ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಒಕ್ಕಲಿಗ ನಾಯಕರನ್ನು ಎಷ್ಟುಬೆಳೆಸುತ್ತಾರೋ ಅದಕ್ಕೂ ದೊಡ್ಡ ಪ್ರಮಾಣದಲ್ಲಿ ತುಳಿಯುವ ಕೆಲಸವನ್ನೂ ಮಾಡುತ್ತಾರೆ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ದೂರಿದರು.

ನಾಗಮಂಗಲ (ಮಾ.30): ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಒಕ್ಕಲಿಗ ನಾಯಕರನ್ನು ಎಷ್ಟು ಬೆಳೆಸುತ್ತಾರೋ ಅದಕ್ಕೂ ದೊಡ್ಡ ಪ್ರಮಾಣದಲ್ಲಿ ತುಳಿಯುವ ಕೆಲಸವನ್ನೂ ಮಾಡುತ್ತಾರೆ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ದೂರಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಸೇರಿದಂತೆ ಜೆಡಿಎಸ್‌ ಪಕ್ಷದಲ್ಲಿದ್ದ ಭೈರೇಗೌಡ, ಬಚ್ಚೇಗೌಡ, ನಾಗೇಗೌಡ, ಬಿ.ಎಲ್‌.ಶಂಕರ್‌, ಅಶ್ವತ್ಥನಾರಾಯಣರೆಡ್ಡಿ, ಗೋಪಾಲಯ್ಯ, ನಾರಾಯಣಗೌಡ, ಶಿವಲಿಂಗೇಗೌಡ ಸೇರಿದಂತೆ ಹಲವಾರು ಒಕ್ಕಲಿಗ ಹಿರಿಯ ನಾಯಕರು ತುಳಿತಕ್ಕೊಳಗಾಗಿದ್ದೇವೆ. ನಾವು ಮಾಡಿರುವ ಅಪರಾಧವಾದರೂ ಏನೆಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನೇ ಕೇಳುತ್ತೇನೆ ಎಂದರು.

ಮಾಜಿ ಸಚಿವ ಚಲುವರಾಯಸ್ವಾಮಿ ಅವರನ್ನು ರಾಜಕೀಯವಾಗಿ ಸಂಪೂರ್ಣವಾಗಿ ಮುಗಿಸಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನನ್ನನ್ನು ಮತ್ತು ಸುರೇಶ್‌ಗೌಡರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡಿದ್ದರು. ರಾಜಕೀಯವಾಗಿ ಇವರು ಮಾತ್ರ ಬದುಕಬೇಕು. ನಾವು ಬದುಕಿ ಅಧಿಕಾರಕ್ಕೇರುವುದು ಬೇಡವೇ ಎಂದು ಪ್ರಶ್ನೆ ಮಾಡಿದರು. ನಾವೂ ಸಹ ಒರಿಜಿನಲ್‌ ಒಕ್ಕಲಿಗರೇ. ಯಾವುದೇ ಒಂದು ದೂರವಾಣಿ ಆಡಿಯೋ ವಿಚಾರಕ್ಕೆ ನನ್ನನ್ನು ಪಕ್ಷದಿಂದ ಹೊರಹಾಕಿದರಲ್ಲ. ಇದೇ ಪಕ್ಷದಲ್ಲಿ ಅಂತಹ ಎಷ್ಟುಆಡಿಯೋಗಳು ಬಂದಿರಬಹುದು ಎಂದು ಮಾಜಿ ಸಿಎಂ ಎಚ್ಡಿಕೆ ಅವರನ್ನು ಕುಟುಕಿದರು.

ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಖಚಿತ: ಶಾಸಕ ಸಿ.ಎಸ್‌.ಪುಟ್ಟರಾಜು

ಕಳೆದ ಚುನಾವಣೆಯಲ್ಲಿ ಕುಮಾರಪರ್ವ ಬಂದ ನಂತರ ಜಿಲ್ಲೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಜಿಲ್ಲೆ ಜೆಡಿಎಸ್‌ ಭದ್ರಕೋಟೆ ಎಂಬುದನ್ನು ಸಾಬೀತಾಗಿತ್ತು. ನಂತರದ ಚುನಾವಣೆಗಳಲ್ಲಿ ಅಪ್ಪಾಜಿಗೌಡ, ರಾಮು ಮತ್ತು ಕೆ.ಆರ್‌.ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಸೋತಿದ್ದಾರದೂ ಏಕೆ?, ಕೆ.ಟಿ.ಶ್ರೀಕಂಠೇಗೌಡ ಚುನಾವಣೆಗೆ ಸ್ಪರ್ಧಿಸದೆ ಫಲಾಯನವಾಗಿದ್ದೇಕೆ. ಈ ಬಾರಿ ಜೆಡಿಎಸ್‌ ಭದ್ರಕೋಟೆ ಛೀದ್ರವಾಗಲಿದೆ. ಜಿಲ್ಲೆಯಲ್ಲಿ ಎರಡರಿಂದ ಮೂರು ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಭವಿಷ್ಯನುಡಿದರು.

ನಾನು ಬಿಜೆಪಿ ಸೇರುವುದಕ್ಕೂ ಮುನ್ನ ಫೈಟರ್‌ ರವಿ ಅವರು ಸೇರ್ಪಡೆಗೊಂಡು ಹೋರಾಟದ ಮೂಲಕ ಪಕ್ಷ ಕಟ್ಟಿದ್ದಾರೆ. ಇಬ್ಬರೂ ಸಹ ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯುತ್ತೇವೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳನ್ನು ಮಣಿಸಬೇಕೆಂದೇ ಬಿಜೆಪಿಗೆ ಬಂದಿರುವುದಂತೂ ಸತ್ಯ. ಈ ಚುನಾವಣಾ ಅಖಾಡದಲ್ಲಿ ಶಾಸಕ ಸುರೇಶ್‌ಗೌಡ ಮತ್ತು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಅವರನ್ನು ಕೆಡವಿಕೊಳ್ಳಲು ನನ್ನೊಬ್ಬನಿಂದ ಮಾತ್ರ ಸಾಧ್ಯವೇ ಹೊರತು ಬೇರಾರ‍ಯರಿಂದಲು ಆಗುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬಲಗೊಳಿಸುವ ಸಂಬಂಧ ಸಂಸದೆ ಸುಮಲತಾರೊಂದಿಗೆ ನಾನು ಸಂಕ್ಷಿಪ್ತವಾಗಿ ಮಾತನಾಡಿದ್ದೇನೆ. ನಾವು ಹಳೆ ಕಾಲದಂತಿಲ್ಲ. ಇಷ್ಟೊಂದು ಸಂಪದ್ಭರಿತವಾದ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಭದ್ರಗೊಳಿಸಲು ಶಪತಮಾಡಿದ್ದೇವೆ ಎಂದರು. ಪುತ್ರ ಚೇತನ್‌ಗೌಡ, ಮುಖಂಡರಾದ ಪಾಳ್ಯರಘು, ಸೋಮು, ಹೇಮರಾಜು, ಗ್ಯಾಸ್‌ ದೇವು, ಬೋಗಾದಿ ನಟರಾಜು ಸೇರಿದಂತೆ ಹಲವರಿದ್ದರು.

ಕೆಆರ್‌ಎಸ್‌ ನೀರಿನ ಮಟ್ಟ 100 ಅಡಿಗೆ ಕುಸಿತ: ಬೆಳೆಗಳಿಗೆ ಕೊರತೆ

ಸುಮಲತಾ ಅಂಬರೀಷ್‌ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಂಡ್ಯ ಕ್ಷೇತ್ರದ ಎಂಎಲ್‌ಎ ಅಭ್ಯರ್ಥಿ ಮಾಡಿ ಜಿಲ್ಲೆಯಲ್ಲಿ ಕಮಲವನ್ನು ಜೋರಾಗಿ ಅರಳಿಸೋಣ ಎಂದು ನನಗೆ ಆಹ್ವಾನ ಕೊಟ್ಟಿದ್ದ ಬಿಜೆಪಿ ಹಿರಿಯ ನಾಯಕರಿಗೆ ಸಲಹೆ ನೀಡಿದ್ದೆ. ಆದರೆ, ಕಾನೂನು ತೊಡಕಾಗುವುದರಿಂದ ಸುಮಲತಾ ಅಂಬರೀಷ್‌ ಅವರು ಬಾಹ್ಯ ಬೆಂಬಲ ನೀಡಿದ್ದಾರೆ.
- ಎಲ್‌.ಆರ್‌.ಶಿವರಾಮೇಗೌಡ ಮಾಜಿ ಸಂಸದ