ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಳ್ಳಾರಿ ಕೊಲೆ ಪ್ರಕರಣದ ತನಿಖೆ, ಜನಾರ್ದನ ರೆಡ್ಡಿ ಭದ್ರತೆ, ವಾಲ್ಮೀಕಿ ಪ್ರತಿಮೆ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ. ರೆಡ್ಡಿ ಭದ್ರತೆ ಬಗ್ಗೆ ವ್ಯಂಗ್ಯವಾಡಿದ ಅವರು, ಬಳ್ಳಾರಿ ಪ್ರಕರಣದ ತನಿಖೆ ಅಂತಿಮ ತೀರ್ಮಾನ ಸಿಎಂ, ಗೃಹ ಸಚಿವರು ನೋಡ್ಕೊಳ್ತಾರೆ ಎಂದರು.

ಬೆಂಗಳೂರು (ಜ.4): ನರೇಗಾ ಹೋರಾಟದ ಬಗ್ಗೆ ಇವತ್ತು ಮಾತನಾಡುವುದಿಲ್ಲ. ಮುಖ್ಯಮಂತ್ರಿಗಳ ಜೊತೆ ಕೆಲವು ದಿನಾಂಕಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಹೈಕಮಾಂಡ್ ಕೂಡ ಕೆಲವು ಕಾರ್ಯಕ್ರಮಗಳನ್ನು ನೀಡಿದೆ. ಸಿಎಂ ಜೊತೆಗಿನ ಚರ್ಚೆಯ ಬಳಿಕ ನಾಳೆ ಈ ಬಗ್ಗೆ ಅಧಿಕೃತವಾಗಿ ತಿಳಿಸುತ್ತೇನೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.

ನರೇಗಾ ಬಾಕಿ ಅನುದಾನದ ಹೋರಾಟ ಹಾಗೂ ಬಳ್ಳಾರಿಯ ಗಲಾಟೆ ವಿಚಾರವಾಗಿ ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಬಳ್ಳಾರಿ ಹತ್ಯೆ ತನಿಖೆ ಕುರಿತು ಸ್ಪಷ್ಟನೆ

ಬಳ್ಳಾರಿ ಕೊಲೆ ಪ್ರಕರಣವನ್ನು ಸಿಐಡಿ ಅಥವಾ ಎಸ್‌ಐಟಿಗೆ ವಹಿಸುವ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿಗಳು, ಯಾವ ಚರ್ಚೆಯೂ ನನಗೆ ಗೊತ್ತಿಲ್ಲ. ಹೋಂ ಮಿನಿಸ್ಟರ್ ಮತ್ತು ಚೀಫ್ ಮಿನಿಸ್ಟರ್ ಈ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತಾರೆ. ರೇವಣ್ಣ ಅವರು ಬಂದು ಪ್ರಾಥಮಿಕ ಮಾಹಿತಿಯನ್ನು ನನಗೆ ನೀಡಿದ್ದಾರೆ. ಅಧಿಕೃತವಾಗಿ ವರದಿ ಬಂದಿಲ್ಲವಾದರೂ, ಆನ್‌ಆಫಿಶಿಯಲ್ ಆಗಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ಯಾರೇ ತಪ್ಪು ಮಾಡಿದ್ದರೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ವಾಲ್ಮೀಕಿ ಪ್ರತಿಮೆ ವಿವಾದಕ್ಕೆ ತಿರುಗೇಟು

ವಾಲ್ಮೀಕಿ ಪ್ರತಿಮೆ ಸ್ಥಾಪನೆ ವಿಚಾರವಾಗಿ ವ್ಯಕ್ತವಾಗುತ್ತಿರುವ ಅಸೂಯೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ಎಲ್ಲ ಕಡೆ ವಿಗ್ರಹಗಳನ್ನ ಇಡ್ತಾರೆ. ಅವರ ಭಕ್ತಿ ಭಾವನೆ ತೋರಿಸುತ್ತಾರೆ. ಅಸೂಯೆ ಯಾಕೆ ಪಡಬೇಕು? ವಾಲ್ಮೀಕಿ ಮಹರ್ಷಿ ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ, ಅವರು ಎಲ್ಲರ ಆಸ್ತಿ. ಅವರು ಬರೆದ ರಾಮಾಯಣವನ್ನು ನಾವೆಲ್ಲರೂ ಓದುತ್ತೇವೆ. ಭಕ್ತಿಯಿಂದ ವಿಗ್ರಹ ಪ್ರತಿಷ್ಠಾಪಿಸಿದರೆ ಅಸೂಯೆ ಪಡುವ ಅಗತ್ಯವಿಲ್ಲ ಎಂದರು.

ಜನಾರ್ದನ ರೆಡ್ಡಿ ಭದ್ರತೆ ಬಗ್ಗೆ ವ್ಯಂಗ್ಯ

ಜನಾರ್ದನ ರೆಡ್ಡಿಗೆ ಭದ್ರತೆ ಕೋರಿ ಸೋಮಣ್ಣ ಅವರು ಒತ್ತಾಯ ಮತ್ತು ಜನಾರ್ದನ ರೆಡ್ಡಿ ಅಮಿತ್‌ ಶಾಗೆ ಬರೆದಿದ್ದಾರೆನ್ನಲಾದ ಪತ್ರದ ಬಗ್ಗೆ ಲೇವಡಿ ಮಾಡಿದ ಡಿಸಿಎಂ, 'ಅವರು 'Z' ಭದ್ರತೆಯನ್ನಾದರೂ ಕೇಳಲಿ ಅಥವಾ ಇರಾನ್, ಅಮೆರಿಕಾದಿಂದಲಾದರೂ ತರಿಸಿಕೊಳ್ಳಲಿ, ನಮಗೆ ಅಭ್ಯಂತರವಿಲ್ಲ. ಸೋಮಣ್ಣ ಅವರಿಗೆ ಅಷ್ಟು ಕಾಳಜಿ ಇದ್ದರೆ ಅವರ ಪಾರ್ಟಿ ಕಾರ್ಯಕರ್ತರನ್ನೇ ನೂರು ಜನರನ್ನು ರೆಡ್ಡಿ ಭದ್ರತೆಗೆ ನಿಯೋಜಿಸಲಿ ಎಂದು ವ್ಯಂಗ್ಯವಾಡಿದರು.