ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಸಣ್ಣ ಪ್ರಮಾಣದ ಪಾರ್ಶ್ವವಾಯುವಾಗಿತ್ತು. ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಬೆಂಗಳೂರು (ಆ.30): ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಅಪೊಲೋ ಆಸ್ಪತ್ರೆಯ ವೈದ್ಯ ಡಾ. ಸತೀಶ್‌ ಚಂದ್ರ ಹೇಳಿಕೆ ನೀಡಿದ್ದಾರೆ. ಮುಂಜಾನೆ 3.45 ವೇಳೆಗೆ ಆಸ್ಪತ್ರೆಗೆ ಬಂದಿದ್ದ ಕುಮಾರಸ್ವಾಮಿ ಅವರಿಗೆ ಸಣ್ಣ ಪ್ರಮಾಣದಲ್ಲಿ ಸ್ಟ್ರೋಕ್‌ ಆಗಿತ್ತು. ಈಗ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ಎಚ್‌ಡಿ ಕುಮಾರಸ್ವಾಮಿಯವರ ಎಡಭಾಗದಲ್ಲಿ ರಕ್ತನಾಳ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದಾಗಿ ಎಡಭಾಗಕ್ಕೆ ಮೈಲ್ಡ್ ಸ್ಟ್ರೋಕ್ ಆಗಿತ್ತು. ಆಸ್ಪತ್ರೆಗೆ ಬರುವಾಗ ಅವರ ಮಾತುಗಳು ತೊದಲುತ್ತಿತ್ತು. ತುಂಬಾ ಸುಸ್ತಾದವರಂತೆ ಕಾಣಿಸಿದ್ದರು. ಆಡ್ಮಿಟ್ ಆದ ಒಂದು ಗಂಟೆಯಲ್ಲೇ ಅವರ ಆರೋಗ್ಯ ಸ್ಥಿರವಾಗಿತ್ತು. ಅವರಿಗೆ ಇನ್ನೂ‌ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಾಳೆ ಅವರನ್ನು ಜನರಲ್‌ ವಾರ್ಡ್ ಗೆ ಶಿಫ್ಟ್ ಮಾಡಲಿದ್ದೇವೆ. ಇನ್ನೂ 2-3 ದಿನ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ. ನಾಳೆ ಬೆಳಗ್ಗೆ ಮತ್ತೊಂದು ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಲಿದ್ದೇವೆ. ಈಗ ಅವರು ಎಲ್ಲರ ಜೊತೆಯಲ್ಲೂ ಮಾತನಾಡುತ್ತಿದ್ದಾರೆ. ಆರೋಗ್ಯವಾಗಿದ್ದಾರೆ ಯಾವುದೇ ತೊಂದರೆ ಇಲ್ಲ ಎಂದು ಸತೀಶ್‌ ಚಂದ್ರ ಹೇಳಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ಚೇತರಿಕೆ, ಅಪೋಲೋದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಈ ರೀತಿ ಸಮಸ್ಯೆಯಾದ ಮೂರು ಗಂಟೆಗಳಲ್ಲಿ ಆಸ್ಪತ್ರೆಗೆ ಬಂದಾಗ ಬೇಗ ಚೇತರಿಕೆ ಕಾಣಬಹುದು. ಮಾಜಿ ಮುಖ್ಯಮಂತ್ರಿಗಳು ಬೆಳಗ್ಗೆ 3.45 ಕ್ಕೆ ಆಸ್ಪತ್ರೆಗೆ ಬಂದಿದ್ದರು. ಅವರು ಮಾತನಾಡಲು ಕಷ್ಟಪಡುತ್ತಿದ್ರು. ಎಡಭಾಗದ ರಕ್ತನಾಳ ಸಮಸ್ಯೆಯಿಂದ ಈ ರೀತಿಯಾಗಿತ್ತು ಕೂಡಲೇ ಅವರಿಗೆ ಚಿಕಿತ್ಸೆ ಪ್ರಾರಂಭ ಮಾಡಿದ್ದೆವು. ಚಿಕಿತ್ಸೆ ನೀಡಲು ಶುರು ಮಾಡಿದ 1 ಗಂಟೆಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.


ರಾಮನಗರದಲ್ಲಿ ಹಿಡಿತ ಕಳೆದುಕೊಳ್ತಾ ಜೆಡಿಎಸ್..? ದಳಪತಿಗಳ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟ ಕಾಂಗ್ರೆಸ್..!

'ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ' ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.