Supreme court on Cauvery Water: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3000 ಕ್ಯುಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ. ರಾಜ್ಯದಲ್ಲಿ ಮಳೆ ಕೊರತೆ ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದರೂ ಪ್ರಾಧಿಕಾರ ಈ ಆದೇಶ ನೀಡಿದೆ.

ಬೆಂಗಳೂರು (ಅ.9) ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3000 ಕ್ಯುಸೆಕ್‌ (ಒಟ್ಟು 4 ಟಿಎಂಸಿ) ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡ್ಲ್ಯುಎಂಎ) ಸೂಚನೆ ನೀಡಿದೆ.

ಜಲಾಶಯಗಳಲ್ಲಿ ನೀರಿಲ್ಲ ಕರ್ನಾಟಕಕ್ಕೆ ಆತಂಕ

ಇದಕ್ಕೂ ಮೊದಲು, ಗುರುವಾರ ಬೆಳಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಸಭೆ ನಡೆಸಿ, ಇಷ್ಟೇ ಪ್ರಮಾಣದ ನೀರು ಹರಿಸಲು ಶಿಫಾರಸ್ಸು ಮಾಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಪ್ರಾಧಿಕಾರದ ಮೊರೆ ಹೋಗಿತ್ತು. ಪ್ರಾಧಿಕಾರ, ಸಿಡಬ್ಲ್ಯುಆರ್‌ಸಿ ಶಿಫಾರಸ್ಸನ್ನು ಎತ್ತಿ ಹಿಡಿದಿದ್ದು, ಕರ್ನಾಟಕಕ್ಕೆ ಆತಂಕ ಶುರುವಾಗಿದೆ.

ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದು, ಕೆಆರ್‌ಎಸ್, ಹೇಮಾವತಿ, ಹಾರಂಗಿ, ಕಬಿನಿ ಸೇರಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಇಳಿಕೆಯಾಗಿರುವುದನ್ನು ಪ್ರಾಧಿಕಾರದ ಗಮನಕ್ಕೆ ತಂದ ಕರ್ನಾಟಕ, ಈ ಪರಿಸ್ಥಿತಿಯಲ್ಲಿ ನೀರು ಬಿಡುಗಡೆ ಮಾಡುವುದು ಕಷ್ಟವಾಗಲಿದೆ ಎಂದು ಮನವಿ ಮಾಡಿತು. ಆದರೆ, ಕರ್ನಾಟಕದ ಮನವಿಯನ್ನು ಪ್ರಾಧಿಕಾರ ಮಾನ್ಯ ಮಾಡದೆ, ಸಿಡಬ್ಲ್ಯುಆರ್‌ಸಿಯ ಶಿಫಾರಸ್ಸನ್ನು ಎತ್ತಿ ಹಿಡಿಯಿತು. ಹೀಗಾಗಿ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸುವ ಪರಿಸ್ಥಿತಿ ಕರ್ನಾಟಕಕ್ಕೆ ಎದುರಾಗಿದೆ.

ರಾಜ್ಯದ ಬರ ಪರಿಸ್ಥಿತಿ ಪ್ರಾಧಿಕಾರಕ್ಕೆ ಗಮನಕ್ಕೆ ತಂದರೂ ಪ್ರಯೋಜನವಿಲ್ಲ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌, ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದನ್ನು, ರಾಜ್ಯದ ಬರ ಪರಿಸ್ಥಿತಿಯನ್ನು ಪ್ರಾಧಿಕಾರದ ಗಮನಕ್ಕೆ ತಂದಿದ್ದೇವೆ. ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ಮನವಿ ಮಾಡಿದ್ದೇವೆ. ಆದರೆ, ಪ್ರಾಧಿಕಾರ ನಮ್ಮ ಮನವಿಯನ್ನು ಮಾನ್ಯ ಮಾಡಿಲ್ಲ. ಇದೇ ವಿಚಾರ ಅಕ್ಟೋಬರ್‌ 12ರಂದು ಸುಪ್ರೀಂಕೋರ್ಟ್‌ನಲ್ಲಿ ಬರಲಿದೆ. ಅಲ್ಲಿ ನಮ್ಮ ವಾದವನ್ನು ಮಂಡಿಸಲಿದ್ದೇವೆ ಎಂದು ತಿಳಿಸಿದರು.