ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯ ಎಚ್ಚರಿಕೆಯ ನಡುವೆಯೂ, ಸಾವಿರಾರು ಭಕ್ತರು 3800 ಅಡಿ ಎತ್ತರದ ದೇವೀರಮ್ಮನ ಬೆಟ್ಟ ಹತ್ತಲು ಸಜ್ಜು ಸಂಭಾವ್ಯ ಅಪಾಯ ಹಿನ್ನೆಲೆ, ಭಕ್ತರ ಸುರಕ್ಷತೆಗಾಗಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಅಗ್ನಿಶಾಮಕ ಪೊಲೀಸ್ ಇಲಾಖೆ ಸನ್ನದ್ಧ
ಚಿಕ್ಕಮಗಳೂರು (ಅ.18): ಸಾವಿರಾರು ಭಕ್ತರು ಭಾರೀ ಮಳೆಯ ನಡುವೆಯೇ ಸಮುದ್ರ ಮಟ್ಟದಿಂದ 3800 ಅಡಿ ಎತ್ತರದಲ್ಲಿರುವ ದೇವೀರಮ್ಮನ ಬೆಟ್ಟವನ್ನು (ಮುಳ್ಳಯ್ಯನಗಿರಿ ತಪ್ಪಲು) ಹತ್ತಲು ಸಿದ್ಧರಾಗಿದ್ದಾರೆ. ಸಂಜೆಯಿಂದ ಆರಂಭವಾಗಿರುವ ಧಾರಾಕಾರ ಮಳೆ ಮತ್ತು ಮುಂದಿನ 3 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಭಾರೀ ಮಳೆ ಎಚ್ಚರಿಕೆಯಿಂದ ಭಕ್ತರಿಗೆ ಸವಾಲಿನ ಪರಿಸ್ಥಿತಿ ಎದುರಾಗಿದೆ. ಭಾನುವಾರ ಮತ್ತು ಸೋಮವಾರದ 2 ದಿನಗಳಲ್ಲಿ 60-70 ಸಾವಿರಕ್ಕೂ ಹೆಚ್ಚು ಭಕ್ತರು 4-5 ಕಿ.ಮೀ. ದೂರದ ಪಿರಮಿಡ್ ಆಕಾರದ ಬೆಟ್ಟವನ್ನು ಹತ್ತಲಿದ್ದಾರೆ.
ಜಿಲ್ಲಾಡಳಿತದಿಂದ ಸುರಕ್ಷತಾ ಕ್ರಮಗಳು:
ಜಿಲ್ಲಾಡಳಿತವು ಭಕ್ತರಿಗೆ ವೈಯಕ್ತಿಕ ಸುರಕ್ಷತೆಯೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಬೆಟ್ಟ ಹತ್ತುವಂತೆ ಸೂಚಿಸಿದೆ. ಭಾನುವಾರ ಮತ್ತು ಸೋಮವಾರ 10 ರಿಂದ 30 ಮಿ.ಮೀ. ಮಳೆಯ ಎಚ್ಚರಿಕೆ ನೀಡಲಾಗಿದ್ದು, ಭಾರೀ ಮಳೆಯಿಂದ ಗುಡ್ಡ ಜಾರುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಅತ್ಯಂತ ಎಚ್ಚರಿಕೆಯಿಂದ ಬೆಟ್ಟ ಹತ್ತಬೇಕು. ಸರ್ವ ಸನ್ನದ್ಧ ಜಿಲ್ಲಾಡಳಿತ:
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವೀರಮ್ಮನ ದೇಗುಲಕ್ಕೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಮತ್ತು ಆಡಳಿತ ಮಂಡಳಿಯು ವಿಶೇಷ ಕಾರ್ಯಸೂಚಿ ಬಿಡುಗಡೆ ಮಾಡಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯು ಸಂಪೂರ್ಣ ಸನ್ನದ್ಧವಾಗಿದ್ದು, ಭಕ್ತರ ಸುರಕ್ಷತೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಎಚ್ಚರಿಕೆ:
ಮಳೆಯ ಪ್ರಮಾಣ ಹೆಚ್ಚಾದರೆ ಬೆಟ್ಟದಲ್ಲಿ ಜಾರುವ ಸಾಧ್ಯತೆ ಇರುವುದರಿಂದ ಭಕ್ತರು ಅತ್ಯಂತ ಜಾಗರೂಕರಾಗಿರಬೇಕು. ಈ ಬಾರಿ ಜಿಲ್ಲಾಡಳಿತವು ಎರಡು ದಿನಗಳ ಕಾಲ ಬೆಟ್ಟ ಹತ್ತಲು ಅವಕಾಶ ಕಲ್ಪಿಸಿದ್ದು, ಭಕ್ತರು ಸುರಕ್ಷಿತವಾಗಿ ದರ್ಶನ ಪಡೆಯಲು ಸಹಕರಿಸುವಂತೆ ಕೋರಿದೆ
