ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ನಿಗೂಢ ಸಾವಿನ ಸರಣಿ ಮುಂದುವರಿದಿದ್ದು, ಒಟ್ಟು 30 ಪ್ರಾಣಿಗಳು ಮೃತಪಟ್ಟಿವೆ. ಸಾರ್ವಜನಿಕರ ಆಕ್ರೋಶದ ಹಿನ್ನೆಲೆ ಅರಣ್ಯ ಸಚಿವ ಈಶ್ವರ ಖಂಡ್ರೆ ತನಿಖೆಗೆ ಆದೇಶ, ಉಳಿದ 8 ಕೃಷ್ಣಮೃಗಗಳ ಮೇಲೆ ತಜ್ಞ ವೈದ್ಯರು ನಿಗಾ ಇರಿಸಿದ್ದಾರೆ.
ಬೆಳಗಾವಿ (ನ.16): ಬೆಳಗಾವಿ ಹೊರವಲಯದ ಭೂತರಾಮನಹಟ್ಟಿ ಬಳಿಯ ಇರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ಸಾವಿನ ಸರಣಿ ಮುಂದುವರಿದಿದೆ. ಇಂದು ಸಂಜೆ ಮತ್ತೊಂದು ಕೃಷ್ಣ ಮೃಗ ಮೃತಪಟ್ಟಿದೆ. ಒಟ್ಟು ಸಾವಿನ ಸಂಖ್ಯೆ 30ಕ್ಕೆ ಏರಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಒಂದೇ ದಿನ 20 ಕೃಷ್ಣ ಮೃಗಗಳ ನಾವು:
ನಿನ್ನೆ (ನವೆಂಬರ್ 15) ಒಂದೇ ದಿನ 20 ಕೃಷ್ಣ ಮೃಗಗಳು ನಿಗೂಢವಾಗಿ ಮೃತಪಟ್ಟಿದ್ದರೆ, ನವೆಂಬರ್ 13ರಂದು 8 ಕೃಷ್ಣ ಮೃಗಗಳು ಮೃತಪಟ್ಟಿದ್ದವು. ಇಂದು ಸಂಜೆ ಸುಮಾರಿಗೆ ಮತ್ತೊಂದು ಮೃತಪಟ್ಟಿದೆ. ಈ ಸಾವುಗಳ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿ ವೈದ್ಯಕೀಯ ಪರೀಕ್ಷೆಗಳು ತೀವ್ರಗೊಂಡಿವೆ.
ಕೃಷ್ಣಮೃಗಗಳ ಸಾವಿಗೆ ಪರಿಸರ ಪ್ರೇಮಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೃಗಾಲಯ ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂಬ ಆರೋಪ ಸಾರ್ವಜನಿಕರಲ್ಲಿ ಕೇಳಿ ಬಂದಿದೆ. ಇದರ ಬೆನ್ನಲ್ಲೇ ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ.
ಕೇವಲ 8-9 ಮಾತ್ರ ಜೀವಂತ:
ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಗಳಿದ್ದವು. ಈಗ 30 ಮೃಗಗಳ ಸಾವಿನೊಂದಿಗೆ ಕೇವಲ 8 ಮಾತ್ರ ಉಳಿದಿವೆ. ಇವುಗಳ ಮೇಲೆ ಬೆಂಗಳೂರಿನ ಬನ್ನೇರುಘಟ್ಟ ವನ್ಯಜೀವಿ ಉದ್ಯಾನವನದಿಂದ ಆಗಮಿಸಿರುವ ತಜ್ಞ ವೈದ್ಯರು ತೀವ್ರ ನಿಗಾ ಇಟ್ಟಿದ್ದಾರೆ. ಇವುಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
