ಮಾಲೀಕರು ಪಾಲಿಸುತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ವಿದೇಶಿ ಪ್ರಜೆಗಳಿಗೆ ಕಾನೂನುಬಾಹಿರವಾಗಿ ಮನೆಗಳನ್ನು ಬಾಡಿಗೆ ನೀಡಿದವರ ವಿರುದ್ಧ 70 ಪ್ರಕಣಣಗಳು ದಾಖಲಾಗಿವೆ ಎಂದು ಹೇಳಿದರು.
ಇನ್ನು ಮುಂದೆ ಯಾವುದೇ ವಿದೇಶಿ ಪ್ರಜೆಗಳಿಗೆ ಬಾಡಿಗೆ/ಆಶ್ರಯ ನೀಡುವ ಮುನ್ನ ಅವರ ಪೂರ್ವಾಪರ ವಿವರಗಳನ್ನು ಮನೆ ಮಾಲೀಕರು ಸಂಗ್ರಹಿಸಬೇಕು. ಆನಂತರ ಈ ಮಾಹಿತಿಯನ್ನು ನಿಯಮಾನುಸಾರ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನೀಡಬೇಕಿದೆ. ಈ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಇದು ಸೈಬರ್ ವಂಚಕರ ತಂತ್ರ; ಉದ್ಯೋಗಾಕಾಂಕ್ಷಿಗಳೇ ಎಚ್ಚರ, ಲಿಂಕ್ಡ್‌ಇನ್‌ನಲ್ಲಿ ಹೇಗೆ ವಂಚಿಸುತ್ತಾರೆ ಗೊತ್ತಾ?
ಅಕ್ರಮವಾಗಿ ನೆಲೆಸಿದ್ದ ಇಬ್ಬರು ವಿದೇಶಿಗರ ಸೆರೆ
ಹೆಬ್ಬಾಳ ಸಮೀಪದ ಆನಂದ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ಈ ಇಬ್ಬರು ವಿದೇಶಿ ಪ್ರಜೆಗಳು ವೀಸಾ ಅವಧಿ ಮುಗಿದಿದ್ದರೂ ನೆಲೆಸಿದ್ದರು. ಬ್ಯುಸಿನೆಸ್ ವೀಸಾದಡಿ ಅವರು ಬಂದಿದ್ದರು. ಈ ವಿದೇಶಿ ಪ್ರಜೆಗಳಿಗೆ ಸ್ಥಳೀಯ ವ್ಯಕ್ತಿ ನೆರವು ನೀಡಿದ್ದರು. ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಇಬ್ಬರು ವಿದೇಶಿಗರು, ಮನೆಯ ಮಾಲೀಕ ಮತ್ತು ಭಾರತ ದೇಶಕ್ಕೆ ವಿದೇಶಿ ಪ್ರಜೆಗಳನ್ನು ಕರೆಸಿಕೊಂಡವರ ವಿರುದ್ಧ ಹೆಬ್ಬಾಳ ಠಾಣೆಯಲ್ಲಿ ವಿದೇಶಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
