ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ನಡೆಯನ್ನು ಖಂಡಿಸಿದ್ದಾರೆ. ಕೊಲೆ ಸಂಚಿನ ಆರೋಪವನ್ನ ತಳ್ಳಿಹಾಕಿರುವ ಅವರು, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು
ಬಳ್ಳಾರಿ(ಜ.6): ಬ್ಯಾನರ್ ಕಟ್ಟುವ ವಿಚಾರವಾಗಿ ಇತ್ತೀಚಿನ ಗಲಾಟೆ ಪ್ರಕರಣದ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಬಳ್ಳಾರಿಯ ಉಸ್ತುವಾರಿಯಾಗಿ ನಾನು ಹಿಂದೆ ಕೆಲಸ ಮಾಡಿದ್ದೇನೆ, ತಿಂಗಳುಗಟ್ಟಲೆ ಇಲ್ಲೇ ಇದ್ದು ಜನರೊಂದಿಗೆ ಬೆರೆತಿದ್ದೇನೆ. ಶಾಂತಿಯ ಬೀಡಾಗಿದ್ದ ಬಳ್ಳಾರಿಯಲ್ಲಿ ಇಂತಹ ಘಟನೆ ನಡೆದಿರುವುದು ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ,' ಎಂದು ಅವರು ಬೇಸರ ವ್ಯಕ್ತಪಡಿಸಿದರು. ಶಾಸಕರನ್ನು ಹೊರಗಿಟ್ಟು ತಾವು ನೇಮಿಸಿದ ತಂಡದಿಂದಲೂ ಮಾಹಿತಿ ಪಡೆದಿದ್ದು, ಸತ್ಯವನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಅಡ್ಡಿ ಇಲ್ಲ
ವಾಲ್ಮೀಕಿ ಪುತ್ಥಳಿ ಅನಾವರಣದ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಶಾಸಕ ಭರತ್ ರೆಡ್ಡಿ ಅವರು ಪ್ರತಿಮೆ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದು ಅನುಮತಿ ನೀಡುವ ಹಂತದಲ್ಲಿತ್ತು. ಆಮಂತ್ರಣ ಪತ್ರಿಕೆ ಮುದ್ರಣವಾಗಿರಲಿಲ್ಲ. ವಾಲ್ಮೀಕಿ ಸಮಾಜದ ಜನಸಂಖ್ಯೆ ಹೆಚ್ಚಿರುವ ಕಾರಣ ಪಕ್ಷಾತೀತವಾಗಿ ಗೌರವ ಸಲ್ಲಿಸುವ ಉದ್ದೇಶ ಇತ್ತೇ ಹೊರತು ಗಲಾಟೆ ಮಾಡುವುದಲ್ಲ. ಮೂರು ದಿನ ಮುಂಚಿತವಾಗಿ ಶ್ರೀರಾಮುಲು ಅವರು ಪುತ್ಥಳಿ ಅಗತ್ಯವಿಲ್ಲ ಎಂದಿದ್ದರು, ಆದರೆ ಭರತ್ ರೆಡ್ಡಿ ನಿರ್ಧಾರ ಸರಿಯಾಗಿಯೇ ಇತ್ತು ಎಂದು ಸಮರ್ಥಿಸಿಕೊಂಡರು.
ಬ್ಯಾನರ್ ಹರಿದು ಹಾಕಿದ್ದು ಸರಿಯಲ್ಲ: ರೆಡ್ಡಿ-ರಾಮುಲು ವಿರುದ್ಧ ಕಿಡಿ
ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಕಟ್ಟುವುದು ಸಹಜ ಪ್ರಕ್ರಿಯೆ ಎಂದ ಡಿಕೆ ಶಿವಕುಮಾರ್, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. 'ಒಂದು ವೇಳೆ ಬ್ಯಾನರ್ ಹಾಕಿದ್ದು ಇಷ್ಟವಾಗದಿದ್ದರೆ ದೂರು ನೀಡಬಹುದಿತ್ತು ಅಥವಾ ತೆಗೆಯಲು ಹೇಳಬಹುದಿತ್ತು. ಅದನ್ನು ಬಿಟ್ಟು ತಮ್ಮ ಮುಂದಾಳತ್ವದಲ್ಲೇ ಬ್ಯಾನರ್ ಹರಿದು ಹಾಕಿರುವುದು ಎಷ್ಟು ಸರಿ ಎಂಬುದನ್ನು ಅವರೇ ತೀರ್ಮಾನಿಸಬೇಕು. ಕಾನೂನು ತನ್ನ ಕೆಲಸ ಮಾಡುತ್ತದೆ, ಈಗಾಗಲೇ ಗನ್‌ಮ್ಯಾನ್ ಸೇರಿದಂತೆ ಎಲ್ಲರನ್ನೂ ಬಂಧಿಸಲಾಗಿದೆ' ಎಂದರು.
ಕೊಲೆ ಸಂಚು ಆರೋಪಕ್ಕೆ ಡಿಕೆಶಿ ತೀಕ್ಷ್ಣ ಪ್ರತಿಕ್ರಿಯೆ
ಜನಾರ್ದನ ರೆಡ್ಡಿ ಅವರು ತಮ್ಮ ಮೇಲೆ ಕೊಲೆ ಸಂಚು ನಡೆದಿದೆ ಎಂದು ನೀಡಿದ ದೂರಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಝಡ್ ಕೆಟಗರಿ ಭದ್ರತೆ ಬೇಕಿದ್ದರೆ ಕೇಂದ್ರದಿಂದ ಪಡೆದುಕೊಳ್ಳಲಿ. ಆದರೆ ಬುಲೆಟ್ ಎಲ್ಲಿಂದ ಬಂತು, ಎಲ್ಲಿ ಬಿತ್ತು ಎಂಬುದರ ಬಗ್ಗೆ ಮಹಜರ್ ಆಗಲಿ. ಹೊರಗೆ ಬಿದ್ದಿದ್ದ ಬುಲೆಟ್ ತಂದು ತೋರಿಸಿ ತಪ್ಪು ಮಾಹಿತಿ ನೀಡುವ ಅಗತ್ಯವಿಲ್ಲ. ಶಾಸಕರ ಮೇಲೆ ಹಲ್ಲೆಗೆ ಮುಂದಾದ ಬಗ್ಗೆ ಗನ್‌ಮ್ಯಾನ್‌ಗಳೂ ದೂರು ನೀಡಬಹುದು. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕಾನೂನು ಕ್ರಮ ಜರುಗಲಿದೆ,' ಎಂದು ಎಚ್ಚರಿಸಿದರು.
ಕುಮಾರಸ್ವಾಮಿ ಅವರಿಗೆ 'ಮಾತಿನ ಚಟ' ಎಂದ ಡಿಕೆಶಿ
ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಲೇವಡಿ ಮಾಡಿದ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಅವರು ಯಾವ ರೀತಿ ರಿಸರ್ಚ್ ಮಾಡಿದ್ದಾರೋ ಗೊತ್ತಿಲ್ಲ, ಅವರು ತಪ್ಪು ಸಂದೇಶ ನೀಡುತ್ತಿದ್ದಾರೆ. ಸರ್ಕಾರದ ಮೇಲೆ ಗೂಬೆ ಕೂರಿಸುವ ಅವರ ಪ್ರಯತ್ನ ಸರಿಯಲ್ಲ. ಸುಮ್ಮನೆ ಪ್ರೆಸ್ ಮುಂದೆ ಮಾತನಾಡುವುದು ಅವರಿಗೆ ಚಟವಾಗಿಬಿಟ್ಟಿದೆ. ಜನರಿಗೆ ತಪ್ಪು ಮಾಹಿತಿ ನೀಡಿದರೆ ಅವರ ಘನತೆಯೇ ಕಡಿಮೆಯಾಗುತ್ತದೆ ಎಂದು ಟೀಕಿಸಿದರು.
ನಮ್ಮ ಕಾರ್ಯಕರ್ತನಿಗೂ ಬುದ್ಧಿ ಹೇಳಿದ್ದೇನೆ
ಘಟನೆಯ ಸಮಯದಲ್ಲಿ ಶ್ರೀರಾಮುಲು ಅವರು ಕರೆ ಮಾಡಿದ ತಕ್ಷಣ ನಾನು ಎಸ್ಪಿ ಅವರಿಗೆ ಸೂಚನೆ ನೀಡಿ ಗಲಾಟೆ ನಿಯಂತ್ರಿಸಲು ಹೇಳಿದ್ದೆ. ನಮ್ಮ ಕಾರ್ಯಕರ್ತರು ತಪ್ಪು ಮಾಡಿದ್ದರೆ ಅವರನ್ನು ತಿದ್ದುವ ಶಕ್ತಿ ನಮಗಿದೆ. ಈಗಾಗಲೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ರಾಜಶೇಖರ್ ಕುಟುಂಬಕ್ಕೆ ಎಲ್ಲ ರೀತಿಯ ಸಹಾಯ ಮಾಡುತ್ತೇವೆ. ಬಳ್ಳಾರಿಗೆ ಶಾಂತಿ ಬೇಕಿದೆ, ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಮನವಿ ಮಾಡಿದರು.


