ಗೋಪಾಲ್‌ ಯಡಗೆರೆ

ಶಿವಮೊಗ್ಗ(ಜು.27): ಕೊರೋನಾ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತವರು ಜಿಲ್ಲೆಯನ್ನು ಮರೆತಿಲ್ಲ. ಕೊರೋನಾ ವಿರುದ್ಧದ ಹೋರಾಟದಲ್ಲಿ ಇಡೀ ದಿನ ಬ್ಯುಸಿಯಾಗಿರುವ, ನಿತ್ಯ ಸಾಲು ಸಾಲು ಸಭೆಗಳಲ್ಲಿ ಭಾಗಿಯಾಗುತ್ತಿರುವ ಯಡಿಯೂರಪ್ಪ ಬೆಂಗಳೂರಲ್ಲಿ ಕುಳಿತೇ ತವರು ಜಿಲ್ಲೆಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಜಿಲ್ಲೆಯ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿರುವ ಅವರು ಕೋವಿಡ್‌ ನಿಯಂತ್ರಣಕ್ಕೆ ಹಾಗೂ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಸಂಸದರಾಗಿರುವ ಪುತ್ರ ಬಿ.ವೈ.ರಾಘವೇಂದ್ರ ಮೂಲಕವೂ ಅಗತ್ಯ ಕೆಲಸಕಾರ್ಯಗಳನ್ನು ಮಾಡಿಸುತ್ತಿದ್ದಾರೆ.

ಮೊದಲ ಬಾರಿ ಉಪ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಾರಕ್ಕೊಮ್ಮೆ ಇಲ್ಲವೇ ಪ್ರತಿ ಹದಿನೈದು ದಿನಕ್ಕೊಮ್ಮೆ ತವರು ಜಿಲ್ಲೆಗೆ ಆಗಮಿಸುತ್ತಿದ್ದ ಯಡಿಯೂರಪ್ಪನವರು ಸ್ವತಃ ತಾವೇ ಅಭಿವೃದ್ಧಿಯ ಪ್ರತಿ ಹಂತವನ್ನು ವೀಕ್ಷಿಸಿ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಕೆಲವೊಮ್ಮೆ ನಿರುತ್ಸಾಹ ತೋರುವ ಅಧಿಕಾರಿಗಳ ವಿರುದ್ಧ ಬೆಂಕಿಯಾಗುತ್ತಿದ್ದರು. ಜನತಾ ದರ್ಶನದ ಮೂಲಕವೂ ಜನ ಸಾಮಾನ್ಯರ ಕುಂದು, ಕೊರತೆಗಳಿಗೆ ಸ್ಪಂದಿಸುತ್ತಿದ್ದರು.

ಸಕ್ರಿಯ ಕೊರೋನಾ: ದೇಶದಲ್ಲೇ ಕರ್ನಾಟಕ ನಂ.2!

ಸಾಮಾನ್ಯವಾಗಿ ತಿಂಗಳಿಗೆ ಕನಿಷ್ಠ ಮೂರ್ನಾಲ್ಕು ಬಾರಿಯಾದರೂ ಭೇಟಿ ನೀಡುತ್ತಿದ್ದ ಅವರು ಫೆಬ್ರವರಿ 23ರಂದು ಶಿವಮೊಗ್ಗ, ಶಿಕಾರಿಪುರ, 24ರಂದು ಸೊರಬಗಳಿಗೆ ಬಂದದ್ದೇ ಕೊನೆ. ಅಲ್ಲಿಂದ ಇಲ್ಲಿವರೆಗೆ ಅವರು ತವರು ಜಿಲ್ಲೆಗೆ ಒಮ್ಮೆಯೂ ಭೇಟಿ ನೀಡಲು ಸಾಧ್ಯವಾಗಿಲ್ಲ. ಅವರ ಬಹುವರ್ಷದ ಕನಸಿನ ಕೂಸಾದ ಶಿವಮೊಗ್ಗ ವಿಮಾನ ನಿಲ್ದಾಣದ ಶಂಕು ಸ್ಥಾಪನೆಯ ಜೊತೆಗೆ ಲೋಕೋಪಯೋಗಿ ಮತ್ತಿತರ ಇಲಾಖೆ ಕಾರ್ಯಕ್ರಮವನ್ನೂ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ್ದರು.

ಕೊರೋನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಾ ಬೆಂಗಳೂರಿನ ಗೃಹ ಕಚೇರಿಯಲ್ಲೇ ಉಳಿದಿರುವ ಯಡಿಯೂರಪ್ಪ ತಮ್ಮ ತವರು ಜಿಲ್ಲೆ ಹಾಗೂ ತವರು ಕ್ಷೇತ್ರದ ಭೇಟಿಯಿಂದ ಸದ್ಯಕ್ಕೆ ಭೌತಿಕವಾಗಿ ದೂರ ಉಳಿಯುವಂತಾಗಿದೆ. ಆದರೂ ಇಡೀ ರಾಜ್ಯದ ಹೊಣೆಗಾರಿಕೆಯನ್ನು ನಿಭಾಯಿಸುವ ಭರದಲ್ಲಿ ಜಿಲ್ಲೆಗೆ ಯಾವುದೇ ಅನ್ಯಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಸಿಗಂದೂರು ಸೇತುವೆ, ರಿಂಗ್‌ನೋಡ್‌ನಂಥ ಅಭಿವೃದ್ಧಿ ಕಾರ‍್ಯಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಕೊರೋನಾ ಕೊಲ್ಲುತ್ತಂತೆ ಸಿಯಾರಾಮ್‌ ಉಡುಪು!

ಬಿವೈಆರ್‌ ಉಸ್ತುವಾರಿ: ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಅವರ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ತಮ್ಮ ತಂದೆಯ ರೀತಿಯಲ್ಲೇ ಹಗಲು ರಾತ್ರಿ ಅಭಿವೃದ್ಧಿ ಕಡೆಗೆ ಗಮನ ನೀಡುತ್ತಿದ್ದಾರೆ. ಪ್ರತಿಯೊಂದು ಕಾಮಗಾರಿ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸುತ್ತಾರೆ. ಎಂಪಿಎಂ, ವಿಎಸ್‌ಐಎಲ್‌ ಸೇರಿದಂತೆ ಪ್ರಮುಖ ವಿಚಾರಗಳ ಕುರಿತ ಸ್ವತಃ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಹಿರಿಯ ಅಧಿಕಾರಿಗಳು, ಇಲಾಖಾ ಸಚಿವರ ಜೊತೆ ಸಭೆಗಳನ್ನು ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ಹಿರಿಯ ಅಧಿಕಾರಿಗಳನ್ನು ಶಿವಮೊಗ್ಗಕ್ಕೆ ಕರೆಸಿ, ಜಿಲ್ಲಾಧಿಕಾರಿಗಳನ್ನು ಕೂರಿಸಿಕೊಂಡು ಯೋಜನೆ ಜಾರಿಗೆ ಪ್ರಯತ್ನ ನಡೆಸುತ್ತಿದ್ದಾರೆ. ಹೊಸ ಹೊಸ ಯೋಜನೆಗಳ ಕುರಿತು ಕೂಡ ವಿಶೇಷ ಗಮನ ಹರಿಸುತ್ತಿದ್ದು, ಹೀಗಾಗಿ ಪ್ರವಾಸೋದ್ಯಮ, ನೀರಾವರಿ ಸೇರಿದಂತೆ ಅನೇಕ ಹೊಸ ಯೋಜನೆಗಳು ಜಿಲ್ಲೆಯಲ್ಲಿ ಜಾರಿಗೊಳ್ಳುತ್ತಿವೆ.

ಇವರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಕೂಡ ಅಭಿವೃದ್ಧಿಯ ಕಡೆಗೆ ಗಮನ ಹರಿಸಿದ್ದಾರೆ. ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಯಾವುದೂ ಲೋಪವಾಗದಂತೆ ಆಡಳಿತ ಯಂತ್ರವೂ ಜಾಗೃತವಾಗಿದೆ.