Asianet Suvarna News Asianet Suvarna News

Raita Ratna Award: ಇವರೇ ಕರುನಾಡಿನ ಅಪೂರ್ವ ಕೃಷಿ ಸಾಧಕರು..!

ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣನ್ಯೂಸ್‌ ನೀಡುವ 3ನೇ ಆವೃತ್ತಿಯ ರೈತ ರತ್ನ ಪ್ರಶಸ್ತಿ ಪುರಸ್ಕೃತರ ಪರಿಚಯ

Outstanding Agricultural Achievers of Karnataka Got Raita Ratna Award grg
Author
First Published Mar 18, 2023, 9:31 AM IST

ಬೆಂಗಳೂರು(ಮಾ.18): ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸುದ್ದಿವಾಹಿನಿ ಜಂಟಿಯಾಗಿ ಸ್ಥಾಪಿಸಿರುವ ‘ರೈತ ರತ್ನ’ ಪ್ರಶಸ್ತಿಯ ಮೂರನೇ ಆವೃತ್ತಿಯಲ್ಲಿ 11 ವಿಭಾಗಗಳ ಅಡಿ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿತ್ತು. ಸುಸ್ಥಿರ ಕೃಷಿ, ಸಾವಯವ ಕೃಷಿ, ಆಧುನಿಕ ಕೃಷಿ, ಯುವ ರೈತ, ರೈತ ಮಹಿಳೆ, ಪಶು ಸಂಗೋಪನೆ, ತೋಟಗಾರಿಕೆ, ಬೆಳೆ ವೈದ್ಯ ಅಥವಾ ರೈತ ವಿಜ್ಞಾನಿ, ಕೃಷ್ಯುತ್ಪನ್ನ ಸಂಸ್ಥೆ ಅಥವಾ ವ್ಯಕ್ತಿ, ಕೃಷಿ ಸಂಶೋಧಕ ಅಥವಾ ತಂತ್ರಜ್ಞಾನಿ ಹಾಗೂ ಸುವರ್ಣ ಕೃಷಿ ಶಾಲೆ ಎಂಬ ವಿಭಾಗಗಳ ಅಡಿ ನಾಮನಿರ್ದೇಶನಗಳನ್ನು ಕಳುಹಿಸುವಂತೆ ಕೋರಲಾಗಿತ್ತು. ಸುಮಾರು ಒಂದು ತಿಂಗಳ ಕಾಲಾವಧಿಯಲ್ಲಿ 600ಕ್ಕೂ ಹೆಚ್ಚು ನಾಮನಿರ್ದೇಶನಗಳು ಹರಿದು ಬಂದಿದ್ದವು. 
ಇವುಗಳನ್ನು ಸಂಸ್ಥೆಯ ಆಂತರಿಕ ಸಮಿತಿ ಎರಡು ಹಂತಗಳಲ್ಲಿ ಪರಿಶೀಲಿಸಿ ಅತ್ಯುತ್ತಮ ಎನಿಸಿದ 57 ಸಾಧಕರನ್ನು ಆರಿಸಿ ಅವರ ವಿವರವನ್ನು ತೀರ್ಪುಗಾರರ ಮುಂದಿರಿಸಿತ್ತು. ತೀರ್ಪುಗಾರರಾಗಿದ್ದ ಶಿವಾನಂದ ಕಳವೆ, ಕೃಷ್ಣ ಪ್ರಸಾದ್‌, ಡಾ. ಕೆ.ಎನ್‌.ಗಣೇಶಯ್ಯ, ಎಸ್‌.ಎ.ವಾಸುದೇವಮೂರ್ತಿ, ಡಾ. ಕೆ.ಆರ್‌.ಹುಲ್ಲುನಾಚೆಗೌಡ ಅವರು ಪ್ರತಿಯೊಬ್ಬ ಸಾಧಕರನ್ನು ಅಳೆದು ತೂಗಿ ಅಂತಿಮವಾಗಿ 11 ವಿಭಾಗಗಳಲ್ಲಿ 12 ಮಂದಿ/ಸಂಸ್ಥೆಗಳನ್ನು ರೈತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಅವರ ವಿವರ ಇಲ್ಲಿದೆ.

ಸುಸ್ಥಿರ ರೈತ: ಹಣಮಂತಪ್ಪ ಬೆಳಗುಂಪಿ - ಹಸರಗುಂಡಿ, ಅಫ್ಜಲ್‌ಪುರ, ಕಲಬುರಗಿ

ವಯಸ್ಸು 58. ಎಂಎಸ್‌ಡಬ್ಲ್ಯೂ ಪದವೀಧರ. 21.34 ಎಕರೆ ಜಮೀನಿನಲ್ಲಿ 14 ಎಕರೆ ಒಣ ಬೇಸಾಯ, 6.34 ಎಕರೆ ನೀರಾವರಿ ಬೇಸಾಯ. ಸಾವಯವ ಕೃಷಿಗೆ ಹೆಸರಾಗಿದ್ದಾರೆ. ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ, ಪಂಚಗವ್ಯ, ಜೀವಾಮೃತ ಮುಂತಾದ ಸಾವಯವ ಗೊಬ್ಬರ ಬಳಸುತ್ತಾರೆ. 100 ಮಾವಿನ ಮರ, 100 ಚಿಕ್ಕು, 100 ತೆಂಗು, 500 ಪೇರಲೆ, 50 ಸೀತಾಫಲ, 15 ನೇರಳೆ, 100 ನಿಂಬೆ ಸೇರಿದಂತೆ ಅನೇಕ ಹಣ್ಣಿನ ಮರಗಳನ್ನು ನೆಟ್ಟಿದ್ದಾರೆ. ಕೃಷಿ ಹೊಂಡ, ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ. ಕಬ್ಬು, ತೊಗರಿ, ಹತ್ತಿ ಬೆಳೆದು ಮಿಶ್ರ ಕೃಷಿ ಮಾಡುತ್ತಾರೆ. ತೋಟದಲ್ಲಿ ಬೆಳೆಯುವ ಹಣ್ಣು, ಜೇನು, ತರಕಾರಿಗಳನ್ನು ತಾವೇ ಮಾರಾಟ ಮಾಡುತ್ತಾರೆ. ಆ ಮೂಲಕ ಮಾದರಿ ಮತ್ತು ಸ್ಫೂರ್ತಿಯಾಗಿದ್ದಾರೆ.

Raita Ratna Award: ಕೃಷಿ ರಫ್ತಿನಲ್ಲಿ ಭಾರತ ನಂ.1 ಆಗಬೇಕು: ಕೇಂದ್ರ ಸಚಿವೆ ಶೋಭಾ

ಸಾವಯವ ರೈತ: ರಾಮಪ್ಪ ಉಪ್ಪಾರ - ತುಕ್ಕಾನಟ್ಟಿ, ಮೂಡಲಗಿ, ಬೆಳಗಾವಿ

ಏಳನೇ ತರಗತಿ ಓದಿ ಕೃಷಿಗೆ ಇಳಿದವರು. ಅಜ್ಜ, ಅಪ್ಪನ ಕಾಲದಿಂದ ಬಂದ ರಾಸಾಯನಿಕ ಕೃಷಿ ನಿಲ್ಲಿಸಿ ಸಾವಯವ ಹಾದಿ ತುಳಿದವರು. 7.5 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಆಧರಿತ ಕೃಷಿ. ಪಪ್ಪಾಯಿ, ಕಬ್ಬು, ಅರಿಶಿನ ಮುಖ್ಯ ಬೆಳೆ. ಕಡಲೆ, ಜೋಳ, ಶುಂಠಿ ಇತ್ಯಾದಿ ಮಿಶ್ರಬೆಳೆ. 8 ಗಿರ್‌ ಆಕಳು, 2 ಜವಾರಿ ಆಕಳು, 2 ಎಮ್ಮೆ, 10 ಮೇಕೆ ಸಾಕಿದ್ದಾರೆ. ಸಾವಯವ ಗೊಬ್ಬರ, ಕೀಟನಾಶಕ, ಬೀಜಾಮೃತ, ಜೀವಾಮೃತ, ಪಂಚಗವ್ಯ ತಯಾರಿಸುತ್ತಾರೆ. ಎರೆಹುಳ ಗೊಬ್ಬರ, ಗೋಬರ್‌ ಗ್ಯಾಸ್‌ ಘಟಕ ನಿರ್ಮಿಸಿದ್ದಾರೆ. ನಿತ್ಯ 15 ಲೀ. ಹಾಲು ಮಾರಾಟ ಮಾಡುತ್ತಾರೆ. ವರ್ಷಕ್ಕೆ ಖರ್ಚು-ವೆಚ್ಚ ಕಳೆದು . 15 ಲಕ್ಷದಿಂದ .18 ಲಕ್ಷದವರೆಗೆ ಲಾಭ ಗಳಿಸುತ್ತಾರೆ. ಬೇಡಿಕೆಗೆ ತಕ್ಕಂತೆ ಬೆಳೆದು ಗೆದ್ದಿದ್ದಾರೆ.

ಆಧುನಿಕ ರೈತ: ಪಿ.ಅನಂತ ರಾಮಕೃಷ್ಣ - ಪಳ್ಳತ್ತಡ್ಕ, ಪೆರುವಾಯಿ, ಬಂಟ್ವಾಳ, ದ.ಕ.

ವಯಸ್ಸು 37. ಬಯೋಟೆಕ್‌ ಇಂಜಿನಿಯರಿಂಗ್‌ ಪದವೀಧರ. ಬೆಂಗಳೂರಿನಲ್ಲಿ ಸ್ವಲ್ಪ ಸಮಯ ಉದ್ಯೋಗ. ನಂತರ ಉದ್ಯೋಗ ತೊರೆದು ಊರಲ್ಲಿ ಕೃಷಿ ಕೆಲಸ. ಆರಂಭದಲ್ಲಿ ಕೊಕ್ಕೋ ಗಿಡ ನಾಟಿ ಮಾಡಿ ಫಸಲು ಪಡೆದರು. ನಂತರ ಬಾಳೆ, ಕಾಳು ಮೆಣಸು ಬೆಳೆದು ಯಶಸ್ಸು ಪಡೆದಿದ್ದಾರೆ. ತಮ್ಮ 18 ಎಕರೆ ತೋಟಕ್ಕೆ ಇಟಲಿಯಿಂದ ಯಂತ್ರ ತರಿಸಿಕೊಂಡು ಸಂಪೂರ್ಣ ಸ್ವಯಂಚಾಲಿತ ನೀರಾವರಿ ವ್ಯವಸ್ಥೆ ರೂಪಿಸಿದ್ದು ಇವರ ಸಾಧನೆ. ಫಿಲ್ಟರ್‌ ಕ್ಲೀನಿಂಗ್‌ ವ್ಯವಸ್ಥೆ ಕೂಡ ಸ್ವಯಂಚಾಲಿತ. ಮರಗಳಿಗೆ ಔಷಧ ಸಿಂಪಡಣೆ, ಕೊಯ್ಲಿಗೆ ಕಾರ್ಬನ್‌ ದೋಟಿ ಬಳಸುತ್ತಾರೆ. ಕಾಳು ಮೆಣಸು ಬೆಳೆಯಲು ಧೂಪದ ಮರ ನೆಟ್ಟಿದ್ದಾರೆ. ಕಾರ್ಮಿಕ ರಹಿತ, ಲಾಭದಾಯಕ ಕೃಷಿ ಮಾಡಿ ತೋರಿಸಿದ್ದಾರೆ.

ಯುವ ರೈತ: ಸುರೇಶ್‌ ಚೌಡಕಿ - ಕುದರಿಮೋತಿ, ಕುಕನೂರು, ಕೊಪ್ಪಳ

ಎಸ್‌ಎಸ್‌ಎಲ್‌ಸಿ ನಂತರ ಕೃಷಿ ಕಡೆಗೆ ವಾಲಿದರು. ತಂದೆಯವರ ಒಣ ಬೇಸಾಯದ ಕಷ್ಟಮನಗಂಡು 14 ಎಕರೆ ಜಮೀನಿನಲ್ಲಿ ಹರಿದುಹೋಗುವ ನೀರು, ಫಲವತ್ತಾದ ಮಣ್ಣು ತಡೆಯಲು ಕೆರೆ ತೋಡಿಸಿದರು. ಬೋರೆವೆಲ್‌ ಕೊರೆಸಿ ನೀರು ಪಡೆದರು. 14 ಎಕರೆಯಲ್ಲಿ 2,800 ಪಪ್ಪಾಯಿ ಬೆಳೆದಿದ್ದಾರೆ. 1.5 ಎಕರೆ ಚೆಂಡು ಹೂವು, 2 ಎಕರೆ ಹಾಗಲಕಾಯಿ, 4 ಎಕರೆ ಶೇಂಗಾ ಬೆಳೆದು ಲಾಭ ಪಡೆದಿದ್ದಾರೆ. 25 ತೆಂಗು, 10 ಪೇರಳೆ, 25 ನಿಂಬೆ ಗಿಡಗಳಿಂದ ಆದಾಯ ಇದೆ. 60 ಹೆಬ್ಬೇವು, 30 ಬೇವು ಬೆಳೆದಿದ್ದಾರೆ. ಹೈನುಗಾರಿಕೆ ನಡೆಸುತ್ತಾರೆ. ಗೋ ಕೃಪಾಮೃತ, ಜೀವಾಮೃತ, ಎರೆಹುಳು ತೊಟ್ಟಿಬಳಸಿ ಸಾವಯವ ಕೃಷಿಗೆ ಆದ್ಯತೆ ನೀಡಿದ್ದಾರೆ. ವರ್ಷಕ್ಕೆ .8ರಿಂದ .10 ಲಕ್ಷವರೆಗೆ ಆದಾಯ ಗಳಿಸುತ್ತಾರೆ.

ರೈತ ಮಹಿಳೆ: ಅನಿತಾ ಎಂ. - ಕುವೆಂಜ ಹೌಸ್‌, ಬೆಟ್ಟಂಪಾಡಿ, ಪುತ್ತೂರು, ದ.ಕ.

ಒಟ್ಟು 4.48 ಎಕರೆಯಲ್ಲಿ 80 ಸೆಂಟ್ಸ್‌ನಲ್ಲಿ ಭತ್ತ, 800ರಷ್ಟು ಅಡಕೆ, 90 ತೆಂಗು, ಬಾಳೆ, ಕೊಕ್ಕೊ ಬೆಳೆದಿದ್ದಾರೆ. 8 ದನಗಳು, 13 ಆಡು, 100 ಬ್ರಾಯ್ಲರ್‌ ಕೋಳಿ, 50 ನಾಟಿ ಕೋಳಿ ಸಾಕುತ್ತಿದ್ದಾರೆ. ತರಕಾರಿ ಬೆಳೆಯುತ್ತಾರೆ. ಗೋಬರ್‌ ಗ್ಯಾಸ್‌ ತಯಾರಿಸುತ್ತಾರೆ. ಎರೆಗೊಬ್ಬರ, ಜೀವಾಮೃತ, ಹಟ್ಟಿಗೊಬ್ಬರ ಬಳಸುತ್ತಾರೆ. ಸಿಗಡಿ ಮೀನಿನ ಚಟ್ನಿ, ಗೆಣಸಿನ ಹಪ್ಪಳ, ಸಂಡಿಗೆ ತಯಾರಿಸಿ ಮಾರಾಟ ಮಾಡುತ್ತಾರೆ. ಘನ ಜೀವಾಮೃತ ತಯಾರಿಸಿ ಬೆಂಗಳೂರಿನಲ್ಲೂ ಮಾರಾಟ ಮಾಡಿದ್ದಾರೆ. ಪತಿ ತೀರಿಕೊಂಡಿದ್ದು ಒಬ್ಬರೇ ನಿಂತು ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಎಲ್ಲ ಖರ್ಚು ಕಳೆದು 15 ಲಕ್ಷ ವಾರ್ಷಿಕ ಆದಾಯ ಗಳಿಸುತ್ತಿದ್ದಾರೆ. ಸಮಗ್ರ ಕೃಷಿ ಪದ್ಧತಿಯಲ್ಲಿ ಕೃಷಿ ವಿಜ್ಞಾನಿ ಎಂದೇ ಕರೆಸಿಕೊಂಡ ಗಟ್ಟಿಗತ್ತಿ.

ರೈತ ಮಹಿಳೆ: ಪ್ರೇಮಾ ಶಂಕರ ಗಾಣಿಗೇರ - ಸುಣಧೋಳಿ, ಮೂಡಲಗಿ, ಬೆಳಗಾವಿ

ಐದನೇ ತರಗತಿಗೆ ಓದು ಬಿಡಿಸಿ ಬಾಲ್ಯ ವಿವಾಹ ಮಾಡಲಾಯಿತು. ಎರಡು ಮಕ್ಕಳ ಅಂಗವಿಕಲತೆಯ ನೋವು ಮರೆಯಲು ಕೃಷಿಗೆ ಇಳಿದರು. 8 ಎಕರೆಯಲ್ಲಿ 4 ಎಕರೆ ತೋಟಗಾರಿಕೆ, 4 ಎಕರೆ ಒಣಭೂಮಿ ಕೃಷಿ ಕಾರ್ಯ. 2.5 ಎಕರೆಯಲ್ಲಿ ಕಬ್ಬು ಬೆಳೆಯುತ್ತಾರೆ. ಚಿಕ್ಕು, ಪೇರಳೆ, ನುಗ್ಗೆ, ಪಪ್ಪಾಯ, ಸೀತಾಫಲ ಬೆಳೆದಿದ್ದಾರೆ. ಮಿಶ್ರಬೆಳೆಯಾಗಿ ಸ್ವೀಟ್‌ಕಾರ್ನ್‌, ಮೆಕ್ಕೆಜೋಳ, ಕಡಲೆ, ಪಾಲಕ್‌, ಈರುಳ್ಳಿ ಇದೆ. ಗೋಬರ್‌ ಗ್ಯಾಸ್‌, ಜೀವಾಮೃತ, ಡಿ ಕಂಪೋಸರ್‌, ಮೀನಿನ ಕಷಾಯ ತಯಾರಿಸಿ ಕೃಷಿಗೆ ಬಳಸುತ್ತಾರೆ. 10 ಜಾನುವಾರು ಸಾಕಿದ್ದಾರೆ. ಜೇನು ಸಾಕಣೆ ಮಾಡುತ್ತಾರೆ. ಆಹಾರೋತ್ಪನ್ನ ಮಾರುತ್ತಾರೆ. ವಾರ್ಷಿಕ .10 ಲಕ್ಷದವರೆಗೆ ಆದಾಯ ಗಳಿಸುವ ಮೂಲಕ ಸೋಲನ್ನೇ ಸೋಲಿಸಿದ್ದಾರೆ.

ಪಶು ಸಂಗೋಪನೆ: ನಾಗರಾಜ ಪೈ - ಕುಕ್ಕೆಹಳ್ಳಿ, ಉಡುಪಿ

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರ. ಗಲ್‌್ಫ ರಾಷ್ಟ್ರ ಗಳಲ್ಲಿ 20 ವರ್ಷ ಕೆಲಸ ಮಾಡಿ ಮಣ್ಣಿಗೆ ಮರಳಿ ಹೈನುಗಾರಿಕೆ ಆರಂಭ. ಅನಾರೋಗ್ಯ ಸಲುವಾಗಿ ಹಿರಿಯರ ಸಲಹೆಯಂತೆ ದೇಸಿ ದನದ ಹಾಲು ಸೇವಿಸಿ ಗುಣಮುಕ್ತರಾಗಿ ಎಲ್ಲರಿಗೂ ದೇಸಿ ದನದ ಹಾಲು ಸಿಗಬೇಕೆಂಬ ಕಾರಣಕ್ಕೆ ಹೈನುಗಾರಿಕೆ ಶುರು. 2 ಮಲೆನಾಡು ಗಿಡ್ಡ ದನದಿಂದ ಆರಂಭಿಸಿ ಈಗ ಅವರ ಬಳಿ 65 ದೇಸಿ ಮಲೆನಾಡು ಗಿಡ್ಡ ತಳಿಯ ದನಗಳಿವೆ. ಪಂಜಾಬ್‌ನ ಗೀರ್‌, ಗುಜರಾತ್‌ನ ಕಾಂಕ್ರೆಜ್‌ ತಳಿಯ ದನಗಳೂ ಇವೆ. ಗೋ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಗೋಮೂತ್ರ, ಸಗಣಿಯಿಂದಲೂ ಉತ್ಪನ್ನ ತಯಾರಿಸಿದ್ದಾರೆ. 10 ಮಂದಿಗೆ ಉದ್ಯೋಗ ನೀಡಿದ್ದಾರೆ. ತಿಂಗಳಿಗೆ 2 - 3 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.

ತೋಟಗಾರಿಕೆ: ಸುಪ್ರೀತ್‌ - ಅಡಗೂರು, ಪಿರಿಯಾಪಟ್ಟಣ, ಮೈಸೂರು

ಪಿರಿಯಾಪಟ್ಟಣ ತಂಬಾಕಿಗೆ ಹೆಸರುವಾಸಿಯಾದರೂ ತಂಬಾಕು ಬೆಳೆಯದೆ ತಮ್ಮ 18 ಎಕರೆಯಲ್ಲಿ ಸಾವಯವ ಕೃಷಿಯಲ್ಲಿ ನಿರತರಾಗಿದ್ದಾರೆ. 1,200ಕ್ಕೂ ಹೆಚ್ಚು ಶ್ರೀಗಂಧದ ಮರ, 5 ಎಕರೆ ಅಡಕೆ, 200 ತೆಂಗಿನ ಮರ, 2 ಎಕರೆ ಬಾಳೆ, 3 ಎಕರೆ ಉಂಡೆ ಮೆಣಸು, 2 ಎಕರೆ ಭತ್ತ ಮತ್ತಿತರ ಬೆಳೆ ಬೆಳೆಯುವ ಸುಪ್ರೀತ್‌ಗೆ ಗೆಡ್ಡೆ ಗೆಣಸುಗಳ ಕುರಿತು ವಿಪರೀತ ಆಸಕ್ತಿ. ಅವರ ಜಮೀನಿನಲ್ಲಿ 120ಕ್ಕೂ ಹೆಚ್ಚು ಜಾತಿಯ ಗೆಡ್ಡೆ ಗೆಣಸುಗಳನ್ನು ಬೆಳೆಯುತ್ತಿದ್ದಾರೆ. ಹೊಸ ಜಾತಿಯ ಗೆಡ್ಡೆ ಗೆಣಸುಗಳ ಹುಡುಕಾಟ ನಡೆಸುತ್ತಾರೆ. ಅಪರೂಪದ ಗೆಡ್ಡೆ ಗೆಣಸು ತಳಿಗಳನ್ನು ಸಂರಕ್ಷಿಸುತ್ತಾರೆ. ಬೇರೆ ಬೇರೆ ಕಡೆಗಳಿಗೆ ಹೋಗಿ ಗೆಡ್ಡೆ- ಗೆಣಸು​ಗಳ ಮಾರಾ​ಟ​ದಿಂದಲೇ ವಾರ್ಷಿಕ ರು. ಐದು ಲಕ್ಷದವರೆಗೆ ಆದಾಯ ಗಳಿ​ಸುತ್ತಾರೆ.

ವೈದ್ಯ/ವಿಜ್ಞಾನಿ ರೈತ: ನಾಪಂಡ ಪೂಣಚ್ಚ - ಗರ್ವಾಲೆ, ಸೋಮವಾರಪೇಟೆ, ಕೊಡಗು

ಕಾಳು ಮೆಣಸು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಕಾಡು ಕಾಳು ಮೆಣಸಿನ ಆದಿ ಕಾಳು ಮೆಣಸು ತಳಿ ಬೆಳೆಯುತ್ತಾರೆ. ಲೀಸ್‌ ಪಡೆದ 2 ಎಕರೆ ಸೇರಿ ಒಟ್ಟು ಏಳು ಎಕರೆಯಲ್ಲಿ ಕೃಷಿ ಮಾಡುತ್ತಾರೆ. ಕಾಡು ಮೆಣಸಿನ ಬಳ್ಳಿ ಅಭಿವೃದ್ಧಿ ಪಡಿಸುತ್ತಾರೆ. 18 ವರ್ಷ ಹಳೆಯ ಬಳ್ಳಿಗಳೂ ಇವರ ಬಳಿ ಇವೆ. ಆದಿ ಪೆಪ್ಪರ್‌ ಡೆಮೊ ಫಾಮ್‌ರ್‍ ಮತ್ತು ಸಂಶೋಧನಾ ಕೇಂದ್ರ ತೆರೆದು ಸಂರಕ್ಷಣೆ ಕಾರ್ಯ ಮಾಡುತ್ತಾರೆ. ತಾವು ಬೆಳೆದ ಕಾಳು ಮೆಣಸನ್ನು ತಾವೇ ಹುಟ್ಟುಹಾಕಿದ ‘ಆದಿ ಕಾಡು ಕಾಳು ಮೆಣಸು’ ಎಂಬ ಬ್ರಾಂಡ್‌ ಮೂಲಕ ಮಾರಾಟ ಮಾಡುತ್ತಾರೆ. ಈ ವಿಶಿಷ್ಟಪ್ರಭೇದದ ಕಾಳು ಮೆಣಸು ಈಗ ಕೆ.ಜಿ.ಗೆ ರು.1300​ವ​ರೆಗೆ ಮಾರಾಟ ಆಗು​ತ್ತ​ದೆ. ಕಾಳು ಮೆಣಸಿನ ಜೊತೆ ಕಾಫಿ ಬೆಳೆ ಸಂಶೋಧನೆಯಲ್ಲೂ ನಿರತ.

ಕೃಷ್ಯುತ್ಪನ್ನ ಸಂಸ್ಥೆ/ರೈತ: ಎಂ.ಡಿ. ಮ್ಯಾಥ್ಯೂ - ಬೇಂಗ್ರೆ, ಭಟ್ಕಳ, ಉತ್ತರ ಕನ್ನಡ

ಸ್ವತಃ ತಾವೇ ಹೊಸತಾಗಿ ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಜಮೀನು ಖರೀದಿಸಿ ಘಟ್ಟಪ್ರದೇಶಗಳಲ್ಲಿ ಲಾವಂಚ ಬೆಳೆಯತೊಡಗಿದರು. ಲಾವಂಚದ ಬೇರಿನಿಂದ ಟೋಪಿ, ಬೀಸಣಿಕೆ ಮುಂತಾದ ಉತ್ಪನ್ನಗಳನ್ನು ತಯಾರಿಸಿ ದರು. ದಿನ ಕಳೆದಂತೆ ವಿವಿಧ ಕಲಾ ವಿನ್ಯಾಸಗಳು, ಕರಕುಶಲ ವಸ್ತುಗಳು, ನಿತ್ಯೋಪಯೋಗಿ ಲಾವಂಚದ ವಸ್ತು ತಯಾರಿಸಿ ಮೆಚ್ಚುಗೆ ಗಳಿಸಿದರು. ಅದನ್ನೇ ಗುಡಿ ಕೈಗಾರಿಕೆಯಾಗಿಸಿ 1993ರ ಅಕ್ಟೋಬರ್‌ 2ರಂದು 5 ಮಹಿಳೆಯರೊಂದಿಗೆ ಸಂಸ್ಥೆ ಆರಂಭಿಸಿದರು. ಅದರ ಹೆಸರು ಉಸಿರಾ ಇಂಡಸ್ಟ್ರೀಸ್‌. ಲಾವಂಚ ತಂಪು ಪಾನೀಯ, ಸಾಬೂನು, ವ್ಯಾನಿಟಿ ಬ್ಯಾಗ್‌ ಇತ್ಯಾದಿ ನೂರಾರು ಉತ್ಪನ್ನಗಳಿವೆ. 5 ಸಾವಿರಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಿ ಬದುಕಿಗೆ ದಾರಿಯಾಗಿದ್ದಾರೆ.

ಕೃಷಿ ತಂತ್ರಜ್ಞಾನಿ: ಗಿರೀಶ್‌ ಭದ್ರಗೊಂಡ - ವಿಜಯಪುರ

ಓದಿದ್ದು ಎಸ್‌ಎಸ್‌ಎಲ್‌ಸಿ. ಆದರೆ ಕೃಷಿಗೆ ಪೂರಕ ಯಂತ್ರ ತಯಾರಿಕೆಯಲ್ಲಿ ಅಪಾರ ಜ್ಞಾನ ಹೊಂದಿದ್ದಾರೆ. ಸೌರಚಾಲಿತ ಕುಡಿ ಚೂಟುವ ಹಾಗೂ ಸಂಗ್ರಹಿಸುವ ಯಂತ್ರ, ಸೌರ ವಿದ್ಯುತ್‌ ಕಳೆ ಕೀಳುವ ಸಾಧನ, ಬಹುಪಯೋಗಿ ಸೋಲಾರ್‌ ಪವರ್‌ ಟಿಲ್ಲರ್‌, ಸೆನ್ಸಾರ್‌ ಆಧರಿತ ನೀರು ನಿರ್ವಹಣಾ ಯಂತ್ರ, ಸೋಲಾರ್‌ ಆಧರಿತ ಹಕ್ಕಿ ಓಡಿಸುವ ಯಂತ್ರ ಸೇರಿದಂತೆ ಇದುವರೆಗೆ ಕೃಷಿಗೆ ನೆರವಾಗುವ ಒಟ್ಟು 263 ಯಂತ್ರಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಕಿಸಾನ್‌ ಪ್ರೆಸಿಷನ್‌ ಅಗ್ರಿಕಲ್ಚರಲ್‌ ಸೇವಾ ಸಂಸ್ಥೆ ಸ್ಥಾಪಿಸಿ ಇದುವರೆಗೆ 300 ರೈತರಿಗೆ ಕೃಷಿ ತಂತ್ರಜ್ಞಾನ ತರಬೇತಿ ನೀಡಿದ್ದಾರೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಪ್ರತಿ ವರ್ಷ .15ರಿಂದ .20 ಲಕ್ಷ ಆದಾಯ ಗಳಿಸುತ್ತಾರೆ.

ಸುವರ್ಣ ಕೃಷಿ ಶಾಲೆ: ಅವರ್ಸಾ ಸರ್ಕಾರಿ ಶಾಲೆ - ಅಂಕೋಲಾ, ಉತ್ತರ ಕನ್ನಡ

ಶಾಲೆ ಇದ್ದ ಪ್ರದೇಶದಲ್ಲಿ ಕಲ್ಲುಗಳೇ ತುಂಬಿಕೊಂಡಿದ್ದವು. ಕೃಷಿ ಕಾರ್ಯ ಸಾಧ್ಯವೇ ಇಲ್ಲ ಎನ್ನುವಂತೆ ಇತ್ತು. ಆದರೆ ಸಮಾನ ಮನಸ್ಕ ಶಿಕ್ಷಕರು, ಮಕ್ಕಳು ಸೇರಿಕೊಂಡು ಛಲದಿಂದ ಕೃಷಿ ಕಾರ್ಯಕ್ಕೆ ಯೋಗ್ಯ ಭೂಮಿಯನ್ನಾಗಿ ಮಾಡಿದರು. 10-12 ವರ್ಷಗಳಿಂದ ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದಾರೆ. 2 ಎಕರೆ ಜಮೀನಿನಲ್ಲಿ 20 ಗುಂಟೆ ಶಾಲಾ ಕಟ್ಟಡ ಹೊರತುಪಡಿಸಿ ಉಳಿದೆಡೆ 20 ಗುಂಟೆ ತೆಂಗು, 15 ಗುಂಟೆ ಅಡಿಕೆ ಗಿಡ, 25 ಗುಂಟೆಯಲ್ಲಿ ಹೂವಿನ ಗಿಡ, ತರಕಾರಿ ಕೃಷಿ ಮಾಡುತ್ತಾರೆ. ತರಕಾರಿ ಬಿಸಿಯೂಟಕ್ಕೆ ಬಳಕೆಯಾಗುತ್ತವೆ. ಬಳಕೆಯಾಗಿ ಉಳಿದಿದ್ದು ಮಕ್ಕಳ ಪೋಷಕರು ಖರೀದಿಸುತ್ತಾರೆ. ಆ ಹಣ ಗೊಬ್ಬರ ಖರೀದಿ, ಕೃಷಿಗೆ ಬಳಕೆ ಮಾಡುತ್ತಾರೆ. ಇಲ್ಲಿ ಕಲಿತ ಅನೇಕ ಮಕ್ಕಳು ಕೃಷಿ ಮುಂದುವರಿಸಿದ್ದಾರೆ.

ತೀರ್ಪುಗಾರರ ಅಭಿಮತ ಕೃಷಿ ಅಭ್ಯುದಯಕ್ಕೆ ನವಚೇತನ

ಕೃಷಿ ಹತ್ತು ತಲೆಮಾರಿನ ಜ್ಞಾನ ಎನ್ನುತ್ತೇವೆ. ಈ ತಲೆಮಾರು ಕೃಷಿ ಬಗ್ಗೆ ಹೇಳುವಾಗ ಹೆಚ್ಚಾಗಿ ಸವಾಲುಗಳ ಕುರಿತು ಮಾತ ನಾಡುತ್ತದೆ. ಇಂಥವರ ಸಾಧನೆಯನ್ನು ತೋರಿಸುವ ದೊಡ್ಡ ಪ್ರಯತ್ನವನ್ನು ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ರೈತ ರತ್ನ ಪ್ರಶಸ್ತಿ ಮೂಲಕ ಮಾಡುತ್ತಿದೆ. ಕಳೆದ 3 ವರ್ಷದಿಂದ ನಾಡಿನ ಮೂಲೆಮೂಲೆಯ ಕೃಷಿ ಸಾಧಕರು ನಮ್ಮ ಮುಂದೆ ತಂದು ನಿಲ್ಲಿಸುತ್ತಿದೆ. ಈ ಮೂಲಕ ಕೃಷಿ ರಂಗದ ಅಭ್ಯು ದಯಕ್ಕೆ ರೈತ ರತ್ನ ಪ್ರಶಸ್ತಿ ಹೊಸ ಚೇತನ ನೀಡುತ್ತಿದೆ ಅಂತ ಕೃಷಿ-ಪರಿಸರ ತಜ್ಞ, ಪತ್ರಕರ್ತ ಶಿವಾನಂದ ಕಳವೆ ತಿಳಿಸಿದ್ದಾರೆ. 

ಮತ್ತಷ್ಟು ಸಾಧನೆಗೆ ಸ್ಫೂರ್ತಿ

ಇಂದು ಕೃಷಿ ಕ್ಷೇತ್ರ ಸಂಕಷ್ಟದ ಸ್ಥಿತಿಯಲ್ಲಿದೆ. ಈ ಸಂಕಷ್ಟದ ನಡುವೆ ರೈತಾಪಿಗಳ ಹಾಡು-ಪಾಡಿದೆ, ಸಂಶೋಧನೆ ಇದೆ, ಹೊಸ ತಳಿಗಳಿವೆ. ಒಟ್ಟಾರೆ ಎಲ್ಲರನ್ನೂ ಖುಷಿಯಾಗಿಡಲು ರೈತ ತ್ಯಾಗ ಮಾಡುವ ಸಾಧನೆ ಇದೆ. ಅಂತಹ ಎಲೆ ಮರೆ ಕೃಷಿ ಸಾಧಕರನ್ನು ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ರೈತ ರತ್ನ ಪ್ರಶಸ್ತಿ ಕೊಡಮಾಡುವ ಮೂಲಕ ಗುರುತಿಸುತ್ತಿದೆ. ರೈತ ರತ್ನ ಪ್ರಶಸ್ತಿಯು ಇನ್ನಷ್ಟುಕೃಷಿಕರಿಗೆ ಹಳ್ಳಿಗಳಿಗೆ ವಾಪಸ್‌ ಹೋಗಿ ಸಾಧನೆ ಮಾಡುವುದಕ್ಕೆ ಸ್ಫೂರ್ತಿ ನೀಡಲಿದೆ ಅಂತ ಕೃಷಿ ತಜ್ಞ-ಬೀಜ ಸಂರಕ್ಷಕ ಜಿ.ಕೃಷ್ಣಪ್ರಸಾದ್‌ ಹೇಳಿದ್ದಾರೆ. 

ಕೃಷಿ ಕ್ಷೇತ್ರದ 12 ಸಾಧಕರಿಗೆ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ರೈತ ರತ್ನ ಪ್ರಶಸ್ತಿ ಪ್ರದಾನ

ಸಾಧಕರ ಆಯ್ಕೆ ನಮಗೂ ಖುಷಿ

ರೈತ ರತ್ನ ಆಯ್ಕೆ ಸಮಿತಿ ಸದಸ್ಯನಾಗಿದ್ದಕ್ಕೆ ಹೆಮ್ಮೆ ಆಗುತ್ತಿದೆ. 600ಕ್ಕೂ ಹೆಚ್ಚು ಅರ್ಜಿಗಳಲ್ಲಿ 12 ಜನರನ್ನು ಆರಿಸುವುದು ಬಹುದೊಡ್ಡ ಸವಾಲಿನದಾಗಿತ್ತು. ಪರಿಣಿತರ ಸಮಿತಿಯು ವಿವಿಧ ಆಯಾಮದಲ್ಲಿ ಅಳೆದು ತೂಗಿ ವಿಜೇತರನ್ನು ಆಯ್ಕೆ ಮಾಡಿದೆ. ಇಂತಹ ಪ್ರಶಸ್ತಿಯನ್ನು ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಳಗ ನೀಡುತ್ತಿರುವುದು ಶ್ಲಾಘನೀಯ. ಇದು ರಾಜ್ಯದ ಕೃಷಿಕರನ್ನು ಉತ್ತೇಜಿಸಲಿದೆ ಅಂತ ರತ್ನಗಿರಿ ಇಂಪೆಕ್ಸ್‌ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎ.ವಾಸುದೇವ ಮೂರ್ತಿ ತಿಳಿಸಿದ್ದಾರೆ. 

ಇದರ ಭಾಗವಾಗಿದ್ದೇ ಹೆಮ್ಮೆ

ಕಳೆದ 5-6 ದಶಕಗಳಿಂದ ಹಳ್ಳಿಯಿಂದ ಜನರು ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ವ್ಯವಸಾಯವೇ ಬೇಡ ಎನ್ನುವಂತಹ ಪರಿಸ್ಥಿತಿಗೆ ತಲುಪಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇದ್ದು, ಕೃಷಿಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಕೆಲಸವನ್ನು ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಡುತ್ತಿವೆ. ಇಂತಹ ವಿಶೇಷ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ ಅಂತ ಮೈಕ್ರೋಬಿ ಆಗ್ರೋಟೆಕ್‌ ಮುಖ್ಯಸ್ಥ ಡಾ. ಕೆ.ಆರ್‌.ಹುಲ್ಲುನಾಚೆಗೌಡ ಹೇಳಿದ್ದಾರೆ. 

Follow Us:
Download App:
  • android
  • ios