Asianet Suvarna News Asianet Suvarna News

ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆಗೆ ಮಾರ್ಚ್‌ವರೆಗೆ ಅವಕಾಶ

ರಾಜ್ಯ ಸರ್ಕಾರಿ ನೌಕರರು ಇನ್ನುಮುಂದೆ ತಮ್ಮ ಆಸ್ತಿ ವಿವರ ಸಲ್ಲಿಕೆಯನ್ನು ಡಿಸೆಂಬರ್‌ ಅಂತ್ಯಕ್ಕೆ ಬದಲಿಗೆ ಮಾರ್ಚ್‌ ಅಂತ್ಯಕ್ಕೆ ಸಲ್ಲಿಸಲು ರಾಜ್ಯ ಸರ್ಕಾರವು ಅವಕಾಶ ನೀಡಿದ್ದು, ಈ ಸಂಬಂಧ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

Allowance till March for submission of property details of government employees gvd
Author
First Published Dec 9, 2022, 9:54 AM IST

ಬೆಂಗಳೂರು (ಡಿ.09): ರಾಜ್ಯ ಸರ್ಕಾರಿ ನೌಕರರು ಇನ್ನುಮುಂದೆ ತಮ್ಮ ಆಸ್ತಿ ವಿವರ ಸಲ್ಲಿಕೆಯನ್ನು ಡಿಸೆಂಬರ್‌ ಅಂತ್ಯಕ್ಕೆ ಬದಲಿಗೆ ಮಾರ್ಚ್‌ ಅಂತ್ಯಕ್ಕೆ ಸಲ್ಲಿಸಲು ರಾಜ್ಯ ಸರ್ಕಾರವು ಅವಕಾಶ ನೀಡಿದ್ದು, ಈ ಸಂಬಂಧ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಆದಾಯ ತೆರಿಗೆ ಪಾವತಿಗೆ ಆರ್ಥಿಕ ವರ್ಷ ಮಾ.31ಕ್ಕೆ ಅಂತ್ಯಗೊಳ್ಳುವುದನ್ನು ಪರಿಗಣಿಸಿರುವುದರಿಂದ ಸರ್ಕಾರಿ ನೌಕರರು ಆಸ್ತಿ ವಿವರದ ಲೆಕ್ಕಪತ್ರದ ವರದಿಯನ್ನು ಸಿದ್ಧಪಡಿಸಲು ಅನುಕೂಲವಾಗಲೆಂದು ಸರ್ಕಾರವು ಈ ಕ್ರಮ ಕೈಗೊಂಡಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಈವರೆಗೆ ಸರ್ಕಾರಿ ನೌಕರರು ಡಿ.31ಕ್ಕೆ ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ವಾರ್ಷಿಕ ವಿವರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿದ್ದಾರೆ. ಆದರೆ, ಸರ್ಕಾರಿ ನೌಕರರು ತಮ್ಮ ಮತ್ತು ತಮ್ಮ ಕುಟುಂಬದವರ ಆಸ್ತಿಯ ವಿವರವನ್ನು ಬ್ಯಾಂಕ್‌ ಮತ್ತು ಇತರೆ ಸಂಸ್ಥೆಗಳ ಆರ್ಥಿಕ ವ್ಯವಹಾರ ನಿರ್ವಹಣೆಗೆ ಏಪ್ರಿಲ್‌-ಮಾರ್ಚ್‌ ಮಾನದಂಡವನ್ನಾಗಿಸಿರುವುದರಿಂದ ಆದಾಯ ತೆರಿಗೆ ಉದ್ದೇಶಕ್ಕೆ ಒಂದು ಬಾರಿ ಮತ್ತು ಸರ್ಕಾರಕ್ಕೆ ನೀಡಲು ಮತ್ತೊಂದು ವರದಿ ಸಿದ್ಧಪಡಿಸಬೇಕು. 

ಯುವಜನರ ಏಳ್ಗೆಗಾಗಿ ಪ್ರತ್ಯೇಕ ಯುವನೀತಿ ಜಾರಿ: ಸಚಿವ ಸಂಪುಟ ಸಭೆ ನಿರ್ಧಾರ

ಇದರಿಂದ ಎರಡೆರಡು ಬಾರಿ ಸಲ್ಲಿಕೆ ಮಾಡುವ ಬದಲು ಒಂದೇ ಬಾರಿ ಆಸ್ತಿ ವಿವರ ಸಲ್ಲಿಕೆಗೆ ಅವಕಾಶ ಕಲ್ಪಿಸುವ ಸಂಬಂಧ ಮಾರ್ಚ್‌ ಅಂತ್ಯಕ್ಕೆ ಸಲ್ಲಿಸಲು ಅವಕಾಶ ನೀಡಿ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಮಾರ್ಚ್‌ ಅಂತ್ಯಕ್ಕೆ ಆರ್ಥಿಕ ವರ್ಷವನ್ನು ಪರಿಗಣಿಸಿ ಆಸ್ತಿ ವಿವರ ಸಲ್ಲಿಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಮನವಿಯನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಾಗಿದೆ. ಆದಾಯ ತೆರಿಗೆ ಪಾವತಿಗೆ ಮಾರ್ಚ್‌ ಅಂತ್ಯಕ್ಕೆ ಆರ್ಥಿಕ ವರ್ಷ ಎಂದು ಪರಿಗಣಿಸಿರುವುದರಿಂದ ಸರ್ಕಾರಿ ನೌಕರರು ಆಸ್ತಿ ವಿವರ ಸಲ್ಲಿಕೆಗೆ ವರದಿ ಸಿದ್ಧಪಡಿಸಲು ಸುಲಭವಾಗಲಿ ಎಂದು ಕ್ರಮ ಕೈಗೊಳ್ಳಲಾಗಿದೆ ಎಂದರು.

7ನೇ ವೇತನ ಆಯೋಗಕ್ಕೆ 24 ಅಧಿಕಾರಿ, ಸಿಬ್ಬಂದಿ ನೇಮಕ: ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಉದ್ದೇಶದಿಂದ ರಚಿಸಲಾಗಿರುವ 7ನೇ ವೇತನ ಆಯೋಗಕ್ಕೆ ‘ಬಿ’ ಮತ್ತು ‘ಸಿ’ ವೃಂದದ 24 ಅಧಿಕಾರಿ, ಸಿಬ್ಬಂದಿಗಳನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ಆಯೋಗ ರಚನೆ ಬಳಿಕ ಒಟ್ಟು 44 ಹುದ್ದೆಗಳನ್ನು ಸೃಜಿಸಿದ್ದ ಸರ್ಕಾರ ಈ ಪೈಕಿ 24 ಹುದ್ದೆಗಳಿಗೆ ನೇಮಕ ಮಾಡಿದೆ.

ಚಿರತೆಗಳು ಊರಿಗೆ ನುಗ್ಗಲು ಕಲ್ಲು ಕ್ವಾರಿ, ಗಣಿ ಕಾರಣ: ಸಂಜಯ್‌ ಗುಬ್ಬಿ

ಆಯೋಗದ ಕೆಲಸ ಕಾರ್ಯಗಳನ್ನು ಸುಗಮವಾಗಿ ನಡೆಸಲು ನುರಿತ ಅಧಿಕಾರಿ, ಸಿಬ್ಬಂದಿಗಳು ಅಗತ್ಯವಿರುವುದರಿಂದ ಸರ್ಕಾರದ ಸಚಿವಾಲಯದ ವಿವಿಧ ವೃಂದದ ಅಧಿಕಾರಿ, ನೌಕರರನ್ನು ನೇಮಕ ಮಾಡಲು ಆಯೋಗ ಸರ್ಕಾರವನ್ನು ಕೋರಿತ್ತು. ಕೋರಿಕೆ ಪರಿಶೀಲಿಸಿದ ಸರ್ಕಾರ ಇಬ್ಬರು ಶಾಖಾಧಿಕಾರಿಗಳು, ತಲಾ ಐವರು ಹಿರಿಯ ಸಹಾಯಕರು, ಸಹಾಯಕರು, ಶೀಘ್ರ ಲಿಪಿಕಾರರು ಸೇರಿ ಒಟ್ಟು 24 ಮಂದಿಯನ್ನು ನೇಮಕ ಮಾಡಿದೆ. ಈ ಅಧಿಕಾರಿ, ಸಿಬ್ಬಂದಿಯನ್ನು ಅವರು ಕಾರ್ಯನಿರ್ವಹಿಸುತ್ತಿದ್ದ ಇಲಾಖೆ, ಹುದ್ದೆಗಳಿಂದ ಕೂಡಲೇ ಬಿಡುಗಡೆಗೊಳಿಸಿ ಆಯೋಗದ ಕಾರ್ಯವರದಿಗೆ ನಿಯೋಜಿಸಲು ಸೂಚಿಸಿದೆ.

Follow Us:
Download App:
  • android
  • ios