ಒಮಿಕ್ರಾನ್ ಭೀತಿ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಏರ್ಪೋರ್ಟ್ ಸುತ್ತಮುತ್ತಲಿನ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಗೆ ಪ್ಲಾನ್
ಬೆಂಗಳೂರು (ಡಿ.23): ಒಮಿಕ್ರಾನ್ (Omicron) ಭೀತಿ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಂದಾಗಿದೆ. ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಏರ್ಪೋರ್ಟ್ (Airport) ಸುತ್ತಮುತ್ತಲಿನ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಗೆ ಪ್ಲಾನ್ ಮಾಡಲಾಗಿದೆ. ಸೋಂಕು ಹೆಚ್ಚಳವಾದರೆ ಸ್ಥಳದಲ್ಲೇ ಕ್ವಾರಂಟೈನ್ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.
ದೇಶದಲ್ಲಿ ಒಮಿಕ್ರಾನ್ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರದಿಂದ ಖಡಕ್ ಸೂಚನೆ ನೀಡಿದ್ದು ಈ ಹಿನ್ನೆಲೆ ನಗರಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಬಿಬಿಎಂಪಿ (BBMP) ಕಣ್ಗಾವಲು ಇಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಏರ್ಪೋರ್ಟ್ ಸುತ್ತಮುತ್ತಲಿನ ಹೋಟೆಲ್ (Hotel), ಲಾಡ್ಜ್, ರೆಸಾರ್ಟ್ ಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಬಿಬಿಎಂಪಿ ಅಲ್ಲಿಯೇ ಕ್ವಾರಂಟೈನ್ ಮಾಡಲು ನಿರ್ಧಾರ ಮಾಡಿದೆ.
ಒಂದು ವೇಳೆ ಒಮಿಕ್ರಾನ್ ಪ್ರಕರಣ ಹೆಚ್ಚಾದರೆ ಏರ್ಪೋರ್ಟ್ ಸಮೀಪದ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಗೆ ತಯಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆಯೂ ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಅಲ್ಲದೇ ವಾರ್ ರೂಂಗಳನ್ನು ಸಕ್ರಿಯಗೊಳಿಸುತ್ತಿದ್ದು, ರೂಪಾಂತರಿ ವೈರಸ್ ಟೆಸ್ಟಿಂಗ್ ಹಾಗೂ ಬೆಡ್ (Bed) ವ್ಯವಸ್ಥೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಆರೋಗ್ಯ ಇಲಾಖೆಯ (Health Department) ಮಾರ್ಗಸೂಚಿಗಳನ್ನು ಪಾಲಿಸುವುದು. ಕಂಟೈನ್ಮೆಂಟ್ ಜೋನ್ ಗಳ ಮೇಲೆ ತೀವ್ರ ನಿಗಾ ಇಡುವುದು. ಟೆಸ್ಟ್, ಟ್ರ್ಯಾಕ್, ಟ್ರೀಟ್ಮೆಂಟ್ ಹಾಗೂ ವ್ಯಾಕ್ಸಿನೇಶನ್ ಹೆಚ್ಚಳ ಮಾಡುವುದು, ಕ್ಲಸ್ಟರ್ ಕೇಸ್ ಗಳನ್ನ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಗೆ ಒಳಪಡಿಸೋದು ಸೇರಿದಂತೆ ವಿವಿಧ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ.
ವಿದೇಶಗಳಿಂದ ಬಂದ 7 ಮಂದಿಗೆ ಕೊರೋನಾ : ವಿದೇಶಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಬಂದ ಏಳು ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ರಾತ್ರಿ ಲಂಡನ್ ನಿಂದ ಬಂದ 35 ವರ್ಷದ ಮಹಿಳೆ ಹಾಗೂ 38 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ. ಬೆಳಗ್ಗಿನ ಜಾವ ದೋಹದಿಂದ ಬಂದ 79 ವರ್ಷದ ವ್ಯಕ್ತಿ, 24 ವರ್ಷದ ವ್ಯಕ್ತಿ, 11 ವರ್ಷದ ಬಾಲಕಿ, 61 ವರ್ಷದ ವ್ಯಕ್ತಿಗೆ ಪಾಸಿಟಿವ್ ಬಂದಿದೆ.
ಇನ್ನು ಶಾರ್ಜಾದಿಂದ ಆಗಮಿಸಿದ 19 ವರ್ಷದ ಯುವತಿಗೆ ಪಾಸಿಟಿವ್ ಬಂದಿದ್ದು, ನಾಲ್ಕು ಅಂತರಾಷ್ಟ್ರೀಯ ವಿಮಾನಗಳಲ್ಲಿ ಬಂದ ಏಳು ಪ್ರಯಾಣಿಕರಿಗೆ ಸೊಂಕು ಪತ್ತೆಯಾಗಿದೆ. ಸೊಂಕೀತರನ್ನ ಬೆಂಗಳೂರು ಬೋರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.
ಕರ್ನಾಟಕದಲ್ಲಿ ಏರಿಕೆ : ರಾಜ್ಯದಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕೇಸ್ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಇಂದು(ಬುಧವಾರ) ರಾಜ್ಯಾದ್ಯಂತ 321 ಹೊಸ ಸೋಂಕು ಪ್ರಕರಣಗಳು ಮತ್ತು 4 ಜನರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಒಟ್ಟು 253 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,138 ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 30,03,265 ಮಂದಿಗೆ ಕೊರೋನಾ ಸೋಂಕು ತಗುಲಿದೆ. 29,57,799 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
Omicron In India: ಮುಂದಿನ 6 ರಿಂದ 8 ವಾರ ಭಾರತದ ಪಾಲಿಗೆ ನಿರ್ಣಾಯಕ, ವೈದ್ಯರ ಎಚ್ಚರಿಕೆ!
ಕೋವಿಡ್-19 ಮರಣ ಪ್ರಮಾಣ ಶೇ.1.24 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.32 ರಷ್ಟಿದೆ. ರಾಜ್ಯದಲ್ಲಿ ಇಂದು ಒಟ್ಟು 4,30,230 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 97,897 ಸ್ಯಾಂಪಲ್ (ಆರ್‌ಟಿಪಿಸಿಆರ್ 78,870 + 19,027 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
