ಬೀಗ ಹಾಕಿದ ಮನೆ ದೋಚುತ್ತಿದ್ದ ನೇಪಾಳಿಗರು, ಹೆಚ್ಚು ಚಿನ್ನ ಸಿಕ್ಕಿದ್ದರೆ ವಿಮಾನದಲ್ಲೇ ಎಸ್ಕೇಪ್ ಆಗಲು ಪ್ಲಾನ್!
ನಗರದ ವಿವಿಧೆಡೆ ಮನೆಗಳ ಬೀಗ ಮುರಿದು ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳವು ಮಾಡುತ್ತಿದ್ದ ನೇಪಾಳ ಮೂಲದ ಇಬ್ಬರು ಕಳ್ಳರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಅ.10) : ನಗರದ ವಿವಿಧೆಡೆ ಮನೆಗಳ ಬೀಗ ಮುರಿದು ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳವು ಮಾಡುತ್ತಿದ್ದ ನೇಪಾಳ ಮೂಲದ ಇಬ್ಬರು ಕಳ್ಳರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಿತ್ತಗನೂರು ನಿವಾಸಿಗಳಾದ ಮೋಹನ್ ಬಿ.ವಿಶ್ವಕರ್ಮ (29) ಮತ್ತು ಗೋರಖ್ ವಿಶ್ವಕರ್ಮ (38) ಬಂಧಿತರು. ಆರೋಪಿಗಳಿಂದ 10.30 ಲಕ್ಷ ರು. ಮೌಲ್ಯದ 124 ಗ್ರಾಂ ಚಿನ್ನಾಭರಣ, 3 ಕೆ.ಜಿ. 200 ಗ್ರಾಂ ಬೆಳ್ಳಿ ವಸ್ತುಗಳು, 2 ಸಾವಿರ ರು. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಹೆಸರಘಟ್ಟದ ದಾಸೇನಹಳ್ಳಿ ಕ್ರಾಸ್ ನಿವಾಸಿ ಅಮಿತ್ ಭೀಮಯ್ಯ ಎಂಬುವವರು ಕಳೆದ ಜುಲೈನಲ್ಲಿ ಮನೆಗೆ ಬೀಗ ಹಾಕಿಕೊಂಡು ಸ್ವಂತ ಊರಿಗೆ ತೆರಳಿದ್ದರು. ಕೆಲ ದಿನಗಳ ಬಳಿಕ ವಾಪಾಸ್ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿ ಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟಿಟಿ ಫಾರ್ಝಿ ಸೀರಿಸ್‌ನಿಂದ ಪ್ರೇರಿತ, ಬಾಲಿವುಡ್ ರೀಲ್‌ನ್ನು ರಿಯಲ್ ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು!
ಮುಂಬೈ ಟು ಬೆಂಗಳೂರು: ಬಂಧಿತ ಇಬ್ಬರು ಆರೋಪಿಗಳ ಪೈಕಿ ಮೊದಲ ಆರೋಪಿ ಮೋಹನ್ ಕೆಲವು ವರ್ಷಗಳ ಹಿಂದೆ ನೇಪಾಳದಿಂದ ಮುಂಬೈಗೆ ಬಂದು ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಮುಂಬೈನಲ್ಲಿ ಐದು ಮನೆಗಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದ. ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಎರಡನೇ ಆರೋಪಿ ಗೋರಖ್‌ನನ್ನು ಸಂಪರ್ಕಿಸಿ ಮುಂಬೈನಿಂದ ನಗರಕ್ಕೆ ಬಂದು ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಸೇರಿಕೊಂಡಿದ್ದ. ಇದೇ ವರ್ಷದ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ಮನೆಗಳವು ಮಾಡಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಗೆ ಬಂದಿದ್ದ.
ರಾತ್ರಿ ಬೀಗ ಮುರಿದು ಕಳ್ಳವು: ಇಬ್ಬರು ಆರೋಪಿಗಳು ಹಗಲಿನಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ನಗದು, ಆಭರಣ ಗಳನ್ನು ಕಳ್ಳತನ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಪೀಣ್ಯ ಠಾಣೆಯಲ್ಲಿ ದಾಖಲಾಗಿದ್ದ ಒಂದು ಹಾಗೂ ಸೋಲದೇವನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಐದು ಸೇರಿದಂತೆ ಒಟ್ಟು ಆರು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚು ಚಿನ್ನ ಸಿಕ್ಕರೆ ವಿಮಾನದಲ್ಲಿ ಎಸ್ಕೇಪ್ !
ಕಳ್ಳತನದ ವೇಳೆ ಒಮ್ಮೆಗೆ ಕೆ.ಜಿ.ಗಟ್ಟಲೇ ಚಿನ್ನ ಸಿಕ್ಕರೆ ತವರು ದೇಶ ನೇಪಾಳಕ್ಕೆ ವಿಮಾನದಲ್ಲಿ ತೆರಳಿ ವಿಲೇವಾರಿ ಮಾಡುತ್ತಿದ್ದರು. ಪ್ರಕರಣದಲ್ಲಿ ಕಡಿಮೆ ಚಿನ್ನ ಸಿಕ್ಕ ಹಿನ್ನೆಲೆ ಯಲ್ಲಿ ನಗರದಲ್ಲೇ ಉಳಿದಿದ್ದರು. ಬೇರೆ ಮನೆಗಳಲ್ಲಿ ಕಳ್ಳತನ ಮಾಡಿ ಹೆಚ್ಚಿನ ಚಿನ್ನ ಸಂಗ್ರಹಿಸಿ ಬಳಿಕ ನೇಪಾಳಕ್ಕೆ ಪರಾರಿಯಾಗಲು ಉದ್ದೇಶಿಸಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಅಪರಿಚಿತರನ್ನು ಕೆಲಸಕ್ಕೆ ಸೇರಿಸಿಕೊಳ್ಳೋ ಮುನ್ನ ಹುಷಾರ್: ಉಂಡ ಮನೆಗೆ ದ್ರೋಹ ಬಗೆದ ಖದೀಮರು ಅರೆಸ್ಟ್
ಸುಮಾರು 20 ಕಿ.ಮೀ. ಸಿಸಿಟಿವಿ ಪರಿಶೀಲನೆ
ಮನೆಗಳವು ಪ್ರಕರಣ ಸಂಬಂಧ ಸೋಲದೇವನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಎಚ್.ಹರಿಯಪ್ಪ ನೇತೃತ್ವದಲ್ಲಿ ಪೊಲೀಸರು ತನಿಖೆಗೆ ಇಳಿದಾಗ ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡ ಗಳ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿದೆ. ಈ ಸುಳಿವು ಆಧರಿಸಿ ದಾಸೇನಹಳ್ಳಿ ಕ್ರಾಸ್‌ನಿಂದ ಕಿತ್ತಗನೂರುವರೆಗೆ ಸುಮಾರು 20 ಕಿ.ಮೀ. ಮಾರ್ಗದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿಕೊಂಡು ಕೊನೆಗೆ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.