ನಗರದಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ ಎಲ್ಲಾ ಕೆರೆಗಳಿಗೆ ಜಲಾಶಯಗಳ ಮಾದರಿಯಲ್ಲಿ ತೂಬು (ಸ್ಲೂಯಿಸ್‌ ಗೇಟ್‌) ಅಳವಡಿಕೆಯ ಬಿಬಿಎಂಪಿಯ ಯೋಜನೆಗೆ ನೆನೆಗುದಿಗೆ ಬಿದ್ದಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಜು.20) : ನಗರದಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ ಎಲ್ಲಾ ಕೆರೆಗಳಿಗೆ ಜಲಾಶಯಗಳ ಮಾದರಿಯಲ್ಲಿ ತೂಬು (ಸ್ಲೂಯಿಸ್‌ ಗೇಟ್‌) ಅಳವಡಿಕೆಯ ಬಿಬಿಎಂಪಿಯ ಯೋಜನೆಗೆ ನೆನೆಗುದಿಗೆ ಬಿದ್ದಿದೆ.

ಕೇವಲ 10 ಸೆಂ.ಮೀ. ಮಳೆಯಾದರೆ ಸಾಕು ನಗರದ 2023 ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸ್ಥಿತಿ ಇದೆ. ಪ್ರತಿ ವರ್ಷ ಮಳೆಗಾಲದಲ್ಲಿ ನಗರದ ಒಂದಲ್ಲಾ ಒಂದು ಪ್ರದೇಶದಲ್ಲಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತ ಉಂಟಾಗುತ್ತದೆ. ಕಳೆದ ವರ್ಷ ಮಳೆಗಾಲದಲ್ಲಿ 60ಕ್ಕೂ ಅಧಿಕ ಬಡಾವಣೆಗಳು ಒಂದಲ್ಲಾ ಒಂದು ಬಾರಿ ಪ್ರವಾಹಕ್ಕೆ ತುತ್ತಾಗಿದ್ದವು.

ಹೀಗೆ ಪದೇ ಪದೇ ಪ್ರವಾಹ ಸೃಷ್ಟಿಯಾಗಲು ರಾಜಕಾಲುವೆಗಳ ನಿರ್ವಹಣೆಯ ಲೋಪ ಒಂದೆಡೆಯಾದರೆ, ಕೆರೆಗಳು ಭರ್ತಿಯಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದ್ದು ಮತ್ತೊಂದು ಕಾರಣವಾಗಿದೆ. ಹೀಗಾಗಿ ಕೆರೆಗಳಿಂದ ಹರಿಯುವ ನೀರನ್ನು ನಿಯಂತ್ರಿಸುವ ಸಲುವಾಗಿ ನಗರದಲ್ಲಿನ ಕೆರೆಗಳಿಗೆ ತೂಬುಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ.

ಮಿಲಿಟರಿ ವಸತಿ ಪ್ರದೇಶದಲ್ಲಿ ಬೀದಿ ನಾಯಿ ಗಣತಿಗೆ ಸಿಗುತ್ತಿಲ್ಲ ಅವಕಾಶ

ಸದ್ಯ ಬಿಬಿಎಂಪಿಯ ವ್ಯಾಪ್ತಿಯಲ್ಲಿ 202 ಕೆರೆಗಳಿದ್ದು, ಈ ಪೈಕಿ 19 ಕೆರೆಗಳು ನಿಷ್ಕಿ್ರೕಯವಾಗಿವೆ. ಉಳಿದ 183ರಲ್ಲಿ 114 ಕೆರೆಗಳು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿದೆ. ಅದರಲ್ಲಿ 102 ಕೆರೆಗಳಿಗೆ ತೂಬು ಅಳವಡಿಸಲು ಬಿಬಿಎಂಪಿಯು .36 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿತ್ತು.

ಯೋಜನೆಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಟೆಂಡರ್‌ ಪ್ರಕ್ರಿಯೆ ನಡೆಸುವುದಕ್ಕೆ ಅನುಮೋದನೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಚುನಾವಣೆಗೆ ಮುನ್ನ ಸಲ್ಲಿಸಿದ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಈವರೆಗೆ ಅನುಮೋದನೆ ನೀಡಿಲ್ಲ. ಹೀಗಾಗಿ, ಗೇಟ್‌ ಅಳವಡಿಕೆ ಯೋಜನೆ ನೆನೆಗುದಿಗೆ ಬಿದ್ದಿದೆ.

ಗೇಟ್‌ ಅಳವಡಿಸೋದು ಅನುಮಾನ?

ಮಳೆಗಾಲ ಆರಂಭಗೊಳ್ಳುವುದಕ್ಕೆ ಮೊದಲೇ ಬಿಬಿಎಂಪಿಯು ತೂಬು ಅಳವಡಿಕೆಗೆ ಸಂಬಂಧಿಸಿದಂತೆ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ಕಾಮಗಾರಿಗೆ ಚಾಲನೆ ನೀಡಬೇಕಾಗಿತ್ತು. ಆದರೆ, ಬಿಬಿಎಂಪಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಗೆ ಕೆಲವೇ ದಿನಗಳ ಮುನ್ನ ಸರ್ಕಾರದ ಅನುಮೋದನೆಗೆ ಸಲ್ಲಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿಲ್ಲ. ಇದೀಗ ಸರ್ಕಾರ ಬದಲಾಗಿದೆ. ಹೀಗಾಗಿ, ನಗರದ ಕೆರೆಗಳಿಗೆ ಗೇಟ್‌ ಅಳವಡಿಕೆ ಬಗ್ಗೆ ಇದೀಗ ಅನುಮಾನ ಶುರುವಾಗಿದೆ.

ಪ್ರವಾಹ ತಪ್ಪಿದಲ್ಲ

ಕೆರೆ ಮತ್ತು ರಾಜಕಾಲುವೆ ಸುತ್ತಮುತ್ತದ ಪ್ರದೇಶದಲ್ಲಿರುವ ಬಡಾವಣೆಯ ಜನರಿಗೆ ಈ ಬಾರಿಯ ಮಳೆಗಾಲದಲ್ಲಿಯೂ ಪ್ರವಾಹ ತಪ್ಪಿದ್ದಲ್ಲ. ಕೆರೆಗಳ ನೀರಿನ ನಿರ್ವಹಣೆ ಮಾಡುವ ಗೇಟ್‌ ಅಳವಡಿಕೆ ಆಗದಿರುವುದರಿಂದ ರಾತ್ರೋರಾತ್ರಿ ಕೆರೆಗಳು ತುಂಬಿ, ಕೋಡಿ ಬಿದ್ದು, ನೀರು ಜನವಸತಿ ಪ್ರದೇಶಗಳಿಗೆ ನುಗ್ಗುವ ಸಾಧ್ಯತೆ ಇದೆ. ಹೀಗಾಗಿ, ತಗ್ಗುಪ್ರದೇಶ ಮತ್ತು ಕಳೆದ ಬಾರಿ ಪ್ರವಾಹ ಎದುರಿಸಿದ ಬಡಾವಣೆಯ ನಿವಾಸಿಗಳು ಆತಂಕದಲ್ಲಿಯೇ ಮಳೆಗಾಲ ಕಳೆಯಬೇಕಾಗಿದೆ.

ಪ್ರಥಮ ಬಾರಿಗೆ ಬೀದಿ ನಾಯಿ ಗಣತಿಗೆ ಬಿಬಿಎಂಪಿ ಡ್ರೋಣ್ ಬಳಕೆ!

ತೂಬು ಯೋಜನೆ ವಿವರ

ವಲಯ ಕೆರೆ ಸಂಖ್ಯೆ ಯೋಜನಾ ಮೊತ್ತ(ಕೋಟಿ .)

  • ಪೂರ್ವ 3 2
  • ಪಶ್ಚಿಮ 2 1
  • ದಕ್ಷಿಣ 5 3.50
  • ಬೊಮ್ಮನಹಳ್ಳಿ 25 8
  • ದಾಸರಹಳ್ಳಿ 5 1.25
  • ಮಹದೇವಪುರ 25 9
  • ಆರ್‌ಆರ್‌ನಗರ 23 7.70
  • ಯಲಹಂಕ 14 5
  • ಒಟ್ಟು 102 36.85

--ಬಾಕ್ಸ್‌--

ತೂಬು ಅಳವಡಿಕೆಯ ಅನುಕೂಲ

ಮಳೆಗಾಲ ಆರಂಭಕ್ಕೂ ಮುನ್ನ ನಿಯಮಿತವಾಗಿ ಕೆರೆಯ ನೀರನ್ನು ರಾಜಕಾಲುವೆಗೆ ಹರಿಸುವುದಕ್ಕೆ ತೂಬು ತೆರೆಯಬಹುದು. ಮಳೆ ಬಂದಾಗ ಕೆರೆಯ ನೀರಿನ ಮಟ್ಟನೋಡಿಕೊಂಡು ಗೇಟ್‌ ತೆಗೆಯುವುದು ಮತ್ತು ಬಂದ್‌ ಮಾಡಲು ಅವಕಾಶ ಇರಲಿದೆ. ಒಂದು ವೇಳೆ ಕೆರೆಗೆ ಹೆಚ್ಚಿನ ಪ್ರಮಾಣ ನೀರು ಹರಿದು ಬರುತ್ತಿದೆ ಎಂಬುದು ತಿಳಿಯುತ್ತಿದಂತೆ ಗೇಟ್‌ ತೆಗೆದು ಕೆರೆಯಲ್ಲಿ ಶೇಖರಣೆ ಆಗಿರುವ ನೀರನ್ನು ಹೊರ ಬಿಡಲು ತೂಬು ಸಹಕಾರಿ ಆಗಲಿವೆ. ಇದರಿಂದ ಪ್ರವಾಹ ನಿಯಂತ್ರಣ ಮಾಡಬಹುದಾಗಿದೆ.