Asianet Suvarna News Asianet Suvarna News

ವಿಜಯಪುರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಯತ್ನಾಳ್‌ ಬೆಂಬಲಿಗರ ಗಲಾಟೆ; ಸಭೆಯಿಂದ ಹೊರನಡೆದ ನಿರಾಣಿ!

ವಿಜಯಪುರ ಜಿಲ್ಲೆಯಲ್ಲಿ ಶಾಸಕ ಯತ್ನಾಳ್‌ ವರ್ಸಸ್‌ ಸೋಲುಂಡ ಬಿಜೆಪಿ ಅಭ್ಯರ್ಥಿ ಎನ್ನುವಂತಾಗಿದೆ. ಹೀಗೆ ಹೇಳೋದಕ್ಕು ಕಾರಣಗಳಿವೆ. ವಿಜಯಪುರ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯೆ ಇದಕ್ಕೆ ಸಾಕ್ಷಿಯಾಗಿದೆ

Basangowda patil yatnal supporters riot in Vijaypur BJP district convention today rav
Author
First Published Jun 26, 2023, 10:29 PM IST

- ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌

ವಿಜಯಪುರ (ಜೂನ್‌ 26) : ವಿಜಯಪುರ ಜಿಲ್ಲೆಯಲ್ಲಿ ಶಾಸಕ ಯತ್ನಾಳ್‌ ವರ್ಸಸ್‌ ಸೋಲುಂಡ ಬಿಜೆಪಿ ಅಭ್ಯರ್ಥಿ ಎನ್ನುವಂತಾಗಿದೆ. ಹೀಗೆ ಹೇಳೋದಕ್ಕು ಕಾರಣಗಳಿವೆ. ವಿಜಯಪುರ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯೆ ಇದಕ್ಕೆ ಸಾಕ್ಷಿಯಾಗಿದೆ. ವಿಜಯಪುರದಲ್ಲಿ ವಿಧಾನ ಸಭಾ ಚುನಾವಣೆಯಲ್ಲೆ ಬಿಜೆಪಿ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿತ್ತು. ಆದ್ರೀಗ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ಒಡೆದ ಮನೆಯಂತೆ ಭಾಸವಾಗಿದೆ..

ಮಾಜಿ ಸಿಎಂ ಎದುರೆ ಗದ್ದಲ ಗಲಾಟೆ..!

ನಗರದಲ್ಲಿ ನಡೆದ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತ ಸಭೆ ನಿಜಕ್ಕೂ ರಣಾಂಗಣವಾಗಿ ಗೋಚರಿಸಿತು. ಮೊದಲೆ ತಡವಾಗಿ  ಶುರುವಾದ ಸಭೆಯಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ(Shashikala jolle) ವೇದಿಕೆಯಲ್ಲಿ ಮಾತನಾಡುವ ವೇಳೆ ಭಾಷಣದ ಕೊನೆಯಲ್ಲಿ ಎಲ್ಲರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಂಸದ ರಮೇಶ ಜಿಗಜಿಣಗಿ(Ramesh jigajinagi) ಗೆಲುವಿಗೆ ಶ್ರಮಿಸಬೇಕು ಎಂದರು. ಇಷ್ಟು ಎನ್ನುತ್ತಿದ್ದಂತೆ, ಕೆಲ ಪಾಲಿಕೆ ಸದಸ್ಯ ಯತ್ನಾಳ್‌(Basangowda patil yatnal) ಬೆಂಬಲಿಗರು ಬಿ ಆರ್‌ ಪಿ, ಬಿ ಆರ್‌ ಪಿ ಘೋಷಣೆ ಮೊಳಗಿಸಿದ್ರು. ಕಾರ್ಯಕರ್ತರನ್ನ ತಡೆಯೋದಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌ ಎಸ್‌ ಪಾಟೀಲ್‌ ಕೂಚಬಾಳ ಪ್ರಯತ್ನಿಸಿದ್ರು ಕೆಲಸವಾಗಲಿಲ್ಲ. ಬಳಿಕ ಪೊಲೀಸರು ಮಧ್ಯೆಪ್ರವೇಶಿಸಬೇಕಾಯ್ತು. ಇದೆಲ್ಲವನ್ನ ವೇದಿಕೆ ಮೇಲಿದ್ದುಕೊಂಡು ನೋಡ್ತಿದ್ದ ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ(Basavaraj bommai) ತಲೆಗೆ ಕೈ ಒತ್ತಿಕೊಂಡು ಸುಮ್ಮನೆ ಕುಳಿತು ಬಿಟ್ರು.

ಸಿಎಂ ಸಿದ್ದರಾಮಯ್ಯಗೆ ಅವರ ಕುರ್ಚಿ ಗ್ಯಾರಂಟಿ ಇಲ್ಲ: ಮಾಜಿ ಸಿಎಂ ಬೊಮ್ಮಾಯಿ ವ್ಯಂಗ್ಯ

ನಿರಾಣಿ ವೇದಿಕೆ ಹಂಚಿಕೊಂಡಿದ್ದಕ್ಕೆ ಆಕ್ರೋಶ..!?

ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆ ನಡೆದರೆ ಯತ್ನಾಳ್‌ ಬೆಂಬಲಿಗರು ಯಾಕೆ ಅಡ್ಡಿ ಪಡೆಸಿದ್ರು ಅನ್ನೋದಕ್ಕೆ ಇಲ್ಲಿ ಕಾರಣಗಳಿವೆ. ಸುಖಾಸುಮ್ಮನೆ ಯತ್ನಾಳ್‌ ಬೆಂಬಲಿಗರು, ಕೆಲ ಕಾರ್ಪೋರೆಟರ್‌ಗಳು ಹೀಗೆ ಬಿ ಆರ್‌ ಪಿ.. ಬಿ ಆರ್‌ ಪಿ ಎನ್ನುತ್ತ ಗಲಾಟೆ ಮಾಡಿಲ್ಲ, ಸಭೆಗೆ ಶಾಸಕ ಯತ್ನಾಳ್‌ ಗೈರಾಗಿದ್ದರು. ಆದ್ರೆ ವೇದಿಕೆಯಲ್ಲಿ ಮುರುಗೇಶ ನಿರಾಣಿ(Murugesh R niarni) ಇದ್ರು. ಇದು ಯತ್ನಾಳ ಬೆಂಬಲಿಗರಿಗೆ ಸಹಿಸೋಕೆ ಆಗಲಿಲ್ಲ. ಕಾರಣ ಅಂದ್ರೆ ಚುನಾವಣೆಯಲ್ಲಿ ಯತ್ನಾಳ್‌ ಸೋಲಿಗೆ ನಿರಾಣಿ ಪ್ರಯತ್ನಿಸಿದ್ರು ಅನ್ನೋದು, ಯತ್ನಾಳ್‌ ಸೋಲಬೇಕು ಅಂತಾ ನಿರಾಣಿ ಹಣ ಹಂಚಿದ್ರು ಅನ್ನೋ ಆರೋಪ.. ಹೌದು, ಇದೆ ವಿಚಾರ ಯತ್ನಾಳ್‌ ಬೆಂಬಲಿಗರನ್ನ, ಕೆಲ ಕಾರ್ಪೋರೆಟರ್‌ ಗಳು ರೊಚ್ಚಿಗೇಳೋದಕ್ಕೆ ಕಾರಣವಾಗಿತ್ತು.

ಸಭೆಯಿಂದ ಹೊರನಡೆದ ಮಾಜಿ ಸಚಿವ ನಿರಾಣಿ..!

ಇನ್ನು ಯತ್ನಾಳ್‌ ಬೆಂಬಲಿಗರು ಘೋಷಣೆ ಕೂಗಿ ಗಲಾಟೆ ಆರಂಭಿಸ್ತಿದ್ದಂತೆ, ಮಾಜಿ ಸಚಿವ ಮುರುಗೇಶ ನಿರಾಣಿ ಮುಜುಗರಕ್ಕಿಡಾದರು. ಗಲಾಟೆ ವಿಕೋಪಕ್ಕೆ ಹೋಗ್ತಿದ್ದಂತೆ ವೇದಿಕೆ ಹೊರ ನಡೆದರು. ನಿರಾಣಿ ಜೊತೆ ಜೊತೆಗೆ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಅಭ್ಯರ್ಥಿಗಳು ಹೊರ ನಡೆದರು. ಮುದ್ದೇಬಿಹಾಳದಿಂದ ಸೋಲುಂಡ ಎ ಎಸ್‌ ಪಾಟೀಲ್‌ ನಡಹಳ್ಳಿ, ಬಸವನ ಬಾಗೇವಾಡಿಯಿಂದ ಸೋತ ಎಸ್‌ ಕೆ ಬೆಳ್ಳುಬ್ಬಿ, ಬಬಲೇಶ್ವರದಿಂದ ಸೋಲುಂಡ ವಿಜುಗೌಡ ಪಾಟೀಲ್‌ ಕೂಡ ನಿರಾಣಿ ಜೊತೆಗೆ ಹೊರ ನಡೆದರು. ಇತ್ತ ವೇದಿಕೆ ಮೇಲೆ ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ ಭಾಷಣ ಮುಂದುವರೆಸಿದರು.

ಶಾಸಕ ಯತ್ನಾಳ್‌ ವಿರುದ್ಧ ನಿರಾಣಿ ವಾಗ್ದಾಳಿ..!

ಸಭೆಯಿಂದ ಹೊರಬಂದ ನಿರಾಣಿ ಶಾಸಕ ಯತ್ನಾಳ್‌ ವಿರುದ್ಧ ವಾಗ್ದಾಳಿ ನಡೆಸಿದರು. ಯತ್ನಾಳ್ ಗೆ ಜಿಲ್ಲೆಯಲ್ಲಿ ಒಬ್ಬನೇ ಗೆದ್ದಿರುವ ಅಹಂ ಬಂದಿದೆ. ತಲೆಗೆ ಕೊಂಬು ಬಂದಿವೆ, ಧಿಮಾಕು ಹೆಚ್ಚಾಗಿದೆ ಎಂದೆಲ್ಲ ನಿರಾಣಿ ಶಬ್ಧಪ್ರಯೋಗ ಮಾಡಿದರು. ಯತ್ನಾಳರಿಂದಾಗಿಯೇ ಬಿಜಾಪುರದಲ್ಲಿ ಬಿಜೆಪಿಗೆ ಅವಮಾನ ಅನುಭವಿಸುತ್ತಿದೆ ಎಂದರು. ಜೊತೆಗೆ ಬಬಲೇಶ್ವರದಲ್ಲಿ ವಿಜುಗೌಡ ಪಾಟೀಲ್‌ ಸೋತಿದ್ದಾರೆ, ಮೂರು ಬಾರಿ ಸ್ಪರ್ಧಿಸಿದ್ದಾರೆ ಈ ಸೋಲಿಗೆ ಕಾರಣ ಯಾರು? 2018ರಲ್ಲಿ ಗೋವಿಂದ ಕಾರಜೋಳರ ಪುತ್ರ ನಾಗಠಾಣ ಕ್ಷೇತ್ರದಲ್ಲಿ ಸೋತರು ಇದಕ್ಕೆ ಕಾರಣರ್ಯಾರು? ಎಂದು ಪರೋಕ್ಷವಾಗಿ ಯತ್ನಾಳ ಕಾರಣ ಎಂದು ವಾಗ್ದಾಳಿ ನಡೆಸಿದರು. ನಾನೇ ಹಿಂದೂ ಹುಲಿ.. ನಾನೇ ಹಿಂದೂ ಹುಲಿ ಎಂದು ಹೇಳಿ ಜನತಾ ಪಕ್ಷ ಸೇರಿದ್ದಾಗ ತಲೆಗೆ ಟೋಪಿಹಾಕಿ ನಮಾಜ್‌ ಬಿದ್ದು ಬಂದವರಿವರು ಎಂದು ವಾಗ್ದಾಳಿ ನಡೆಸಿದರು..

ಬಿಜೆಪಿ ಸೋತಿದೆ ಸತ್ತಿಲ್ಲ ; ನಡಹಳ್ಳಿ..!

ಇನ್ನು ಮಾಧ್ಯಮಗಳ ಜೊತೆಗೆ ಮಾತನಾಡಿ ಎ ಎಸ್‌ ಪಾಟೀಲ್‌ ನಡಹಳ್ಳಿ ಸಭೆಯಲ್ಲಿ ನಡೆದ ಘಟನಾವಳಿಗಳ ಬಗ್ಗೆ ಅಸಮಧಾನ ಹೊರಹಾಕಿದ್ರು. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲುಂಡಿರಬಹುದು. ಬಿಜೆಪಿಗೆ ಸೋಲಾಗಿರಬೇಕು, ಆದ್ರೆ ಸತ್ತಿಲ್ಲ. ಮತ್ತೆ ಬಿಜೆಪಿ ಪುಟಿದೇಳಲಿದೆ ಎಂದರು. ಇನ್ನು ನಿರಾಣಿಯವ ಆಕ್ರೋಶಕ್ಕು ಧ್ವನಿಗೂಡಿಸಿದರು.

ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದರೆ ತೀವ್ರ ಹೋರಾಟ:  ಶಂಕರಮಠದ  ಚಂದ್ರಶೇಖರ ಸ್ವಾಮೀಜಿ ಎಚ್ಚರಿಕೆ

ಇತ್ತ ಏನಾಗಿಲ್ಲ ಎಂದ ಮಾಜಿ ಸಿಎಂ..!

ಇತ್ತ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ ಹೋದಲ್ಲೆಲ್ಲಾ ಗಲಾಟೆಗಳು ಆಗ್ತಿಲ್ಲ. ಬಾಗಲಕೋಟೆಯಲ್ಲು ಒಬ್ಬೆ ಕಾರ್ಯಕರ್ತ ಗಲಾಟೆ ಮಾಡಿದ್ದು, ವಿಜಯಪುರದಲ್ಲಿಯು ಸಭೆಯಲ್ಲಿ ಯತ್ನಾಳ್‌ ಭಾಗಿಯಾಗಿಲ್ಲ. ಯತ್ನಾಳ್‌ ಬೇರೆ ಕಾರ್ಯದ ಮೇಲೆ ಹೊರಗಿದ್ದಾರೆ. ತಾವು ಸಭೆಗೆ ಗೈರಾಗುತ್ತಿರುವ ಬಗ್ಗೆಯು ಮೊದಲೇ ಹೇಳಿದ್ದರು. ಯತ್ನಾಳರು ಸಭೆಗೆ ಬರಬೇಕಾಗಿತ್ತು ಎಂದು ಅವರ ಬೆಂಬಲಿಗರು ಘೋಷಣೆಗಳ ಮೂಲಕ ಆಗ್ರಹ ಪಡೆಸಿದ್ದಾರೆಯೇ ಹೊರತು ಮತ್ತೇನು ಅಲ್ಲ ಎಂದಿದ್ದಾರೆ. ಈ ಮೂಲಕ ಅಂತದ್ದೇನು ಆಗಿಲ್ಲ ಎಂದರು.

Follow Us:
Download App:
  • android
  • ios