ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ 69ನೇ ಸಂಚಿಕೆಯ ಮನ್‌ ಕೀ ಬಾತ್ ಸಂಚಿಕೆ ಕಾರ್ಯಕ್ರಮದಲ್ಲಿ ಕೊರೋನಾತಂಕ, ಆತ್ಮನಿರ್ಭರ ಭಾರತ ಹೀಗೆ ಅನೇಕ ಪ್ರಮುಖ ವಿಚಾರಗಳ ಕುರಿತು ಮಾತನಾಡಿದ್ದಾರೆ. ಆದರೆ ಅದರಲ್ಲೂ ಪ್ರಮುಖವಾಗಿ ಇಂದು ಕತೆ ಹೇಳವ ಕಲೆ ಬಗ್ಗೆ ಉಲ್ಲೇಖಿಸಿದ್ದಾರೆ.

ಕೊರೋನಾ ಮಹಾಮಾರಿ ಎರಡು ಗಜ ಅಂತರ ಎಷ್ಟು ಮಹತ್ವದ್ದು ಎನ್ನುವ ಪಾಠ ಕಲಿಸುವುದರೊಂದಿಗೆ ಕುಟುಂಬಗಳನ್ನು ಹತ್ತಿರ ತಂದಿದೆ. ಅನೇಕ ಸಮಯದಿಂದ ದೂರ ದೂರವಿದ್ದ ಸದಸ್ಯರು ದೀರ್ಘ ಕಾಲದಿಂದ ಒಟ್ಟಾಗಿದ್ದಾರೆ. ಆದರೆ ಇಲ್ಲಿ ಹೊಂದಾಣಿಕೆಯ ಕೊರತೆ ಕೊಂಚ ಕಾಣಲಾರಂಭಿಸಿದೆ. ಈ ನಡುವೆ ಮನೆಯಲ್ಲಿರುವ ಮಕ್ಕಳಿಗೆ ಹಿರಿಯರು ಕತೆ ಹೇಳುವ ಕಲೆ ಮೂಲಕ ರಂಜಿಸಬಹುದು, ಇದರಿಂದ ಜ್ಞಾನಾಭಿವೃದ್ಧಿ ಕೂಡಾ ಸಾಧ್ಯ. ಹಿಂದಿನ ದಿನಗಳಲ್ಲಿ ಅಜ್ಜ, ಅಜ್ಜಿ ಕತೆ ಹೇಳುತ್ತಿದ್ದರು. ಆದರೀಗ ಆ ಕಲೆ ಕ್ರಮೇಣವಾಗಿ ಕುಂಠಿತಗೊಳ್ಳುತ್ತಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕತೆ ಹೇಳುವ ವಿಭಿನ್ನ ಕಲೆ ಮೂಲಕ ಮಕ್ಕಳನ್ನು, ಹಿರಿಯರನ್ನು ರಂಜಿಸುತ್ತಿರುವ ಬೆಂಗಳೂರು ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿ ಹಾಘೂ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಪರ್ಣಾ ಅತ್ರೇಯ ಹಾಗೂ ತಂಡದವರನ್ನೂ ಮಾತನಾಡಿಸಿದ್ದಾರೆ.

ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿಯ ಅಪರ್ಣಾ ಅತ್ರೇಯ ಯಾರು?

ಎರಡು ಮಕ್ಕಳ ತಾಯಿ, ಭಾರತೀಯ ವಾಯುಸೇನಾ ಅಧಿಕಾರಿಯ ಹೆಂಡತಿ. ಇವರು ಕಳೆದ ಹದಿನೈದು ವರ್ಷಗಳಿಂದ ಕತೆ ಹೇಳುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಸಾಫ್ಟ್‌ವೇರ್ ಇಂಡಸ್ಟ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಸಿಎಸ್‌ಆರ್‌ ಪ್ರಾಜೆಕ್ಟ್‌ಗಳಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುವಾಗ ಸಾವಿರಾರು ಮಕ್ಕಳಿಗೆ ಕತೆ ಮೂಲಕ ಶಿಕ್ಷಣ ನೀಡುವ ಅವಕಾಶ ಸಿಕ್ಕಿತ್ತು. ಅಂದು ಹೇಳಿದ್ದ ಕತೆ ತನ್ನ ಅಜ್ಜಿಯಿಂದ ಕೇಳಿಸಿಕೊಂಡಿದ್ದಾಗಿತ್ತು. ಆದರೆ ಕತೆ ಹೇಳುತ್ತಿದ್ದಾಗ, ಕೇಳಿಸಿಕೊಳ್ಳುತ್ತಿದ್ದ ಮಕ್ಕಳಿಗಾದ ಖುಷಿ ಕಂಡು ಅಚ್ಚರಿಯಾಗಿತ್ತು. ಹೀಗಾಗಿ ಅದೇ ಕ್ಷಣ ತಾನು ಕತೆ ಹೇಳುವುದನ್ನು ನನ್ನ ಜೀವನದ ಗುರಿಯಾಗಿ ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ

ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿ 2013ರಲ್ಲಿ ಆರಂಭವಾಗಿತ್ತು.ಅಪರ್ಣಾ ಅತ್ರೇಯ, ಅಪರ್ಣಾ ಜೈಶಂಕರ್, ಲಾವಣ್ಯಾ ಪ್ರಸಾದ್, ಉಷಾ ವೆಂಕಟರಾಮನ್, ಸೌಮ್ಯ ರಾಜನ್ ಶ್ರೀನಿವಾಸನ್, ವಿಕ್ರಮ್ ಶ್ರೀಧರ್ ಹೀಗೆ ಅನೇಕ ಕಥೆ ಹೇಳುವ ಕಲಾವಿದರ ದಂಡೇ ಇಲ್ಲಿ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಕಾರ್ಯ ನಿರ್ವಹಿಸುವ ಬಹುತೇಕ ಕಲಾವಿದರು ತಮ್ಮ ಬಾಲ್ಯದಲ್ಲಿ ಅಜ್ಜ, ಅಜ್ಜಿ ಕತೆ ಕೇಳಿ ಈ ಕಲೆ ಕಲಿತುಕೊಳ್ಳಲು ಸಾಧ್ಯವಾಗಿದ್ದು ಎಂದಿದ್ದಾರೆ.

ಬಾಯಿಂದ ಬಾಯಿಗೆ ಕಥೆ ಹರಡಬೇಕು ಎನ್ನುವುದೇ ಸೊಸೈಟಿಯ ಉದ್ದೇಶ. ಮಕ್ಕಳು, ಯುವಕರು, ವೃದ್ಧರು ಹೀಗೆ ವಯೋಭೇದವಿಲ್ಲದೇ ಎಲ್ಲರೂ ಕಥೆ ಕೇಳಬೇಕೆಂಬುದೇ ನಮ್ಮ ಆಶಯ. ಮಾತುಗಳ ಮೂಲಕ ಮನುಷ್ಯರನ್ನು ಬೆಸೆಯುವ ಸಂಕಲ್ಪ ನಮ್ಮದು. ಕಥೆಯಿಂದ ಸಿಗುವ ಸಣ್ಣ ಸಣ್ಣ ಸಂತೋಷಗಳನ್ನು ಅನುಭವಿಸುವುದು ಕಥೆ ಹೇಳುವ ಮತ್ತು ಕೇಳುವ ಉದ್ದೇಶ ನಮ್ಮದು ಎನ್ನುತ್ತಾರೆ ಇಲ್ಲಿನ ಕಲಾವಿದರು

ಕನ್ನಡದಲ್ಲಿ ಅನೇಕ ಮಂದಿ ಒಳ್ಳೆಯ ಕಥೆಗಾರರಿದ್ದಾರೆ. ಆಧುನೀಕರಣದಲ್ಲಿ ಮೈಮರೆತು ಗ್ಯಾಜೆಟ್ ಲೋಕದಲ್ಲಿ ನಾವೆಲ್ಲಾ ಕಳೆದು ಹೋಗಿದ್ದೇವೆ. ಕಥೆ ಓದುವ, ಕೇಳುವ ಮತ್ತು ಹೇಳುವ ಪರಂಪರೆಯೊಂದನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದೇವೆ. ಅದರಲ್ಲೂ ಕಥೆ ಹೇಳುವ ಮೌಖಿಕ ಪರಂಪರೆ ಅದ್ಭುತವಾದದ್ದು. ಆ ಪರಂಪರೆಗೆ ಜನರನ್ನು ಪರಸ್ಪರ ಬೆಸೆಯುವ ಮಾಂತ್ರಿಕ ಶಕ್ತಿ ಇದೆ. ಆ ಪರಂಪರೆಯನ್ನು ಪುನರ್ ರೂಪಿಸುವ ಅಗತ್ಯವಿದೆ. ಅದನ್ನು ಸ್ಟೋರಿ ಟೆಲ್ಲಿಂಗ್ ಸೊಸೈಟಿ ಮಾಡುತ್ತಿದೆ ಎಂಬುವುದರಲ್ಲಿ ಅನುಮಾನಣವಿಲ್ಲ.