ಬೆಂಗಳೂರು[ಮಾ.10]: ಹಣ್ಣುಗಳ ರಾಜ ಮಾವು ಕಾರವಾರದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ, ಆರಂಭದಲ್ಲಿಯೇ ಡಜನ್‌ಗೆ . 1000 ದರದಲ್ಲಿ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿದ್ದು, ದರ ಕೇಳಿಯೇ ಗ್ರಾಹಕರು ಹೌಹಾರುತ್ತಿದ್ದಾರೆ.

ಅಲ್ಫಾನ್ಸೋ ಡಜನ್‌ಗೆ . 1 ಸಾವಿರ, ಪೈರೆ ಡಜನ್‌ಗೆ . 650. ಮೊದಲ ಬಾರಿಗೆ ಮಾವು ಮಾರುಕಟ್ಟೆಗೆ ಬಂದಿದ್ದು ದರದಲ್ಲಿ ಭಾರಿ ಹೆಚ್ಚಳವಾಗಿದೆ. ಈ ಬಾರಿ ಮಾವಿನ ಬೆಳೆ ಕಡಿಮೆ ಎನ್ನುವುದು ಮಾರಾಟಗಾರರ ಅಂದಾಜು. ಅದೆ ಕಾರಣಕ್ಕೆ ದರದಲ್ಲಿ ಭಾರಿ ಹೆಚ್ಚಳವಾಗಿದೆ ಎನ್ನುತ್ತಾರೆ. ಪ್ರತಿ ವರ್ಷ ಮೊದಲು ಬರುವ ಮಾವಿನ ಹಣ್ಣಿನ ದರ ಹೆಚ್ಚಿರುವುದು ಸಾಮಾನ್ಯ. ಅಂದರೆ ಸಾಮಾನ್ಯವಾಗಿ ಡಜನ್‌ಗೆ ಅಲ್ಫಾನ್ಸೋ ಆರಂಭದಲ್ಲಿ 600 ರಿಂದ 650 ರಷ್ಟಿರುತ್ತದೆ. ಬಳಿಕ ಮಾರುಕಟ್ಟೆಗೆ ಮಾಲು ಬರುತ್ತಿದ್ದಂತೆಯೇ ದರ ಕಡಿಮೆ ಆಗುತ್ತದೆ. ಆದರೆ, ಈ ಬಾರಿ ಆರಂಭದಲ್ಲಿಯೇ ಭಾರೀ ಹೆಚ್ಚಳವಾಗಿದ್ದು ಮಾವು ಪ್ರಿಯರನ್ನು ಕಂಗೆಡಿಸಿದೆ.

ಸದ್ಯಕ್ಕೆ ಅಂಕೋಲಾ ಹಾಗೂ ಸ್ಥಳೀಯ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿಲ್ಲ. ಮಹಾರಾಷ್ಟ್ರ, ಬೆಂಗಳೂರಿನಿಂದ ತರಿಸಲಾದ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಸ್ಥಳೀಯ ಮಾವಿನ ಹಣ್ಣುಗಳು ಮಾರಾಟಕ್ಕೆ ಬರಬೇಕಾದರೆ ಇನ್ನೂ ಒಂದು ತಿಂಗಳು ಬೇಕಾಗಬಹುದು. ಆ ನಂತರವಷ್ಟೇ ಜನಸಾಮಾನ್ಯರ ಕೈಗೆಟಕುವ ಬೆಲೆಯಲ್ಲಿ ಮಾವಿನ ಹಣ್ಣುಗಳು ಲಭ್ಯವಾಗಲಿವೆ ಎಂದು ಮಾವಿನ ಹಣ್ಣಿನ ಮಾರಾಟಗಾರರಾದ ಉದಯ ನಾಯ್ಕ ಹೇಳುತ್ತಾರೆ.

ಸದ್ಯ ಮಾವಿನ ಹಣ್ಣಿನ ಮಾರಾಟಗಾರರಾದ ಸುಮಿತ್ರಾ ನಾಯಕ ಎನ್ನುವವರು ಮಾವಿನ ಹಣ್ಣಿನ ಮಾರಾಟ ಮಾಡುತ್ತಿದ್ದು, ಬೆಲೆ ಹೆಚ್ಚಿರುವುದರಿಂದ ಮಾರಾಟ ಜೋರಾಗಿಲ್ಲ ಎಂದು ಹೇಳಿದ್ದಾರೆ.