Asianet Suvarna News Asianet Suvarna News

ಯುವಜನರ ಏಳ್ಗೆಗಾಗಿ ಪ್ರತ್ಯೇಕ ಯುವನೀತಿ ಜಾರಿ: ಸಚಿವ ಸಂಪುಟ ಸಭೆ ನಿರ್ಧಾರ

ಯುವಜನತೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಪಷ್ಟವಾದ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನೂತನ ಕರ್ನಾಟಕ ಯುವನೀತಿ-2022ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿ ಮಹತ್ವದ ನಿರ್ಧಾರ ಕೈಗೊಂಡಿದೆ.

State Cabinet approves Karnataka Youth Policy 2022 gvd
Author
First Published Dec 9, 2022, 8:24 AM IST

ಬೆಂಗಳೂರು (ಡಿ.09): ಯುವಜನತೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಪಷ್ಟವಾದ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನೂತನ ಕರ್ನಾಟಕ ಯುವನೀತಿ-2022ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮುಂದಿನ ಎಂಟು ವರ್ಷಕ್ಕೆ ನೀತಿ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಯುವಜನತೆಗಾಗಿ ಪ್ರತ್ಯೇಕ ಯುವ ಸಬಲೀಕರಣ ನಿರ್ದೇಶನಾಲಯ, ತಾಲೂಕು ಮಟ್ಟದಲ್ಲಿ ಕಚೇರಿಗಳು, ಯುವ ಬಜೆಟ್‌, ಯುವ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ, ಮುಖ್ಯಮಂತ್ರಿಗಳು ಅಥವಾ ಸಚಿವರ ಅಧ್ಯಕ್ಷತೆಯಲ್ಲಿ ಕೋಶವೊಂದನ್ನು ರಚಿಸಿ ಕಾರ್ಯಕ್ರಮಗಳ ಮೇಲುಸ್ತುವಾರಿ ಮಾಡಲಾಗುತ್ತದೆ. ಇವೆಲ್ಲಾ ಯುವ ನೀತಿಯಡಿ ಮಾಡಲಾಗುವುದು ಎಂದು ಹೇಳಿದರು.

ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ

ನೂತನ ಯುವ ನೀತಿ ರೂಪಿಸಲು ಸ್ವಾಮಿ ವಿವೇಕಾನಂದ ಯುವ ಚಳವಳಿ ಸಂಸ್ಥಾಪಕ ಡಾ.ಆರ್‌.ಬಾಲಸುಬ್ರಹ್ಮಣ್ಯಂ ನೇತೃತ್ವದಲ್ಲಿ 14 ಜನರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ರಾಜ್ಯಾದ್ಯಂತ ಅಧ್ಯಯನ ನಡೆಸಿ ಸಾವಿರಾರು ಜನರ ಅಭಿಪ್ರಾಯ ಸಂಗ್ರಹಿಸಿ ಹಲವು ಶಿಫಾರಸುಗಳನ್ನು ಒಳಗೊಂಡ ಯುವನೀತಿಯ ಕರಡು ವರದಿಯನ್ನು ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಕೆ ಮಾಡಿತ್ತು. ಸಚಿವ ಸಂಪುಟ ಸಭೆಯಲ್ಲಿ ಯುವ ನೀತಿಗೆ ಅನುಮೋದನೆ ನೀಡಲಾಗಿದೆ.

ಕರ್ನಾಟಕ ಯುವ ನೀತಿ-2022ರ ಪ್ರಮುಖ ಶಿಫಾರಸುಗಳು: ಶೇ.100ರಷ್ಟುಮಕ್ಕಳನ್ನು ಶಾಲೆಗೆ ಪುನಃ ಸೇರಿಸುವ ಆಂದೋಲನವನ್ನು ವಿಕೇಂದ್ರೀಕರಿಸುವ ಮತ್ತು ಪ್ರೌಢಶಾಲೆಯ ಹಂತದಲ್ಲಿ ಯುವಕರು ಶಿಕ್ಷಣದಿಂದ ಹೊರಬೀಳುವುದನ್ನು ತಡೆಯುವುದು. ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮತ್ತು ಕೌಶಲ್ಯ ವಂಚಿತ ಯುವಜನರಿಗೆ ಕೌಶಲ್ಯ ತರಬೇತಿ ನೀಡಲು ಮೂರು ತಿಂಗಳ ಇಂಟರ್ನ್‌ಶಿಪ್‌ ನೀಡಬೇಕು. ಯುವಜನರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ಬಗ್ಗೆ, ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಮತ್ತು ಡಿಜಿಟಲ್‌ ವ್ಯಸನದ ದುಷ್ಪರಿಣಾಮ ಮತ್ತು ಮದ್ಯ, ತಂಬಾಕು, ಮಾದಕ ವ್ಯಸನಗಳ ಬಗ್ಗೆ ಯುವ ಜನರಿಗೆ ಅರಿವು ಮೂಡಿಸಬೇಕು ಎಂದು ಯುವ ನೀತಿಯು ಶಿಫಾರಸು ಮಾಡಿದೆ.

ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಪ್ರಶಸ್ತಿ ಮತ್ತು ಗೌರವಧನವನ್ನು ನೀಡುವ ಮೂಲಕ ಯುವಜನರಲ್ಲಿ ಅರಿವು ಮೂಡಿಸಲು ಮತ್ತು ಜಾನಪದ ಮತ್ತು ಬುಡಕಟ್ಟು ಕಲೆಯನ್ನು ಉತ್ತೇಜಿಸಬೇಕು. ಯುವಜನರಲ್ಲಿ ಸಶಕ್ತತೆಗಾಗಿ ಕ್ರೀಡೆ ಮತ್ತು ಉತ್ಕೃಷ್ಟತೆಗಾಗಿ ಕ್ರೀಡೆಗಳಂತಹ ಮೌಲ್ಯಗಳನ್ನು ಹೆಚ್ಚಿಸಲು ಫಿಟ್‌ ಇಂಡಿಯಾದ ಮಾದರಿಯಲ್ಲಿ ಫಿಟ್‌ ಕರ್ನಾಟಕ ಅಭಿಯಾನ ಅನುಷ್ಠಾನಗೊಳಿಸುವ ಬಗ್ಗೆ ಮತ್ತು ಗ್ರಾಮೀಣ ಕ್ರೀಡೆ, ಸಮುದಾಯ ಕ್ರೀಡೆಗಳನ್ನು ಆಯೋಜಿಸುವ ಕುರಿತು ಮತ್ತು ಕ್ರೀಡೆ ಹಾಗೂ ದೈಹಿಕ ಸಾಮರ್ಥ್ಯದ ರಾಯಭಾರಿಗಳನ್ನು ಪ್ರತಿ ತಾಲೂಕಿಗೆ ನೇಮಕ ಮಾಡಬೇಕು ಎಂದು ತಿಳಿಸಿದೆ.

Bommai Cabinet Meeting: ಡಿಸೆಂಬರ್ 19 ರಿಂದ ಚಳಿಗಾಲದ ಅಧಿವೇಶನ ಆರಂಭ

ಎಂಟು ವರ್ಷಗಳ ಕಾಲ ಜಾರಿ: ಕರ್ನಾಟಕ ಯುವ ನೀತಿಯು ಎಂಟು ವರ್ಷಗಳ ಅವಧಿಗೆ ಅಂದರೆ 2030ರ ವರೆಗೆ ಕಾರ್ಯನಿರ್ವಹಿಸುತ್ತದೆ. ಕ್ರೀಡಾ ಇಲಾಖೆಯಲ್ಲಿ ಎರಡು ಪ್ರತ್ಯೇಕ ನಿರ್ದೇಶನಾಲಯಗಳ ಸ್ಥಾಪನೆ ಅಗತ್ಯ ಇದೆ. ಯುವ ಸಬಲೀಕರಣ ನಿರ್ದೇಶನಾಲಯ ಮತ್ತು ಕ್ರೀಡಾ ನಿರ್ದೇಶನಾಲಯ ರಚನೆ ಮಾಡಬೇಕು. ನೀತಿ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಯುವ ಸಬಲೀಕರಣ ನಿರ್ದೇಶನಾಲಯದಲ್ಲಿ ಸಂಶೋಧನಾ ವಿಭಾಗದ ಸ್ಥಾಪನೆ ಮಾಡಬೇಕಿದೆ. ಎರಡು ಪ್ರತ್ಯೇಕ ನಿರ್ದೇಶನಾಲಯಗಳನ್ನು ಸ್ಥಾಪಿಸಲು ಹೆಚ್ಚುವರಿ 17 ಹುದ್ದೆಗಳ ಅಗತ್ಯ ಇದೆ. ಇದಕ್ಕೆ ವಾರ್ಷಿಕವಾಗಿ 1.11 ಕೋಟಿ ರು. ಅಂದಾಜು ವೆಚ್ಚವಾಗಲಿದೆ. 176 ತಾಲೂಕುಗಳಲ್ಲಿ ತಾಲೂಕು ಮಟ್ಟದಲ್ಲಿ ಗ್ರೂಪ್‌-ಬಿ ವೃಂದದ ಅಧಿಕಾರಿಯನ್ನು ನೇಮಕ ಮಾಡಬೇಕು. ಗ್ರಾಮಮಟ್ಟದಲ್ಲಿ 5964 ಗ್ರಾಮಪಂಚಾಯಿತಿಗಳಿಗೆ ಗ್ರೂಪ್‌ ಸಿ ವೃಂದದ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಎಂದು ಯುವನೀತಿಯಲ್ಲಿ ಉಲ್ಲೇಖಿಸಲಾಗಿದೆ.

Follow Us:
Download App:
  • android
  • ios