ಬಳ್ಳಾರಿ (ಮಾ. 29):  ‘ಕನ್ನಡಪ್ರಭ- ಸುವರ್ಣ ನ್ಯೂಸ್‌’ ಕೊಡಮಾಡಿದ ಪ್ರಸಕ್ತ ಸಾಲಿನ ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿಗೆ ಭಾಜನರಾದ ಇಲ್ಲಿನ ಶ್ರೀಧರಗಡ್ಡೆ ಸಿದ್ಧಬಸಪ್ಪ ಅವರು ಪ್ರಶಸ್ತಿಯ ಜತೆಗೆ ನೀಡಲಾದ .25 ಸಾವಿರ ನಗದು ಗೌರವವನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬಡೇನಹಳ್ಳಿಯ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆಗೆ ಸಮರ್ಪಿಸಲು ಮುಂದಾಗಿದ್ದಾರೆ.

ಆಂಧ್ರಪ್ರದೇಶದಲ್ಲಿರುವ ಕನ್ನಡ ಶಾಲೆಗಳ ಉಳಿವು ಹಾಗೂ ಅವುಗಳ ಬೆಳವಣಿಗೆಗಾಗಿ ಶ್ರಮಿಸಿದ ಸಿದ್ಧಬಸಪ್ಪ ಅವರಿಗೆ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬಳ್ಳಾರಿಯಲ್ಲಿರುವ ‘ಕನ್ನಡಪ್ರಭ’ ಜಿಲ್ಲಾ ಕಚೇರಿಗೆ ಗುರುವಾರ ಆಗಮಿಸಿದ ಸಿದ್ಧಬಸಪ್ಪ, ರಾಜ್ಯದ ಅನೇಕ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ‘ಕನ್ನಡಪ್ರಭ- ಸುವರ್ಣ ನ್ಯೂಸ್‌’ನ ಕನ್ನಡ ಪ್ರೇಮವನ್ನು ಶ್ಲಾಘಿಸಿದರು. ಜತೆಗೆ ಅನಂತಪುರ ಜಿಲ್ಲೆಯ ಹಿರೇಹಾಳ್‌ ಮಂಡಲದ ಬಡೇನಹಳ್ಳಿ ಗ್ರಾಮದಲ್ಲಿರುವ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರಶಸ್ತಿ ಮೊತ್ತ .25 ಸಾವಿರದ ಜತೆಗೆ, ತಮ್ಮ ಒಂದು ತಿಂಗಳ ಅರ್ಧ ಸಂಬಳವನ್ನು ಕೊಡುವುದಾಗಿ ಇದೇ ವೇಳೆ ತಿಳಿಸಿದರು.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿರೇಹಾಳ್‌ ಮಂಡಲದ ಬಡೇನಹಳ್ಳಿ ಚಿಕ್ಕ ಗ್ರಾಮವಾಗಿದ್ದು, ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆ ಇವೆ. ಆದರೆ, ಕರ್ನಾಟಕ ಹಾಗೂ ಆಂಧ್ರ ಸರ್ಕಾರಗಳು ಈ ಶಾಲೆಯನ್ನು ನಿರ್ಲಕ್ಷಿಸಿವೆ. ಹೀಗಾಗಿ ಶಾಲೆಗೆ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ಇಷ್ಟಾಗಿಯೂ ಅಲ್ಲಿಯ ಜನರು ಕನ್ನಡದ ಮೇಲಿನ ಪ್ರೇಮದಿಂದ ತೆಲುಗು ಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸದೆ ಕನ್ನಡ ಶಾಲೆಗೆ ಕಳಿಸುತ್ತಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಮಕ್ಕಳು ಅಲ್ಲಿ ಅಭ್ಯಾಸ ಮಾಡುತ್ತಿದ್ದು, ಅವರೆಲ್ಲರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ದೇಣಿಗೆ ನೀಡಲು ಮುಂದಾಗಿದ್ದಾಗಿ ಸಿದ್ಧಬಸಪ್ಪ ಹೇಳಿದರು.

ಇದೇ ವೇಳೆ ತಮ್ಮ ಬದುಕಿನ ಬವಣೆ, ಪಟ್ಟಕಷ್ಟ-ಕಾರ್ಪಣ್ಯಗಳು, ಅದರ ನಡುವೆಯೂ ಆಂಧ್ರದಲ್ಲಿರುವ ಕನ್ನಡ ಶಾಲೆಗಳಿಗೆ ನೆರವು ನೀಡಿದ್ದನ್ನು ಶ್ರೀಧರಗಡ್ಡೆ ಸಿದ್ಧಬಸಪ್ಪ ಅವರು ಮೆಲುಕು ಹಾಕಿದರು. ನನ್ನ ಉಸಿರು ಇರುವವರೆಗೆ ಕನ್ನಡಕ್ಕಾಗಿ ಅಲ್ಪ ಸೇವೆ ಮಾಡುವೆ ಎಂದರು.

ಆಂಧ್ರಪ್ರದೇಶದಲ್ಲಿರುವ ಕನ್ನಡ ಶಾಲೆಗಳ ಉಳಿವಿಗಾಗಿ ಶ್ರಮಿಸುತ್ತಿರುವ ಸಿದ್ಧಬಸಪ್ಪ ಅವರು, ಅಳಿವಿನಂಚಿನಲ್ಲಿರುವ ಕನ್ನಡ ಶಾಲೆಗಳ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿದ್ದಾರೆ. ತಮಗೆ ಬರುವ ಸಂಬಳದಲ್ಲಿ ಅರ್ಧವನ್ನು, ಹೀಗೆ ಪಟ್ಟಿಯಲ್ಲಿರುವ ಶಾಲೆಗಳಿಗೆ ಪ್ರತಿ ತಿಂಗಳು ನೀಡುತ್ತಾ ಬಂದಿದ್ದಾರೆ. ಇದರಂತೆ ಈ ಬಾರಿ ಬಡೇನಹಳ್ಳಿ ಶಾಲೆಗೆ ನೆರವು ನೀಡಲು ಸಿದ್ಧಬಸಪ್ಪ ನಿರ್ಧರಿಸಿದ್ದರು. ಈ ವೇಳೆ ತಮ್ಮ ಅರ್ಧ ಸಂಬಳದ ಜತೆಗೆ ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿ ಜತೆ ನೀಡಿದ್ದ .25 ಸಾವಿರ ನಗದು ಬಹುಮಾನವನ್ನು ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ನೀಡಲು ಮುಂದಾಗಿದಾರೆ.