ಡೀಸೆಲ್‌ ಜತೆ ಶೇ.15 ಮೆಥನಾಲ್‌ ಮಿಶ್ರಿತ ಇಂಧನದಿಂದ ಸಂಚರಿಸುವ ರಾಜ್ಯದ ಮೊದಲ ಬಸ್‌ ಅನ್ನು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಭಾನುವಾರ ಲೋಕಾರ್ಪಣೆ ಮಾಡಿದ್ದಾರೆ.

ಬೆಂಗಳೂರು (ಮಾ.13): ಡೀಸೆಲ್‌ ಜತೆ ಶೇ.15 ಮೆಥನಾಲ್‌ ಮಿಶ್ರಿತ ಇಂಧನದಿಂದ ಸಂಚರಿಸುವ ರಾಜ್ಯದ ಮೊದಲ ಬಸ್‌ ಅನ್ನು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಭಾನುವಾರ ಲೋಕಾರ್ಪಣೆ ಮಾಡಿದ್ದಾರೆ. ಇಂಡಿಯನ್‌ ಆಯಿಲ್‌ ಹಾಗೂ ಅಶೋಕ್‌ ಲೇಲ್ಯಾಂಡ್‌ ಜಂಟಿಯಾಗಿ ಪ್ರಾಯೋಜಿಸಿರುವ ಡೀಸೆಲ್‌-ಮೆಥನಾಲ್‌ ಚಾಲಿತ ಬಸ್‌ ಅನ್ನು ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ರಾಜಧಾನಿಯ ಸಾರಿಗೆ ಸೇವೆಗೆ ಬಳಸಿಕೊಳ್ಳಲಿದೆ. ಇದೇ ವೇಳೆ, ಶೇ.100 ಮೆಥನಾಲ್‌ ಚಾಲಿತ ಪ್ರಾಯೋಗಿಕ ಟ್ರಕ್‌ವೊಂದಕ್ಕೂ ಚಾಲನೆ ನೀಡಲಾಗಿದೆ. ಪರಾರ‍ಯಯ ಇಂಧನವಾಗಿ ಮೆಥನಾಲ್‌ ಬಳಕೆಯಿಂದ ತೈಲ ಆಮದು ವೆಚ್ಚ ಕಡಿತಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿರುವುದು ಗಮನಾರ್ಹ.

ಮೆಥೆನಾಲ್‌ ಮಿಶ್ರಿತ ಡೀಸೆಲ್‌ನಿಂದ ಓಡಲಿವೆ 20 ಬಸ್‌: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್‌ ಮತ್ತು ಮೆಥೆನಾಲ್‌ ಮಿಶ್ರಣದ ಹೊಸ ಇಂಧನ ಬಳಸಿ ಪ್ರಾಯೋಗಿಕವಾಗಿ ಬಿಎಂಟಿಸಿ ಬಸ್‌ಗಳನ್ನು ಚಾಲನೆ ಮಾಡುವ ಮಹಾತ್ವಾಕಾಂಕ್ಷಿ ಯೋಜನೆಗೆ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮತ್ತು ಪೆಟ್ರೋಲಿಯಂ ಸಚಿವ ರಾಮೇಶ್ವರ್‌ ತೇಲಿ ಅವರು ಹಸಿರು ನಿಶಾನೆ ತೋರಿಸಿದರು. 

ನಮ್ಮಿಂದ ಶಂಕು, ನಮ್ಮಿಂದಲೇ ಉದ್ಘಾಟನೆ ಇದಕ್ಕೆ ಧಾರವಾಡ ಐಐಟಿಯೇ ಸಾಕ್ಷಿ: ಪ್ರಧಾನಿ ಮೋದಿ

ಭಾನುವಾರ ಸಂಜೆ ವಿಧಾನಸೌಧದ ಮುಂಭಾಗದಲ್ಲಿ ಅಶೋಕ್‌ ಲೇಲ್ಯಾಂಡ್‌ ಕಂಪನಿ ಮತ್ತು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೀಸೆಲ್‌ ಮತ್ತು ಮೆಥೆನಾಲ್‌ ಮಿಶ್ರಣದ ಹೊಸ ಇಂಧನ ಬಳಸಿದ 10 ಅಶೋಕ್‌ ಲೇಲ್ಯಾಂಡ್‌ ಬಸ್‌ಗಳು ಮತ್ತು ಶೇ.100ರಷ್ಟು ಮೆಥೆನಾಲ್‌ ಬಳಿಸಿರುವ (ಎಂ100) ಅಶೋಕ್‌ ಲೇಲ್ಯಾಂಡ್‌ನ ಒಂದು ಲಾರಿ ಅನಾವರಣಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಈ ಬಸ್‌ಗಳ ಸಂಖ್ಯೆಯನ್ನು 20ಕ್ಕೆ ಏರಿಸಲಾಗುತ್ತದೆ. ಈ ಸಂದರ್ಭದಲ್ಲಿ ನೀತಿ ಆಯೋಗದ ಸದಸ್ಯ ಡಾ.ವಿಜಯ್‌ಕುಮಾರ್‌ ಸಾರಸ್ವತ್‌, ಇಂಡಿಯನ್‌ ಆಯಿಲ್‌ ನಿಗಮದ ಅಧ್ಯಕ್ಷ ಶ್ರೀಕಾಂತ್‌ ಮಾಧವ್‌ ವೈದ್ಯ, ಪ್ರಕಾರ್ಯ ನಿರ್ದೇಶಕ ಗುರುಪ್ರಸಾದ್‌, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಮತ್ತಿತರರು ಉಪಸ್ಥಿತರಿದ್ದರು.

ಡೀಸೆಲ್‌ ದರಕ್ಕಿಂತ ಕಡಿಮೆ: ಬಿಎಂಟಿಸಿಯಲ್ಲಿ ಪ್ರಾಯೋಗಿಕವಾಗಿ 20 ವಾಹನಗಳಲ್ಲಿ 3 ತಿಂಗಳ ಅವಧಿಗೆ ಈ ಪ್ರಯೋಗವನ್ನು ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ 400 ಲೀಟರ್‌ ಎಂಡಿ15 ಇಂಧನ ಮಿಶ್ರಣವನ್ನು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಸರಬರಾಜು ಮಾಡಿದೆ. ಮೆಥೆನಾಲ್‌ ಬಳಸುವುದರಿಂದ ದೇಶಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬಹುದು. ಮೆಥೆನಾಲ್‌ ಇಂಧನದ ದರವು ಡೀಸೆಲ್‌ ದರಕ್ಕಿಂತ ಕಡಿಮೆ ಇರುತ್ತದೆ. ಹೀಗಾಗಿ ನೀತಿ ಆಯೋಗದ ಮಾರ್ಗದರ್ಶನದಲ್ಲಿ ಮೆಥೆನಾಲ್‌ ಉಳಿತಾಯ ಕಾರ್ಯಕ್ರಮದ ಅಂಗವಾಗಿ ಈ ಪ್ರಯೋಗವನ್ನು ಹಮ್ಮಿಕೊಳ್ಳಲಾಗಿದೆ.

ವಾಹನದ ಎಂಜಿನ್‌, ಪಂಪ್‌ ಹಾಗೂ ಇಂಧನ ಫಿಲ್ಟರ್‌ಗಳು ಯಾವುದೇ ಹಾನಿಗೊಳಗಾದಲ್ಲಿ ಹಾನಿಗೊಳಗಾದ ಬಿಡಿಭಾಗಗಳನ್ನು ಉಚಿತವಾಗಿ ಬದಲಾಯಿಸಿಕೊಡಲು ಅಶೋಕ್‌ ಲೇಲ್ಯಾಂಡ್‌ ಸಂಸ್ಥೆ ಬದ್ಧವಾಗಿದೆ. ಅದಕ್ಕಾಗಿ ಓರ್ವ ಸವೀರ್‍ಸ್‌ ಎಂಜಿನಿಯರ್‌ ಅವರನ್ನು ನಿಯೋಜಿಸಿಕೊಡಲಿದೆ. ಎಂಜಿನ್‌ ಪಂಪ್‌ ಹಾಗೂ ಎಂಜಿನ್‌ಗೆ ಯಾವುದೇ ಹಾನಿ ಸಂಭವಿಸಿದಲ್ಲಿ ಅಶೋಕ್‌ ಲೇಲ್ಯಾಂಡ್‌ ಕಂಪನಿ ಉಚಿತವಾಗಿ ವಾಹನವನ್ನು ದುರಸ್ತಿ ಮಾಡಿಕೊಡಲಿದೆ ಎಂದು ಬಿಎಂಟಿಸಿ ತಿಳಿಸಿದೆ.

ಎಂಡಿ15 ಇಂಧನಗಳ ಮಿಶ್ರಣ: ಬಿಎಂಟಿಸಿಯ 20 ಅಶೋಕ್‌ ಲೇಲ್ಯಾಂಡ್‌ ಬಸ್‌ಗಳಲ್ಲಿ ಎಂಡಿ 15 ಇಂಧನ ಬಳಸಲಾಗುತ್ತದೆ. ಎಂಡಿ15 ಇಂಧನ ಮಿಶ್ರಣದಲ್ಲಿ ಶೇ.71 ಡೀಸೆಲ್‌, ಶೇ.15 ಮೆಥೆನಾಲ್‌, ಶೇ.12 ಕಪ್ಲರ್ಸ್‌ ಮತ್ತು ಶೇ.2 ಸಿಟೇನ್‌ ಇಂಪ್ರೂವರ್‌ಗಳು ಸೇರಿವೆ. ಈ ಮಿಶ್ರಣಗಳಿಂದ ಇಂಧನದ ದಹನ ಕ್ರಿಯೆಯು ಸುಲಲಿತವಾಗಿ ನಡೆಯುತ್ತದೆ.

ಕರಗ ಕುರಿತು ಅವಹೇಳನಕಾರಿ ಮಾತು: ತಿಗಳ ಜನಾಂಗದ ಕ್ಷಮೆ ಕೇಳಿದ ಶಾಸಕ ಹ್ಯಾರಿಸ್

ಲಾರಿಗೆ ಶೇ.100 ಮೆಥೆನಾಲ್‌: ಅಶೋಕ್‌ ಲೇಲ್ಯಾಂಡ್‌ನ ಲಾರಿಯೊಂದಕ್ಕೆ ಶೇ.100 ಮೆಥೆನಾಲ್‌ (ಎಂ100) ಇಂಧನ ಬಳಸಿದ್ದು, ಅದನ್ನು ಪ್ರಾಯೋಗಿಕವಾಗಿ ಅನಾವರಣಗೊಳಿಸಲಾಯಿತು. ನೈಸರ್ಗಿಕ ಅನಿಲ, ಕಲ್ಲಿದ್ದಲು ಅಥವಾ ಬಯೋಮಸ್‌ಗಳಿಂದ ಮೆಥೆನಾಲ್‌ ಉತ್ಪಾದನೆ ಮಾಡಲಾಗುತ್ತದೆ. ಮೆಥೆನಾಲ್‌ ಬಳಸುವುದರಿಂದ ವಾಹನದ ಹೊಗೆ ಉಗುಳುವಿಕೆ ಮತ್ತು ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ ಕಡಿಮೆ ಮಾಡಬಹುದು.