ಬಾಳೆಹೊನ್ನೂರಿನ ಸರ್ಕಾರಿ ಕಾಲೇಜಿನಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದ ವಿದ್ಯಾರ್ಥಿಯನ್ನು ಹೊರಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾಲೇಜಿನ ಸಮವಸ್ತ್ರ ಸಂಹಿತೆ ಕಾರಣ ನೀಡಿ ಶಾಲು ತೆಗೆಯಲು ಮಾತ್ರ ಹೇಳಿದ್ದಾಗಿ ಪ್ರಾಚಾರ್ಯರು ಸ್ಪಷ್ಟನೆ ನೀಡಿದ್ದು, ವಿದ್ಯಾರ್ಥಿಯ ಆರೋಪವನ್ನು ನಿರಾಕರಿಸಿದ್ದಾರೆ.
ಬಾಳೆಹೊನ್ನೂರು (ನ.21): ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಕಡ್ಲೆಮಕ್ಕಿಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಕಾಲೇಜಿನ ಪ್ರಾಚಾರ್ಯರು ಈ ಆರೋಪವನ್ನು ನಿರಾಕರಿಸಿದ್ದಾರೆ.
ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿಯನ್ನ ಹೊರಹಾಕಿತಾ ಕಾಲೇಜ್?
ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಿವಕುಮಾರ್, ಅಯ್ಯಪ್ಪಸ್ವಾಮಿ ವ್ರತಾಚರಣೆಯ ಮಾಲಾಧಾರಣೆ ಮಾಡಿ ಗುರುವಾರ ಕಾಲೇಜಿಗೆ ಆಗಮಿಸಿದ್ದ. ಪ್ರಾಚಾರ್ಯ ಕೃಷ್ಣಮೂರ್ತಿಯವರು, ‘ನೀನು ಕಾಲೇಜಿಗೆ ಬರುವುದಾದರೆ ಶಾಲು ತೆಗೆದು ತರಗತಿಗೆ ಬಾ. ನಿಮ್ಮಂತಹ ವಿದ್ಯಾರ್ಥಿಗಳೇ ಕಾಲೇಜಿನಲ್ಲಿ ಜಾತಿ, ಧರ್ಮ ಎಂದು ಹುಟ್ಟು ಹಾಕುವುದು ಎಂದು ಗದರಿಸಿದರು. ಅಲ್ಲದೆ, ಹೀಗೆಯೇ ಬಂದರೆ, ನಿನ್ನನ್ನು ಕಾಲೇಜಿನಿಂದ ಡಿಬಾರ್ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿ, ಕಾಲೇಜಿನ ಕಂಪೌಂಡ್ ಒಳಗೆ ಸಹ ನಿಲ್ಲಲು ಅವಕಾಶ ನೀಡದೆ ಹೊರಹಾಕಿದ್ದಾರೆ’ ಎಂದು ವಿದ್ಯಾರ್ಥಿ ಶಿವಕುಮಾರ್ ಆರೋಪಿಸಿದ್ದಾರೆ.
ಕಾಲೇಜಜಿನಲ್ಲಿ ಸಮವಸ್ತ್ರ ಸಂಹಿತೆ:
ಪ್ರಾಚಾರ್ಯ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ‘ಕಾಲೇಜಿನಲ್ಲಿ ಸಮವಸ್ತ್ರದ ಸಂಹಿತೆಯಿದೆ. ಈ ಹಿಂದೆ ಹಿಜಾಬ್ ಮತ್ತು ಕೇಸರಿ ಶಾಲಿನ ಕುರಿತು ಗೊಂದಲ ನಡೆದಿತ್ತು, ಅದಕ್ಕಾಗಿ ನಾನು ಕಾಲೇಜು ವೇಳೆಯಲ್ಲಿ ವಿದ್ಯಾರ್ಥಿಯ ಹೆಗಲ ಮೇಲಿದ್ದ ಕಪ್ಪು ಶಾಲನ್ನು ಮಾತ್ರ ತೆಗೆದು, ಬ್ಯಾಗಿನೊಳಗೆ ಇಡುವಂತೆ ಸೂಚಿಸಿದ್ದೆ. ವಿದ್ಯಾರ್ಥಿಯನ್ನು ತರಗತಿಯಿಂದ ಹೊರ ಹಾಕಿಲ್ಲ ಹಾಗೂ ಅಯ್ಯಪ್ಪಸ್ವಾಮಿ ಮಾಲೆಯನ್ನು ತೆಗೆಯಲು ಸಹ ಹೇಳಿಲ್ಲ. ಆತನ ಆರೋಪ ಸುಳ್ಳು’ ಎಂದಿದ್ದಾರೆ.
‘ವಿಷಯ ತಿಳಿದು, ನನ್ನ ಪರಿಚಯಸ್ಥರು ಕಾಲೇಜು ಆಡಳಿತ ಮಂಡಳಿಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ, ಕಾಲೇಜಿಗೆ ಪೊಲೀಸರು ಬಂದು ಪ್ರಾಚಾರ್ಯರನ್ನು ವಿಚಾರಿಸಿದಾಗ, ಶಾಲನ್ನು ತೆಗೆಯಲು ನಾನು ಹೇಳಿಲ್ಲ. ಸೊಂಟಕ್ಕೆ ಕಟ್ಟಿಕೊಳ್ಳಲು ಹೇಳಿದ್ದೇನೆ ಅಷ್ಟೇ ಎಂದು ವರಸೆ ಬದಲಿಸಿದ್ದಾರೆ. ಬಳಿಕ, ನನ್ನನ್ನು ತರಗತಿಗೆ ಸೇರಿಸಿದ್ದಾರೆ’ ಎಂದು ವಿದ್ಯಾರ್ಥಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾನೆ.


