ಕಾಡಂಚಿನ ಗ್ರಾಮದಲ್ಲಿ ಹುಲಿ ದಾಳಿಗೆ ರೈತರ ಬಲಿ ಹಿನ್ನಲೆ ನಾಗರಹೊಳೆ ಹಾಗೂ ಬಂಡೀಪುರದಲ್ಲಿ ಸಫಾರಿ ನಿಷೇಧಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ. 15 ದಿನಗಳಿಂದ ಸಫಾರಿ ಕೇಂದ್ರ ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ.
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ನ.23): ಕಾಡಂಚಿನ ಗ್ರಾಮದಲ್ಲಿ ಹುಲಿ ದಾಳಿಗೆ ರೈತರ ಬಲಿ ಹಿನ್ನಲೆ ನಾಗರಹೊಳೆ ಹಾಗೂ ಬಂಡೀಪುರದಲ್ಲಿ ಸಫಾರಿ ನಿಷೇಧಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ. 15 ದಿನಗಳಿಂದ ಸಫಾರಿ ಕೇಂದ್ರ ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ. ಸಫಾರಿ ಆದಾಯ ಕೂಡ ಖೋತಾ ಆಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಪ್ರವಾಸಿಗರ ಹಾಟ್ ಸ್ಪಾಟ್ ಹಾಗೂ ಪ್ರಕೃತಿ ಪ್ರಿಯರ ನೆಚ್ಚಿನ ತಾಣ,ರಾಜ್ಯದಲ್ಲಿ ಅತಿ ಹೆಚ್ಚು ಹುಲಿ, ಆನೆ, ಚಿರತೆ ಹೊಂದಿರುವ ಬಂಡೀಪುರ ಅರಣ್ಯ ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ.
ನಿತ್ಯ ನೂರಾರು ಜನರು ಬಂಡೀಪುರದ ಸಫಾರಿಗೆ ಆಗಮಿಸುತ್ತಿದ್ದರು. ಪ್ರಾಣಿಗಳ ದರ್ಶನದ ಜೊತೆಗೆ ಪ್ರಕೃತಿಯ ರಮ್ಯ ರಮಣೀಯತೆಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದ್ರೆ ಮೈಸೂರು, ಚಾಮರಾಜನಗರ ಭಾಗದಲ್ಲಿ ಹುಲಿ ದಾಳಿ ಪ್ರಕರಣ ಹೆಚ್ಚಳ, ರೈತರ ಸಾವು ಹಿನ್ನಲೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಂಡೀಪುರ ಹಾಗೂ ನಾಗರಹೊಳೆ ಎರಡು ಕಡೆಯೂ ಸಫಾರಿ ನಿಷೇಧಿಸಿ, ಸಫಾರಿಗೆ ಬಳಕೆ ಮಾಡ್ತಿರುವ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆ ಹಾಗೂ ಜಾಗೃತಿ ಮೂಡಿಸುವಂತೆ ಖಡಕ್ ಸೂಚನೆ ಕೊಟ್ಟಿದ್ದರು.
ಸಚಿವರ ಆದೇಶದ ಅನುಸಾರ ಬಂಡೀಪುರದ ಸಫಾರಿ ಸ್ಥಗಿತಗೊಂಡು 15 ಕ್ಕೂ ಹೆಚ್ಚು ದಿನಗಳಾಯ್ತು ಪ್ರತಿನಿತ್ಯ ಮೂರು ಲಕ್ಷ ಹಾಗೂ ವ್ಹೀಕೆಂಡ್ ನಲ್ಲಿ 15 ಲಕ್ಷ ರೂಪಾಯಿ ಸಫಾರಿಯಿಂದಲೇ ಆದಾಯ ಬರುತ್ತಿತ್ತು. ಆದ್ರೆ ಸಫಾರಿ ಸ್ಥಗಿತದಿಂದ ಸಫಾರಿ ಜೀಪ್ ಹಾಗೂ ಬಸ್ ಎರಡು ಕೂಡ ಧೂಳು ಹಿಡಿಯುತ್ತಿವೆ. ಇನ್ನೂ ಸಫಾರಿ ಆರಂಭಿಸುವಂತೆ ಸಾಕಷ್ಟು ಒತ್ತಾಯ ಬಂದಿದೆ. ಸದ್ಯ ಬಂಡೀಪುರದ ಕಾಡಂಚಿನ ಪ್ರದೇಶಗಳಲ್ಲಿ ಇದ್ದ ಹುಲಿಗಳನ್ನು ಸೆರೆಹಿಡಿಯುವ ಕೆಲಸ ಮಾಡಿದ್ದೇವೆ. ಅಲ್ಲದೇ ಸಫಾರಿ ನಿಷೇಧದಿಂದ ಸಾಕಷ್ಟು ಕುಟುಂಬಗಳಿಗೆ ಆರ್ಥಿಕ ಹೊಡೆತ ಉಂಟಾಗಿದೆ.
ಶೀಘ್ರದಲ್ಲೇ ಸಫಾರಿ ಆರಂಭಿಸುವ ಸಾಧ್ಯತೆ
ಈ ಕುಟುಂಬಗಳು ಸಫಾರಿ ಆರಂಭಿಸುವಂತೆ ಮನವಿ ಮಾಡ್ತಿದ್ದಾರೆ. ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತಂದಿದ್ದು, ಶೀಘ್ರದಲ್ಲೇ ಸಫಾರಿ ಆರಂಭಿಸುವ ಸಾಧ್ಯತೆ ಇದೆ. ಒಟ್ನಲ್ಲಿ ಹುಲಿ ದಾಳಿ ಹೆಚ್ಚಾಯ್ತು ಹಾಗೂ ರೈತರ ಒತ್ತಾಯಕ್ಕೆ ಮಣಿದು ಸರ್ಕಾರ ಸಫಾರಿ ನಿಷೇಧಿಸಿದೆ. ಕೋಟ್ಯಾಂತರ ರೂಪಾಯಿ ಆದಾಯ ತರುತ್ತಿದ್ದ ಸಫಾರಿ ನಿಷೇಧದಿಂದ ಆರ್ಥಿಕ ಹೊಡೆತ ಬೀಳುವ ಸಾಧ್ಯತೆಯಿದೆ.


