Karnataka Assembly Session : ಬಿಬಿಎಂಪಿಗೆ ಸಿಸಿ, ಒಸಿ ಶುಲ್ಕ ಸಂಗ್ರಹ ಅಧಿಕಾರ : ತಿದ್ದುಪಡಿ ಕಾಯ್ದೆಗೆ ಅಂಗೀಕಾರ
- ಬಿಬಿಎಂಪಿಗೆ ಸಿಸಿ, ಒಸಿ ಶುಲ್ಕ ಸಂಗ್ರಹ ಅಧಿಕಾರ : ತಿದ್ದುಪಡಿ ಕಾಯ್ದೆಗೆ ಅಂಗೀಕಾರ
- 2,362 ಕೋಟಿ ರು. ವಾಪಸ್ ನೀಡಬೇಕೆಂಬ ಹೈಕೋರ್ಟ್ ಆದೇಶದಿಂದ ಪಾಲಿಕೆ ಪಾರು
- ನಕ್ಷೆ ಮಂಜುರಾತಿ, ಕಟ್ಟಡ ನಿರ್ಮಾಣ ಪ್ರಮಾಣ ಪತ್ರ, ಕಟ್ಟಡ ಮುಕ್ತಾಯ ಪ್ರಮಾಣ ಪತ್ರ ಶುಲ್ಕ ಸಂಗ್ರಹ
ವಿಧಾನಸಭೆ (ಡಿ.21): ಬಿಬಿಎಂಪಿಗೆ (BBMP) ಸಾರ್ವಜನಿಕರಿಂದ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ, ಕಟ್ಟಡ ನಿರ್ಮಾಣ (Building) ಪ್ರಾರಂಭ ಪ್ರಮಾಣ ಪತ್ರ (ಸಿಸಿ) ಹಾಗೂ ಕಟ್ಟಡ ಮುಕ್ತಾಯ ಪ್ರಮಾಣ ಪತ್ರ (ಒಸಿ) ಮಂಜೂರು ಮಾಡುವ ವೇಳೆ ಶುಲ್ಕ ಸಂಗ್ರಹಿಸಲು ಅಧಿಕಾರ ನೀಡುವ ಕರ್ನಾಟಕ (Karnataka) ನಗರ ಪಾಲಿಕೆಗಳ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕಕ್ಕೆ ಸೋಮವಾರ ವಿಧಾನ ಸಭೆಯಲ್ಲಿ ಅಂಗೀಕಾರ ದೊರೆತಿದೆ.
ಈವರೆಗೆ ಕಾನೂನಿನಲ್ಲಿ (Law) ಅವಕಾಶವಿಲ್ಲದಿದ್ದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ BBMP)) ಕಟ್ಟಡ ನಕ್ಷೆ, ಒಸಿ ಹಾಗೂ ಸಿಸಿ ಪ್ರಮಾಣ ಪತ್ರಗಳಿಗೆ ನಿಯಮ ಬಾಹಿರವಾಗಿ ಶುಲ್ಕ ಸಂಗ್ರಹಿಸಿತ್ತು. ಈ ಬಗ್ಗೆ ಅರ್ಜಿದಾರರು ಹೈಕೋರ್ಟ್ (High Court) ಮೊರೆ ಹೋಗಿದ್ದರಿಂದ, ಇನ್ನು ಮುಂದೆ ಶುಲ್ಕ ಸಂಗ್ರಹಿಸಬಾರದು ಹಾಗೂ ಈವರೆಗೆ ಸಂಗ್ರಹಿಸುವ ಮೊತ್ತವನ್ನು 12 ವಾರಗಳೊಳಗಾಗಿ ವಾಪಸು ನೀಡಬೇಕು ಎಂದು ಮದ್ಯಂತರ ಆದೇಶ ನೀಡಿತ್ತು.
ಇದರಿಂದ 2,362 ಕೋಟಿಗಳನ್ನು ಸಾರ್ವಜನಿಕರಿಗೆ ಹಿಂದುರಿಗಿಸಬೇಕಾಗಿದ್ದ ಬಿಬಿಎಂಪಿಯನ್ನು (BBMP) ಈ ಸಂಕಷ್ಟದಿಂದ ಪಾರು ಮಾಡಲೆಂದೇ ಈ ಹಿಂದೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಇದೀಗ ಸುಗ್ರೀವಾಜ್ಞೆ ಬದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಿದ್ದುಪಡಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆದಿದ್ದಾರೆ.
ತಿದ್ದುಪಡಿ: ಕಟ್ಟಡ ನಿರ್ಮಾಣ ಮಾಡುವವರಿಂದ ನೆಲ ಬಾಡಿಗೆ, ಪರವಾನಗಿ ಶುಲ್ಕ, ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ (Fee), ಪರಿಶೀಲನಾ ಶುಲ್ಕ ಮತ್ತು ಭದ್ರತಾ ಠೇವಣಿಗಳನ್ನು ಪಡೆಯುವ ಅಧಿಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (BBMP) ಇಲ್ಲ ಎಂದು ಹೈಕೋರ್ಟ್ (High Court) ಆದೇಶಿಸಿತ್ತು. ಬಿಬಿಎಂಪಿ (BBMP) ಕಟ್ಟಡ ಬೈಲಾ ಪ್ರಕಾರ ವಿಧಿಸುತ್ತಿರುವ ಶುಲ್ಕಗಳು ಕರ್ನಾಟಕ ನಗರಾಭಿವೃದ್ಧಿ ಕಾಯಿದೆ (ಕೆಎಂಸಿ) ವಿರುದ್ಧವಾಗಿದೆ. ಕಾನೂನಿನ ಅನುಮತಿ ಇಲ್ಲದೇ ನಾಗರಿಕರಿಂದ ಒಂದು ರೂಪಾಯಿ ಸಂಗ್ರಹಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತ್ತು.
ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ (BBMP) ಆಡಳಿತವು ಸೂಕ್ತ ತಿದ್ದುಪಡಿಗಳೊಂದಿಗೆ ಕಾಯಿದೆ ಮತ್ತು ನಿಯಮಗಳಿಗೆ ತಿದ್ದುಪಡಿ ತಂದರೆ ಮಾತ್ರ ಮುಂದುವರೆಸಬಹುದು. ಇಲ್ಲದಿದ್ದರೆ ಕೆಎಂಸಿ ಕಾಯ್ದೆಯಡಿ ಅವಕಾಶವಿರುವ ಶುಲ್ಕಗಳನ್ನು ಮಾತ್ರ ಬಿಬಿಎಂಪಿ ಸಂಗ್ರಹಿಸಬಹುದು. ಕೆಎಂಸಿ ಕಾಯ್ದೆಯ 295 ಹಾಗೂ 423 ಸೆಕ್ಷನ್‌ಗಳ ಅಡಿ ಕಟ್ಟಡ ಬೈಲಾ ರಚಿಸಲು ಅವಕಾಶವಿದೆ. ಆದರೆ ಹೊಸ ಬಗೆಯ ಶುಲ್ಕ ಹೇರುವ ಅಧಿಕಾರ ಪಾಲಿಕೆಗೆ ನೀಡಿರಲಿಲ್ಲ. ಹೀಗಾಗಿ ಶುಲ್ಕ ಪಾವತಿಸಿರುವ ಎಲ್ಲ ಅರ್ಜಿದಾರರಿಗೂ ಬಿಬಿಎಂಪಿ ಆ ಮೊತ್ತವನ್ನು 12 ವಾರದೊಳಗೆ ಮರು ಪಾವತಿ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು.
ಹೀಗಾಗಿ ಬಿಬಿಎಂಪಿಗೆ ಪೂರ್ವಾನ್ವಯವಾಗುವಂತೆ ಶುಲ್ಕ ಸಂಗ್ರಹ ಅಧಿಕಾರ ನೀಡಲು ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ -1976ರ ನಿಯಮ 14 ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ -2020ರ ನಿಯಮ 8 ಅಡಿ ತಿದ್ದುಪಡಿ ಮಾಡಿ ಅವಕಾಶ ಕಲ್ಪಿಸಲಾಗಿದೆ.
- ಬಿಬಿಎಂಪಿಗೆ ಸಿಸಿ, ಒಸಿ ಶುಲ್ಕ ಸಂಗ್ರಹ ಅಧಿಕಾರ : ತಿದ್ದುಪಡಿ ಕಾಯ್ದೆಗೆ ಅಂಗೀಕಾರ
- 2,362 ಕೋಟಿ ರು. ವಾಪಸ್ ನೀಡಬೇಕೆಂಬ ಹೈಕೋರ್ಟ್ ಆದೇಶದಿಂದ ಪಾಲಿಕೆ ಪಾರು
- ನಕ್ಷೆ ಮಂಜುರಾತಿ, ಕಟ್ಟಡ ನಿರ್ಮಾಣ ಪ್ರಮಾಣ ಪತ್ರ, ಕಟ್ಟಡ ಮುಕ್ತಾಯ ಪ್ರಮಾಣ ಪತ್ರ ಶುಲ್ಕ ಸಂಗ್ರಹ
- ಈವರೆಗೆ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಟ್ಟಡ ನಕ್ಷೆ, ಒಸಿ ಹಾಗೂ ಸಿಸಿ ಪ್ರಮಾಣಪತ್ರಗಳಿಗೆ ನಿಯಮ ಬಾಹಿರವಾಗಿ ಶುಲ್ಕ ಸಂಗ್ರಹಿಸಿತ್ತು