ಯಾರನ್ನೋ ಮೆಚ್ಚಿಸಲು ಬಲಿಯಾದೆಯಲ್ಲ ಕಂದಾ..! ಮಣ್ಣಲ್ಲಿ ಮಣ್ಣಾದ ಅಂಬಾರಿ ಅರ್ಜುನ

ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟ ಅರ್ಜುನ ಆನೆಯ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಯಸಳೂರು ಹೋಬಳಿಯ ದಬ್ಬಳ್ಳಿ ಗ್ರಾಮದ ಹೊರವಲಯದಲ್ಲಿ ನೆರವೇರಿತು.

Arjuna elephant died in a forest attack in sakaleshapur at hassan rav

ಸಕಲೇಶಪುರ (ಡಿ.6): ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟ ಅರ್ಜುನ ಆನೆಯ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಯಸಳೂರು ಹೋಬಳಿಯ ದಬ್ಬಳ್ಳಿ ಗ್ರಾಮದ ಹೊರವಲಯದಲ್ಲಿ ನೆರವೇರಿತು.

ಸೋಮವಾರ ತಾಲೂಕಿನ ಯಸಳೂರು ಹೋಬಳಿ ದಬ್ಬಳಿ ಗ್ರಾಮದ ಹೊರವಲಯದ ನೀರಕೊಲ್ಲಿ ಎಂಬ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಸೆರೆಗೆ ಮುಂದಾಗಿದ್ದ ಕಾರ್ಯಾಚರಣೆಯ ಮುಖ್ಯಪಾತ್ರವಹಿಸಿದ್ದ ಅರ್ಜುನ ಕಾಡಾನೆಯೊಂದಿಗೆ ನಡೆಸಿದ ಕಾದಾಟದಲ್ಲಿ ನೆಲಕ್ಕೆ ಉರುಳಿದ್ದು, ಈ ವೇಳೆ ತೀವ್ರತರಹದ ದಾಳಿಗೆ ತುತ್ತಾಗಿದ್ದ ಅರ್ಜುನ ಸ್ಥಳದಲ್ಲೆ ಮೃತಪಟ್ಟಿತ್ತು. ಆದರೆ, ಮೃತ ಆನೆಯ ಸುತ್ತಲು ಕಾಡಾನೆಗಳು ಬೀಡುಬಿಟ್ಟಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಧಾವಿಸಲು ಸಾಧ್ಯವಾಗದ ಕಾರಣ ಅಂತ್ಯಸಂಸ್ಕಾರವನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು.

ಅರ್ಜುನನ ಸಾವು ಅನ್ಯಾಯ, ಅಂತ್ಯಕ್ರಿಯೆಯಲ್ಲಾದ್ರೂ ನ್ಯಾಯ ಕೊಡಿಸಿ ಎಂದವರ ಮೇಲೆ ಲಾಠಿ ಬೀಸಿದ ಪೊಲೀಸರು

ಅಂತಿಮ ಸಂಸ್ಕಾರ: ಮಂಗಳವಾರ ಮುಂಜಾನೆಯಿಂದ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ ಸಿಬ್ಬಂದಿ, ದಬ್ಬಳ್ಳಿ ಗ್ರಾಮದ ಮುಖ್ಯ ರಸ್ತೆಯಿಂದ ಸರ್ಕಾರಿ ವಾಹನಗಳು ಸಂಚರಿಸಲು ಅನುಕೂಲವಾಗುವಂತೆ ಅರಣ್ಯದಲ್ಲಿ ಜೆಸಿಬಿ ಯಂತ್ರದ ಮೂಲಕ ರಸ್ತೆ ನಿರ್ಮಿಸಿದ ಸಿಬ್ಬಂದಿ ಎರಡು ಶಾಮಿಯನ ಹಾಕಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಈ ವೇಳೆಗೆ ತಂಡೋಪತಂಡವಾಗಿ ಅಗಮಿಸಿದ್ದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೃತ ಆನೆಯ ಅಂತಿಮ ದರ್ಶನ ಪಡೆದರೆ, ಕೂಡಗಿನ ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ ಹಾಗೂ ಕಲ್ಲಮಠದ ಮಹಾಂತ ಸ್ವಾಮೀಜಿ ಮೃತ ಅರ್ಜುನ ಆನೆಗೆ ಪೂಜೆ ಸಲ್ಲಿಸಿ ಆರತಿ ಬೆಳಗುವ ಮೂಲಕ ಅಂತಿಮ ನಮನ ಸಲ್ಲಿಸಿದರು.

ರಾಜ ಪುರೋಹಿತರಿಂದ ನಮನ:

ತರುವಾಯ ಮೈಸೂರಿನಿಂದ ಆಗಮಿಸಿದ ಅರಮನೆ ಪ್ರಧಾನ ಅರ್ಚಕ ಪ್ರಹ್ಲಾದ್‌ ರವರ ತಂಡ ಮೃತ ಆನೆಗೆ ವಿಧಿವಿಧಾನದ ಮೂಲಕ ಪೂಜೆ ಸಲ್ಲಿಸಿದರು. ಈ ವೇಳೆಗೆ ಆಗಮಿಸಿದ ಚಾಮರಾಜೇಂದ್ರ ಒಡೆಯರವರ ಮೊಮ್ಮಗಳು ಶೃತಿ ಕೀರ್ತಿದೇವ್ ಅಶೃತರ್ಪಣೆಯ ಮೂಲಕ ಅಂತಿಮ ದರ್ಶನ ಪಡೆದರು.

ಪ್ರತಿಭಟನೆ:

ಅರ್ಜುನ ಆನೆಯ ಅಂತಿಮಸಂಸ್ಕಾರಕ್ಕೆ ತಾಲೂಕು ಆಡಳಿತ ಸಿದ್ಧತೆ ನಡೆಸುತ್ತಿದ್ದ ವೇಳೆ ಕರವೇ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿ ಅರಣ್ಯಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು. ಇದರಿಂದ ಕೆರಳಿದ ಸ್ಥಳೀಯ ಯುವಕರ ತಂಡ ಸಮಸ್ಯೆಯ ತೀವ್ರತೆಯಲ್ಲಿ ಬಳಲುತ್ತಿರುವ ನಾವೇ ಸುಮ್ಮನಿರುವಾಗ ನಮ್ಮನ್ನು ಹೊರಗಿಟ್ಟು ಪ್ರತಿಭಟನೆ ನಡೆಸಲು ನೀವ್ಯಾರು. ಪ್ರತಿಭಟನೆಯ ಕ್ರೆಡಿಟ್ ಪಡೆಯಲು ಇಲ್ಲಿಗೆ ಬಂದಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರಣ, ಕೆಲಕಾಲ ಪರಸ್ಪರ ವಾಗ್ವದ ನಡೆಯಿತು. ಈ ವೇಳೆ ಪೊಲೀಸರ ಮಧ್ಯಪ್ರವೇಶದಿಂದ ಉದ್ವಿಗ್ನ ಸ್ಥಿತಿ ಶಮನಗೊಳಿಸಲಾಯಿತು.

ರೈತಸಂಘದ ಪ್ರತಿಭಟನೆ:

ಸ್ಥಳೀಯರು ಪ್ರತಿಭಟನೆ ಆರಂಭಿಸಿ ದಬ್ಬಳ್ಳಿ ಗ್ರಾಮದ ವೃತ್ತದಲ್ಲಿ ಅರ್ಜುನ ಆನೆಯ ಸಂಸ್ಕಾರ ನಡೆಸಬೇಕು ಹಾಗೂ ಅಂಬಾರಿ ಹೊತ್ತ ಆನೆ ಕುರುಹಾಗಿ ಇಲ್ಲಿ ಪ್ರವಾಸಿತಾಣ ಮಾಡಲು ಕನಿಷ್ಠ ಐದು ಎಕರೆ ಜಾಗ ಮೀಸಲಿಡಬೇಕು ಎಂದು ಆಗ್ರಹಿಸಲಾರಂಭಿಸಿದರು.

ಈ ವೇಳೆ ಮೈಸೂರಿನಿಂದ ಆಗಮಿಸಿದ ರೈತ ಮುಖಂಡರು ಅರ್ಜುನ ಆನೆ ಅರಮನೆ ಆಸ್ತಿ. ಆದ್ದರಿಂದ ಮೃತ ಅರ್ಜುನನ ಕಳೆಬರಹವನ್ನು ಅಂತಿಮ ಸಂಸ್ಕಾರ ನಡೆಸಬೇಕು ಎಂದು ಆಗ್ರಹಿಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಮಧ್ಯಪ್ರವೇಶಿಸಿದ ಸಹಾಯಕ ಮುಖ್ಯ ಪ್ರಧಾನಕಾರ್ಯದರ್ಶಿ ಶಾಶ್ವತಿ ಮಿಶ್ರ ಅರ್ಜುನ ಆನೆ ಮೃತಪಟ್ಟು ೨೪ ಗಂಟೆ ಕಳೆದ ಕಾರಣ ಮೃತದೇಹ ಬೇರೆಡೆ ಸಾಗಿಸಲು ಅಸಾಧ್ಯ ಎಂಬುದನ್ನು ರೈತ ಮುಖಂಡರಿಗೆ ಮನದಟ್ಟು ಮಾಡಿದರು. ಇದಾದ ನಂತರ ಅರಮನೆ ಮುಖ್ಯ ಪುರೋಹಿತ ಪ್ರಹ್ಲಾದ್ ನೇತೃತ್ವದ ಪುರೋಹಿತರ ತಂಡ ಪೂಜೆ ಸಲ್ಲಿಸುವ ಮೂಲಕ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿತು.

ಕಣ್ಣೀರ ಸಾಗರ: ಅರ್ಜುನ ಆನೆಯ ಅಂತಿಮಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ನೂರಾರು ಜನರು ಬಿಕ್ಕಿಬಿಕ್ಕಿ ಅಳುವ ಮೂಲಕ ತಮ್ಮ ದುಃಖವನ್ನು ಹೊರಹಾಕಿದರೆ, ಅರ್ಜುನ ಆನೆಯ ಮಾವುತ ವಿನು ಹಾಗು ಆತನ ಸಹೋದರ ರಾಜು ಮೃತ ಕಾಡಾನೆಯ ತಬ್ಬಿಕೊಂಡು ಆರ್ಧಿಸುತ್ತಿದ್ದ ದೃಶ್ಯ ಮನಕರಗುವಂತಿತ್ತು.

ಅಂತಿಮ ದರ್ಶನದ ವೇಳೆ ಜಿಲ್ಲಾಧಿಕಾರಿ ಸತ್ಯಭಾಮ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಪೋಲಿಸ್ ವರೀಷ್ಠಾಧಿಕಾರಿ ಮಹಮ್ಮದ್ ಸುಜೀತ್, ಡಿಎಫ್‌ಒ ಮೋಹನ್ ಕುಮಾರ್, ಉಪವಿಭಾಗಾಧಿಕಾರಿ ಶೃತಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಡುವ ಮೂಲಕ ಅರ್ಜುನ ಆನೆಗೆ ಅಂತಿಮ ನಮನ ಸಲ್ಲಿಸಿದರು.

ಯಾರನ್ನೊ ಮೆಚ್ಚಿಸಲು ಬಲಿಯಾದೆಯಲ್ಲ

ಮೃತ ಅರ್ಜುನ ಆನೆಯ ಮಾವುತ ರಾಜು ಎಂಬಾತ ನಾನು ಬಂದಿದ್ದೇನೆ ಮನೆಗೆ ಹೋಗೋಣ ಏಳು. ಮುದ್ದೆ ಮಾಡಿ ಹಾಕುತ್ತೀನಿ ಮೇಲೆ ಏಳು ಯಾರನ್ನೊ ಮೆಚ್ಚಿಸಲು ನಿನ್ನನ್ನು ಇಲ್ಲಿಗೆ ಕರೆತಂದು ಬಲಿ ಹಾಕಿದೆನಲ್ಲಾ ಎಂಬ ಆರ್ತನಾದದೊಂದಿಗೆ ಕೂಗಾಡುತ್ತಿದ್ದ ದೃಶ್ಯ ಸ್ಥಳದಲ್ಲಿದ್ದ ಜನರ ಮನಕರಗುವಂತೆ ಮಾಡಿತ್ತು.

 

ಕ್ಯಾಪ್ಟನ್‌ ಅರ್ಜುನನ ಸಾವಿಗೆ ಅರಣ್ಯ ಅಧಿಕಾರಿಗಳ ಪ್ರಮಾದವೇ ಕಾರಣವಾಯ್ತಾ? ಅರ್ಜುನನಿಗೆ ಗುಂಡೇಟು ಆಗಿದ್ದೇಗೆ?

*ಬಾಕ್ಸ್‌ನ್ಯೂಸ್‌-2: ಅರ್ಜುನ ಆನೆಯ ಅಂತ್ಯಸಂಸ್ಕಾರಕ್ಕೆ ಹೊಂಡ ತೋಡಲಾರಂಭಿಸಿದ್ದರಿಂದ ಕೆರಳಿದ ಸ್ಥಳೀಯರು ದಬ್ಬಳ್ಳಿ ಗ್ರಾಮದ ವೃತ್ತದಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಆಗ್ರಹಿಸಿದರು. ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ನಡೆಸಿದ ಯತ್ನ ವಿಫಲರಾದ ಹಿನ್ನೆಲೆಯಲ್ಲಿ ಲಾಠಿಚಾರ್ಜ್ ನಡೆಸಿದ ಪೊಲೀಸರು ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಪ್ರತಿಭಟನಾಕಾರರನ್ನು ಚದುರಿಸಿದರು. ಲಾಠಿಚಾರ್ಜ್‌ನಲ್ಲಿ ಸಾಕಷ್ಟು ಅಮಾಯಕರು ಹಾಗು ಪ್ರತಿಭಟನಾಕಾರರು ಲಾಠಿ ಪೆಟ್ಟು ಬಿದ್ದಿದ್ದು, ಸಾಕಷ್ಟು ಮಹಿಳೆಯರು ಹಾಗೂ ಮಕ್ಕಳು ಎದ್ದುಬಿದ್ದು ಕಾಡಿನಲ್ಲಿ ತಪ್ಪಿಸಿಕೊಂಡು ವಾಪಸ್ಸಾದ ನಂತರ ಮೃತ ಆನೆಗೆ ಸರ್ಕಾರಿ ಸಕಲ ಗೌರವಗಳೊಂದಿಗೆ ಮೂರು ಸುತ್ತು ಕುಶಾಲತೋಪು ಹಾರಿಸುವ ಮೂಲಕ ಹೊಂಡದಲ್ಲಿ ಹೂತು ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

Latest Videos
Follow Us:
Download App:
  • android
  • ios