Potholes in Bengaluru: ಬೆಂಗಳೂರು ಪಾಟ್‌ಹೋಲ್‌ಗಳನ್ನು ಮುಚ್ಚುವಂತೆ ಕೋರ್ಟ್‌ ಆಗಾಗ ಬಿಬಿಎಂಪಿಗೆ ಛೀಮಾರಿ ಹಾಕುತ್ತಲೇ ಇದೆ. ಆದರೆ ಬಿಬಿಎಂಪಿ ಮಾತ್ರ ಸುಳ್ಳು ಲೆಕ್ಕಗಳನ್ನು ಕೋರ್ಟ್‌ಗೆ ನೀಡುತ್ತಿದೆ. ಇಂದು ಕೂಡ ಹೈಕೋರ್ಟ್‌ ಛೀಮಾರಿ ಹಾಕಿದೆ. 

ಬೆಂಗಳೂರು: ಬೆಂಗಳೂರು ರಸ್ತೆಗುಂಡಿ ಮುಚ್ಚುವಂತೆ ಬಿಬಿಎಂಪಿಗೆ ಹೈಕೋರ್ಟ್‌ ಹಲವು ಬಾರಿ ಛೀಮಾರಿ ಹಾಕಿದರೂ ಎಮ್ಮೆಯ ಮೇಲೆ ನೀರು ಸುರಿದಂತಾಗಿದೆ. ಇಂದು ಕೋರ್ಟ್‌ನಲ್ಲಿ ಬಿಬಿಎಂಪಿ ಉತ್ತರ ನೀಡಿದ್ದು ಶೇಕಡ 98ರಷ್ಟು ಗುಂಡಿಗಳನ್ನು ಮುಚ್ಚಿರುವುದಾಗಿ ಹೇಳಿಕೊಂಡಿದೆ. ಆದರೆ ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದೇ ಕಾರಣಕ್ಕೆ ಕೋರ್ಟ್‌ ಕೆಂಡಾಮಂಡಲವಾಗಿದ್ದು, ನಿಮಗೆ ನೀವೇ ಸರ್ಟಿಫಿಕೇಟ್‌ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರಕ್ಕೆ ಶೇ.98 ರಷ್ಟು ರಸ್ತೆ ಗುಂಡಿ ಮುಚ್ಚಲಾಗಿದೆ ಎಂದು ಬಿಬಿಎಂಪಿ ಹೇಳಿತ್ತು. ಎಷ್ಟು ರಸ್ತೆಗುಂಡಿಗಳಿದ್ದವು ಎಷ್ಟು ಮುಚ್ಚಲಾಗಿದೆ? ನೀವೇ ರಸ್ತೆಗುಂಡಿ ಮುಚ್ಚಿ ನೀವೇ ಸರ್ಟಿಫಿಕೇಟ್ ನೀಡುತ್ತಿದ್ದೀರಿ. ಈ ರಸ್ತೆ ಗುಂಡಿ ಮುಚ್ಚಿದ್ದನ್ನು ಪರಿಶೀಲಿಸುವ 3 ನೇ ಏಜೆನ್ಸಿ ಇಲ್ಲವೇ? ರಸ್ತೆಗಳಿಗೆ ಕೇವಲ ಕಾಸ್ಮೆಟಿಕ್ ಸರ್ಜರಿ ಮಾತ್ರ ಮಾಡ್ತಿದ್ದೀರ. ನೀವು ಮುಚ್ಚುವ ರಸ್ತೆಗುಂಡಿ ಮಳೆಗೆ ಮತ್ತೆ ಹಾಳಾಗುತ್ತಿವೆ. ಬಿಬಿಎಂಪಿ ಗೆ ಹೈಕೋರ್ಟ್ ವಿಭಾಗೀಯ ಪೀಠ ತರಾಟೆ ತೆಗೆದುಕೊಂಡಿದೆ. 

ರಸ್ತೆ ಗುಣಮಟ್ಟ ಖಾತರಿಪಡಿಸಲು ನಾವು ಸ್ವತಂತ್ರ ವ್ಯವಸ್ಥೆ ಮಾಡಬೇಕಿದೆ ಅದನ್ನು ನಾವು ಮಾಡುತ್ತೇವೆ.ಬಿಬಿಎಂಪಿ ಕೆಟ್ಟದಾಗಿ ನಿರ್ವಹಿಸಿರುವ ರಸ್ತೆಗಳಿಂದ ಹಲವರು ತಮ್ಮ ಅಮೂಲ್ಯ ಪ್ರಾಣ ಕಳೆದುಕೊಂಡಿದ್ದಾರೆ. ನ್ಯಾಯಾಲಯ ನೀಡಿರುವ ಆದೇಶಗಳು ಕಾಗದದ ಮೇಲೆ ಮಾತ್ರ ಇದೆ. ಕೋರ್ಟ್ ಆದೇಶಗಳನ್ನ ಬಿಬಿಎಂಪಿ ಸರಿಯಾಗಿ ಪಾಲಿಸಿಲ್ಲ. ಬಿಬಿಎಂಪಿ ಹಾಗೂ ಖಾಸಗಿ ಕಂಪೆನಿಗಳು ನಿರ್ಮಿಸಿರುವ ರಸ್ತೆಗಳನ್ನು ಪರಿಶೀಲಿಸಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್‌ ಅವರು ಪರಿಶೀಲಿಸಲು ಸೂಚನೆ ನೀಡಲಾಗಿದೆ. 

ಇದನ್ನೂ ಓದಿ: Bengaluru Patholes: ದಾಸರಹಳ್ಳಿಯಲ್ಲೇ ಇವೆ 2000 ಗುಂಡಿ!

ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ ಮತ್ತು ರಸ್ತೆ ಗುಂಡಿ ಮುಚ್ಚುವುದನ್ನ NHAI ಪರಿಶೀಲನೆ ನಡೆಸಬೇಕು. ಒಂದು ವಾರದಲ್ಲಿ ಎಲ್ಲವನ್ನೂ ಪರಿಶೀಲಿಸಿ ವರದಿ ಸಲ್ಲಿಸಬೇಕು. NHAI ಗೆ ರಸ್ತೆಗುಂಡಿ ಮುಚ್ಚುವ ಗುತ್ತಿಗೆ ಪಡೆದ ಕಂಪೆನಿ ಹಾಗೂ ಬಿಬಿಎಂಪಿ ಸಹಕರಿಸಬೇಕು. ಅನುಪಾಲನಾ ವರದಿಯನ್ನ NHAI ಗೆ ಪಾಲಿಕೆ ಅಧಿಕಾರಿಗಳು ಸಲ್ಲಿಸಲು ಕೋರ್ಟ್‌ ಸೂಚನೆ ನೀಡಿದೆ. ಕಾರ್ಯಾದೇಶದ ಪ್ರಕಾರ ಕೆಲಸ ಮಾಡಲಾಗಿದೆಯೇ? ಕೆಲಸ ನಡೆಸಿರುವ ಏಜೆನ್ಸಿಯ ಕೆಲಸ ತೃಪ್ತಿದಾಯಕವಾಗಿದೆಯೇ? ಏಜೆನ್ಸಿಯ ಕರ್ತವ್ಯ ಲೋಪದ ಕುರಿತು ನಾಲ್ಕು ವಾರಗಳಲ್ಲಿ ಎನ್‌ಎಚ್‌ಎಐ ಅಧಿಕಾರಿಗಳು ವರದಿ ಸಲ್ಲಿಸಬೇಕು ಎಂದು ಕೋರ್ಟ್‌ ತಿಳಿಸಿದೆ. 

ಇದನ್ನೂ ಓದಿ: Bengaluru city: ಶಾಂತಿ ನಗರದ ತುಂಬ ಡೆಡ್ಲಿ ಗುಂಡಿಗಳು!

ಇಂದಿನ ಆದೇಶವು ರಸ್ತೆ ನಿರ್ಮಾಣ ಕಾರ್ಯಕ್ಕೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ. ನಿರ್ಮಾಣ ಕಾರ್ಯವನ್ನು ಬಿಬಿಎಂಪಿ ಮುಂದುವರೆಸಲಿ ಎಂದು ಕೋರ್ಟ್‌ ಸೂಚಿಸಿದೆ. ಆದರೆ ಪದೇ ಪದೇ ರಸ್ತೆ ಗುಂಡಿ ಮುಚ್ಚದೇ ಸುಳ್ಳು ಹೇಳುತ್ತಿದ್ದ ಬಿಬಿಎಂಪಿ ಕೆಲಸವನ್ನು ಪರಿಶೀಲಿಸಲು ಕೋರ್ಟ್‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿದೆ. ಇದರಿಂದ ಬಿಬಿಎಂಪಿ ಈ ಹಿಂದೆ ಹೇಳಿದಂತೆ ಸುಳ್ಳು ದಾಖಲೆಗಳನ್ನು ಕೋರ್ಟ್‌ ಸಲ್ಲಿಸಲು ಸಾಧ್ಯವಿಲ್ಲ. ಈ ಭಯದಿಂದಲಾದರೂ ರಸ್ತೆಗುಂಡಿಗಳಿಂದ ಜನರಿಗೆ ಮುಕ್ತಿ ಸಿಗುವಂತಾಗಲಿದೆಯಾ ಎಂಬುದನ್ನು ಕಾದು ನೋಡಬೇಕು. ವಿಚಾರಣೆ ಡಿಸೆಂಬರ್‌ 7ಕ್ಕೆ ಹೈಕೋರ್ಟ್‌ ಮುಂದೂಡಿದೆ.