ಹೊಸ ವರ್ಷದ ಸಂಭ್ರಮಕ್ಕಾಗಿ ಬೆಂಗಳೂರಿನ ಎಂ.ಜಿ. ರಸ್ತೆಗೆ ಬಂದಿದ್ದ ದಂಪತಿಗಳಲ್ಲಿ, ಪತ್ನಿ ಜನದಟ್ಟಣೆಯಲ್ಲಿ ಕಳೆದುಹೋಗಿದ್ದಾರೆ. ಈ ಆಘಾತದಿಂದ ಪತಿಗೆ ಫಿಟ್ಸ್ ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ನಾಪತ್ತೆಯಾದ ಪತ್ನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರು (ಜ.1): ಹೊಸ ವರ್ಷದ ಮುನ್ನಾದಿನದ ಸಂಭ್ರಮಕ್ಕಾಗಿ ಬೆಂಗಳೂರಿನ ಎಂ.ಜಿ. ರಸ್ತೆಗೆ ದಂಪತಿಗಳು ಆಗಮಿಸಿದ್ದರು. ಆದರೆ, ಮಿತಿಮೀರಿದ ಜನದಟ್ಟಣೆಯ ನಡುವೆ ಪತ್ನಿ ಪತಿಯಿಂದ ಬೇರ್ಪಟ್ಟು ನಾಪತ್ತೆಯಾಗಿದ್ದಾರೆ. ಎಷ್ಟು ಹುಡುಕಿದರೂ ಪತ್ನಿ ಸಿಗದಿದ್ದಾಗ ಪತಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಸ್ಥಳದಲ್ಲೇ ಕುಸಿದುಬಿದ್ದ ಪತಿ
ತನ್ನ ಕಣ್ಣೆದುರೇ ಪತ್ನಿ ಕಣ್ಮರೆಯಾದ ಆಘಾತ ಮತ್ತು ಮಾನಸಿಕ ಒತ್ತಡದಿಂದಾಗಿ ಪತಿಗೆ ಸ್ಥಳದಲ್ಲೇ ಪಿಟ್ಸ್ (ಫಿಟ್ಸ್) ಕಾಣಿಸಿಕೊಂಡಿದೆ. ರಸ್ತೆಯಲ್ಲೇ ಅಸ್ವಸ್ಥಗೊಂಡು ಬಿದ್ದ ಪತಿಯನ್ನು ಕಂಡು ಸಾರ್ವಜನಿಕರು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ.
ಆಸ್ಪತ್ರೆಗೆ ತುರ್ತು ರವಾನೆ
ಸ್ಥಳದಲ್ಲಿದ್ದವರ ನೆರವಿನೊಂದಿಗೆ ಆಂಬ್ಯುಲೆನ್ಸ್ ಕರೆಯಿಸಿ, ಅಸ್ವಸ್ಥಗೊಂಡ ಪತಿಯನ್ನು ತಕ್ಷಣವೇ ಶಿವಾಜಿನಗರದ ಬೋರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೈದ್ಯರು ಪತಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ.
ಪತ್ನಿಯ ಪತ್ತೆಗೆ ಪೊಲೀಸರ ಕಾರ್ಯಾಚರಣೆ
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಜನದಟ್ಟಣೆಯಲ್ಲಿ ಕಳೆದುಹೋಗಿರುವ ಪತ್ನಿಯ ಪತ್ತೆಗಾಗಿ ಹುಡುಕಾಟ ಮುಂದುವರಿದಿದೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಮಹಿಳೆಯ ಗುರುತು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ.


