ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ನಡೆ ಹಾಗೂ ತಮಿಳುನಾಡಿನಲ್ಲಿ ಡಿಎಂಕೆ ಹಿನ್ನಡೆಯ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದರು.

ಬೆಂಗಳೂರು (ಮೇ.4): ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೀಡಿಂಗ್ ಕಡಿಮೆ ಇದೆ ಎಂಬ ಬಗ್ಗೆ ಇಷ್ಟು ಬೇಗ ನಿರ್ಧಾರಕ್ಕೆ ಬರುವುದು ಸಮಂಜಸವಲ್ಲ. ಅಭ್ಯರ್ಥಿ ಸಮರ್ಥ್ ಈಗ ಮುನ್ನಡೆಯಲ್ಲಿದ್ದಾರೆ, ಕೊನೆಯವರೆಗೂ ಕಾದು ನೋಡಬೇಕು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಹೇಳಿದರು.

Add Asianetnews Kannada as a Preferred SourcegooglePreferred

ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ

ದಾವಣಗೆರೆ ಬಾಗಲಕೋಟೆ ಉಪಚುನಾವಣಾ ಫಲಿತಾಂಶಗಳ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಮಗೆ ಬಂದಿರುವ ಮಾಹಿತಿಯ ಪ್ರಕಾರ ಎರಡು ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ ಎಂಬ ಭರವಸೆ ನನಗಿದೆ. ನಮ್ಮ ಸರ್ಕಾರದ ಉತ್ತಮ ಕಾರ್ಯಕ್ರಮಗಳು ಕೈ ಹಿಡಿಯಲಿವೆ. ಫಲಿತಾಂಶದ ಕೊನೆಯ ಹಂತದವರೆಗೆ ಕಾಯುವುದು ಸೂಕ್ತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳ: ಬಿಜೆಪಿ ನಡೆಯ ಬಗ್ಗೆ ಗೃಹಸಚಿವ ಗರಂ

ಪಶ್ಚಿಮ ಬಂಗಾಳದ ಫಲಿತಾಂಶದ ಕುರಿತು ಮಾತನಾಡಿದ ಅವರು, ಅಲ್ಲಿ ಬಿಜೆಪಿ ಕಾರ್ಯಕರ್ತರು ಹೇಗೆ ನಡೆದುಕೊಂಡಿದ್ದಾರೆ ಎಂಬುದು ಗೊತ್ತಿದೆ. ಮಮತಾ ಬ್ಯಾನರ್ಜಿ ಅವರು ಮಾಡಿದ್ದ 96 ಲಕ್ಷಕ್ಕೂ ಅಧಿಕ ಮತಗಳನ್ನು ಡಿಲೀಟ್ ಮಾಡಲಾಗಿದೆ ಎಂಬ ಆರೋಪ ಗಂಭೀರವಾದದ್ದು. ಒಂದು ವೇಳೆ ಇದು ನಿಜವಾಗಿದ್ದರೆ ಅಲ್ಲಿ ಕಾನೂನು ಎಷ್ಟರ ಮಟ್ಟಿಗೆ ಪಾಲನೆಯಾಗಿದೆ ಎಂಬುದನ್ನು ನೋಡಬೇಕು ಎಂದು ಅವರು ಪ್ರಶ್ನಿಸಿದರು.

ತಮಿಳುನಾಡಿನಲ್ಲಿ ಡಿಎಂಕೆ ಹಿನ್ನಡೆ ಆಶ್ಚರ್ಯ ತಂದಿದೆ

ತಮಿಳುನಾಡಿನ ರಾಜಕೀಯ ಚಿತ್ರಣದ ಬಗ್ಗೆ ಮಾತನಾಡುತ್ತಾ, ಡಿಎಂಕೆ ಪಕ್ಷಕ್ಕೆ ಅಲ್ಲಿ ಹಿನ್ನಡೆಯಾಗಿರುವುದು ನನಗೂ ಆಶ್ಚರ್ಯ ತಂದಿದೆ ಎಂದರು. ನಟ ವಿಜಯ್ ಅವರ ಸಿನಿಮಾ ಅಲೆ ಮತಗಳಾಗಿ ಬದಲಾಗುತ್ತವೆಯೇ ಎಂಬ ಚರ್ಚೆ ಇತ್ತು, ಈಗ ಅದು ನಿಜವಾದಂತೆ ಕಾಣುತ್ತಿದೆ. ವಿಜಯ್ ಅವರಿಗೆ ಉತ್ತಮ ಮುನ್ನಡೆ ಸಿಗುತ್ತಿದೆ ಎಂದು ಪರಮೇಶ್ವರ್ ಹೇಳಿದರು.

ಪುದುಚೇರಿಯಲ್ಲಿ ಬಿಜೆಪಿಗೆ ಜಯ

ಪುದುಚೇರಿ ಸಣ್ಣ ರಾಜ್ಯ ಬಿಜೆಪಿ ಗೆಲ್ಲುತ್ತದೆ ಅಂತಿದ್ದರು ಅದೇ ಥರ ಆಗಿದೆ. ಅದರಂತೆಯೇ ಅಲ್ಲಿ ಫಲಿತಾಂಶ ಬರುತ್ತಿದೆ. ಆದರೆ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಹೊರಟಿರುವುದು ಕಾನೂನಾತ್ಮಕವಾಗಿ ಎಷ್ಟರ ಮಟ್ಟಿಗೆ ಸರಿ ಎಂದು ನೋಡಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.