ಶಬರಿಮಲೆಗೆ ಪಾದಯಾತ್ರೆ ಹೊರಟಿದ್ದ ಅಯ್ಯಪ್ಪ ಮಾಲಾಧಾರಿಗಳನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ. ವನ್ಯಜೀವಿ ಸುರಕ್ಷತಾ ನಿಯಮಗಳ ಕಾರಣ ನೀಡಿ ಪಾದಯಾತ್ರೆಗೆ ಅನುಮತಿ ನಿರಾಕರಿಸಿದ್ದರಿಂದ, ಭಕ್ತರು ಮತ್ತು ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆದಿದೆ.
ಚಾಮರಾಜನಗರ (ಡಿ.27): ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಂದು ಹೈಡ್ರಾಮಾ ನಡೆದಿದೆ. ಶಬರಿಮಲೆಗೆ ಪಾದಯಾತ್ರೆ ಹೊರಟಿದ್ದ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆದ ಘಟನೆ ವರದಿಯಾಗಿದೆ.
ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪಾದಯಾತ್ರೆಗೆ ತಡೆ
ಅಯ್ಯಪ್ಪ ಮಾಲಾಧಾರಿಗಳ ತಂಡವೊಂದು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಮಾರ್ಗದ ಮೂಲಕ ನಡೆದುಕೊಂಡು ಹೋಗಲು ಮುಂದಾಗಿತ್ತು. ಆದರೆ, ಬಂಡೀಪುರದ ಮೇಲುಕಾಮನಹಳ್ಳಿ ಚೆಕ್ ಪೋಸ್ಟ್ ಬಳಿ ಅರಣ್ಯ ಸಿಬ್ಬಂದಿಯು ಮಾಲಾಧಾರಿಗಳನ್ನು ತಡೆದಿದ್ದಾರೆ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಪಾದಯಾತ್ರೆ ಮಾಡಲು ಕಾನೂನಿನ ಪ್ರಕಾರ ಅವಕಾಶವಿಲ್ಲ, ಇದು ವನ್ಯಜೀವಿಗಳ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ಅಧಿಕಾರಿಗಳು ಪಾದಯಾತ್ರೆಗೆ ಬ್ರೇಕ್ ಹಾಕಿದ್ದಾರೆ.
ಅಧಿಕಾರಿಗಳ ಜೊತೆ ಅಯ್ಯಪ್ಪ ಮಾಲಾಧಾರಿಗಳ ವಾಗ್ವಾದ
ತಮ್ಮನ್ನು ಅರಣ್ಯ ಸಿಬ್ಬಂದಿ ತಡೆದಿದ್ದರಿಂದ ಆಕ್ರೋಶಗೊಂಡ ಮಾಲಾಧಾರಿಗಳು ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದರು. ಸಂಪ್ರದಾಯದಂತೆ ತಾವು ಪಾದಯಾತ್ರೆ ಮಾಡುತ್ತಿರುವುದಾಗಿ ವಾದಿಸಿದ ಭಕ್ತರು, ಅರಣ್ಯದೊಳಗೆ ಬಿಡುವಂತೆ ಪಟ್ಟು ಹಿಡಿದರು. ಆದರೆ, ನಿಯಮ ಪಾಲನೆಯಲ್ಲಿ ಕಟ್ಟುನಿಟ್ಟಾಗಿದ್ದ ಅರಣ್ಯಾಧಿಕಾರಿಗಳು ಪಾದಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿದರು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಚೆಕ್ ಪೋಸ್ಟ್ ಬಳಿ ನಡೆದ ಈ ವಾಗ್ವಾದದ ದೃಶ್ಯಗಳನ್ನು ಸ್ಥಳೀಯರು ಹಾಗೂ ಪ್ರವಾಸಿಗರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅರಣ್ಯ ನಿಯಮಗಳು ಮತ್ತು ಧಾರ್ಮಿಕ ಪಾದಯಾತ್ರೆಗಳ ನಡುವಿನ ಸಂಘರ್ಷದ ಬಗ್ಗೆ ಪರ-ವಿರೋಧದ ಚರ್ಚೆಗಳು ಶುರುವಾಗಿವೆ.


