ಅರಣ್ಯ ಪ್ರದೇಶದಲ್ಲಿನ ಜಲಪಾತ ಸೇರಿದಂತೆ ಪ್ರವಾಸಿ ತಾಣಗಳಿಗೆ ತೆರಳಲು ಪ್ರವಾಸಿಗರು ಅಕ್ರಮವಾಗಿ ಅರಣ್ಯ ಪ್ರದೇಶ ಪ್ರವೇಶವನ್ನು ನಿರ್ಬಂಧಿಸಿ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ. 

ಬೆಂಗಳೂರು (ಜು.29): ಅರಣ್ಯ ಪ್ರದೇಶದಲ್ಲಿನ ಜಲಪಾತ ಸೇರಿದಂತೆ ಪ್ರವಾಸಿ ತಾಣಗಳಿಗೆ ತೆರಳಲು ಪ್ರವಾಸಿಗರು ಅಕ್ರಮವಾಗಿ ಅರಣ್ಯ ಪ್ರದೇಶ ಪ್ರವೇಶವನ್ನು ನಿರ್ಬಂಧಿಸಿ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನುಮತಿಯಿಲ್ಲದೆ ಅರಣ್ಯದಲ್ಲಿ ಪ್ರವೇಶಿಸಿ ಜಲಪಾತ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ತೆರಳುತ್ತಿದ್ದಾರೆ. ಈ ವೇಳೆ ಜೀವಹಾನಿಯಂತಹ ಅವಘಡಗಳು ಸಂಭವಿಸುವುದರ ಜತೆಗೆ ಅರಣ್ಯ ನಾಶವಾಗುತ್ತಿದೆ. ಅಲ್ಲದೆ, ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ನಿಗದಿತ ಮಾರ್ಗ ಹೊರತುಪಡಿಸಿ ಅರಣ್ಯದೊಳಗೆ ಪ್ರವೇಶಿಸಿ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧಿಸಬೇಕು ಎಂದು ತಿಳಿಸಿದ್ದಾರೆ.

ಅರಣ್ಯ ಪ್ರದೇಶದೊಳಗೆ ಇರುವ ಜಲಪಾತಗಳ ದಾರಿಯಲ್ಲಿ ಅರಣ್ಯದೊಳಗೆ ಪ್ರವೇಶಿಸದಂತೆ ಫಲಕ ಹಾಕುವಂತೆಯೂ ಸಚಿವರು ಸೂಚಿಸಿದ್ದು, ಅದಕ್ಕಾಗಿ ಜಲಪಾತಗಳ ಮಾರ್ಗದಲ್ಲಿ ಸಿಬ್ಬಂದಿ ನಿಯೋಜನೆ ಮಾಡುವಂತೆ ತಿಳಿಸಿದ್ದಾರೆ. ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ನಿರ್ಮಿಸಲಾಗಿರುವ ರಸ್ತೆಗಳಲ್ಲಿ ವಾಹನ ಅಥವಾ ಜನರು ತೆರಳುವುದಕ್ಕೆ ಆಕ್ಷೇಪ ವ್ಯಕ್ತಪಡಿಸದೆ, ಅರಣ್ಯದೊಳಗಿಂದ ತೆರಳುವುದಕ್ಕೆ ನಿಷೇಧಿಸುವಂತೆ ಹೇಳಿದ್ದಾರೆ. ಮನುಷ್ಯರು ಅಥವಾ ವಾಹನಗಳು ಅರಣ್ಯದೊಳಗೆ ಪ್ರವೇಶಿಸುವುದರಿಂದ ಅಲ್ಲಿನ ವನ್ಯಜೀವಿಗಳು ತೊಂದರೆಗೀಡಾಗುತ್ತಿವೆ. ಅಲ್ಲದೆ, ವಾಹನಗಳು ಓಡಾಡುವುದರಿಂದ ಹೊರಸೂಸುವ ಹೊಗೆಯಿಂದ ಮರ, ಗಿಡಗಳ ಎಲೆಗಳ ಮೇಲೆ ಮಾಲಿನ್ಯ ಉಳಿಯಲಿದ್ದು, ಅದರಿಂದ ಪ್ರಾಣಿಗಳು ಸೇವಿಸುವ ಆಹಾರವೂ ಹಾಳಗುತ್ತಿದೆ. ಈ ಎಲ್ಲ ಕಾರಣದಿಂದ ಪ್ರವಾಸಿಗರು ಅರಣ್ಯ ಪ್ರವೇಶಕ್ಕೆ ನಿಷೇಧ ಹೇರಲಾಗುತ್ತಿದೆ.

ಕೊಡಗಿನ 44 ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆ: ಭಾರತೀಯ ಭೂವಿಜ್ಞಾನ ವರದಿಯಲ್ಲೇನಿದೆ?

ರಾಜ್ಯದಲ್ಲಿ ಈಗ 435 ಹುಲಿಗಳು: ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ರಾಜ್ಯದ ಅರಣ್ಯ ಪ್ರದೇಶಗಳಲ್ಲಿ 2022ರಲ್ಲಿ ನಡೆಸಲಾದ ಹುಲಿ ಗಣತಿ ವರದಿ ಬಿಡುಗಡೆಗೊಂಡಿದ್ದು, ರಾಜ್ಯದಲ್ಲಿ 435 ಹುಲಿಗಳು ಪತ್ತೆಯಾಗಿವೆ. ಅಂತಾರಾಷ್ಟ್ರೀಯ ಹುಲಿ ದಿನಕ್ಕೆ 2 ದಿನಗಳ ಮುನ್ನ ರಾಷ್ಟ್ರೀಯ ಹುಲಿ ಗಣತಿ ವಿವರ ಬಿಡುಗಡೆಯಾಗಿದ್ದು, ಅದರಲ್ಲಿ ರಾಜ್ಯದ ಹುಲಿಗಳ ಸಂಖ್ಯೆ ಏರಿಕೆಯಾಗಿರುವ ಮಾಹಿತಿ ನೀಡಲಾಗಿದೆ. ರಾಷ್ಟ್ರೀಯ ಹುಲಿ ಪ್ರಾಧಿಕಾರದ ಮಾರ್ಗಸೂಚಿಯಂತೆ ನಾಲ್ಕು ವರ್ಷಗಳಿಗೊಮ್ಮ ಹುಲಿ ಗಣತಿ ಮಾಡಲಾಗುತ್ತದೆ. ಅದರ ಭಾಗವಾಗಿ 2018ರ ನಂತರ 2022ರಲ್ಲಿ ಹುಲಿ ಗಣತಿ ಮಾಡಲಾಗಿದೆ. 2018ರಲ್ಲಿ 404 ಇದ್ದ ಹುಲಿಗಳ ಸಂಖ್ಯೆ 2022ರ ವೇಳೆಗೆ 435ಕ್ಕೆ ಹೆಚ್ಚಳವಾಗಿದೆ. ಆ ಮೂಲಕ ನಾಲ್ಕು ವರ್ಷಗಳಲ್ಲಿ 31 ಹುಲಿಗಳು ಹೆಚ್ಚಳವಾಗಿರುವುದು ವರದಿಯಲ್ಲಿ ದೃಢಪಟ್ಟಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಕರ್ನಾಟಕವು ಹುಲಿ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ ಪ್ರದೇಶ, ಕಾಳಿ ಅರಣ್ಯ ಪ್ರದೇಶಗಳು ಸೇರಿದಂತೆ 37 ವನ್ಯಜೀವಿಧಾಮಗಳಲ್ಲಿ ಹುಲಿ ಗಣತಿ ನಡೆಸಲಾಗಿದೆ. ಕ್ಯಾಮೆರಾ ಟ್ರ್ಯಾಪ್‌, ಲೈನ್‌ ಟ್ರಾನ್ಸ್ಯಾಕ್ಟ್ ವಿಧಾನ ಬಳಸಿ ಹುಲಿಗಳನ್ನು ಲೆಕ್ಕ ಹಾಕಲಾಗಿದೆ. ರಾಜ್ಯದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ 5,399 ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಿ ಹುಲಿಗಳ ಚಲನವಲನ ಮೇಲೆ ನಿಗಾವಹಿಸಿ, ಹುಲಿಗಳ ಮೈಮೇಲಿನ ಪಟ್ಟೆಗಳ ಆಧಾರದ ಮೇಲೆ ಹುಲಿಗಳನ್ನು ಲೆಕ್ಕ ಹಾಕಲಾಗಿದೆ ಎಂದರು.

ಅಧಿಕ ಭಾರದ ಕಲ್ಲು ಸಾಗಾಣಿಕೆ ವಿರುದ್ಧ ಕ್ರಮಕ್ಕೆ ಶಾಸಕ ಸುಬ್ಬಾರೆಡ್ಡಿ ಸೂಚನೆ

2018ರಲ್ಲಿ ನಡೆದ ಹುಲಿ ಗಣತಿ ಪ್ರಕಾರ ರಾಜ್ಯದಲ್ಲಿ ಕ್ಯಾಮೆರಾ ಟ್ರ್ಯಾಪ್‌ನಲ್ಲಿ 404 ಹುಲಿಗಳು ಪತ್ತೆಯಾಗಿದ್ದವು. ಅದನ್ನು ವನ್ಯಜೀವಿ ಸಂಖ್ಯಾಶಾಸ್ತ್ರದ ಪ್ರಕಾರ ವಿಶ್ಲೇಷಿಸಿದಾಗ ರಾಜ್ಯದಲ್ಲಿ 475ರಿಂದ 573 ಹುಲಿಗಳಿರುವ ಬಗ್ಗೆ ಗೊತ್ತಾಗಿತ್ತು. ಇದೀಗ 435 ಹುಲಿಗಳು ಪತ್ತೆಯಾಗಿದ್ದು, ಆ ಸಂಖ್ಯೆ ಮತ್ತಷ್ಟುಹೆಚ್ಚಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು. ಬಂಡೀಪುರ, ಭದ್ರಾ, ಬಿಆರ್‌ಟಿ, ಕಾಳಿ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 2,180 ಕ್ಯಾಮೆರಾ ಪಾಯಿಂಟ್‌ಗಳನ್ನು ಅಳವಡಿಸಲಾಗಿತ್ತು. ಉಳಿದಂತೆ ಬನ್ನೇರುಘಟ್ಟ, ಬೆಳಗಾವಿ, ಶಿವಮೊಗ್ಗ, ಕಾವೇರಿ, ಚಿಕ್ಕಮಗಳೂರು ಸೇರಿದಂತೆ ಇನ್ನಿತರ ವನ್ಯಜೀವಿಧಾಮ ಮತ್ತು ವಿಭಾಗಗಳಲ್ಲಿ ಕ್ಯಾಮೆರಾ ಪಾಯಿಂಟ್‌ ಅಳವಡಿಸಲಾಗಿತ್ತು. ಒಟ್ಟಾರೆ ಎಲ್ಲ ಕ್ಯಾಮೆರಾಗಳಲ್ಲಿ 66.86 ಲಕ್ಷ ಛಾಯಾಚಿತ್ರಗಳನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದರು.