ಒಎಂಆರ್‌ ಶೀಟ್‌ ತಿದ್ದುಪಡಿಗೆ ತಂತ್ರ ಹೆಣೆದಿದ್ದ ನೇಮಕಾತಿ ವಿಭಾಗದ ಮುಖ್ಯಸ್ಥ ಅಮೃತ್‌ ಪಾಲ್‌ 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಆ.12):  ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಹಗರಣದಲ್ಲಿ ತಮಗೆ ಹಣ ನೀಡಿದ್ದ ಅಭ್ಯರ್ಥಿಗಳ ಒಎಂಆರ್‌ ತಿದ್ದುಪಡಿ ಸಂಚು ಕಾರ್ಯರೂಪಕ್ಕಿಳಿಸಲು ಕೆಲ ದಿನಗಳ ಕಾಲ ಕಚೇರಿಗೆ ಬಾರದೆ ಅಂದಿನ ನೇಮಕಾತಿ ವಿಭಾಗದ ಮುಖ್ಯಸ್ಥ ಅಮೃತ್‌ ಪಾಲ್‌ ನೆರವಾಗಿದ್ದರು ಎಂದು ಅಪರಾಧ ತನಿಖಾ ದಳವು (ಸಿಐಡಿ) ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. 2021ರ ಅಕ್ಟೋಬರ್‌ 3ರಂದು ಪಿಎಸ್‌ಐ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆ ಮುಗಿದ ಬಳಿಕ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌ ಅವರಿಗೆ ಒಎಂಆರ್‌ ಶೀಟ್‌ಗಳ ತುಂಬಿದ್ದ ಕಿಟ್‌ ಬಾಕ್ಸ್‌ಗಳನ್ನು ಕೀಗಳನ್ನು ನೀಡಿದ ಎಡಿಜಿಪಿ, ತಾನು ಕೆಲ ದಿನಗಳ ಮಟ್ಟಿಗೆ ಕಚೇರಿ ಬರುವುದಿಲ್ಲ. ಪೂರ್ವ ಯೋಜಿತದಂತೆ ಸಂಚು ಬೇಗ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಐಡಿ ವಿವರಿಸಿದೆ.

ಒಎಂಆರ್‌ ಸ್ವೀಕರಿಸದ ಎಡಿಜಿಪಿ:

ಅಕ್ಟೋಬರ್‌ 4ರಂದು ಅಭ್ಯರ್ಥಿಗಳ 1 ಮತ್ತು 2ನೇ ಪತ್ರಿಕೆಗಳ ಉತ್ತರ ಪತ್ರಿಕೆಗಳು ಹಾಗೂ ಒಎಂಆರ್‌ ಶೀಟ್‌ಗಳು ನೇಮಕಾತಿ ವಿಭಾಗದಲ್ಲಿ ಸ್ವೀಕೃತಗೊಂಡಿರುತ್ತವೆ. ನೇಮಕಾತಿ ವಿಭಾಗದ ಕಚೇರಿಯ ಸೆಲ್ಲರ್‌ನಲ್ಲಿರುವ ಸ್ಟ್ರಾಂಗ್‌ ರೂಮ್‌ನಲ್ಲಿ ಬೀಗ ಹಾಕಿ ಸೀಲು ಮಾಡಿದ್ದ ಒಎಂಆರ್‌ ಶೀಟ್‌ಗಳ ಕಿಟ್‌ ಬಾಕ್ಸ್‌ಗಳನ್ನು ಇಡಲಾಗಿತ್ತು. ಈ ಕಿಟ್‌ ಬಾಕ್ಸ್‌ಗಳ ಕೀಗಳನ್ನು ಸಿಎಆರ್‌ ಡಿಸಿಪಿ ಅಬ್ರಾಹಂ ಜಾಜ್‌ರ್‍ ಅವರು, ಆರ್‌ಪಿಐ ಮಂಜುನಾಥ್‌ ಹಾಗೂ ಎಚ್‌.ಶ್ರೀಧರ್‌ ಸಹಾಯದಿಂದ ರಟ್ಟಿನ ಬಾಕ್ಸ್‌ನಲ್ಲಿಟ್ಟು ಸೀಲ್‌ ಮಾಡಿ ಎಡಿಜಿಪಿ ಅಮೃತ್‌ ಪಾಲ್‌ ಅವರ ಸುಪರ್ದಿಗೆ ನೀಡಬೇಕಿತ್ತು. ಆದರೆ ಆ ದಿನ 6 ಗಂಟೆಗೆ ಮುನ್ನವೇ ಎಡಿಜಿಪಿ ಕಚೇರಿಯಿಂದ ಹೋಗಿದ್ದರು. ಹಾಗಾಗಿ ಆರ್‌ಪಿಐ ಮಂಜುನಾಥ್‌ ಅವರಿಗೆ ಕೀಗಳನ್ನು ನೀಡಿ ಡಿಸಿಪಿ ತೆರಳಿದ್ದರು. ಮರುದಿನ ಸಹ ಕಚೇರಿಗೆ ಎಡಿಜಿಪಿ ಬಾರದ ಕಾರಣ ಕಿಟ್‌ ಬಾಕ್ಸ್‌ ಗಳ ಕೀಗಳನ್ನು ಆರ್‌ಪಿಐ ಮಂಜುನಾಥ್‌ ಅವರು, ಎಎಓ ಸುನೀತಾ ಹಾಗೂ ಆರೋಪಿ ಶ್ರೀಧರ್‌ ಮೂಲಕ ಎಡಿಜಿಪಿ ಅವರ ಕ್ಯಾಂಬೀನ್‌ ಆಂಟಿ ಛೇಂಬರ್‌ನಲ್ಲಿರುವ ಅಲ್ಮೇರಾದಲ್ಲಿಟ್ಟಿದ್ದರು ಎಂದು ಸಿಐಡಿ ಹೇಳಿದೆ.

PSI ನೇಮಕಾತಿ ಹಗರಣ: ತಪ್ಪು ಉತ್ತರದ ಮೂಲಕ ಸಿಕ್ಕಿ ಬಿದ್ದ ಅಭ್ಯರ್ಥಿಗಳು!

ಕೆಲಸ ಬೇಗ ಮುಗಿಸಲು ಎಡಿಜಿಪಿ ಸೂಚನೆ:

ಲಿಖಿತ ಪರೀಕ್ಷೆ ಮುಗಿದ ಬಳಿಕ ಅ.4ರಂದು ಡಿವೈಎಸ್ಪಿ ಶಾಂತಕುಮಾರ್‌ಗೆ ತಾವು ಕೆಲವು ದಿನಗಳ ಮಟ್ಟಿಗೆ ಕಚೇರಿಗೆ ಬರುವುದಿಲ್ಲ. ಆದಷ್ಟುಬೇಗ ತಮ್ಮ ಯೋಜನೆಯಂತೆ ಒಎಂಆರ್‌ಶೀಟ್‌ಗಳನ್ನು ತಿದ್ದುಪಡಿ ಸಂಚನ್ನು ಕಾರ್ಯಗತಗೊಳಿಸಬೇಕು ಎಂದು ಎಡಿಜಿಪಿ ಸೂಚಿಸಿದ್ದರು. ಅಂತೆಯೇ ನಾಲ್ಕೈದು ದಿನಗಳು ಅವರು ಕಚೇರಿಗೆ ಕಡೆ ಸುಳಿಯಲಿಲ್ಲ. ಅ.5ರಂದು ಎಡಿಜಿಪಿ ಚೇಂಬರ್‌ನ ಅಲ್ಮೇರಾದಲ್ಲಿದ್ದ ಒಎಂಆರ್‌ ಶೀಟ್‌ಗಳ ಕಿಟ್‌ ಬಾಕ್ಸ್‌ಗಳ ಪೈಕಿ ಬೆಂಗಳೂರು ನಗರದ ಪರೀಕ್ಷಾ ಕೇಂದ್ರದ ಒಎಂಆರ್‌ ಶೀಟ್‌ಗಳ ತುಂಬಿದ್ದ ಕೀಗಳನ್ನು ಶಾಂತಕುಮಾರ್‌ ತೆಗೆದುಕೊಂಡಿದ್ದ. ಈ ವೇಳೆ ಸಿಸಿಟಿವಿಗಳನ್ನು ಸ್ವಿಚ್ಟ್‌ ಆಫ್‌ ಸಹ ಮಾಡಲಾಗಿತ್ತು ಎಂದು ಸಿಐಡಿ ಹೇಳಿದೆ. ಆಗ ಬೆಳಗ್ಗೆ 6.30 ರಿಂದ 9.30 ನಡುವಿನ ಅವಧಿಯಲ್ಲಿ ತಿದ್ದುಪಡಿ ಮಾಡಿದ್ದರು ಎಂದು ಸಿಐಡಿ ಹೇಳಿದೆ.

ತಮ್ಮದೇ ಕಾರಿನಲ್ಲಿ 1.3 ಕೋಟಿ ಹಣ ಒಯ್ದರು!

2021ರ ಸೆಪ್ಟೆಂಬರ್‌ 26 ರಿಂದ ಅಕ್ಟೋಬರ್‌ 1 ವರೆಗೆ ಅವಧಿಯಲ್ಲಿ ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ .1.30 ಕೋಟಿ ಹಣವನ್ನು ನೇಮಕಾತಿ ವಿಭಾಗದ ಎಫ್‌ಡಿಎ ಹರ್ಷ ಬೆಂಗಳೂರಿನ ಹಡ್ಸನ್‌ ವೃತ್ತದ ಕೃಷಿ ಭವನದ ಬಳಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌ ಅವರಿಗೆ ನೀಡಿದ್ದ. ಬಳಿಕ ಸಹಕಾರ ನಗರದ ತಮ್ಮ ಮನೆಗೆ ತೆರಳುವಾಗ ಮಾರ್ಗ ಮಧ್ಯೆ ಕೋಡಿ ಮುನೇಶ್ವರ ದೇವಾಲಯ ಬಳಿ ಮಧ್ಯಾಹ್ನ 3.30 ಗಂಟೆಗೆ ಎಡಿಜಿಪಿ ಅಮೃತ್‌ ಪಾಲ್‌ ಅವರಿಗೆ ಹಣವನ್ನು ಶಾಂತಕುಮಾರ್‌ ಕೊಟ್ಟಿದ್ದ. ಈ ಹಣದ ಬ್ಯಾಗ್‌ ಕಾರಿನಲ್ಲಿಟ್ಟುಕೊಂಡು ಎಡಿಜಿಪಿ ಮನೆಗೆ ತೆರಳಿದ್ದರು ಎಂದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ.