Asianet Suvarna News Asianet Suvarna News

ಕಾವೇರಿಗಾಗಿ ದಿಲ್ಲಿಗೆ ಶೀಘ್ರ ಸರ್ವಪಕ್ಷ ನಿಯೋಗ: ಸಿಎಂ ಸಿದ್ದರಾಮಯ್ಯ

ಕಾವೇರಿಗಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಒಯ್ಯುತ್ತೇವೆ. ಜತೆಗೆ ಕಾನೂನು ಹೋರಾಟವನ್ನೂ ಮುಂದುವರಿಸುತ್ತೇವೆ. ಇದಕ್ಕೆ ಎಲ್ಲ ಪಕ್ಷಗಳ ನಾಯಕರು ಸಹಕಾರ ನೀಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ 

All Party Delegation to Delhi Soon for Kaveri Says CM Siddaramaiah grg
Author
First Published Aug 24, 2023, 12:30 AM IST

ಬೆಂಗಳೂರು(ಆ.24):  ತೀವ್ರ ಮಳೆ ಅಭಾವದಿಂದ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟೆಗಳು ಭರ್ತಿಯಾಗದೆ ತಮಿಳುನಾಡಿಗೆ ಹಂಚಿಕೆಯಾಗಿರುವಷ್ಟು ನೀರು ಹರಿಸಲು ಆಗುತ್ತಿಲ್ಲ. ಈ ಸಂದರ್ಭದಲ್ಲಿ ‘ಸಂಕಷ್ಟ ಹಂಚಿಕೆ ಸೂತ್ರ’ ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಒಯ್ಯಲು ಬುಧವಾರ ನಡೆದ ರಾಜ್ಯ ಸರ್ವಪಕ್ಷಗಳ ಸಭೆ ನಿರ್ಧರಿಸಿದೆ.

ಅಲ್ಲದೆ, ಸುಪ್ರೀಂ ಕೋರ್ಟ್‌ ಮುಂದೆಯೂ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ‘ಸಂಕಷ್ಟಹಂಚಿಕೆ ಸೂತ್ರ’ಕ್ಕಾಗಿ ಸಮರ್ಥ ವಾದ ಮಂಡನೆ ಮೂಲಕ ಕಾನೂನು ಹೋರಾಟ ಮುಂದುವರೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ದ ವೇಳೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟಸೂತ್ರ ರೂಪಿಸಲು ಮನವಿ ಮಾಡುವ ಜೊತೆಗೆ ಮೇಕೆದಾಟು, ಮಹದಾಯಿ ಜಲ ವಿವಾದಗಳಿಗೆ ಪರಿಹಾರ ಒದಗಿಸುವಂತೆಯೂ ಕೇಂದ್ರದ ಮೇಲೆ ಒತ್ತಡ ತರಲು ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ.

ಮಳೆ ಕೈಕೊಟ್ಟಾಗೆಲ್ಲಾ ತಮಿಳುನಾಡಿನಿಂದ ವಿವಾದ ಸೃಷ್ಟಿ: ಮಾಜಿ ಸಿಎಂ ಡಿವಿಎಸ್‌ ಆಕ್ರೋಶ

‘ರಾಜ್ಯದ ಜಲ ವಿವಾದಗಳ ಚರ್ಚೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯು ಸಂಪೂರ್ಣ ಯಶಸ್ವಿಯಾಗಿದೆ. ಸುಪ್ರೀಂ ಕೋರ್ಚ್‌ಗೆ ರಾಜ್ಯದಿಂದಲೂ ಮಧ್ಯಂತರ ಅರ್ಜಿ ಸಲ್ಲಿಸದೆ ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ಪ್ರತಿಪಕ್ಷಗಳ ನಾಯಕರು ಆಕ್ಷೇಪ ವ್ಯಪ್ತಪಡಿಸಿದರಾದರೂ ‘ನಾಡಿನ ನೆಲ, ಜಲ, ಭಾಷೆಯ ವಿಚಾರ ಬಂದಾಗ ನಾವು ರಾಜಕೀಯ ಮಾಡುವುದಿಲ್ಲ, ರಾಜ್ಯದ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸರ್ವಪಕ್ಷಗಳ ನಾಯಕರು ತಮ್ಮ ಅಭಿಮತ ವ್ಯಕ್ತಪಡಿಸಿದರು’ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಪ್ರಮುಖವಾಗಿ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಆರು ಜನ ಮಾಜಿ ಮುಖ್ಯಮಂತ್ರಿಗಳು, ಹಲವು ಸಚಿವರು, ಶಾಸಕರು, ಸಂಸದರು ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಸರ್ಕಾರಕ್ಕೆ ನೀಡಿದರು.

ವಸ್ತುಸ್ಥಿತಿ ವಿವರಿಸಿದ ಡಿಕೆಶಿ:

ಸಭೆಯ ಆರಂಭದಲ್ಲಿ ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ. ಶಿವಕುಮಾರ್‌, ‘ಕಾವೇರಿ ಜಲ ವಿವಾದದ ಮಾಹಿತಿ ನೀಡಿ ಕಾವೇರಿ ನೀರು ನಿಯಂತ್ರಣ ಸಮಿತಿಯು ತನ್ನ ಆಗಸ್ಟ್‌ 10ರ ಸಭೆಯಲ್ಲಿ ತಮಿಳುನಾಡಿಗೆ 15,000 ಕ್ಯುಸೆಕ್‌ ನೀರು ಹರಿಸಲು ಸೂಚಿಸಿತು. ಆದರೆ, ರಾಜ್ಯದಲ್ಲಿ ಜೂನ್‌, ಜುಲೈ, ಆಗಸ್ಟ್‌ ತಿಂಗಳಲ್ಲಿ ಮಳೆ ಕೊರತೆಯಾಗಿರುವ ಕಾರಣ ರಾಜ್ಯವು ಬಲವಾಗಿ ವಿರೋಧಿಸಿದ್ದರಿಂದ ಸಮಿತಿಯು ಹರಿಸಬೇಕಾದ ನೀರಿನ ಪ್ರಮಾಣವನ್ನು 10,000 ಕ್ಯುಸೆಕ್‌ಗೆ ಇಳಿಸಿದೆ. ಇದರಿಂದ ಅಸಮಾಧಾನಗೊಂಡ ತಮಿಳುನಾಡು ಸಭೆಯಿಂದ ಹೊರ ನಡೆದು ಸುಪ್ರೀಂ ಕೋರ್ಚ್‌ನಲ್ಲಿ ನೀರು ಬಿಡುಗಡೆಗಾಗಿ ಅರ್ಜಿ ಸಲ್ಲಿಸಿದೆ. ಇದು ಶುಕ್ರವಾರ ಮೂವರು ನ್ಯಾಯಾಧೀಶರ ಮುಂದೆ ವಿಚಾರಣೆಗೆ ಬರಲಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ಯಾವೆಲ್ಲಾ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಸರ್ವಪಕ್ಷ ನಾಯಕರು ತಮ್ಮ ಸಲಹೆಗಳನ್ನು ನೀಡಿ’ ಎಂದು ಮನವಿ ಮಾಡಿದರು.

ರಾಜ್ಯ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿಅವರು ಕೂಡ, ತಮಿಳುನಾಡು ಸರ್ಕಾರದ ಅರ್ಜಿ ವಿಚಾರಣೆ ವೇಳೆ ನಾವು ರಾಜ್ಯದ ಪರವಾಗಿ ಸುಪ್ರೀಂ ಕೋರ್ಚ್‌ನಲ್ಲಿ ಯಾವ ರೀತಿ ವಾದ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂಬುದನ್ನು ಸಭೆಗೆ ವಿವರಿಸಿದರು.

ಹೋರಾಟಕ್ಕೆ ಮಾಜಿ ಸಿಎಂಗಳ ಬೆಂಬಲ:

ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಚ್‌.ಡಿ.ಕುಮಾರಸ್ವಾಮಿ ಮತ್ತಿತರ ನಾಯಕರು ಕಾವೇರಿ ಜಲ ವಿವಾದದ ಬಗ್ಗೆ ಸರ್ಕಾರದ ಕಾನೂನು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ‘ಮಳೆ ಕೊರತೆ ಸಮಯದಲ್ಲಿ ಸಂಕಷ್ಟ ಹಂಚಿಕೆ ಸೂತ್ರ ನಿಗದಿಪಡಿಸಲು ಸುಪ್ರೀಂ ಕೋರ್ಟ್‌ ಮುಂದೆ ಸಮರ್ಥ ವಾದ ಮಂಡಿಸಬೇಕು. ಜೊತೆಗೆ ಕೇಂದ್ರ ಸರ್ಕಾರಕ್ಕೂ ಸರ್ವಪಕ್ಷ ನಿಯೋಗ ಕೊಂಡೊಯ್ದು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ಮತ್ತು ಮಹದಾಯಿ, ಮೇಕೆದಾಟು ಸೇರಿದಂತೆ ರಾಜ್ಯದ ಇನ್ನಿತರೆ ಜಲ ವಿವಾದಗಳ ಇತ್ಯರ್ಥಕ್ಕೆ ಮನವಿ ಮಾಡಬೇಕು’ ಎಂದು ಸಲಹೆ, ಅಭಿಪ್ರಾಯಗಳನ್ನು ನೀಡಿದರು.

ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಎಂ. ವೀರಪ್ಪ ಮೊಯ್ಲಿ ಮತ್ತಿತರ ನಾಯಕರು, ‘ತಮಿಳುನಾಡಿನ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ, ಅಲ್ಲಿನ ರೈತರ ಬೆಳೆಯ ಪದ್ಧತಿ, ಮೂರು ಬೆಳೆ ಬೆಳೆಯುವುದರ ಬಗ್ಗೆ ನ್ಯಾಯಾಲಯಕ್ಕೆ ವಿವರ ನೀಡಬೇಕು. ಕಾವೇರಿ ಜಲಾನಯದ ಅಣೆಕಟ್ಟೆಗಳಲ್ಲಿ ಇರುವ ನೀರು ರಾಜ್ಯದಲ್ಲೇ ಕೃಷಿ, ಕುಡಿಯುವ ನೀರಿಗೆ ಸಾಲುತ್ತಿಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ನಾಯಕರ ಈ ಸಲಹೆಗಳಿಗೆ ಸಂಸದರಾದ ಸುಮಲತಾ, ಡಿ.ಕೆ.ಸುರೇಶ್‌, ತೇಜಸ್ವಿ ಸೂರ್ಯ, ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಸೇರಿದಂತೆ ಇತರೆ ನಾಯಕರು ಸಹಮತ ವ್ಯಕ್ತಪಡಿಸಿದರು.

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ, ವಿಚಾರಣೆಗೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ

ದಿಲ್ಲಿಗೆ ಹೋಗೋಣ- ಸಿದ್ದು:

ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ‘ರಾಜ್ಯದ ಜಲ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ವಪಕ್ಷಗಳ ನಾಯಕರು ನೀಡಿರುವ ಅಭಿಪ್ರಾಯ, ಸಲಹೆಗಳನ್ನು ಸರ್ಕಾರ ಸಕಾರಾತ್ಮವಾಗಿ ಪರಿಗಣಿಸಲಿದೆ. ಕಾವೇರಿ ಜಲ ವಿವಾದದ ಸಂಬಂಧ ಸಂಕಷ್ಟಹಂಚಿಕೆ ಸೂತ್ರ ನೀಡಲು ಕೇಂದ್ರ ಸರ್ಕಾರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲಾಗುವುದು. ಈ ನಿಟ್ಟಿನಲ್ಲಿ ಕಾನೂನಾತ್ಮಕವಾಗಿಯೂ ಹೋರಾಟ ಮುಂದುವರೆಸುತ್ತೇವೆ. ಇದಕ್ಕೆ ಎಲ್ಲ ಪಕ್ಷಗಳ ನಾಯಕರೂ ತಮ್ಮ ಸಹಕಾರ ನೀಡಬೇಕು. ಅದೇ ರೀತಿ ಮೇಕೆದಾಟು, ಮಹದಾಯಿ ಜಲ ವಿವಾದಗಳಿಗೂ ಪರಿಹಾರ ಕಲ್ಪಿಸುವಂತೆ ಕೇಂದ್ರಕ್ಕೆ ನಿಯೋಗದ ತೆರಳಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಮನವಿ ಮಾಡೋಣ ಇದಕ್ಕೆ ಸಹಕಾರ ನೀಡಿ’ ಎಂದು ಮನವಿ ಮಾಡಿದರು. ಇದಕ್ಕೆ ಸಭೆಯು ಒಮ್ಮತದಿಂದ ಒಪ್ಪಿಗೆ ನೀಡಿತು ಎಂದು ಸಭೆಯ ಮೂಲಗಳು ಖಚಿತಪಡಿಸಿವೆ.

ಸಹಕಾರ ಕೊಡಿ

ಕಾವೇರಿಗಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಒಯ್ಯುತ್ತೇವೆ. ಜತೆಗೆ ಕಾನೂನು ಹೋರಾಟವನ್ನೂ ಮುಂದುವರಿಸುತ್ತೇವೆ. ಇದಕ್ಕೆ ಎಲ್ಲ ಪಕ್ಷಗಳ ನಾಯಕರು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Follow Us:
Download App:
  • android
  • ios