ಬೆಂಗಳೂರು - ಮೈಸೂರು ದಶಪಥ ಟೋಲ್ ಸಂಗ್ರಹಕ್ಕೆ ತಡೆ: ಸಂಸದ ಪ್ರತಾಪ್ ಸಿಂಹ ಮಾಹಿತಿ
ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ನಾಳೆ ಬೆಳಗ್ಗೆ 8 ಗಂಟೆಯಿಂದ ಸಂಗ್ರಹ ಆಗಬೇಕಿದ್ದ ಟೋಲ್ ಸಂಗ್ರವನ್ನು ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸ್ವಲ್ಪ ದಿನಗಳ ಕಾಲ ಮುಂದೂಡಿಕೆ ಮಾಡಲಾಗಿದೆ.
ಮೈಸೂರು (ಫೆ.27): ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ನಾಳೆ ಬೆಳಗ್ಗೆ 8 ಗಂಟೆಯಿಂದ ಸಂಗ್ರಹ ಆಗಬೇಕಿದ್ದ ಟೋಲ್ ಸಂಗ್ರವನ್ನು ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸ್ವಲ್ಪ ದಿನಗಳ ಕಾಲ ಮುಂದೂಡಿಕೆ ಮಾಡಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಮೈಸೂರು ಭಾಗದ ಸಂಸದ ಪ್ರತಾಪ್ ಸಿಂಹ ಅವರು, ಟೋಲ್ ಸಂಗ್ರಹ ಸದ್ಯಕ್ಕಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಸದ ಹಾಕಿರುವ ಪೋಸ್ಟ್‌ನಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಸರ್ವೀಸ್ ರಸ್ತೆ ಪೂರ್ಣಗೊಳ್ಳುವವರೆ ಟೋಲ್ ಇಲ್ಲ: ಇನ್ನು ಟೋಲ್ ಸಂಗ್ರಹ ದಿನಾಂಕವನ್ನು ಮುಂದೂಡಿಕೆ ಮಾಡಲು ಕಾರಣವನ್ನೂ ನೀಡಿರುವ ಸಂಸದ ಪ್ರತಾಪ್ ಸಿಂಹ ಅವರು, ಟೋಲ್ ಸಂಗ್ರಹ ಮಾಡಲು ಉದ್ದೇಶಿಸಿರುವ ಬೆಂಗಳೂರಿನ ಕಣಿಮಿಣಿಕೆಯಿಂದ ಮಂಡ್ಯದ ನಿಡಘಟ್ಟದವರೆಗೆ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಟೋಲ್ ಸಂಗ್ರಹವನ್ನು ಮುಂದೂಡಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇದರಿಂದ ನಾಳೆ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಬೇಕಿದ್ದ ಟೋಲ್ ಸಂಗ್ರಹ ಸ್ವಲ್ಪ ದಿನಗಳ ಕಾಲ ಮುಂದೂಡಿಕೆ ಆಗಿದೆ.
ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ (ರಾಷ್ಟ್ರೀಯ ಹೆದ್ದಾರಿ- 275) ಟೋಲ್ ಶುಲ್ಕ ನಾಳೆಯಿಂದ ಜಾರಿ ಆಗಲಿದೆ. ಬೆಂಗಳೂರಿನ ಕಣಿಮಿಣಿಕೆಯಿಂದ- ಮಂಡ್ಯದ ನಿಡಘಟ್ಟದವರೆಗೆ ಮಾತ್ರ 135 ರೂ. ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಬಹುತೇಕ ಸರ್ವೀಸ್ ರಸ್ತೆ ಸೇರಿ ಮೈಸೂರುವರೆಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ದುಬಾರಿ ಟೋಲ್ ವಿಧಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು ಮೈಸೂರು ದಶಕಥ ಹೆದ್ದಾರಿಯ ಮೊದಲ ಹಂತದ 55.63 ಕಿಲೋಮೀಟರ್ ರಸ್ತೆಗೆ ಟೋಲ್ ವಸೂಲಾತಿಯನ್ನು ಫೆಬ್ರವರಿ 28 ರ ಬೆಳಗ್ಗೆ 8 ಗಂಟೆಯಿಂದ ಆರಂಭಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ವಿವಿಧ ಮಾದರಿಯ ವಾಹನಗಳಿಗೆ ಪ್ರಾಧಿಕಾರ ಪ್ರತ್ಯೇಕ ದರ ನಿಗದಿಪಡಿಸಿದೆ. ಸರ್ವಿಸ್ ರಸ್ತೆ ಹೊರತುಪಡಿಸಿ ಉಳಿದ ಆರು ಪಥದ ರಸ್ತೆಗಳಿಗೆ ಈ ದರ ಅನ್ವಯವಾಗಲಿದೆ ಎಂದು ತಿಳಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸಾಆಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿತ್ತು.
ನಾಳೆಯಿಂದಲೇ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ಶುಲ್ಕ ಜಾರಿ: ವಾಹನಗಳ ಶುಲ್ಕ ವಿವರ ನೋಡಿ
ಟೋಲ್ ಸಂಗ್ರಹಕ್ಕೆ ಪರ-ವಿರೋಧ: ಬೆಂಗಳೂರು ಮೈಸೂರು ದಶಪಥ ರಸ್ತೆಗೆ ಟೋಲ್ ಆರಂಭವಾಗಲಿದೆ ಎಂಬ 'ಏಷ್ಯಾನೆಟ್ ಡಿಜಿಟಲ್ ನ್ಯೂಸ್' ಹಂಚಿಕೊಂಡ ಸುದ್ದಿಗೆ ಸಾಮಾಜಿಕ ಜಾಲತಾಣದಲ್ಲಿ ಪರ - ವಿರೋಧ ವ್ಯಕ್ತವಾಗಿದೆ. ಕೆಲವರು ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಜಾಗತಿಕವಾಗಿ ನಮ್ಮ ದೇಶದಲ್ಲಿ ಮಾತ್ರವಲ್ಲ, ಅಭಿವೃದ್ಧಿ ಹೊಂದಿದ ದೇಶಗಳು ಒಳಗೊಂಡಂತೆ ಬಹುತೇಕ ದೇಶಗಳಲ್ಲಿ ರಸ್ತೆಯ ಟೋಲ್ ವಸೂಲಿ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ಟೋಲ್ ವಸೂಲಿ ಮಾಡುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಲ್ಲ. ಇನ್ನು ಯಾರು ಟೋಲ್ ಕಟ್ಟಲು ಸಾಧ್ಯವಿಲ್ಲವೋ ಅವರು ಸರ್ವಿಸ್ ರಸ್ತೆಯಲ್ಲಿ ಹೋಗಬಹುದು ಎಂದು ನೆಟಿಜೆನ್‌ಗಳು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತಪಡಿಸಿದ್ದಾರೆ.