PSI Recruitment Scam: 1 ಎಸ್‌ಐ ಹುದ್ದೆ 30ರಿಂದ 85 ಲಕ್ಷಕ್ಕೆ ಮಾರಿದ್ದ ಪಾಲ್‌..!

ನೇಮಕಾತಿ ವಿಭಾಗದ ಎಡಿಜಿಪಿ, ಡಿವೈಎಸ್‌ಪಿ ಶಾಂತಕುಮಾರ್‌ರಿಂದ ಪರೀಕ್ಷೆಗೂ ಮುನ್ನ ಡೀಲ್‌
 

Amrit Paul Sold the Post of PSI for 30 to 85 Lakhs in Karnataka grg

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಆ.14):  545 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದನ್ನು ಬಯಲುಗೊಳಿಸಿದ ರಾಜ್ಯ ಅಪರಾಧ ತನಿಖಾ ದಳವು (ಸಿಐಡಿ), ಪಿಎಸ್‌ಐ ಹುದ್ದೆಗಳನ್ನು 30 ರಿಂದ 85 ಲಕ್ಷ ರು.ವರೆಗೆ ನೇಮಕಾತಿ ವಿಭಾಗದ ಮುಖ್ಯಸ್ಥ ಅಮೃತ್‌ ಪಾಲ್‌ ಹಾಗೂ ಡಿವೈಎಸ್ಪಿ ಶಾಂತಕುಮಾರ್‌ ತಂಡ ಮಾರಾಟ ಮಾಡಿತ್ತು ಎಂದು ಹೇಳಿದೆ. ಪಿಎಸ್‌ಐ ಹುದ್ದೆಗೆ ದೈಹಿಕ ಸಾಮರ್ಥ್ಯ ಹಾಗೂ ದೇಹದಾರ್ಡ್ಯತೆ ಪರೀಕ್ಷೆ ನಂತರ ಲಿಖಿತ ಪರೀಕ್ಷೆ ನಡೆಯುವ ಮುನ್ನ ಅಭ್ಯರ್ಥಿಗಳ ಜತೆ ನೇಮಕಾತಿ ವಿಭಾಗದ ತಂಡವು ಡೀಲ್‌ ಕುದುರಿಸಿದೆ. ಅಭ್ಯರ್ಥಿಗಳ ಜತೆ ಮಧ್ಯವರ್ತಿಗಳ ಮೂಲಕ ನೇಮಕಾತಿ ವಿಭಾಗದ ಡಿಐಜಿಪಿ ಆಪ್ತ ಸಹಾಯಕ ಡಿ.ಸಿ.ಶ್ರೀನಿವಾಸ್‌, ಎಎಚ್‌ಸಿ ಶ್ರೀನಿವಾಸ್‌ ಹಾಗೂ ಎಫ್‌ಡಿಎ ಹರ್ಷ ವ್ಯವಹರಿಸಿದ್ದು, ಇವರಿಗೆ ಆ ವಿಭಾಗದ ಎಡಿಜಿಪಿ ಅಮೃತ್‌ ಪಾಲ್‌ ಹಾಗೂ ಡಿವೈಎಸ್ಪಿ ಶಾಂತಕುಮಾರ್‌ ಸಾಥ್‌ ಕೊಟ್ಟಿದ್ದರು ಎಂದು ಆರೋಪ ಪಟ್ಟಿಯಲ್ಲಿ ಸಿಐಡಿ ಸ್ಪಷ್ಟಪಡಿಸಿದೆ.

ಪಿಎಸ್‌ಐ ನೇಮಕಾತಿ ಸಂಬಂಧ ಬೆಂಗಳೂರಿನಲ್ಲಿ ಪರೀಕ್ಷೆ ಬರೆದಿದ್ದ 30ಕ್ಕೂ ಅಧಿಕ ಅಭ್ಯರ್ಥಿಗಳ ಒಎಂಆರ್‌ಶೀಟ್‌ ತಿದ್ದುಪಡಿ ಮಾಡಿ ಆಯ್ಕೆಯಾಗಲು ಸಹಕರಿಸಿದ್ದ ನೇಮಕಾತಿ ವಿಭಾಗದ ಅಧಿಕಾರಿಗಳ ಭಾನಗಡಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿ ಸಿಐಡಿ, ಮೊದಲ ಹಂತದಲ್ಲಿ 30 ಆರೋಪಿಗಳ ಮೇಲೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದೆ. ಇದರಲ್ಲಿ ಅಭ್ಯರ್ಥಿಗಳ ಜತೆ ನೇಮಕಾತಿ ವಿಭಾಗದ ಅಧಿಕಾರಿಗಳು ನಡೆಸಿದ್ದ ‘ಡೀಲ್‌’ ಅನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.

PSI Recruitment Scam: ಪಿಎಸ್‌ಐ ಗೋಲ್ಮಾಲ್‌ಗೆ 5 ದಿನ ರಜೆ ಹಾಕಿದ್ದ ಎಡಿಜಿಪಿ ಪಾಲ್‌..!

ಹಣ ವಸೂಲಿಗೆ ಹರ್ಷನೇ ಕಮಾಂಡರ್‌:

ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಶುರುವಾದ ಬಳಿಕ ಹಣದಾಸೆಗೆ ಹುದ್ದೆಗಳ ಮಾರಾಟಕ್ಕೆ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‌ ಪಾಲ್‌ ಸಾರಥ್ಯದ ತಂಡವು ಸಂಚು ರೂಪಿಸಿತ್ತು. ತನ್ನ ಪರಿಚಿತರ ಅಭ್ಯರ್ಥಿಗಳಿಗೆ ಗಾಳ ಹಾಕಿ ಡೀಲ್‌ ಕುದಿರಿಸಲು ಎಫ್‌ಡಿಎ ಹರ್ಷ ಕಮಾಂಡರ್‌ ಆಗಿದ್ದರೆ, ಇಡೀ ಸಂಚು ಕಾರ್ಯರೂಪಕ್ಕಿಳಿಸಲು ಡಿವೈಎಸ್ಪಿ ಶಾಂತಕುಮಾರ್‌ ಉಸ್ತುವಾರಿ ವಹಿಸಿದ್ದ. ಅಭ್ಯರ್ಥಿಗಳಿಂದ ಹರ್ಷ 3 ಕೋಟಿ ರು. ಹಣವನ್ನು ವಸೂಲಿ ಮಾಡಿದ್ದ. ಇದರಲ್ಲಿ ಆರೋಪಿ ಶ್ರೀಧರ್‌ ಮನೆಯಲ್ಲಿ 2.20 ಕೋಟಿ ರು. ಹಣ ಜಪ್ತಿಯಾಗಿದೆ. ಇದಲ್ಲದೆ 1.31 ಕೋಟಿ ರು. ಹಣವನ್ನು ಪ್ರತ್ಯೇಕವಾಗಿ ಎಡಿಜಿಪಿ ಅಮೃತ್‌ ಪಾಲ್‌ರವರಿಗೆ ಶಾಂತಕುಮಾರ್‌ ತಲುಪಿಸಿದ್ದ. ಒಟ್ಟಾರೆ ಅಭ್ಯರ್ಥಿಗಳಿಂದ 5 ಕೋಟಿ ರು.ಗೂ ಅಧಿಕ ಹಣ ಸಂಗ್ರಹಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಸಿಐಡಿ ಉಲ್ಲೇಖಿಸಿದೆ.

ಯಾದಗಿರಿ: ಪಿಎಸ್‌ಐ ಅಕ್ರಮ ದೂರು ನಿರ್ಲಕ್ಷಿಸಿದ್ದವರಿಗೆ ಕಂಟಕ?

ಲಕ್ಷ ಲಕ್ಷ ರು.ಗಳನ್ನು ನೀಡಲು ಒಪ್ಪಿದ್ದ ಅಭ್ಯರ್ಥಿಗಳ ಪೈಕಿ ಕೆಲವರು ಮುಂಗಡ ಹಣ ಕೊಟ್ಟರೆ, ಉಳಿದವರು ಒಪ್ಪಂದದಂತೆ ಪೂರ್ತಿ ಹಣ ಕೊಟ್ಟಿದ್ದರು. ಈ ಪೈಕಿ ಮುಂಗಡವಾಗಿ ಅಭ್ಯರ್ಥಿಗಳಾದ ಜಾಗೃತ್‌ 15 ಲಕ್ಷ ರು., ಹೊಳೆ ನರಸೀಪುರ ತಾಲೂಕಿನ ಗುಂಜೇವು ಗ್ರಾಮದ ಜಿ.ಆರ್‌.ಮನುಕುಮಾರ್‌ 10 ಲಕ್ಷ ರು, ಹೊಸಕೋಟೆ ತಾಲೂಕಿನ ಮಮತೇಶ್‌ಗೌಡ 10 ಲಕ್ಷ, ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗದ ಸಿ.ಎಸ್‌.ನಾಗೇಶಗೌಡ 8 ಲಕ್ಷ ರು, ಬೆಂಗಳೂರಿನ ಪಟ್ಟೇಗಾರಪಾಳ್ಯದ ಆರ್‌.ಮಧು 20 ಲಕ್ಷ, ಕೆಂಗೇರಿ ಹೋಳಿ ಫಾರೆಸ್ಟ್‌ ಲೇಔಟ್‌ನ ಸಿ.ಕೆ.ದಿಲೀಪ್‌ ಕುಮಾರ್‌ನ 40 ಲಕ್ಷ ರು, ಚನ್ನಪಟ್ಟಣ ತಾಲೂಕಿನ ಪ್ರವೀಣ್‌ ಕುಮಾರ್‌ 30 ಲಕ್ಷ ರು, ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಗಿಡ್ಡೇನಹಳ್ಳಿಯ ಸೂರ್ಯನಾರಾಯಣ ಹಾಗೂ ಯಶವಂತ್‌ ದೀಪ್‌ ತಲಾ 15 ಲಕ್ಷ ರು. ಮುಂಗಡವಾಗಿ ಹಣ ಕೊಟ್ಟಿದ್ದರು ಎಂದು ಸಿಐಡಿ ವಿವರಿಸಿದೆ.

ಯಾರ ಜೊತೆ ಎಷ್ಟು ಮೊತ್ತದ ಡೀಲ್‌?

ಅಭ್ಯರ್ಥಿ ಡೀಲ್‌ (ಲಕ್ಷ ರು.ಗಳಲ್ಲಿ)
ಎಸ್‌.ಜಾಗೃತ್‌ 40
ಸೋಮನಾಥ ಹಿರೇಮಠ್‌ 33
ಎಚ್‌.ಯು.ರಘವೀರ್‌ 85
ಎಂ.ಸಿ.ಚೇತನ್‌ ಕುಮಾರ್‌ 35
ಬಿ.ಸಿ.ವೆಂಕಟೇಶಗೌಡ 50
ಜಿ.ಆರ್‌.ಮನುಕುಮಾರ್‌ 50
ಸಿದ್ದಲಿಂಗಪ್ಪ ಪದಶಾವಗಿ 30
ಮಮತೇಶ್‌ ಗೌಡ 40
ಯಶವಂತಗೌಡ 50
ಸಿ.ಎಂ.ನಾರಾಯಣ 30
ಸಿ.ಎಸ್‌.ನಾಗೇಶಗೌಡ 30
ಆರ್‌.ಮಧು 30
ಸಿ.ಯಶವಂತ್‌ ದೀಪ್‌ 15
ಸಿ.ಕೆ.ದಿಲೀಪ್‌ ಕುಮಾರ್‌ 50
ರಚನಾ ಹನುಮಂತಪ್ಪ 35
ಎಚ್‌.ಆರ್‌.ಪ್ರವೀಣ್‌ ಕುಮಾರ್‌ 45
ಸೂರ್ಯನಾರಾಯಣ 15
ಎಂ.ಸಿ.ನಾಗರಾಜ್‌ 30
ಶಿವರಾಜ್‌ 40
ಜಿ.ಸಿ.ರಾಘವೇಂದ್ರ 35
 

Latest Videos
Follow Us:
Download App:
  • android
  • ios