ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ಮಹಿಳೆಯಿಂದ ಕೆಪಿಟಿಸಿಎಲ್ ಇಂಜಿನಿಯರ್ ವಂಚನೆಗೊಳಗಾಗಿದ್ದಾರೆ. ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ 5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಬೆಂಗಳೂರು (ಮಾ.4): ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ಜೀವನ ಸಂಗಾತಿ ಹುಡುಕುವವರೇ ಎಚ್ಚರ. ಸೈಬರ್‌ ವಂಚಕರು ವಧು-ವರರ ಸೋಗಿನಲ್ಲಿ ವಂಚನೆಗೆ ಇಳಿದಿದ್ದಾರೆ!

ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಬಾಳ ಸಂಗಾತಿಗಾಗಿ ಹುಡುಕುತ್ತಿದ್ದ ಕೆಪಿಟಿಸಿಎಲ್‌ ಇಂಜಿನಿಯರೊಬ್ಬರಿಗೆ ಪರಿಚಿತಳಾಗಿದ್ದ ಮಹಿಳೆ ಷೇರು ಮಾರುಕಟ್ಟೆ ವ್ಯವಹಾರದ ಬಗ್ಗೆ ಹೇಳಿಕೊಡುವುದಾಗಿ ಹೂಡಿಕೆ ನೆಪದಲ್ಲಿ ₹5 ಲಕ್ಷ ಪಡೆದು ಟೋಪಿ ಹಾಕಿದ್ದಾಳೆ. ಹಣ ಕಳೆದುಕೊಂಡ ಎಂಜಿನಿಯರ್‌ ತಮಗಾದ ವಂಚನೆ ಬಗ್ಗೆ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಏನಿದು ಪ್ರಕರಣ?:

ದೂರುದಾರ ಎಂಜಿನಿಯರ್‌ ಕಿರಣ್ (ಹೆಸರು ಬದಲಿಸಲಾಗಿದೆ) 3 ವರ್ಷದ ಹಿಂದೆ ಸಮುದಾಯವೊಂದರ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನೋಂದಣಿಯಾಗಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಅಪರಿಚಿತ ಮಹಿಳೆಯಿಂದ ಮದುವೆ ಪ್ರಸ್ತಾವನೆ ಬಂದಿದೆ. ಡಿಸೆಂಬರ್‌ನಲ್ಲಿ ಕಿರಣ್‌ ಆ ಪ್ರಸ್ತಾವನೆ ಸ್ವೀಕರಿಸಿದ್ದಾರೆ. ಬಳಿಕ ಇಬ್ಬರ ಮೊಬೈಲ್‌ ಸಂಖ್ಯೆಗಳು ವಿನಿಮಯವಾಗಿದ್ದು, ಮಾತುಕತೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಸಿಬಿಐ ಅಧಿಕಾರಿ ಸೋಗಿನಲ್ಲಿ ವಂಚನೆ: ವೃದ್ಧೆಗೆ ಕರೆ ಮಾಡಿ ₹42.85 ಲಕ್ಷ ಪಂಗನಾಮ! ನಿಮಗೂ ಇಂಥ ಕಾಲ್ ಬರಬಹುದು ಎಚ್ಚರ!

ಹೂಡಿಕೆ ನೆಪದಲ್ಲಿ ಉಂಡೇನಾಮ!

ಈ ವೇಳೆ ಆ ಮಹಿಳೆ ತಾನು ಯುಕೆ ಬೆಲ್ಟ್‌ ಫಾಸ್ಟ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಫೆಬ್ರವರಿಯಲ್ಲಿ ಭಾರತಕ್ಕೆ ಬರುತ್ತಿರುವುದಾಗಿ ತಿಳಿಸಿದ್ದಾಳೆ.ಬಳಿಕ ಇಬ್ಬರು 1 ತಿಂಗಳ ಕಾಲ ವಾಟ್ಸಾಪ್‌ ಚಾಟಿಂಗ್‌ನಲ್ಲಿ ತೊಡಗಿದ್ದು, ಆಕೆ ಷೇರು ಮಾರುಕಟ್ಟೆ ವ್ಯವಹಾರದ ಬಗ್ಗೆ ಹೇಳಿಕೊಡುತ್ತೇನೆ ಎಂದಿದ್ದಾಳೆ. ಇದಕ್ಕೆ ಕಿರಣ್‌ ಒಪ್ಪಿಗೆ ಸೂಚಿಸಿದ್ದಾರೆ. ಹೂಡಿಕೆ ನೆಪದಲ್ಲಿ ಕಿರಣ್‌ನಿಂದ ವಿವಿಧ ಹಂತಗಳಲ್ಲಿ ₹5 ಲಕ್ಷ ಪಡೆದಿದ್ದಾಳೆ. 

ಇದನ್ನೂ ಓದಿ: ಮೂರು ಪಟ್ಟು ಹೆಚ್ಚು ಹಣದ ಆಮಿಷ: ಇಬ್ಬರು ಮಹಿಳೆಯರಿಂದ ಬರೋಬ್ಬರಿ 246 ಜನರಿಗೆ ಮೋಸ!

ಬಳಿಕ ಏಕಾಏಕಿ ಸಂಪರ್ಕ ಕಡಿದುಕೊಂಡಿದ್ದಾಳೆ. ಹಲವು ಬಾರಿ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ಕಿರಣ್‌ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ