ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್, ದಕ್ಷಿಣ ಭಾರತವು ಬಿಜೆಪಿ ಮುಕ್ತವಾಗುತ್ತಿದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.

ದಕ್ಷಿಣದಲ್ಲಿ ಬಿಜೆಪಿಗೆ ಜಾಗವಿಲ್ಲ: ಬಿಕೆ ಹರಿಪ್ರಸಾದ್

ಬೆಂಗಳೂರು (ಮೇ.4): ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಮಹತ್ವದ ಹೇಳಿಕೆ ನೀಡಿದ್ದಾರೆ. 'ಸಮಗ್ರವಾಗಿ ಈ ಚುನಾವಣೆಗಳನ್ನು ನೋಡಿದಾಗ ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಪೂರ್ಣವಾಗಿ ಮುಕ್ತವಾಗುತ್ತಿದೆ ಎಂಬ ಸ್ಪಷ್ಟ ಸಂದೇಶ ಸಿಕ್ಕಿದೆ. ಇಲ್ಲಿನ ಜನರು ಬಹಳ ಸೂಕ್ಷ್ಮವಂತರು, ಬಿಜೆಪಿಯವರು ಇಲ್ಲಿ ಬಾಲ ಬಿಚ್ಚಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

Add Asianetnews Kannada as a Preferred SourcegooglePreferred

ಬಂಗಾಳದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಬಿಕೆ ಹರಿಪ್ರಸಾದ್ ಗಂಭೀರ ಆರೋಪ

ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಸರ್ಕಾರಿ ಯಂತ್ರ ಹಾಗೂ ಸಾಂವಿಧಾನಿಕ ಹುದ್ದೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ. ಪ.ಬಂಗಾಳದಲ್ಲಿ ಪೊಲೀಸ್ ಮತ್ತು ಮಿಲಿಟರಿ ಬಳಸಿಕೊಂಡು ಸುಮಾರು 93 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ನಮ್ಮ ಅಭ್ಯರ್ಥಿಗಳ ಮತಗಳನ್ನೇ ಲಿಸ್ಟ್‌ನಿಂದ ತೆಗೆದಿದ್ದಾರೆ. ಇಷ್ಟೊಂದು ಮತಗಳು ಹೋದರೆ ಪ್ರಜಾಪ್ರಭುತ್ವ ಎಲ್ಲಿ ಉಳಿಯುತ್ತದೆ? ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕು ಅಂದರೆ ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದರು.

ತಮಿಳುನಾಡಿನಲ್ಲಿ ವಿಜಯ್ 'ಟಿವಿಕೆ' ಅಲೆ, ಇದು ಜೆನ್-ಝೀ ಪವರ್

ತಮಿಳುನಾಡು ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ತಮಿಳುನಾಡಿನ ಜನರು ಪ್ರಬುದ್ಧರಾಗಿದ್ದಾರೆ. ಅಲ್ಲಿ ಕೋಮುವಾದ ಮತ್ತು ಹಿಂದಿ ಹೇರಿಕೆ ನಡೆಯುವುದಿಲ್ಲ ಎಂದು ಸರಿಯಾದ ಪಾಠ ಕಲಿಸಿದ್ದಾರೆ. ನಟ ವಿಜಯ್ ಅವರ ಟಿವಿಕೆ (TVK) ಪಕ್ಷಕ್ಕೆ ಶೇ. 24 ರಿಂದ 30 ರಷ್ಟು ವೋಟ್ ಶೇರ್ ಸಿಕ್ಕಿದೆ. ಅಲ್ಲಿ ಜೆನ್-ಝೀ (Gen Z) ಮತದಾರರು ಸಾಕಷ್ಟು ಕೆಲಸ ಮಾಡಿದ್ದಾರೆ. ತಮಿಳುನಾಡಿನಲ್ಲಿ ಯಾವುದಾದ್ರೂ ಪಕ್ಷ ಉಳಿದಿದೆ ಅಂದರೆ ಅದು ಕಾಂಗ್ರೆಸ್ ಮಾತ್ರ. ಇದನ್ನ ಯಾರೂ ಅಂಡರ್ ಎಸ್ಟಿಮೇಟ್ ಮಾಡಲಿಲ್ಲ. 24-30 ಪರ್ಸೆಂಟ್ ವೋಟ್ ಟಿವಿಕೆದು ಇತ್ತು. ಸಾಂವಿಧಾನಿಕವಾಗಿ ಹೋಗಿದ್ದರೆ ಬೇರೆ ಪಕ್ಷಗಳಿಗೆ ಹೀಗೆ ಆಗ್ತಾ ಇರಲಿಲ್ಲ. ಕವಡೆ ಶಾಸ್ತ್ರಕ್ಕೆ ಹೋಗಿದ್ದಕ್ಕೆ ಹೀಗಾಯ್ತು ಅಷ್ಟೆ ಎಂದು ಅಭಿಪ್ರಾಯಪಟ್ಟರು.

ಪುದುಚೇರಿಯಲ್ಲಿ ರಂಗಸ್ವಾಮಿ ವರ್ಚಸ್ಸು; ಬಿಜೆಪಿ ಅಲೆಯಲ್ಲ!

ಪುದುಚೇರಿಯಲ್ಲಿ ಬಿಜೆಪಿ ಜಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಅಲ್ಲಿ ಜಯ ಸಿಕ್ಕಿರುವುದು ರಂಗಸ್ವಾಮಿ ಅವರ ಪ್ರಭಾವದಿಂದಲೇ ಹೊರತು ಬಿಜೆಪಿಯ ಕಾರಣಕ್ಕಲ್ಲ.ರಂಗಸ್ವಾಮಿ ವರ್ಚಸು ಬಳಸಿ ಗೆದ್ದಿರುವ ಬಿಜೆಪಿ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.

ರಾಜ್ಯ ರಾಜಕೀಯದ ಬಗ್ಗೆ ಹರಿಪ್ರಸಾದ್ ಮೌನ

ರಾಜ್ಯ ರಾಜಕೀಯದ ಮೇಲೆ ಈ ಫಲಿತಾಂಶದ ಪ್ರಭಾವದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಹರಿಪ್ರಸಾದ್ ನಿರಾಕರಿಸಿದರು. 'ಎಐಸಿಸಿ ಅಧ್ಯಕ್ಷರು ಮಾತನಾಡಿದ ಮೇಲೆ ನಾನು ಏನೂ ಹೇಳಬಾರದು. ಹಾಗೇನಾದರೂ ಮಾತನಾಡಿದರೆ ಅದು ಪಕ್ಷ ವಿರೋಧ ಚಟುವಟಿಕೆಯಾಗುತ್ತದೆ. ಈಗ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ಈ ಕವಡೆ ಶಾಸ್ತ್ರ, ಗಿಳಿ ಶಾಸ್ತ್ರಗಳನ್ನೆಲ್ಲಾ ಬಿಟ್ಟು ಹೈಕಮಾಂಡ್ ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತೆ ಅಂತ ಕಾದು ನೋಡಬೇಕು ಅಷ್ಟೇ ಎಂದು ಮಾರ್ಮಿಕವಾಗಿ ನುಡಿದರು.

YouTube video player