ಬಿಬಿಎಂಪಿಯ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಮುಂಬರುವ 2024-25ನೇ ಶೈಕ್ಷಣಿಕ ಸಾಲಿನಿಂದ ರಾಜ್ಯ ಶಿಕ್ಷಣ ಇಲಾಖೆಯಿಂದ ನಿಯೋಜನೆಗೊಳ್ಳಲಿರುವ ಶಿಕ್ಷಕರು ಮತ್ತು ಉಪನ್ಯಾಸಕರು ಬೋಧನೆ ಮಾಡಲಿದ್ದಾರೆ

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು (ಜ.5): ಬಿಬಿಎಂಪಿಯ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಮುಂಬರುವ 2024-25ನೇ ಶೈಕ್ಷಣಿಕ ಸಾಲಿನಿಂದ ರಾಜ್ಯ ಶಿಕ್ಷಣ ಇಲಾಖೆಯಿಂದ ನಿಯೋಜನೆಗೊಳ್ಳಲಿರುವ ಶಿಕ್ಷಕರು ಮತ್ತು ಉಪನ್ಯಾಸಕರು ಬೋಧನೆ ಮಾಡಲಿದ್ದಾರೆ.

ಶಿಕ್ಷಕರ ಪೂರೈಕೆ ಬಗ್ಗೆ ಅನುಭವವಿಲ್ಲದ ಡಿಟೆಕ್ವಿವ್ ಅಂಡ್ ಸೆಕ್ಯೂರಿಟಿ ಕಂಪನಿಯಿಂದ ಬಿಬಿಎಂಪಿ ಶಾಲಾ ಕಾಲೇಜುಗಳಿಗೆ ಹೊರ ಗುತ್ತಿಗೆ ಮೂಲಕ ಶಿಕ್ಷಕರ ನೇಮಕಕ್ಕೆ ಬಿಬಿಎಂಪಿ ಮುಂದಾಗಿತ್ತು. ಈ ಕುರಿತು ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಶಿಕ್ಷಣ ಇಲಾಖೆಯು ಶಿಕ್ಷಕರನ್ನು ನಿಯೋಜನೆಗೆ ತೀರ್ಮಾನಿಸಿದೆ. ನಿಯೋಜನೆಗೊಳ್ಳುವ ಶಿಕ್ಷಕರು ಮತ್ತು ಉಪನ್ಯಾಸಕರು ಮುಂಬರುವ ಶೈಕ್ಷಣಿಕ ಸಾಲಿನಿಂದ ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಬೋಧನೆ ಮಾಡಲಿದ್ದಾರೆ.

ಬೆಂಗಳೂರಿನ ವಾಣಿಜ್ಯ ಮಳಿಗೆಗಳಿಗೆ ದೊಡ್ಡ ಕನ್ನಡ ನಾಮಫಲಕ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು!

ಬಿಬಿಎಂಪಿಯ ಶಾಲಾ-ಕಾಲೇಜುಗಳಲ್ಲಿ ಸದ್ಯ 165 ಮಂದಿ ಖಾಯಂ ಶಿಕ್ಷಕರು ಮತ್ತು ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದು, 772 ಮಂದಿ ಹೊರ ಗುತ್ತಿಗೆ ಆಧಾರದಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಯಂ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಹೊರತುಪಡಿಸಿ ಉಳಿದವರನ್ನು ಶಿಕ್ಷಣ ಇಲಾಖೆಯಿಂದ ನಿಯೋಜನೆ ಮಾಡಲಾಗುತ್ತದೆ.

ನಿರ್ವಹಣೆ ಹೊಣೆ ಬಿಬಿಎಂಪಿಗೆ:

ಶಿಕ್ಷಣ ಇಲಾಖೆಯು ಕೇವಲ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನಿಯೋಜನೆ ಮಾಡಲಿದೆ. ಉಳಿದಂತೆ ಪಾಲಿಕೆ ಶಾಲಾ-ಕಾಲೇಜುಗಳ ನಿರ್ವಹಣೆ ವೆಚ್ಚವನ್ನು ಬಿಬಿಎಂಪಿಯೇ ಭರಿಸಬೇಕು. ಕಟ್ಟಡ, ಮೈದಾನ, ದುರಸ್ತಿ, ಸ್ವಚ್ಛತಾ ಹಾಗೂ ಭದ್ರತಾ ಸಿಬ್ಬಂದಿಯನ್ನು ಬಿಬಿಎಂಪಿಯೇ ಹೊರ ಗುತ್ತಿಗೆ ಮೂಲಕ ನಿಯೋಜನೆ ಮಾಡಬೇಕು. ಪ್ರತಿವರ್ಷ ಬಿಬಿಎಂಪಿಯ ಶಾಲಾ ಮಕ್ಕಳಿಗೆ ನೋಟ್‌ಬುಕ್‌, ಶಾಲಾ ಬ್ಯಾಗ್‌, ಸ್ವೆಟರ್ ಹಾಗೂ ಮಧ್ಯಾಹ್ನ ಬಿಸಿಯೂಟವನ್ನು ಬಿಬಿಎಂಪಿಯೇ ಒದಗಿಸಲಿದೆ. ಪ್ರತಿಭಾ ಪುರಸ್ಕಾರ ಮತ್ತು ನಗದು ಪುರಸ್ಕಾರದ ವೆಚ್ಚ, ಶಾಲಾ ವಾರ್ಷಿಕೋತ್ಸವ, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ, ಶಿಕ್ಷಕರ ದಿನಾಚರಣೆಯ ವೆಚ್ಚವನ್ನೂ ಪಾಲಿಕೆ ಭರಿಸಬೇಕಾಗಲಿದೆ.

ಒಂದು ವರ್ಷ ಬಿಬಿಎಂಪಿಯಿಂದ ಪುಸ್ತಕ, ಶೂ:

ರಾಜ್ಯ ಸರ್ಕಾರದಿಂದಲೇ ಬಿಬಿಎಂಪಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪಠ್ಯ-ಪುಸ್ತಕ, ಶೂ, ಸಾಕ್ಸ್‌, ಸಮವಸ್ತ್ರವನ್ನು ವಿತರಣೆ ಮಾಡುವಂತೆ ಬಿಬಿಎಂಪಿ ಮನವಿ ಮಾಡಿದೆ. ಆದರೆ, ಶಿಕ್ಷಣ ಇಲಾಖೆಯು ಈಗಾಗಲೇ 2024-25ನೇ ಸಾಲಿನ ಟೆಂಟರ್‌ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದು ತಿಳಿಸಿದೆ. ಹಾಗಾಗಿ, 2024-25ನೇ ಸಾಲಿನಲ್ಲಿ ಈ ಎಲ್ಲವನ್ನೂ ಬಿಬಿಎಂಪಿಯೇ ವಿತರಣೆ ಮಾಡುವಂತೆ ಸೂಚಿಸಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಶಿಕ್ಷಣ ಇಲಾಖೆ ವಿತರಣೆಗೆ ಕ್ರಮವಹಿಸಲಿದೆ ಎಂದು ತಿಳಿಸಿದೆ.

ಹೊರ ಗುತ್ತಿಗೆ ಶಿಕ್ಷಕರಲ್ಲಿ ಆತಂಕ ಶುರು

ಸದ್ಯ ಬಿಬಿಎಂಪಿಯಲ್ಲಿ ಸುಮಾರು 772 ಮಂದಿ ಹೊರ ಗುತ್ತಿಗೆ ಶಿಕ್ಷಕರು ಇದ್ದು, ಈ ಪೈಕಿ ಬಹುತೇಕರು ಹಲವು ವರ್ಷದಿಂದ ಬಿಬಿಎಂಪಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಸರ್ಕಾರ ಬಿಬಿಎಂಪಿ ಶಾಲೆಗೆ ಶಿಕ್ಷಕರನ್ನು ನಿಯೋಜನೆ ಮಾಡುವ ನಿರ್ಧಾರದಿಂದ ಹೊರ ಗುತ್ತಿಗೆ ಶಿಕ್ಷಕರು ಮತ್ತು ಉಪನ್ಯಾಸಕರು ಆತಂಕಕ್ಕೆ ಒಳಗಾಗಿದ್ದಾರೆ.

25 ಕೋಟಿ ರು. ಉಳಿಕೆ

ಬಿಬಿಎಂಪಿಯು ಪ್ರತಿವರ್ಷ ಹೊರ ಗುತ್ತಿಗೆ ಶಿಕ್ಷಕರು ಮತ್ತು ಉಪನ್ಯಾಸಕರ ವೇತನಕ್ಕೆ ಸುಮಾರು 23 ರಿಂದ 28 ಕೋಟಿ ರು. ವರೆಗೆ ವೆಚ್ಚ ಮಾಡುತ್ತಿದೆ. ಮುಂಬರುವ ಶೈಕ್ಷಣಿಕ ಸಾಲಿನಿಂದ ಈ ವೆಚ್ಚ ಬಿಬಿಎಂಪಿಗೆ ಉಳಿತಾಯವಾಗಲಿದೆ.

ಪಾಲಿಕೆ ಶಾಲಾ-ಕಾಲೇಜು ವಶಕ್ಕೆ ಹುನ್ನಾರ

ಬಿಬಿಎಂಪಿ ಶಾಲೆಗಳಿಗೆ 1994-95ನೇ ಸಾಲಿನಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು. ಆದಾದ ಬಳಿಕ ಕಳೆದ 28 ವರ್ಷದಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಕಳೆದ ಹಲವು ವರ್ಷದಿಂದ ಬಿಬಿಎಂಪಿಯ ಪ್ರಾಥಮಿಕ ಶಾಲೆಗೆ 65 ಸಹ ಶಿಕ್ಷಕರು, ಪ್ರೌಢ ಶಾಲೆಗೆ 139 ಸಹ ಶಿಕ್ಷಕರು, 6 ದೈಹಿಕ ಶಿಕ್ಷಕರು ಒಟ್ಟು 210 ಶಿಕ್ಷಕರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯು ಪ್ರಸ್ತಾವನೆ ಸಲ್ಲಿಸುತ್ತಿದೆ. ಆದರೆ, ರಾಜ್ಯ ಸರ್ಕಾರ ನೇಮಕ ಮಾಡದೇ ಇದೀಗ ಶಿಕ್ಷಣ ಇಲಾಖೆಯಿಂದ ಶಿಕ್ಷಕರನ್ನು ನಿಯೋಜನೆ ಮಾಡಲಾಗುತ್ತಿದೆ. ಈ ಮೂಲಕ ಕ್ರಮೇಣ ಬಿಬಿಎಂಪಿಯ ಶಾಲಾ-ಕಾಲೇಜುಗಳನ್ನು ಶಿಕ್ಷಣ ಇಲಾಖೆ ವಶಕ್ಕೆ ಪಡೆಯುವ ಹುನ್ನಾರ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿವೆ. 

ಮನೆ ಬಾಗಿಲಿಗೆ ಬಂದ ಸರ್ಕಾರಕ್ಕೆ ಸಾವಿರಾರು ದೂರುಗಳ ಸುರಿಮಳೆ: ನೋಡಲ್ ಅಧಿಕಾರಿ ನಿಯೋಜಿಸಿದ ಡಿಸಿಎಂ ಡಿಕೆ. ಶಿವಕುಮಾರ್

ಪಾಲಿಕೆ ಶಾಲಾ-ಕಾಲೇಜು ವಿವರ

  • ನರ್ಸರಿ 91
  • ಪ್ರಾಥಮಿಕ ಶಾಲೆ 16
  • ಪ್ರೌಢ ಶಾಲೆ 33
  • ಪದವಿ ಪೂರ್ವ ಕಾಲೇಜು 19
  • ಪದವಿ 4
  • ಸ್ನಾತಕೋತ್ತರ ಪದವಿ 2
  • ಒಟ್ಟು 165