ನೇರ, ದಿಟ್ಟ, ನಿರಂತರ ಧ್ಯೇಯದೊಂದಿಗೆ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದ ಸುದ್ದಿವಾಹಿನಿ, ಮಾಧ್ಯಮ ಲೋಕದ ಕ್ರಾಂತಿಕಾರ, ಹೊಸತನದ ಹರಿಕಾರ, ಬಿಗ್‌3, ಸೇವ್‌ ವೈಲ್ಡ್‌ಲೈಫ್‌, 7 ವಂಡರ್ಸ್‌ ಆಫ್‌ ಕರ್ನಾಟಕ ಜತೆಗೆ ರೈತರು, ಮಹಿಳೆಯರು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಸಾಮಾಜಿಕ ಬದ್ಧತೆ. 

ಬೆಂಗಳೂರು(ಮಾ.31): 2008, ಮಾರ್ಚ್‌ 31. ಕನ್ನಡ ವಿದ್ಯುನ್ಮಾನ ಲೋಕದಲ್ಲಿ ಭರವಸೆಯ ಪತ್ರಿಕೋದ್ಯಮ ಜನ್ಮತಾಳಿದ ದಿನ. ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಕನ್ನಡ ಟೆಲಿವಿಷನ್‌ ಲೋಕದ ಭಾಷ್ಯವನ್ನೇ ಬದಲಿಸಿದ ವಾಹಿನಿ. ಟೀವಿ ಮಾಧ್ಯಮಕ್ಕೆ ಅಂಬೆಗಾಲಿಟ್ಟು ಬಂದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಈ 15 ವರ್ಷಗಳಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ನಿಷ್ಪಕ್ಷಪಾತ ವರದಿ, ದಿಟ್ಟ ವರದಿಗಾರಿಕೆಯಿಂದ ಸುವರ್ಣ ನ್ಯೂಸ್‌ ವಾಹಿನಿ ಟೀವಿ ಮಾಧ್ಯಮದಲ್ಲಿ ಗಟ್ಟಿಯಾಗಿ ಬೇರೂರಿದೆ. ಈ 15 ವರ್ಷಗಳಲ್ಲಿ 9 ಸಂಪಾದಕರು ಸುವರ್ಣ ನ್ಯೂಸ್‌ ಚಾನಲ್‌ ಸಾರಥ್ಯ ವಹಿಸಿದ್ದರು.

ಪ್ರತಿ ಐದು ನಿಮಿಷದ ನ್ಯೂಸ್‌, ದಿನಕ್ಕೆ ಮೂರು ಬಾರಿ ಅರ್ಧ ತಾಸಿನ ನ್ಯೂಸ್‌ ಜತೆಗೆ ಭರಪೂರ ಮನರಂಜನೆ ನೀಡುವ ಚಾನಲ್‌ ಆಗಿ ಆರಂಭವಾದ ಸುವರ್ಣ ನ್ಯೂಸ್‌, ಬಳಿಕ 24/7 ನ್ಯೂಸ್‌ ಚಾನಲ್‌ ಆಗಿ ಬದಲಾಗಿದ್ದು ಇತಿಹಾಸ.
ಕಳೆದ 15 ವರ್ಷದಲ್ಲಿ ಸುವರ್ಣ ನ್ಯೂಸ್‌ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದೆ. ಮಾಧ್ಯಮ ಲೋಕದಲ್ಲಿ ಕ್ರಾಂತಿಯನ್ನೇ ಮಾಡಿದೆ. ಹೊಸತನಗಳ ಹರಿಕಾರ ಎನಿಸಿಕೊಂಡಿದೆ. ದಿಟ್ಟತನಕ್ಕೆ ಎದೆಯೊಡ್ಡಿ, ತೊಡೆತಟ್ಟಿದೆ. ಸತ್ಯ ಹೇಳುವ ಹಾದಿಯಲ್ಲಿ ಎಷ್ಟುಜನರನ್ನು ಎದುರು ಹಾಕಿಕೊಂಡಿದೆಯೋ? ಆ ಧೈರ್ಯ ತುಂಬಿದ್ದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವೀಕ್ಷಕರ ಅಭಿಮಾನ, ಪ್ರೀತಿ. ಈ ಅಭಿಮಾನ ಗಳಿಸುವುದಕ್ಕೆ ಮೊದಲು ನಂಬಿಕೆ ಗಳಿಸಬೇಕು. ಆ ನಂಬಿಕೆ ಗಳಿಸುವ ಹಾದಿಯಲ್ಲಿ ಸುವರ್ಣ ನ್ಯೂಸ್‌ನದ್ದು ರಾಜಿ ಇಲ್ಲದ ಪತ್ರಿಕೋದ್ಯಮ. ರಾಜಕೀಯ ವರದಿಗಾರಿಕೆಯಲ್ಲಿ ನಂಬಲರ್ಹ ಏಕೈಕ ಚಾನಲ್‌. ಸಾಮಾಜಿಕ ಕಳಕಳಿ, ನೇರ, ದಿಟ್ಟವರದಿಗಾರಿಕೆಗೆ ಹೆಸರುವಾಸಿ.

Raita Ratna Award: ಗಾಳಿ, ನೀರಿನಷ್ಟೇ ರೈತರು ಅವಶ್ಯ: ರವಿ ಹೆಗಡೆ

ಈ ಹಾದಿಯಲ್ಲಿ ಸುವರ್ಣ ನ್ಯೂಸ್‌ನ ಕೆಲವು ಪ್ರಮುಖ ಬ್ರೇಕಿಂಗ್‌ ನ್ಯೂಸ್‌ಗಳ ಸಣ್ಣ ಪರಿಚಯ ಇಲ್ಲಿದೆ.

ನಿತ್ಯಾನಂದನ ಬೆನ್ನಟ್ಟಿದ್ದ ಸುವರ್ಣ ನ್ಯೂಸ್‌: ಈಗ ದೇಶಭ್ರಷ್ಟನಾಗಿರುವ ನಿತ್ಯಾನಂದನ ಕರಾಳ ಮುಖವನ್ನು ಜಗತ್ತಿಗೆ ತೋರಿಸಿದ್ದೇ ಸುವರ್ಣ ನ್ಯೂಸ್‌. ಪವಿತ್ರವಾದ ಕಾವಿ ತೊಟ್ಟು ಖದೀಮ ಕೆಲಸ ಮಾಡುತ್ತಿದ್ದವನನ್ನು ಎಕ್ಸ್‌ಪೋಸ್‌ ಮಾಡಿದ್ದೇ ಸುವರ್ಣ ನ್ಯೂಸ್‌.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಸಾಕ್ಷಿ ಸಮೇತ ಬಿಚ್ಚಿಟ್ಟಿದ್ದು ಸುವರ್ಣ ನ್ಯೂಸ್‌ ಕವರ್‌ ಸ್ಟೋರಿ. ಪರಿಣಾಮ ಇಡೀ ಇಲಾಖೆಯೇ ಒಂದು ರೀತಿಯಲ್ಲಿ ಶುದ್ಧೀಕರಣವಾಯ್ತು. ಲೋಕಾಯುಕ್ತ ಸರಣಿ ವರದಿಗಳು: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಇದು. ಭ್ರಷ್ಟಾಚಾರಿಗಳನ್ನು ಬೇಟೆಯಾಡಬೇಕಿದ್ದ ಬೇಟೆಗಾರರೇ ದಾರಿ ತಪ್ಪಿದ್ದನ್ನು ಸರಣಿ ವರದಿಗಳ ಮೂಲಕ ಬಹಿರಂಗಪಡಿಸಿತ್ತು ಸುವರ್ಣ ನ್ಯೂಸ್‌.

ಬೇಲೇಕೇರಿ ಬಂದರಿಗೇ ನುಗ್ಗಿತ್ತು ಸುವರ್ಣ ನ್ಯೂಸ್‌: ಸೀಝ್‌ ಮಾಡಿದ್ದ ಅದಿರನ್ನೂ ಕದ್ದು ಸಾಗಿಸುತ್ತಿದ್ದ ಖದೀಮರನ್ನು ಬೇಲೇಕೇರಿ ಬಂದರಿಗೇ ನುಗ್ಗಿ ಹೆಡೆಮುರಿ ಕಟ್ಟಿದ ಹೆಮ್ಮೆ ನಮ್ಮದು.

ಬೆಟ್ಟಿಂಗ್‌ ಖದೀಮರ ಬೇಟೆ: ಹುಬ್ಬಳ್ಳಿಯನ್ನೇ ಸೆಂಟರ್‌ ಮಾಡಿಕೊಂಡು, ಪೊಲೀಸ್‌ ವ್ಯವಸ್ಥೆಯೊಳಗೇ ನುಗ್ಗಿ ನಡೆಯುತ್ತಿದ್ದ ಬೆಟ್ಟಿಂಗ್‌ ದಂಧೆಯ ಖದೀಮರನ್ನು ಬೇಟೆಯಾಡಿ ಬಂದಿದ್ದು ನಮ್ಮ ತಂಡ.

ಧರ್ಮಸ್ಥಳ ಸೌಜನ್ಯ ಕೇಸ್‌ ಸತ್ಯದ ಅನಾವರಣ: ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಸೌಜನ್ಯ ಕೇಸ್‌ ಇಂಚಿಂಚೂ ತನಿಖೆ ಮಾಡಿ ನಿಜವನ್ನು ಜಗತ್ತಿಗೆ ತೋರಿಸಿದ್ದು ನಮ್ಮ ಶಕ್ತಿ. ಕೊನೆಗೆ ಸಿಬಿಐ ವರದಿಯಲ್ಲೂ ಅದೇ ಫಲಿತಾಂಶ ಎನ್ನುವುದೇ ನಮ್ಮ ತನಿಖಾ ವರದಿಗಾರಿಕೆಯ ಹೆಮ್ಮೆ.

ಕನ್ನಂಬಾಡಿ ರಕ್ಷಿಸಿದ ಹೆಮ್ಮೆ ನಮ್ಮದು: ಕೆಆರ್‌ಎಸ್‌ ಡ್ಯಾಂ ಸುತ್ತಮುತ್ತ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಿದ್ದು ನಮ್ಮ ವರದಿಯ ಸಾಧನೆ.

ಗೋವು ಕಳ್ಳಸಾಗಣೆದಾರರ ವಿರುದ್ಧ ಸಮರ: ಕಳ್ಳತನದಲ್ಲಿ ಗೋವುಗಳನ್ನು ಕದ್ದು ಸಾಗಿಸುವವರ ಜಾಲವನ್ನು ಭೇದಿಸಿದ್ದು ನಮ್ಮ ಕವರ್‌ ಸ್ಟೋರಿ ತಂಡದ ಹೆಮ್ಮೆ.
ಇದೆಲ್ಲದರ ಜತೆ ಸಾಮಾಜಿಕ ಕಳಕಳಿಯಲ್ಲಿ ಸುವರ್ಣ ನ್ಯೂಸ್‌ ಬದ್ಧತೆ ಪ್ರಶ್ನಾರ್ಹ.

ಬೆಳಗಾವಿಯಲ್ಲಿ ಕೈ ಕಳೆದುಕೊಂಡಿದ್ದ ಪುಟ್ಟಬಾಲಕ ಕಿರಣ್‌ಗೆ ಕೃತಕ ಕೈಜೋಡಿಸಿದ್ದು, ತುಮಕೂರಿನ ಶೆಟ್ಟಿಹಳ್ಳಿಯಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಟೊಂಕ ಕಟ್ಟಿನಿಂತಿದ್ದು, ಉಡುಪಿಯ ಅನಾಥ ಅಂಗವಿಕಲ ಅಣ್ಣ-ತಂಗಿಯರ ಕುಟುಂಬಕ್ಕೆ ಆಸರೆ ನೀಡಿದ್ದು.. ಹೀಗೆ ಹೃದಯ ಮಿಡಿಯುವ ಕಥೆಗಳು ನೂರಾರಿವೆ.

ರಾಜ್ಯದ ನೆರೆ ಪರಿಹಾರ, ಜನರ ಕಷ್ಟಕಾರ್ಪಣ್ಯಗಳಿಗೆ ದನಿಯಾಗಿ, ಸದಾ ಮುನ್ನುಗ್ಗಿ ನಿಲ್ಲುವುದು ಸುವರ್ಣ ನ್ಯೂಸ್‌.

ಇಡೀ ರಾಜ್ಯ ಮರೆಯಲಾಗದ ಮಡಿಕೇರಿ ಪ್ರವಾಹ, ಉತ್ತರ ಕರ್ನಾಟಕ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಾಗುವ ಮೂಲಕ ಸುವರ್ಣ ನ್ಯೂಸ್‌ ಸಾರ್ಥಕತೆ ಮೆರೆಯಿತು.
ಇಂತಹ ಕೆಲಸಗಳಿಂದಲೇ ನಮಗೆ ಕೋಟ್ಯಂತರ ಪ್ರೀತಿಯ ಹೃದಯಗಳು ಸಿಕ್ಕಿದ್ದು. ನಂಬಿಕೆ ನಮ್ಮ ಸಂಪಾದನೆ. ಆ ನಂಬಿಕೆ ಎಷ್ಟರಮಟ್ಟಿಗೆ ಎಂದರೆ ಕಳ್ಳನೊಬ್ಬ ಬದಲಾಗಬೇಕು ಎಂದುಕೊಂಡಾಗ, ತಾನು ಕದ್ದ ಮಾಂಗಲ್ಯ ಸರವನ್ನು ಸಂಬಂಧಿಸಿದವರಿಗೆ ತಲುಪಿಸಬೇಕು ಎಂದುಕೊಂಡಾಗ ಆತನಿಗೆ ನೆನಪಾಗಿದ್ದು ಏಷ್ಯಾನೆಟ್‌ ಸುವರ್ಣ ನ್ಯೂಸ್‌.

ಸುವರ್ಣ ನ್ಯೂಸ್‌ ತನ್ನ ಜನಪ್ರಿಯ ಬಿಗ್‌3 ಕಾರ್ಯಕ್ರಮದ ಮೂಲಕ ಬಡವರು, ಸೌಲಭ್ಯ ವಂಚಿತರ ಪರ ಗಟ್ಟಿಯಾಗಿ ನಿಲ್ಲುವ ಮೂಲಕ, ಸರ್ಕಾರಿ ವ್ಯವಸ್ಥೆಗೆ ಚಾಟಿ ಬೀಸುವ ನಿರಂತರ ಕೆಲಸ ಮಾಡುತ್ತಿದೆ.
ಇದರ ಜತೆಗೆ ಸಾಮಾಜಿಕ ಕಳಕಳಿಯನ್ನೂ ಮೆರೆಯುತ್ತಿರುವ ಸುವರ್ಣ ನ್ಯೂಸ್‌, ವನ್ಯಜೀವಿ ಸಂರಕ್ಷಣೆಗಾಗಿ ಸೇವ್‌ ವೈಲ್ಡ್‌ಲೈಫ್‌ ಅಭಿಯಾನ, ರಾಜ್ಯದ ಪಾರಂಪರಿಕ ಕ್ಷೇತ್ರಗಳನ್ನು ಗುರುತಿಸಿ ಸಂರಕ್ಷಿಸುವ 7 ವಂಡರ್ಸ್‌ ಅಭಿಯಾನದ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದೆ.

Raita Ratna Award: ಇವರೇ ಕರುನಾಡಿನ ಅಪೂರ್ವ ಕೃಷಿ ಸಾಧಕರು..!

ಈ ಎಲ್ಲದರ ಜತೆಗೆ ನಾಡಿನ ಪ್ರತಿಭಾವಂತ ರೈತರು, ಉದ್ಯಮಿಗಳು, ಮಹಿಳಾ ಸಾಧಕಿಯರನ್ನು ಗುರುತಿಸಿ ಬೆನ್ನು ತಟ್ಟುವಂಥ ಕೆಲಸವನ್ನೂ ಸುವರ್ಣ ನ್ಯೂಸ್‌ ಮಾಡುತ್ತಲೇ ಬರುತ್ತಿದೆ..

ಬ್ರೇಕಿಂಗ್‌ ನ್ಯೂಸ್‌ ಅಂದ್ರೆ ಸುವರ್ಣ ನ್ಯೂಸ್‌. ಎಕ್ಸ್‌ಕ್ಲೂಸಿವ್‌ ಅಂದ್ರೆ ಸುವರ್ಣ ನ್ಯೂಸ್‌. ನ್ಯೂಸ್‌ ಕೊಡುವುದಷ್ಟೇ ನಮ್ಮ ಕೆಲಸ ಅಲ್ಲ. ಕರ್ತವ್ಯವನ್ನೂ ಮರೆಯಬಾರದು. ಆ ಕರ್ತವ್ಯದ ಹಾದಿಯಲ್ಲಿ ನಮ್ಮದು ಬೇರೆಯದೇ ಹೆಜ್ಜೆ.
ಸುವರ್ಣ ನ್ಯೂಸ್‌ ಎಂದರೆ ನೇರ... ದಿಟ್ಟ... ನಿರಂತರ... ಮತ್ತು ಗಟ್ಟಿಯಾದ ನಂಬಿಕೆ. ಈ ನಂಬಿಕೆ ಶಾಶ್ವತವಾಗಿರಲಿ.