ಬಂಗಲೆಯಲ್ಲಿ ಅಗ್ನಿದುರಂತ, ಉಡುಪಿ ಉದ್ಯಮಿ ಸಹಿತ ಸನಾತನ ಸಂಸ್ಕಾರ ರೀಲ್ಸ್ ಮಾಡುತ್ತಿದ್ದ ಬಿಜೆಪಿ ನಾಯಕಿ ಸಾವು!
ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ್ದ ಉಡುಪಿ ಹೊಟೇಲ್ , ಬಾರ್ ಉದ್ಯಮಿ ರಮಾನಂದ ಶೆಟ್ಟಿ ಅವರ ಪತ್ನಿ, ಜೀವನ ಮೌಲ್ಯ ಸಂಸ್ಕಾರಗಳ ಬಗ್ಗೆ ರೀಲ್ಸ್ ಮಾಡಿ ಜನ ಜಾಗೃತಿ ಮೂಡಿಸುತ್ತಿದ್ದ ಬಿಜೆಪಿ ನಾಯಕಿ ಕೂಡ ಕೊನೆಯುಸಿರೆಳೆದಿದ್ದಾರೆ.
ಉಡುಪಿ (ಜು16): ಇಲ್ಲಿನ ಗಾಂಧಿನಗರದ ಬಂಗಲೆಯೊಂದರಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿದುರಂತದಲ್ಲಿ ಹೊಟೇಲ್ ಉದ್ಯಮಿ ಮೃತಪಟ್ಟಿದ್ದರು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರ ಪತ್ನಿ, ಬಿಜೆಪಿ ನಾಯಕಿ ಕೂಡ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾದ ಮಕ್ಕಳು ಅನಾಥರಾಗಿದ್ದಾರೆ. ಸೆಂಟ್ರಲೈಸ್ ಎಸಿ ಶಾರ್ಟ್ ಸರ್ಕ್ಯೂಟ್ ನಿಂದ ಬ್ಲಾಸ್ಟ್ ಆಗಿ ಅಗ್ನಿ ಅವಘಡ ಸಂಭವಿಸಿತ್ತು. ಎಸಿ ಶಾರ್ಟ್ ಸರ್ಕ್ಯೂಟ್ ಇಡೀ ಮನೆಯನ್ನು ಆಹುತಿ ಪಡೆದಿತ್ತು.
ನಗರದ ಅಂಬಲಪಾಡಿಯಲ್ಲಿ ಶೆಟ್ಟಿ ಲಂಚ್ ಹೋಮ್ ನಡೆಸುತ್ತಿದ್ದ ರಮಾನಂದ ಶೆಟ್ಟಿ (53) ಮೃತರು. ಅವರು ಪತ್ನಿ, ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಶೆಟ್ಟಿ ಮತ್ತು ಮಕ್ಕಳಾದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅಂಶುಲಾ ಶೆಟ್ಟಿ ಹಾಗೂ 8ನೇ ತರಗತಿ ವಿದ್ಯಾರ್ಥಿ ಅಭಿಕ್ ಶೆಟ್ಟಿ ಅವರೊಂದಿಗೆ ವಾಸಿಸುತ್ತಿದ್ದರು. ಅಶ್ವಿನಿ ಶೆಟ್ಟಿ ಸನಾತನ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಮಗನೊಂದಿಗೆ ರೀಲ್ಸ್ ಮಾಡಿ ಫೇಮಸ್ ಆಗಿದ್ದು, 1 ಲಕ್ಷದಷ್ಟು ಫಾಲೋವರ್ಸ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಪಡೆದಿದ್ದರು.
Shivamogga: ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ: ಉದ್ಯಮಿ ಶರತ್ ಭೂಪಾಳಂ ಸಾವು
ಸಂಪೂರ್ಣ ಹವಾನಿಯಂತ್ರಿತವಾದ ಈ ಬಂಗಲೆಯಲ್ಲಿ ಮುಂಜಾನೆ 5.30ರ ಸುಮಾರಿಗೆ ದಟ್ಟ ಹೊಗೆ ತುಂಬಿಕೊಂಡಿತು. ಅಕ್ಕಪಕ್ಕದವರು ಇದನ್ನು ಗಮನಿಸಿ ಧಾವಿಸಿದಾಗ ಬೆಂಕಿ ಬಂಗಲೆಯೊಳಗೆ ವ್ಯಾಪಿಸಿತ್ತು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಹರಸಾಹಸದಿಂದ ಬೆಂಕಿಯನ್ನು ನಂದಿಸಿ ಬಾಗಿಲು ಒಡೆದು ಒಳಹೊಕ್ಕು ಒಂದು ಬೆಡ್ ರೂಮ್‌ನಲ್ಲಿ ಹೊರ ಬರಲಾಗದೇ ಕೂಗುತ್ತಿದ್ದ ಮಕ್ಕಳಿಬ್ಬರನ್ನು ಹೊರಗೆ ಕರೆ ತಂದರು. ಇನ್ನೊಂದು ಬೆಡ್ ರೂಮ್‌ನಲ್ಲಿದ್ದ ದಂಪತಿ ಹೊಗೆಯಿಂದ ಉಸಿರುಗಟ್ಟಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರನ್ನು ತಕ್ಷಣ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ರವಾನಿಸಲಾಯಿತು.
ಆದರೆ ರಮಾನಂದ ಶೆಟ್ಟಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅಶ್ವಿನಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಅವರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ದುರ್ಘಟನೆ ಬಳಿಕ ಬೆಂಕಿ ಕೆನ್ನಾಲೆಗೆ ಉಸಿರಾಡಲು ಸಾಧ್ಯವಾಗದೆ ಮೆದುಳು ಹಾಗೂ ಶ್ವಾಸಕೋಶ ಬ್ಲಾಕ್ ಆಗಿ ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಪರೀತ ಮಳೆ, ಕುಮಾರಧಾರ ನದಿಯಲ್ಲಿ ತೇಲಿಬಂದ ಆನೆಯ ಮೃತದೇಹ!
ಈ ಬಂಗಲೆ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಮನೆಯ ಒಳಗೋಡೆ ಸಹಿತವಾಗಿ ಸಂಪೂರ್ಣ ಮರವನ್ನು ಬಳಸಿ ನಿರ್ಮಿಸಲಾಗಿತ್ತು. ಏರ್ ಕಂಡಿಷನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರುವುದು ದೃಢಪಟ್ಟಿದೆ.
ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ್ ನೇತೃತ್ವದಲ್ಲಿ ಸಿಬ್ಬಂದಿ ರಾಘವೇಂದ್ರ, ಸುಧೀರ್, ವಿನಾಯಕ್, ರವಿ, ಖಾಝಾ ಹುಸೇನ್, ತೌಸಿಫ್, ಶಹಬಾಸ್, ಜಿಲ್ಲಾ ಪೋಲಿಸ್‌ನ ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ, ನಗರ ಠಾಣಾ ಎಸ್.ಐ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ರೀಲ್ಸ್ ಮೂಲಕ ಜನಜಾಗೃತಿ: ಯಶಸ್ವಿ ಉದ್ಯಮಿಯಾಗಿದ್ದ ರಮಾನಂದ ಶೆಟ್ಟಿ ಮತ್ತು ಅಶ್ವಿನಿ ಹೈಸ್ಕೂಲು ದಿನಗಳಿಂದಲೇ ಪ್ರೀತಿಸಿ ಮದುವೆಯಾಗಿದ್ದರು. ಅಪ್ಪಟ ಸನಾತನ ಸಂಸ್ಕಾರ ಪ್ರಿಯರಾಗಿದ್ದ ಅಶ್ವಿನಿ ಶೆಟ್ಟಿ, ಸಾಮಾಜಿಕ ಜಾಲತಾಣಗಳ್ಲಲಿ ರೀಲ್ಸ್‌ಗಳ ( ಬಲ್ಲಾಳ್ ಕಾಬೂಸ್-Ballal's Caboose) ಮೂಲಕ ಹಿಂದೂ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳನ್ನು ಹೇಳುತ್ತಾ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದ್ದರು. ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಅವರು, ಸಾಮಾಜಿಕ ಕ್ಷೇತ್ರ, ಸಾಹಿತ್ಯ, ನೃತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು.