ನಿನ್ನೆಯವರೆಗೂ ಏನೂ ಸಮಸ್ಯೆ ಇರಲಿಲ್ಲ. ಈಗ ಇಲ್ಲಿನ ಹವಾಮಾನದಲ್ಲಿ ಸಾಕಷ್ಟು ಏರುಪೇರಾಗುತ್ತಿದೆ. ಭಾರೀ ಮಳೆ ಸುರಿಯುತ್ತಿದೆ. ವಿಪರೀತ ಚಳಿಯಿದೆ. ಅಲ್ಲಲ್ಲಿ ಮತ್ತಷ್ಟುಗುಡ್ಡ ಕುಸಿತದ ವರದಿ ಬರುತ್ತಿದೆ. ಇದರಿಂದಾಗಿ ನಮಗೆ ಭಯವಾಗುತ್ತಿದೆ. ಆತಂಕ ತೀವ್ರವಾಗುತ್ತಿದೆ. 

ಶಿವಕುಮಾರ ಕುಷ್ಟಗಿ/ಮಹೇಶ್‌ ಛಬ್ಬಿ

ಗದಗ (ಜು.09): ‘ನಿನ್ನೆಯವರೆಗೂ ಏನೂ ಸಮಸ್ಯೆ ಇರಲಿಲ್ಲ. ಈಗ ಇಲ್ಲಿನ ಹವಾಮಾನದಲ್ಲಿ ಸಾಕಷ್ಟು ಏರುಪೇರಾಗುತ್ತಿದೆ. ಭಾರೀ ಮಳೆ ಸುರಿಯುತ್ತಿದೆ. ವಿಪರೀತ ಚಳಿಯಿದೆ. ಅಲ್ಲಲ್ಲಿ ಮತ್ತಷ್ಟು ಗುಡ್ಡ ಕುಸಿತದ ವರದಿ ಬರುತ್ತಿದೆ. ಇದರಿಂದಾಗಿ ನಮಗೆ ಭಯವಾಗುತ್ತಿದೆ. ಆತಂಕ ತೀವ್ರವಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇಲ್ಲಿ ಆಹಾರ ಕೊರತೆ ಉಂಟಾಗಲಿದೆ. ಪ್ಲೀಸ್‌ ದಯವಿಟ್ಟು ನಮ್ಮ ರಕ್ಷಣೆಗೆ ಬನ್ನಿ...’

ಇದು ಅಮರನಾಥ ಯಾತ್ರೆ ವೇಳೆ ಉಂಟಾದ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿ ಬೇಸ್‌ ಕ್ಯಾಂಪಿನಲ್ಲಿ ಆಶ್ರಯ ಪಡೆದಿರುವ ಗದಗ ಯಾತ್ರಾರ್ಥಿಗಳ ತಂಡದಲ್ಲಿರುವ ವಿಶಾಲ ಮುಂದಾಡ ಹಾಗೂ ವಿನೋದ ಪಟೇಲ್‌ ಅವರ ಆತಂಕದ ನುಡಿಗಳು. ಶನಿವಾರ ಸಂಜೆ ‘ಕನ್ನಡಪ್ರಭ’ ಜೊತೆ ಮಾತನಾಡಿದ ಅವರು, ತಮ್ಮ ಯಾತ್ರೆಯ ಅನುಭವ ಹಾಗೂ ಈಗಿನ ಪರಿಸ್ಥಿತಿ ಕುರಿತು ಮಾಹಿತಿ ಹಂಚಿಕೊಂಡರು.

ಅಮರನಾಥ ಭೂಕುಸಿತ: 80 ಕನ್ನಡಿಗರು ಅತಂತ್ರ, ರಕ್ಷಣೆಗೆ ರಾಜ್ಯ ಸರ್ಕಾರದಿಂದ ತಂಡ ರವಾನೆ

ನಮ್ಮೊಟ್ಟಿಗೆ ಬೇರೆ, ಬೇರೆ ಕಡೆಯವರು ಇದ್ದಾರೆ. ಹಲವರು ಬೇಸ್‌ ಕ್ಯಾಂಪ್‌ನಲ್ಲಿ ಆಶ್ರಯ ಪಡೆದಿದ್ದೇವೆ. ಶನಿವಾರ ಅಂತಹ ಸಮಸ್ಯೆ ಆಗಿಲ್ಲ. ಮುಂಜಾನೆ ಉಪಾಹಾರ ಸಿಕ್ಕಿಲ್ಲ, ಮಧ್ಯಾಹ್ನ ಊಟ ನೀಡಿದ್ದಾರೆ. ಉಳಿದಂತೆ ಶೌಚಾಲಯ ಮತ್ತಿತರ ಸಮಸ್ಯೆ ಇದೆ. ಸಚಿವ ಎಚ್‌.ಕೆ. ಪಾಟೀಲ್‌, ಗದಗ ಎಸ್ಪಿ ಸೇರಿದಂತೆ ಹಲವರು ನಮ್ಮನ್ನು ಸಂಪರ್ಕಿಸಿ ಧೈರ್ಯ ಹೇಳಿದ್ದಾರೆ. ನಮಗೂ ಸಾಕಷ್ಟುಧೈರ್ಯ ಬಂದಿದೆ. 

ಆದರೆ, ಹವಾಮಾನ ವೈಪರಿತ್ಯದಿಂದ ಮುಂದೇನು? ಎಂಬ ಆತಂಕ ಇದೆ. ಪರಿಸ್ಥಿತಿ ಇನ್ನೆರಡು ದಿನ ಮುಂದುವರಿದರೆ ಆಹಾರ ಸೇರಿದಂತೆ ಎಲ್ಲದಕ್ಕೂ ಪರದಾಡಬೇಕಾದ ಪರಿಸ್ಥಿತಿ ಬರಬಹುದು ಎಂದರು. ಇಲ್ಲಿನ ಚಳಿ, ಮಳೆಗೆ ನಾವು ಸಾಕಷ್ಟುಸಿದ್ಧತೆ ಮಾಡಿಕೊಂಡು ಬಂದಿದ್ದರೂ ಮಹಿಳೆಯರು, ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಇದೊಂದು ಅನಿರೀಕ್ಷಿತ ಬೆಳವಣಿಗೆ ಆಗಿದ್ದರಿಂದ ಹೊಂದಿಕೊಳ್ಳಲು ಆಗುತ್ತಿಲ್ಲ. ಸದ್ಯ ಎಲ್ಲರೂ ಸುರಕ್ಷಿತವಾಗಿದ್ದೇವೆ. ಸಂಬಂಧಿಗಳು, ಆತ್ಮೀಯರು ಆತಂಕ ಪಡುವುದು ಬೇಡ ಎಂದರು.

ಹವಾಮಾನ ವೈಪರಿತ್ಯದಿಂದ ಪರಿಸ್ಥಿತಿ ಬಿಗಡಾಯಿಸಿದೆ. ಸಾಮಾನ್ಯ ಹೆಲಿಕಾಪ್ಟರ್‌ ಹಾರಾಟ ಸಾಧ್ಯವಿಲ್ಲ. ಸೇನಾ ಹೆಲಿಕಾಪ್ಟರ್‌ ವ್ಯವಸ್ಥೆ ನಡೆಯುತ್ತಿದೆ. ಅದು ಯಾವಾಗ ಬರಲಿದೆ? ಎಲ್ಲರನ್ನೂ ಸುರಕ್ಷಿತವಾಗಿ ಸಾಗಿಸಲು ಎಷ್ಟು ಸಮಯ ಬೇಕಾಗಬಹುದು ಎಂಬುದರ ಅರಿವಿಲ್ಲ. ಗದಗ ಪೊಲೀಸ್‌ ಇಲಾಖೆ ಇಲ್ಲಿಗೆ ಸಂಪರ್ಕ ಮಾಡಿ ಹೆಲಿಕಾಪ್ಟರ್‌ ವ್ಯವಸ್ಥೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಜನರ ಸಮಸ್ಯೆ ಆಲಿಸಲು ತನ್ನದೇ ಹೆಸರಿನಲ್ಲಿ ವೆಬ್‌ಸೈಟ್‌ ಆರಂಭಿಸಿದ ಶಾಸಕ ಪ್ರದೀಪ್ ಈಶ್ವರ್‌

ಧೈರ್ಯ ತುಂಬಿದ ಸಚಿವ ಎಚ್ಕೆ: ವಿಪರೀತ ಮಳೆಯಿಂದ ಗುಡ್ಡ ಕುಸಿದ ಹಿನ್ನೆಲೆ ಅಮರನಾಥನಲ್ಲಿ ಸಿಲುಕಿಕೊಂಡ ಗದಗ ಜಿಲ್ಲೆಯ 23 ಯಾತ್ರಾರ್ಥಿಗಳನ್ನು ಪೋನ್‌ ಕರೆ ಮೂಲಕ ಸಂಪರ್ಕಿಸಿದ ಕಾನೂನು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಅವರು, ನಿಮ್ಮೆಲ್ಲರ ರಕ್ಷಣೆಗೆ ದೆಹಲಿ ಸಂಪರ್ಕಿಸಿದ್ದೇನೆ. ನೀವು ಇರುವ ಸ್ಥಳಕ್ಕೆ ಸೇನಾ ಹೆಲಿಕಾಪ್ಟರ್‌ ಬರಲು ಏನು ವ್ಯವಸ್ಥೆ ಮಾಡಬೇಕು, ಅದಕ್ಕೆ ಪ್ರಯತ್ನ ಮಾಡುತ್ತಿರುವೆ. ನಿರಂತರ ನಿಮ್ಮ ಜತೆ ಸಂಪರ್ಕದಲ್ಲಿ ಇರುತ್ತೇನೆ, ಆತಂಕ ಪಡಬೇಡ. ನಿಮ್ಮ ರಕ್ಷಣೆ ನಾವೀದ್ದೇವೆ ಎಂದು ಧೈರ್ಯ ಹೇಳಿದರು. ಶನಿವಾರ ರಾತ್ರಿ ಸಚಿವ ಎಚ್‌.ಕೆ. ಪಾಟೀಲ ಯಾತ್ರಿಗಳ ಮನೆಗೂ ಭೇಟಿ ನೀಡಿ ಸಂಬಂಧಿಕರಿಗೆ ಧೈರ್ಯ ತುಂಬಿದರು.