16 ಸಾಧಕರಿಗೆ 'ಅಸಾಮಾನ್ಯ ಕನ್ನಡಿಗ'ಪ್ರಶಸ್ತಿ ಪ್ರದಾನ
ಸಮಾಜದ ಒಳಿತಿಗಾಗಿ, ಎಲೆಮರೆ ಕಾಯಿಯಂತೆ ಸದ್ದಿಲ್ಲದೆ, ಪ್ರಚಾರದ ಗುಂಗಿಲ್ಲದೆ ಅವಿರತ ಸೇವೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ, ಗೌರವಿಸುವ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭದ ವಿನೂತನ 'ಅಸಾಮಾನ್ಯ ಕನ್ನಡಿಗ' ಕಾರ್ಯಕ್ರಮದ 4ನೇ ಆವೃತ್ತಿಯು ಅದ್ದೂರಿಯಾಗಿ ನೆರವೇರಿತು.

ಬೆಂಗಳೂರು ಅ.14: ಸಮಾಜದ ಒಳಿತಿಗಾಗಿ, ಎಲೆಮರೆ ಕಾಯಿಯಂತೆ ಸದ್ದಿಲ್ಲದೆ, ಪ್ರಚಾರದ ಗುಂಗಿಲ್ಲದೆ ಅವಿರತ ಸೇವೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ, ಗೌರವಿಸುವ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭದ ವಿನೂತನ 'ಅಸಾಮಾನ್ಯ ಕನ್ನಡಿಗ' ಕಾರ್ಯಕ್ರಮದ 4ನೇ ಆವೃತ್ತಿಯು ಅದ್ದೂರಿಯಾಗಿ ನೆರವೇರಿತು.
ಶುಕ್ರವಾರ ಹೋಟೆಲ್ ಲಲಿತ್ ಅಶೋಕದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಸಾಧನೆ ಮಾಡಿದ ಎಂಟು ಸಾಧಕರನ್ನು 'ಅಸಾಮಾನ್ಯ ಕನ್ನಡಿಗ' ಮತ್ತು ಈಗಾಗಲೇ ದೇಶ ವಿದೇಶಗಳಲ್ಲಿ ಕನ್ನಡ ನಾಡಿಗೆ ಹಿರಿಮೆ-ಗರಿಮೆ ತಂದು ಕೊಟ್ಟು ಖ್ಯಾತರಾದ, ಹಲವಾರು ಸಮ್ಮಾನಗಳಿಗೆ ಭಾಜನರಾದ ಸಾಧಕರಿಗೆ 'ವಿಶೇಷ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
"ಅಸಾಮಾನ್ಯ ಕನ್ನಡಿಗ" ಪ್ರಶಸ್ತಿ: ತೆರೆಮರೆ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ, ರವಿ ಹೆಗಡೆ
ಈ ಮಹಾನ್ ಸಾಧಕರನ್ನು ಸನ್ಮಾನಿಸಲೆಂದೇ ನಾಡಿನ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ರಕ್ಷಿತ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿ ಮೆರುಗು ತಂದಿದ್ದರು.
ಅವರೊಂದಿಗೆ ಏಷ್ಯಾನೆಟ್ ಸಮೂಹದ ಎಕ್ಸಿಕ್ಯೂಟಿವ್ ಛೇರ್ಮನ್ ರಾಜೇಶ್ ಕಾಲ್ರಾ, ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಏಷಿಯಾನೆಟ್ ಸುವರ್ಣ ನ್ಯೂಸ್ ಸಂಪಾದಕರಾದ ಅಜಿತ್ ಹನಮಕ್ಕನವರ್ ಮತ್ತಿತರರು ಇದ್ದರು.
ಅದ್ಧೂರಿ ಸ್ವಾಗತ: ಮೈಸೂರು, ಕಾರವಾರ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಸಾಮಾನ್ಯ ಸಾಧಕರು ಮತ್ತು ಅವರ ಕುಟುಂಬದ ಸದಸ್ಯರನ್ನು ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆ ಸಿಬ್ಬಂದಿ ಅದ್ದೂರಿಯಾಗಿ ಸ್ವಾಗತಿಸಿದರು. ಬೃಹತ್ ಸ್ಕ್ರೀನ್, ಜಗಮಗಿಸುವ ವಿದ್ಯುತ್ ದೀಪಗಳು, ಅಚ್ಚುಕಟ್ಟಾದ ವೇದಿಕೆಯಲ್ಲಿ ಅನಾವರಣಗೊಂಡ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲಿಯೂ ಲೋಪವಾದಂತೆ ಎಚ್ಚರಿಕೆ ವಹಿಸಲಾಗಿತ್ತು. ಕಾರ್ಯ ಕ್ರಮದ ನಿರೂಪಕಿ ಭಾವನಾ ನಾಗಯ್ಯ ಅವರ ಸ್ಪಷ್ಟವಾದ ಕನ್ನಡ, ಸರಳವಾದ ನಿರೂಪಣಾ ಶೈಲಿಯು ಎಲ್ಲರ ಗಮನ ಸೆಳೆಯಿತು. ಎಲ್ಲಿಯೂ ಗೊಂದಲವಾಗದಂತೆ ಪ್ರಶಸ್ತಿ ಪ್ರದಾನ ಸಮಾರಂಭವು ಸುಸೂತ್ರವಾಗಿ ನಡೆಯಲು ಸಹಕಾರಿಯಾಯಿತು.
ಸಾಧಕರ ಕಿರುಚಿತ್ರ ಪ್ರದರ್ಶನ: ಅಸಾಮಾನ್ಯ ಕನ್ನಡಿಗ
2022ಕ್ಕೆ ಆಯ್ಕೆಯಾದ ಪ್ರತಿಯೊಬ್ಬ ಸಾಧಕರದ್ದೂ ಒಂದೊಂದು ಯಶೋಗಾಥೆ, 3ನೇ ತರಗತಿ ಮಾತ್ರ ಓದಿದ್ದರೂ 16 ಸಾವಿರ ಅನಾಥ ಶವಗಳಿಗೆ ಅಂತಿಮ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಮೈಸೂರಿನ ಡಾ.ಅಯೂಬ್ ಅಹ್ಮದ್, ಬೋಳು ಗುಡ್ಡದಲ್ಲಿ 25 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಿದ ಹಸಿರು ತುಂಬಿದ ದಾವಣಗೆರೆಯ ಚನ್ನಗಿರಿಯ ಕೆ.ಎಂ. ವೀರಮ್ಮ, ಮಂಗಳಮುಖಿಯರನ್ನು ಮುಖ್ಯ ವಾಹಿನಿಗೆ ಕರೆತರಲೆಂದೇ ಶ್ರಮಿಸುತ್ತಿರುವ ಧಾರವಾಡದ ಲೈಂಗಿಕ ಅಲ್ಪಸಂಖ್ಯಾತರಾದ ವೈಶಾಲಿ ಎನ್.ಬ್ಯಾಳಿ, 4 ಲಕ್ಷಕ್ಕೂ ಹೆಚ್ಚು ಜನರ ಹಸಿವು ನೀಗಿಸಿರುವ ಅನ್ನದಾಸೋಹಿ ಕಾರವಾರದ ಸ್ಯಾಮ್ಸ್‌ನ್ ಜಾನ್ ಡಿಸೋಜ. ಹೀಗೆ ಒಬ್ಬೊಬ್ಬ ಅಸಾಮಾನ್ಯರ ಸಾಧನೆಯೂ ಸರ್ವಮನ್ನಣೆಗೆ ಪಾತ್ರವಾದುದೇ. ಅವರ ಸಾಧನೆಯನ್ನೊಳಗೊಂಡ ಕಿರುಚಿತ್ರವನ್ನು ಪ್ರದರ್ಶಿಸುವ ಮೂಲಕ ಅಸಾಮಾನ್ಯ ಕನ್ನಡಿಗರ ಸಾಧನೆ ಪರಿಚಯಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಸಾರ್ವಜನಿಕ ಮನ್ನಣೆಯಿಂದ ವಿಮುಖವಾಗಿ ಎಲೆಮರೆ ಕಾಯಿಯಂತಿದ್ದ ತಮ್ಮ ಕುಟುಂಬದ ಸದಸ್ಯರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿತ್ರನಟ ರಕ್ಷಿತ್‌ಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡುತ್ತಿದ್ದಂತೆ ಪ್ರಶಸ್ತಿ ಪುರಸ್ಕೃತರ ಕುಟುಂಬಸ್ಥರು ಚಪ್ಪಾಳೆ ತಟ್ಟಿ, ಸಂಭ್ರಮಿಸಿದರು.
‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿ ಮೊತ್ತ ಆಂಧ್ರದ ಕನ್ನಡ ಶಾಲೆಗೆ ನೀಡಿದ ಸಾಧಕ!
ಪ್ರಾಯೋಜಕರಿಗೆ ಸಂಸ್ಥೆಯಿಂದ ಸನ್ಮಾನ
ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ಯಶಸ್ಸಿಗೆ ಕಾರ್ಯಕ್ರಮದ ಪ್ರಾಯೋಜಕರಾದ ಸರ್ಫ್ ಕೋಟ್ಸ್ ಪೈಂಟ್ಸ್, ವಿಶೇಷ ಪಾಲುದಾರರಾದ ಸದ್ಗುರು ಗ್ರಾಮ್ ಪ್ಲೋರ್ ಸೋಪ್, ಶಾಲಿಮಾರ್ ಗೋಲ್ಡ್ ಟೀ, 123 ನೂಡಲ್ಸ್, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಮತ್ತು ಶ್ರೀ ಕೃಷ್ಣ ಘೀ ಸಹಕಾರವೂ ಒಳಗೊಂಡಿತ್ತು. ಐ ಯಾಮ್ ಇನೋವೇಟಿವ್ ಅಡ್ವಾನ್ಸ್ ಮೀಡಿಯಾ ಮ್ಯಾನೇಜೆಂಟ್ ಪ್ರೈ. ಲಿಮಿಟೆಡ್ ಏಜೆನ್ಸಿ ಪಾರ್ಟನರ್ ಆಗಿದ್ದರು. ಈ ಎಲ್ಲ ಸಹಯೋಗಿ ಸಂಸ್ಥೆಗಳ ಪ್ರತಿನಿಧಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ತೀರ್ಪುಗಾರರ ಅನಿಸಿಕೆ:
8 ಅಸಾಮಾನ್ಯರ ಹುಡುಕಿ ತೆಗೆಯೋದೇ ಅಸಾಮಾನ್ಯ
ರಾಜ್ಯದ 6.5 ಕೋಟಿ ಕನ್ನಡಿಗರಲ್ಲಿ 8 ಅಸಾಮಾನ್ಯ ಕನ್ನಡಿಗರನ್ನು ಶೋಧಿಸಿ ತೆಗೆಯುವುದೊಂದು ಅಸಾಮಾನ್ಯ ಕೆಲಸವೇ ಸರಿ. ಇಂತಹ ಅಪರೂಪದ ಕೆಲಸ ಮಾಡುತ್ತಿರುವ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಭೇಷ್ ಎನ್ನಬೇಕು. ವಿವಿಧ ರಂಗದಲ್ಲಿ ವಿಲಕ್ಷಣ ಸಾಧನೆ ಮಾಡಿದ ಪುರುಷರು, ಮಹಿಳೆಯನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದೆ. ಶಿಕ್ಷಣ, ಸಾರ್ವಜನಿಕ, ಪರಿಸರ, ಹಿಂದುಳಿದ ಮತ್ತು ರಾಜ್ಯದ ಗಡಿ ಭಾಗದ ಹುಲ್ಲು ಬೇರುಮಟ್ಟದ ಮಕ್ಕಳನ್ನು, ಜನರ ಅಭಿವೃದ್ಧಿಗೆ ಶ್ರಮ ವಹಿಸಿದವರನ್ನು ಗುರುತಿಸುವ ಗುರುತರ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿದೆ. ಅಸಾಮಾನ್ಯ ಸಾಧಕರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ನಾನು ಭಾಗಿಯಾಗಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ.
- ನಾಗೇಶ್ ಹೆಗಡೆ, ಹಿರಿಯ ಪತ್ರಕರ್ತ ಹಾಗೂ ಪರಿಸರ ಚಿಂತಕ
ಅಜ್ಞಾತ ಸಾಧಕರಿಗೆ ಗೌರವ ಶ್ಲಾಘನೀಯ
ಅಸಾಮಾನ್ಯ ಕನ್ನಡಿಗರು ಎಂದರೆ, ತಾರೆಯರಲ್ಲ, ದಿನನಿತ್ಯ ಪ್ರಚಾರದಲ್ಲಿ ಇರುವ ವ್ಯಕ್ತಿಗಳಲ್ಲ. ಅಜ್ಞಾತರಾಗಿ ಮಾನವೀಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವರು. ಅಂತಹ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಡುತ್ತಿದೆ. 4ನೇ ಆವೃತ್ತಿಯ ಅಸಾಮಾನ್ಯ ಕನ್ನಡಿಗ ಪ್ರಶಸ್ತಿಗೆ ಸಾಧಕರ ಆಯ್ಕೆ ಸಮಿತಿಯಲ್ಲಿ ನಾಗೇಶ್ ಹೆಗಡೆ ಹಾಗೂ ರೂಪಾ ಅಯ್ಯರ್‌ರಂತಹ ಅತ್ಯುತ್ತಮ ತೀರ್ಪುಗಾರರೊಂದಿಗೆ ಭಾಗಿಯಾಗಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಬೇರೆ ಬೇರೆ ಕ್ಷೇತ್ರದಲ್ಲಿ ಅಸಾಮಾನ್ಯ ಸೇವೆ ಸಲ್ಲಿಸುತ್ತಿರುವ ಸಾಮಾನ್ಯರನ್ನು ಮುನ್ನೆಲೆಗೆ ತಂದು ಶ್ಲಾಘನೆ ಮಾಡಿ ಪೋತ್ಸಾಹಿಸುವುದು ವಿಶೇಷ ಕಾರ್ಯಕ್ರಮ ಇದಾಗಿದೆ.
- ಬಿ.ಆರ್.ಲಕ್ಷ್ಮಣ ರಾವ್, ಹಿರಿಯ ಕವಿ
ಮಾನವೀಯತೆ, ಕಳಕಳಿ ಇರುವವರಿಗೆ ಅರ್ಹ ಗೌರವ
ಅಸಾಮಾನ್ಯ ಕನ್ನಡಿಗರಾಗಲು ಶ್ರೀಮಂತರು, ವಿದ್ಯಾವಂತರು, ಹಣ ಇರುವವರೇ ಆಗಬೇಕಾಗಿಲ್ಲ. ಇನ್ನೊಬ್ಬರಿಗೆ ಒಳ್ಳೆಯದು ಮಾಡಬೇಕೆಂಬ ಮಾನವೀಯತೆ ಮತ್ತು ನನ್ನ ಸಮಾಜವನ್ನು ಉದ್ಧಾರ ಮಾಡಬೇಕೆಂಬ ಮನಸ್ಥಿತಿ ಹೊಂದಿದ್ದರೆ ಸಾಕು. ಅಂತಹ ಕನ್ನಡಿಗರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಹಿರಿಯರೊಂದಿಗೆ ಭಾಗಹಿಸಿರುವುದಕ್ಕೆ ಹೆಮ್ಮೆ ಆಗುತ್ತಿದೆ. ತಮಗೆ ಇಲ್ಲದಿದ್ದ ಸಂದರ್ಭದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡೋಣ ಎಂಬ ಭಾವನೆ ಹೊಂದಿರುವವರನ್ನು ಆಯ್ಕೆ ಮಾಡುವ ಅಪರೂಪದ ಕಾರ್ಯಕ್ಕೆ ನಮ್ಮನ್ನು ಒಟ್ಟುಗೂಡಿಸಿರುವ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಅಭಿನಂದನೆಗಳು. ರಾಜ್ಯದ ಮೂಲೆಯಲ್ಲಿ ಕೆಲಸ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ.
- ರೂಪಾ ಅಯ್ಯರ್ ನಟಿ ಹಾಗೂ ನಿರ್ದೇಶಕಿ