ಬಾಗಲಕೋಟೆ ಜಿಲ್ಲೆಯ ಜಮಖಂಡಿ ಬಳಿ, ಕಬ್ಬಿನ ರವದಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಈ ದುರ್ಘಟನೆಯಲ್ಲಿ ಟ್ರ್ಯಾಕ್ಟರ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ?

ಬಾಗಲಕೋಟೆ (ಜ.29): ಕಬ್ಬಿನ ರವದಿಯನ್ನು (ಸೊಪ್ಪು) ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್‌ಗೆ ಆಕಸ್ಮಿಕವಾಗಿ ಮೇಲ್ಭಾಗದಲ್ಲಿದ್ದ ವಿದ್ಯುತ್ ತಂತಿ ತಗುಲಿ ನೋಡುನೋಡುತ್ತಿದ್ದಂತೆ ಸುಟ್ಟು ಭಸ್ಮವಾದ ಆಘಾತಕಾರಿ ಘಟನೆ ಕಲಬುರಗಿ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಟಕ್ಕಳಕಿ-ಸಾವಳಗಿ ಗ್ರಾಮಗಳ ಮಧ್ಯೆ ಇಂದು ನಡೆದಿದೆ.

ಬೂದಿಯಾದ ರೈತನ ಆಸ್ತಿ

ಸುಟ್ಟು ಕರಕಲಾದ ಟ್ರ್ಯಾಕ್ಟರ್ ವಸಂತ ಚೌಹಾಣ್ ಎಂಬುವರಿಗೆ ಸೇರಿದ್ದಾಗಿದ್ದು, ಟಕ್ಕಳಕಿಯಿಂದ ಸಾವಳಗಿ ಕಡೆಗೆ ಬರುತ್ತಿತ್ತು. ದುರದೃಷ್ಟವಶಾತ್ ಬೆಂಕಿಯ ತೀವ್ರತೆಗೆ ಟ್ರ್ಯಾಕ್ಟರ್ ಎಂಜಿನ್ ಹಾಗೂ ಟ್ರೇಲರ್ ಎರಡೂ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಬೆಂಕಿಯ ಜ್ವಾಲೆಗೆ ಸಿಲುಕಿ ಸುಮಾರು 8 ರಿಂದ 9 ಲಕ್ಷ ರೂಪಾಯಿಗಳಷ್ಟು ಭಾರಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಸ್ಥಳೀಯರ ವಿಫಲ ಪ್ರಯತ್ನ

ಬೆಂಕಿ ಹೊತ್ತಿಕೊಂಡ ತಕ್ಷಣ ಸ್ಥಳೀಯರು ದಾವಿಸಿ ಬಂದು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ, ಒಣಗಿದ ಕಬ್ಬಿನ ಸೊಪ್ಪು ಇದ್ದಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ಸ್ಥಳೀಯರ ಸತತ ಪ್ರಯತ್ನದ ಹೊರತಾಗಿಯೂ ಅಗ್ನಿ ದೇವನ ಅಟ್ಟಹಾಸದ ಮುಂದೆ ಯಾವುದೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಡೀ ವಾಹನ ಕಣ್ಣೆದುರೇ ಸುಟ್ಟು ಕರಕಲಾಗಿರುವುದನ್ನು ಕಂಡು ರೈತ ಕಣ್ಣೀರು ಹಾಕುವಂತಾಯಿತು. ಈ ಘಟನೆಯು ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.