ಸಚಿವರು ರೇಟ್ ಫಿಕ್ಸ್ ಮಾಡುತ್ತಿದ್ದಾರೆ, ಎಲ್ಲಿದ್ದೀರಿ ಕೆಂಪಣ್ಣ: ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ ಸಚಿವರು ತಮ್ಮ ಇಲಾಖೆ ಕಾಮಗಾರಿಗೆ ಕಮಿಷನ್ ರೇಟ್ ಫಿಕ್ಸ್ ಮಾಡುತ್ತಿದ್ದಾರೆ ಎಲ್ಲಿದ್ದೀರಿ ಕೆಂಪಣ್ಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಬೆಂಗಳೂರು (ಜೂ.19): ಕಾಂಗ್ರೆಸ್ ಸರ್ಕಾರ ಅಕ್ಕಿ ನೀಡಲು ಪೂರ್ವ ಸಿದ್ದತೆ ಮಾಡಿಕೊಳ್ಳದೇ ಈಗ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯಸರ್ಕಾರ ಕೇಂದ್ರ ಸರ್ಕಾರದ ವಿರುದ್ದ ರಾಜಕೀಯ ಪ್ರೇರಿತ ಪ್ರತಿಭಟನೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಸಚಿವರು ತಮ್ಮ ಇಲಾಖೆ ಕಾಮಗಾರಿಗೆ ಕಮಿಷನ್ ರೇಟ್ ಫಿಕ್ಸ್ ಮಾಡುತ್ತಿದ್ದಾರೆ ಎಲ್ಲಿದ್ದೀರಿ ಕೆಂಪಣ್ಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಗೊಂದಲದ ಗೂಡಾಗಿದೆ. ಉಚಿತ ಬಸ್ ಪ್ರಯಾಣ ಗ್ಯಾರಂಟಿ ಯೋಜನೆ ಅದ್ವಾನ ಆಗಿದೆ. ಸರಿಯಾಗಿ ಬಸ್ ಗಳ ವ್ಯವಸ್ಥೆ ಮಾಡದೇ ಫ್ರೀ ಬಸ್ ಯೋಜನೆ ಅಂದರೆ ಹೇಗೆ? ಸರಿಯಾದ ಬಸ್ ಸೇವೆ ಒದಗಿಸದೇ ಇರುವುದರಿಂದ ಸಾರ್ವಜನಿಕರು ಬಾಯಿಗೆ ಬಂದಹಾಗೆ ಬೈತಾರಂತೆ, ಕೆಲಸ ಮಾಡಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಚುನಾವಣೆಗೆ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಕೊಟ್ಟ ಕಾಂಗ್ರೆಸ್
ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವ ಕಾಂಗ್ರೆಸ್: ರಾಜ್ಯದ ಜನತೆಗೆ 10 ಕೆಜಿ ಅಕ್ಕಿ ನೀಡುವ ವಿಚಾರದಲ್ಲೂ ಮುಂಚೆಯೇ ವ್ಯವಸ್ಥೆ ಮಾಡಿಕೊಳ್ಳದೇ ಈಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸರ್ಕಾರ ನಡೆಸುವವರು ಕೊಟ್ಟ ಮಾತಿನಂತೆ ನಡೆಸುಕೊಳ್ಳಲು ಆಗುತ್ತಿಲ್ಲ. ಅಕ್ಕಿಯನ್ನು ಕೇವಲ ಎಫ್ ಸಿ ಐನಿಂದಲೇ ತರಬೇಕು ಅಂತಾ ಇಲ್ಲ. ಬೇರೆ ಎಜೆನ್ಸಿಗಳು ಇವೆ. ಯಾವುದನ್ನು ಸಿದ್ಧತೆ ಮಾಡಿಕೊಳದೇ ಪ್ರತಿಭಟನೆ ಮಾಡುತ್ತಿದಾರೆ. ಇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ ಎಂದು ಜನರು ಉಗಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಎಲ್ಲಿದ್ದೀರಿ ಕೆಂಪಣ್ಣ ಎಂದು ಕಿಡಿಕಾರಿದ ಬೊಮ್ಮಾಯಿ: ಹಲವಾರು ಸಚಿವರು ಹಿಂದಿನ ಅವಧಿಯ ಕಾಮಗಾರಿ, ಮನೆ ನಿರ್ಮಾಣ ಎಲ್ಲವನ್ನೂ ನಿಲ್ಲಿಸಿದ್ದಾರೆ. ಸರ್ಕಾರ ಬಂದು ತಿಂಗಳು ಕಳೆದರೂ ಸಚಿವರು ತಮ್ಮ ಇಲಾಖೆಗಳ ಮಾತನಾಡುತ್ತಿಲ್ಲ. ಇನ್ನು ಮಳೆಗಾಲ ಆರಂಭವಾಗುತ್ತದೆ. ಯಾವುದೇ ಕಾಮಗಾರಿ ನಡೆಯುವುದಿಲ್ಲ. ಇಡೀ ಒಂದು ವರ್ಷದ ಕಾರ್ಯಕ್ರಮಗಳನ್ನ ಅಲ್ಲೋಲಕಲ್ಲೋಲ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಜೊತೆ ಸೇರಿಕೊಂಡು ಆರೋಪ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈಗೆಲ್ಲಿದ್ದಾರೆ. ಸಚಿವರುಗಳು ರೇಟ್ ಫಿಕ್ಸ್ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದ ಮೇಲೆ ಆರೋಪ ಮಾಡಿದವರು. ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯದ ಬಳಿ ಸ್ವಲ್ಪವೂ ಅಕ್ಕಿ ದಾಸ್ತಾನಿಲ್ಲ: ಅನ್ನಭಾಗ್ಯ ಯೋಜನೆ ಜಾರಿ ಕಷ್ಟಕಷ್ಟ
ಐದು ವರ್ಷದ ಸರ್ಕಾರ ಇರುವುದೇ ಅನುಮಾನ: ಸಚಿವ ಸಂಪುಟದ ಸದಸ್ಯರಿಗೆ ಈ ಸರ್ಕಾರ 5 ವರ್ಷ ಇರುವುದು ಅನುಮಾನವಿದೆ. ಸಚಿವರುಗಳೇ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಇರುತ್ತಾರೆ ಎಂದು ಅನುಮಾನದಿಂದ ಮಾತನಾಡುತ್ತಿದ್ದಾರೆ. ಎಲ್ಲ ಸಚಿವರೂ ಕೂಡ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಪೂರೈಸುವ ಮುನ್ನವೇ ಅಧಿಕಾರ ಹಂಚಿಕೆ ಬಗ್ಗೆ ತರಹೇವಾರಿ ಮಾತನಾಡುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್ ಶಾಸಕರಿಗೇ ಈ ಸರ್ಕಾರ ಐದು ವರ್ಷ ಪೂರೈಸುವುದಿಲ್ಲ ಎನ್ನುವುದು ಖಾತ್ರಿಯಾದಂತಿದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.