ಯಾದಗಿರಿ: ಪಿಎಸ್‌ಐ ಅಕ್ರಮ ದೂರು ನಿರ್ಲಕ್ಷಿಸಿದ್ದವರಿಗೆ ಕಂಟಕ?

ಜನವರಿಯಲ್ಲೇ ಜಿಲ್ಲಾಡಳಿತ, ಪೊಲೀಸರಿಗೆ ಪತ್ರ ಬರೆದಿದ್ದ ಅಭ್ಯರ್ಥಿ, ಸಿಐಡಿಯಿಂದ ಎಸ್ಪಿ ವಿಚಾರಣೆ ಸಾಧ್ಯತೆ

PSI Illegal Complaint those who ignored it grg

ಆನಂದ್‌ ಎಂ.ಸೌದಿ

ಯಾದಗಿರಿ(ಆ.07):  ಪಿಎಸ್‌ಐ ಪರೀಕ್ಷಾ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಜನವರಿಯಲ್ಲೇ ನೊಂದ ಅಭ್ಯರ್ಥಿಯೊಬ್ಬರು ದೂರು ನೀಡಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದ ವಿಚಾರ ಇದೀಗ ಯಾದಗಿರಿ ಎಸ್ಪಿ ಮತ್ತು ಜಿಲ್ಲಾಡಳಿತಕ್ಕೆ ತಲೆನೋವಾಗುವ ಸಾಧ್ಯತೆಗಳಿವೆ. ಈ ವಿಚಾರವಾಗಿ ಸಿಐಡಿ ಅಧಿಕಾರಿಗಳು ಯಾದಗಿರಿ ಎಸ್ಪಿ ಡಾ. ವೇದಮೂರ್ತಿ, ಜಿಲ್ಲಾಡಳಿತವನ್ನೂ ವಿಚಾರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಜ.19ರಂದು ಪಿಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಪ್ರಕಟಗೊಂಡಿತ್ತು. ಈ ನೇಮಕದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಜ.28 ರಂದೇ ಜಿಲ್ಲಾಡಳಿತಕ್ಕೆ ರಾಮಚಂದ್ರ ಬಲಶೆಟ್ಟಿಹಾಳ್‌ ಎನ್ನುವವರು ದೂರು ನೀಡಿದ್ದರು. ಆ ಪತ್ರದಲ್ಲಿ ಸಿದ್ದುಗೌಡ ಹೆಸರು ಉಲ್ಲೇಖಿಸಿ, ಹಲವು ಮಹತ್ವದ ಮಾಹಿತಿಗಳನ್ನೂ ಉಲ್ಲೇಖಿಸಿದ್ದರು. ಪಿಎಸ್‌ಐ ನೇಮಕಾತಿ ಅಕ್ರಮ ಬಯಲಿಗೆಳೆದ ‘ಕನ್ನಡಪ್ರಭ’ದ ಸರಣಿ ವರದಿಗಳಲ್ಲಿ ಫೆ.1ರಂದು ಇದರ ಉಲ್ಲೇಖವೂ ಇತ್ತು. ಆ ಬಳಿಕ ಸಿಐಡಿ ತನಿಖೆ ಆರಂಭವಾದರೂ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಈ ಪತ್ರದ ಬಗ್ಗೆ ಮೌನ ಮುಂದುವರಿಸಿದಾಗ ಮೇ 10 ರಂದು ಮತ್ತೊಂದು ವರದಿಯನ್ನು ‘ಕನ್ನಡಪ್ರಭ’ ಪ್ರಕಟಿಸಿತ್ತು. ಆ ಬಳಿಕ ಎಚ್ಚೆತ್ತ ಪೊಲೀಸ್‌ ಅಧಿಕಾರಿಗಳು ಸಿಐಡಿ ಅಧಿಕಾರಿಗಳಿಗೆ ಈ ಪತ್ರ ಕಳುಹಿಸಿದ್ದರು.

ಬ್ಲೂಟೂತ್ ಅಭ್ಯರ್ಥಿಗಳಿಗೆ KPSC ಶಾಶ್ವತ ಡಿಬಾರ್ !

ಎಸ್ಪಿಗೇ ಮಾಹಿತಿ ಇಲ್ಲ?:

ಪ್ರಕರಣದ ಅಕ್ರಮ ಬಯಲಾದ ಬಳಿಕವೂ ಇಂಥದ್ದೊಂದು ದೂರಿನ ಬಗ್ಗೆ ಗುಪ್ತಚರ ಅಥವಾ ಇಲಾಖೆ ಸಿಬ್ಬಂದಿ ಈ ಪತ್ರದ ಕುರಿತು ಮಾಹಿತಿ ನೀಡಿರಲಿಲ್ಲವೇ? ಅಥವಾ ಜಿಲ್ಲಾ ವರಿಷ್ಠಾಧಿಕಾರಿಗೆ ಈ ಪತ್ರ ತಲುಪುವ ಮುನ್ನವೇ ಕಚೇರಿಯಲ್ಲೇ ದೂರು ಪತ್ರ ನಾಶ ಪಡಿಸಲಾಯಿತೇ? ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.

ಮುಖ್ಯಮಂತ್ರಿಗಳಿಗೆ ಹಾಗೂ ಗೃಹಸಚಿವರ ವಿಳಾಸಕ್ಕೆ ಬರೆದ ಪತ್ರವನ್ನು ಆಗಲೇ ಕಳುಹಿಸಿದ್ದೇವೆ ಎಂದು ಜಿಲ್ಲಾಡಳಿತ ಸಮರ್ಥಿಸಿಕೊಳ್ಳುವ ಯತ್ನ ನಡೆಸಿದೆಯಾದರೂ, ಗಂಭೀರ ಅಪರಾಧ-ಅಕ್ರಮ ವಿಚಾರದಲ್ಲಿ ಸಾರ್ವಜನಿಕರ ಅರ್ಜಿಗಳ ಮೇಲೆ ಕಣ್ಣಾಡಿಸಬೇಕಿದ್ದ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸಿದ್ದು ಯಾಕೆ ಎಂಬುದು ತೀವ್ರ ಚರ್ಚೆಗೆ ಕಾರಣವಾಗಿದೆ.

PSI Recruitment Scam: ಮೆಟಲ್‌ ಡಿಟೆಕ್ಟರ್‌ ಸರಿಯಿಲ್ಲ ಅಂತ ಬುರುಡೆ ಬಿಟ್ರಾ ಸಿಬ್ಬಂದಿ?

ಸಿದ್ದುಗೌಡ ಬಂಧಿಸಿರುವ ಆರೋಪಿಗಳು: ಬಲ್ಲ ಮೂಲಗಳ ಪ್ರಕಾರ, ಸಿದ್ದುಗೌಡ ಸೇರಿ 8 ಆರೋಪಿಗಳ ಬಂಧನಕ್ಕೂ ಮುನ್ನ ಅವರ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು ವಾಪಸ್‌ ಕಳುಹಿಸಿದ್ದರು. ವಾಪಸಾದವರು ತಾವು ಆರೋಪಮುಕ್ತ ಎಂದುಕೊಂಡು ಹಳೆಯ ವ್ಯಕ್ತಿಗಳ ಸಂಪರ್ಕಿಸಿದ್ದರು. ಇವರ ಮೇಲೆ ಕಣ್ಣಿಟ್ಟಿದ್ದ ಸಿಐಡಿ ಮತ್ತಷ್ಟುಮಾಹಿತಿಗಳನ್ನು ಕಲೆ ಹಾಕಿದ್ದು, ಯಾದಗಿರಿ ಎಸ್ಪಿ ಮನೆಗೆ ಕೂಗಳತೆ ದೂರದಲ್ಲಿರುವ ಮೀಸಲು ಪಡೆ ಪೊಲೀಸ್‌ ವಸತಿ ನಿಲಯದಲ್ಲೇ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳಿಗೆ ಬ್ಲೂಟೂತ್‌ ಬಳಸುವ ಕುರಿತು ತರಬೇತಿ ಸಹ ನೀಡಲಾಗಿತ್ತು ಅನ್ನೋ ಆಘಾತಕಾರಿ ಅಂಶ ಸಿಐಡಿಗೆ ವಿಚಾರಣೆ ವೇಳೆ ಬಯಲಾಗಿದೆ ಎನ್ನಲಾಗಿದೆ.

ಜಿಲ್ಲಾಡಳಿತಕ್ಕೆ ನೊಂದ ಅಭ್ಯರ್ಥಿ ದೂರು ಪತ್ರ ಕೊಟ್ಟಿದ್ದಾರೆ, ಆದರೆ ಪೊಲೀಸ್‌ ಕಚೇರಿಗೆ ಬಂದಿಲ್ಲ. ಇಂಥದ್ದೊಂದು ಪತ್ರ ಇದೆ ಎಂದು ಗೊತ್ತಾದ ತಕ್ಷಣ ಅದನ್ನು ಸಿಐಡಿಗೆ ಕಳುಹಿಸಿದ್ದೇನೆ ಅಂತ ಯಾದಗಿರಿ ಎಸ್ಪಿ ಡಾ. ವೇದಮೂರ್ತಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios