ನೀತಿ ಸಂಹಿತೆ ವೇಳೆ ಕೋಮು ದ್ವೇಷ ಹರಡಿದರೆ ಹುಷಾರ್: ಜಿಲ್ಲಾಧಿಕಾರಿ ರವಿಕುಮಾರ್
ರಾಜ್ಯ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದು, ಈ ವೇಳೆ ಚುನಾವಣೆ ನೆಪದಲ್ಲಿ ಕೋಮು ದ್ವೇಷ ಹರಡಿಸುವುದು ಹಾಗೂ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಬಳಸಿಕೊಂಡು ಮತೀಯ ಭಾವನೆ ಕೆರಳಿಸಿದರೆ ಪೊಲೀಸ್ ಇಲಾಖೆ ವತಿಯಿಂದ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು (ಮಾ.31): ರಾಜ್ಯ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದು, ಈ ವೇಳೆ ಚುನಾವಣೆ ನೆಪದಲ್ಲಿ ಕೋಮು ದ್ವೇಷ ಹರಡಿಸುವುದು ಹಾಗೂ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಬಳಸಿಕೊಂಡು ಮತೀಯ ಭಾವನೆ ಕೆರಳಿಸಿದರೆ ಪೊಲೀಸ್ ಇಲಾಖೆ ವತಿಯಿಂದ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಶಾಂತಿಯುತವಾಗಿ ನಡೆಸಲು ಎಲ್ಲರೂ ಸಹಕಾರ ನೀಡಬೇಕು. ಕೋಮು ದ್ವೇಷ ಕೆರಳಿಸುವ ಘಟನೆಗಳು ನಡೆದರೆ ಸಾರ್ವಜನಿಕರು ಕೂಡ ಕಂಟೋಲ್ ರೂಮ್ ಸಂಖ್ಯೆ 1950ಗೆ ಮಾಹಿತಿ ನೀಡಬಹುದು. ಇದಲ್ಲದೆ, ಜಾಲತಾಣಗಳಲ್ಲೂ ಕೋಮು ಭಾವನೆ ಕೆರಳಿಸುವ ಕಾರ್ಯಗಳ ಮೇಲೆ ಕಣ್ಗಾವಲು ಇರಿಸಲು ತಂಡ ರಚಿಸಲಾಗಿದೆ. ಯಾರಾದರೂ ಇಂಥ ಕೃತ್ಯ ನಡೆಸಿದರೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
17.58 ಲಕ್ಷ ಮತದಾರರು: ದ.ಕ. ಜಿಲ್ಲೆಯಲ್ಲಿ ಮಾ. 29ರವರೆಗೆ ಒಟ್ಟು 17,58,647 ಮಂದಿ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟಹಾಗೂ ವಿಶೇಷ ಚೇತನ ಮತದಾರರು ಒಟ್ಟು 60,934 ಮಂದಿ ಇದ್ದು, 33,577 ಯುವ ಮತದಾರರು ಇದ್ದಾರೆ. ಹೊಸ ಮತದಾರರ ಸೇರ್ಪಡೆಗೆ ಏಪ್ರಿಲ್ 11ರವರೆಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಲ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ: ಜಗದೀಶ್ ಶೆಟ್ಟರ್ ಅಭಿಮತ
ಅಕ್ರಮವೇ? ದೂರು ನೀಡಿ: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಮತದಾರರಿಗೆ ಆಮಿಷ ಒಡ್ಡುವುದು ಇತ್ಯಾದಿಗಳು ನಡೆದರೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಟೋಲ್ ಫ್ರೀ ಸಂಖ್ಯೆ 1950 ಸಂಪರ್ಕಿಸಬಹುದು. ಅಲ್ಲದೆ, ಸಿ-ವಿಜಿಲ್ ಮೊಬೈಲ್ ಆ್ಯಪ್ ಮೂಲಕವೂ ಚುನಾವಣಾ ಅಕ್ರಮಗಳ ಬಗ್ಗೆ ಫೋಟೊ, ವೀಡಿಯೋ ಮೂಲಕ ದೂರು ಸಲ್ಲಿಸಬಹುದು. ಪ್ರತಿ ವಿಧಾನಾಸಭಾ ಕ್ಷೇತ್ರವಾರು ಫ್ಲೈಯಿಂಗ್ ಸ್ಕಾ$್ವಡ್ ಟೀಮ್, ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್, ವೀಡಿಯೋ ಸರ್ವೆಲೆನ್ಸ್ ಟೀಮ್ ರಚಿಸಲಾಗಿದ್ದು, ಸ್ಥಳೀಯ ಚುನಾವಣಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಲೂ ಅವಕಾಶವಿದೆ. ದೂರು ನೀಡಿದ ಎರಡು ಗಂಟೆಯೊಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗಡಿಯಲ್ಲಿ ಚೆಕ್‌ಪೋಸ್ಟ್: ಚುನಾವಣಾ ಅಕ್ರಮ ತಡೆಗೆ ಜಿಲ್ಲೆಯನ್ನು ಸಂಪರ್ಕಿಸುವ ಒಟ್ಟು 27 ಅಂತಾರಾಜ್ಯ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ಹಾಕಲಾಗಿದೆ. ಅಲ್ಲಿ ಸಿಸಿಟಿವಿ, ವಿಡಿಯೊಗ್ರಾಫರ್‌ಗಳು, ವಿವಿಧ ಇಲಾಖೆ ಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸಲಿದೆ. ಅಂತರ್ ಜಿಲ್ಲಾ ಸಂಪರ್ಕದ 8 ಕಡೆಗಳಲ್ಲಿ ಹಾಗೂ ಸ್ಥಳೀಯವಾಗಿ 9 ಕಡೆ ಚೆಕ್‌ಪೋಸ್ಟ್ ಅಳವಡಿಸಲಾಗಿದೆ. ಇದಲ್ಲದೆ, ಈ ಬಾರಿ ವಿಶೇಷವಾಗಿ ಮೊಬೈಲ್ ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸಲಿದ್ದು, ಯಾರಿಗೂ ಗೊತ್ತಾಗದಂತೆ ಅಕ್ರಮ ಚಟುವಟಿಕೆಗಳನ್ನು ತಡೆಯಲು ಇವುಗಳು ಕಾರ್ಯ ನಿರ್ವಹಿಸಲಿವೆ. ಸಮುದ್ರದ ಕಡೆಯಿಂದಲೂ ಹಣ, ಉಡುಗೊರೆ ಸಾಗಾಟ ತಡೆಗೆ ಕೋಸ್ಟಲ್ ಸೆಕ್ಯೂರಿಟಿ ಫೋರ್ಸ್ ಹಾಗೂ ಪೊಲೀಸ್ ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಸ್ಥಳ, ವೇದಿಕೆ ಅಥವಾ ತಾರಾ ಪ್ರಚಾರಕರನ್ನು ಕರೆಸಲು ಬಳಸುವ ಹೆಲಿಪ್ಯಾಡ್‌ಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಪಕ್ಷಗಳು ಈ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ. ‘ಸುವಿಧಾ’ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರಚಾರ ಕಾರ್ಯಕ್ಕೆ ಧ್ವನಿ ವರ್ಧಕ ಬಳಸಲು ಕೂಡ ಅನುಮತಿ ಕಡ್ಡಾಯ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಏ.24ರೊಳಗೆ ಶಸ್ತ್ರಾಸ್ತ್ರ ಠೇವಣಿ: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಹೊರತುಪಡಿಸಿ ಜಿಲ್ಲೆಯಲ್ಲಿ ಆಯುಧ ಪರವಾನಗಿ ಹೊಂದಿರುವ ಎಲ್ಲ ರೀತಿಯ ಶಸ್ತ್ರಾಸ್ತ್ರಗಳನ್ನು ಏ.24ರೊಳಗೆ ಠೇವಣಿ ಇರಿಸಬೇಕು. ಮೇ 20ರ ನಂತರ ಮರು ಪಡೆಯಬಹುದು. ಈ ನಡುವೆ ಅಡಕೆ ಹಾಗೂ ತೆಂಗು ಬೆಳೆಗಾರರ ಸಂಘಗಳು ಮನವಿ ಸಲ್ಲಿಸಿದ್ದು, ಕೇರಳ ಹೈಕೋರ್ಚ್ ತೀರ್ಪಿನಂತೆ ತಮಗೆ ಶಸ್ತ್ರಾಸ್ತ್ರ ಹೊಂದಲು ಅವಕಾಶ ನೀಡುವಂತೆ ಕೋರಿದ್ದಾರೆ. ಈ ಪ್ರಸ್ತಾವನೆಯನ್ನು ಮುಖ್ಯ ಚುನಾವಣಾ ಅಧಿಕಾರಿಗೆ ಕಳುಹಿಸಲಾಗುವುದು. ಅವರ ನಿರ್ದೇಶನದ ಪ್ರಕಾರ ಕ್ರಮ ವಹಿಸಲಾಗುವುದು ಎಂದರು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ, ಮಂಗಳೂರು ಪೊಲೀಸ್ ಆಯುಕ್ತ ಕುಲ್‌ದೀಪ್ ಕುಮಾರ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ಎಚ್. ಕೃಷ್ಣ ಮೂರ್ತಿ ಇದ್ದರು.
ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಗಳಿಗೆ ಅಡ್ಡಿಯಿಲ್ಲ: ಜಿಲ್ಲೆಯ ಪ್ರಮುಖ ಕಲೆಗಳಾದ ಯಕ್ಷಗಾನ, ಕೋಲ, ನೇಮ ಸೇರಿದಂತೆ ಯಾವುದೇ ಧರ್ಮಗಳ ಧಾರ್ಮಿಕ ಆಚರಣೆ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಇರುವುದಿಲ್ಲ. ಆದರೆ, ಈ ಕಾರ್ಯಕ್ರಮಗಳಲ್ಲಿ ರಾಜಕೀಯ ಮುಖಂಡರು ಭಾಗವಹಿಸುವುದು, ಕಾರ್ಯಕರ್ತರಿಂದ ಪ್ರಚಾರ ನಡೆಸಿ ಮತದಾರರ ಓಲೈಕೆ ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರ್ಯಕ್ರಮ ನಡೆಸಲು ಸ್ಥಳೀಯ ಚುನಾವಣಾಧಿಕಾರಿಯ ಅನುಮತಿ ಪಡೆದುಕೊಳ್ಳಬೇಕು. ಕಾರ್ಯಕ್ರಮಗಳ ಬಗ್ಗೆ ಬ್ಯಾನರ್, ಬಂಟಿಗ್‌್ಸ ಹಾಕಬೇಕಾದರೂ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎಚ್ಡಿಕೆಯಿಂದ ಒಕ್ಕಲಿಗ ನಾಯಕರ ತುಳಿಯುವ ಕೆಲಸ: ಎಲ್.ಆರ್.ಶಿವರಾಮೇಗೌಡ
ಜಿಲ್ಲೆಯ 36 ರೌಡಿಶೀಟರ್ ಗಡೀಪಾರು: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯ 25 ಹಾಗೂ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 11 ಮಂದಿ ಸೇರಿ ಒಟ್ಟು 36 ಮಂದಿ ರೌಡಿಶೀಟರ್‌ಗಳನ್ನು ಗಡೀಪಾರು ಮಾಡಲಾಗಿದೆ. ಮಂಗಳೂರು ನಗರದ ಇಬ್ಬರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ವಹಿಸಲಾಗಿದೆ. ಗ್ರಾಮಾಂತರದಲ್ಲಿ 8 ರೌಡಿಶೀಟರ್‌ಗಳ ಪ್ರಕರಣ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದು, 3-4 ದಿನದೊಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಏ.1ರಂದು 8 ಪ್ಯಾರಾ ಮಿಲಿಟರಿ ತಂಡ ಜಿಲ್ಲೆಗೆ: ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಅನುಕೂಲವಾಗುವಂತೆ ಕೇಂದ್ರ ಪ್ಯಾರಾ ಮಿಲಿಟರಿ ಪಡೆ ಏ.1ರಂದು ಜಿಲ್ಲೆಗೆ ಆಗಮಿಸಲಿದೆ. ಒಟ್ಟು 8 ತಂಡಗಳು ಬರಲಿದ್ದು, ಪ್ರತಿ ತಂಡದಲ್ಲೂ 120 ಮಂದಿ ಇರುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಈ ತಂಡಗಳನ್ನು ನಿಯೋಜಿಸಲಾಗುವುದು ಎಂದು ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲ್‌ದೀಪ್ ಜೈನ್ ತಿಳಿಸಿದರು.